ವೀರಶೈವ-ಲಿಂಗಾಯಿತ ಮತಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಮೋದಿ ಯತ್ನ

3 years ago

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಪಣತೊಟ್ಟಿರುವ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ರಣಕಹಳೆ ಮೊಳಗಿಸುವ ಮೂಲಕ ಪ್ರಚಾರದ ಅಖಾಡಕ್ಕೆ ವಿಶೇಷ ರಂಗು ತಂದುಕೊಟ್ಟರು.
ಕಲ್ಯಾಣ ಕರ್ನಾಟಕದ ಬೀದರ್, ಕಿತ್ತೂರು ಕರ್ನಾಟಕದ ವಿಜಯಪುರ, ಬೆಳಗಾವಿ ಹಾಗೂ ಬೆಂಗಳೂರು ನಗರವನ್ನು ಗಮನದಲ್ಲಿಟ್ಟುಕೊಂಡು ಒಟ್ಟು 25ಕ್ಕೂ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಮಿಂಚಿನ ಪ್ರಚಾರ ನಡೆಸಿದ ಅವರು ಪಕ್ಷದ ಪರವಾಗಿ ಆಲೆ ಸೃಷ್ಟಿಸುವ ಪ್ರಯತ್ನ ನಡೆಸಿದರು.

ವಿಶೇಷವಾಗಿ ಬಿಜೆಪಿ‌ ಮತ ಬ್ಯಾಂಕ್ ಆಗಿ ನಿಂತಿರುವ ವೀರಶೈವ-ಲಿಂಗಾಯಿತ ಮತಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮೊದಲ ಹಂತವಾಗಿ ಬಸವಣ್ಣನ ಕರ್ಮಭೂಮಿ ಬೀದರ್ ಜಿಲ್ಲೆಯ ಹುಮ್ನಾಬಾದ್‍ನಿಂದ ಪ್ರಚಾರ ಆರಂಭಿಸಿದರು.

ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಸವಕಲ್ಯಾಣ, ಹುಮ್ನಾಬಾದ್, ಬೀದರ್, ದಕ್ಷಿಣ, ಭಾಲ್ಕಿ, ಔರದ್ ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ನೆರೆದಿದ್ದ ಜನಸ್ತೋಮಕ್ಕೆ ಮನವಿ ಮಾಡಿದರು.

ಎಂದಿನಂತೆ ಕನ್ನಡದಲ್ಲಿ ತಮ್ಮ ಭಾಷಣವನ್ನು ಪ್ರಾರಂಭಿಸಿದ ಮೋದಿ ಅವರು ಬಸವಣ್ಣ ಹುಟ್ಟಿದ ಈ ಕರ್ಮಭೂಮಿಗೆ ಬಂದಿರುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಭಾವನಾತ್ಮಕವಾಗಿ ಮತ ಸೆಳೆಯುವ ಪ್ರಯತ್ನ ನಡೆಸಿದರು.

ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ ಅವರು, ರೈತರಿಗಾಗಿ ಈ ಎರಡೂ ರಾಜಕೀಯ ಪಕ್ಷಗಳು ಸಾಲಮನ್ನಾ ಬಗ್ಗೆ ಮಾತನಾಡಿದರೆ ಹೊರತು ಅನ್ನದಾತನಿಗೆ ಏನೇನೂ ಸಹಾಯ ಮಾಡಲಿಲ್ಲ ಎಂದು ಕೆಂಡಕಾರಿದರು.

ಬಹುಮತದ ಸರ್ಕಾರ: ಇದಾದ ನಂತರ, ವಿಜಯಪುರ ನಗರದ ಸೈನಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ‘ನವ ಕರ್ನಾಟಕ ಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿದ ಅವರು, ಈ ಬಾರಿಯ ನಿರ್ಧಾರ; ಬಹುಮತದ ಬಿಜೆಪಿ ಸರ್ಕಾರ’ ಎಂಬ ಕನ್ನಡ ಘೋಷಣೆಯನ್ನು ತಮ್ಮ ಭಾಷಣದಲ್ಲಿ ಪದೇ ಪದೇ ಒತ್ತಿ ಹೇಳುವ ಮೂಲಕ ಸಂಚಲನ ಮೂಡಿಸಲು ಪ್ರಯತ್ನಿಸಿದರು.

ಇದು ನನ್ನ ಕೊನೆಯ ಚುನಾವಣೆ ಎಂಬ ಅನುಕಂಪದ ಆಧಾರದ ಮೇಲೆ ಕಾಂಗ್ರೆಸ್‌ ನಾಯಕರು ಮತ ಕೇಳುತ್ತಿದ್ದಾರೆ. ಆದರೆ, ಉತ್ಸಾಹಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಲು ಜನತೆ ನಿರ್ಧರಿಸಿದ್ದಾರೆ ಎಂದರು.

ಬಸವಣ್ಣನವರ ಕಾಯಕ, ದಾಸೋಹ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಆದ್ಯತೆ ನೀಡಿದೆ. ಬಿಜೆಪಿಯ ವಿಚಾರಧಾರೆಯಾಗಿರುವ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್‌’ ಎನ್ನುವ ಉಕ್ತಿಗೆ ಬಸವಣ್ಣನವರ ಆಶಯವೇ ಆಧಾರವಾಗಿದೆ ಎಂದು ಹೇಳಿದರು.

ಇಂದು ಬಿಜೆಪಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ತಲುಪುತ್ತಿದೆ ಎಂದರು.

ವಿಜಯಪುರ ಜಿಲ್ಲೆ ಪಂಚನದಿಗಳ ಬೀಡಿದ್ದರೂ ನೀರಾವರಿಗೆ ದೊಡ್ಡ ಪ್ರಯತ್ನಗಳು ನಡೆದಿಲ್ಲ. ಆದರೆ, ಡಬಲ್‌ ಎಂಜಿನ್‌ ಸರ್ಕಾರದ ಅವಧಿಯಲ್ಲಿ ಯುಕೆಪಿ ಮೂರನೇಯ ಹಂತದ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳು, ನಾರಾಯಣಪುರ ಜಲಾಶಯಕ್ಕೆ ಆಧುನಿಕ ಸ್ಪರ್ಶ, ಮುಳವಾಡ, ಹೊರ್ತಿ-ರೇವಣಸಿದ್ದೇಶ್ವರ ಯೋಜನೆ ಆದ್ಯತೆ ನೀಡಿದೆ. ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ ಎಂದರು.

ಬಿಜೆಪಿ ಅಭ್ಯರ್ಥಿಗಳಾದ ಮುದ್ದೇಬಿಹಾಳದ ಎ.ಎಸ್. ಪಾಟೀಲ ನಡಹಳ್ಳಿ, ದೇವರ ಹಿಪ್ಪರಗಿಯ ಸೋಮನಗೌಡ ಪಾಟೀಲ ಸಾಸನೂರ, ಬಬಲೇಶ್ವರದ ವಿಜುಗೌಡ ಪಾಟೀಲ, ಇಂಡಿಯ ಕಾಸುಗೌಡ ಬಿರಾದಾರ, ನಾಗಠಾಣದ ಸಂಜೀವ ಐಹೊಳಿ, ಸಿಂದಗಿಯ ರಮೇಶ ಭೂಸನೂರ, ಜಮಖಂಡಿಯ ಜಗದೀಶ ಗುಡಗಂಟಿ ಹಾಗೂ ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ, ಹಣಮಂತ ನಿರಾಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಇದ್ದರು.

Leave a Reply