ಉತ್ತರ ಪ್ರದೇಶದ ಗೂಂಡಾ ಒಬ್ಬನು ಭಾರತದ ಕುಸ್ತಿ ಫೆಡರೇಶನ್ ಸಂಸ್ಥೆಯ ಅಧ್ಯಕ್ಷನಾದ ಕಥೆ.
ಭಾರತದ ಮಹಿಳಾ ಕುಸ್ತಿಪಟುಗಳು ಅವರಲ್ಲಿ ಯಾರೊಬ್ಬರೂ ಸಾಮಾನ್ಯರಲ್ಲ, ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟು ದೇಶದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದವರು.
ಪಂಜಾಬ್, ಹರ್ಯಾಣ ಮೂಲದ ಈ ಮಹಿಳಾ ಕ್ರಿಡಾಪಟುಗಳು ಕಳೆದ ಜನವರಿ ತಿಂಗಳಿನಿಂದ ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷನಾದ ಹಾಗೂ ಬಿ.ಜೆ.ಪಿ. ಸಂಸದನಾದ ಬ್ರಿಜ್ ಭೂಷಣ್ ಸಿಂಗ್ ನೀಡಿರುವ ಲೈಂಗಿಕ ಕಿರುಕುಳದ ವಿರುದ್ಧ ದೂರು ಸಲ್ಲಿಸಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಲಿಲ್ಲ.
ದೇಶದ ಪ್ರಧಾನಿ ಎನಿಸಿಕೊಂಡ ಮಹಾನುಭಾವ ಮತ್ತು ಆತನ ಸಚಿವ ಸಂಪುಟದಲ್ಲಿ ಮೈಯೆಲ್ಲವನ್ನು ಬಾಯಿಯಾಗಿಸಿಕೊಂಡಿರುವ ಮಹಿಳಾ ಸಚಿವೆಯರು ಇದ್ದರೂ ಯಾರೊಬ್ಬರು ತುಟಿ ಬಿಚ್ಚಲಿಲ್ಲ. ಕೊನೆಗೆ ನ್ಯಾಯಾಂಗದ ಮೊರೆ ಹೋಗಬೇಕಾಯಿತು.
ಈಗ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿದ ನಂತರ ಬ್ರಿಜ್ ಭೂಷಣ್ ವಿರುದ್ಧ ದೆಹಲಿ ಪೋಲಿಸರು ಎಫ್.ಐ. ಆರ್. ದಾಖಲಿಸಿದ್ದಾರೆ. ಕುಸ್ತಿ ಫೆಡರೇಶನ್ ಅಧ್ಯಕ್ಷನಾಗಿರುವ ಈತನ ಕಪ್ಪು ಇತಿಹಾಸವು ಬಿ.ಜೆ.ಪಿ.ಯ. ಇತಿಹಾಸದಷ್ಟೇ ರಕ್ತಮಯವಾಗಿದೆ.
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ವಿಷ್ಣುಪುರ್ ಎಂಬ ಪ್ರದೇಶದ ಈತ ಎಪ್ಪತ್ತರ ದಶಕದಲ್ಲಿ ಮೋಟಾರ್ ಬೈಕ್ ಕಳ್ಳತನದ ಮೂಲಕ ರೌಡಿಯಾಗಿ ಸಾರ್ವಜನಿಕ ಕ್ಷೇತ್ರ ಪ್ರವೇಶಿದ. ತೊಂಬತ್ತರ ದಶಕದಲ್ಲಿ ದಾವೂದ್ ಇಬ್ರಾಹಿಂ ನ ಮೂವರು ಸಹಚರರಿಗೆ ಆಶ್ರಯ ನೀಡಿ ಜೈಲು ಸೇರಿದ್ದ.
ಮೂಲತಃ ಕುಸ್ತಿಪಟು ಆಗಿದ್ದ ಬ್ರಿಜ್ ಭೂಷಣ್ ಅಯೋಧ್ಯೆ ನಗರದಲ್ಲಿ ಕಾಲೇಜ್ ಓದುವಾಗ ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಗೂಂಡಾಗಿರಿ ಆರಂಭಿಸಿದನು. ಉತ್ತರ ಪ್ರದೇಶದ ಪೂರ್ವ ಭಾಗದ ಜಿಲ್ಲೆಗಳು ಜಮೀನ್ದಾರರ ಅಟ್ಟಹಾಸ, ದೌರ್ಜನ್ಯ ಇವುಗಳಿಂದ ರಾರಾಜಿಸುವ ಪ್ರದೇಶಗಳು. ಬಿ.ಬಿ.ಸಿ.ಯ ಮಾಜಿ ವರದಿಗಾರ ಮಾರ್ಕ್ ಟುಲಿ ಅವರ ಬಹುತೇಕ ಅನುಭವ ಕಥನಗಳು ಈ ಪ್ರದೇಶಕ್ಕೆ ಸೇರಿವೆ.
ಅಲ್ಲಿನ ಕಬ್ಬು ಬೆಳೆಗಾರರ ಪರ ಒಮ್ಮೆ ಧ್ವನಿ ಎತ್ತಿದ ಕಾರಣಕ್ಕಾಗಿ ಕಾಂಗ್ರೆಸ್ ಸಂಸದನಾಗಿದ್ದ ರಾಜಾ ಅಮರ್ ಸಿಂಗ್ ಎಂಬ ಅಯೋಧ್ಯೆ ಮೂಲದ ವ್ಯಕ್ತಿಯನ್ನು ಚುನಾವಣೆಯಲ್ಲಿ ಸೋಲಿಸಿ ರಾಜಕೀಯ ಪ್ರವೇಶಿಸಿದನು. ಈತ ಆರು ಬಾರಿ ಸಂಸದನಾಗಿ ತನ್ನ ಗೂಂಡಾಗಿರಿಗೆ, ಲೈಂಗಿಕ ದೌರ್ಜನ್ಯಕ್ಕೆ ರಾಜಕೀಯ ರಕ್ಷಣೆ ಪಡೆದಿದ್ದಾನೆ.
ಮೊದಲಿಗೆ ಗೋಂಡಾ ಜಿಲ್ಲೆ ಕುಸ್ತಿ ಫೆಡರೇಶನ್, ನಂತರ ಉತ್ತರ ಪ್ರದೇಶ ರಾಜ್ಯದ ಫೆಡರೇಶನ್ ಅಧ್ಯಕ್ಷನಾಗಿ ಈಗ ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷನಾಗಿದ್ದಾನೆ. ತನ್ನ ಬಳಿ ಸಹಾಯ ಕೇಳಿ ಬಂದ ಮಹಿಳಾ ಕುಸ್ತಿ ಪಟುಗಳನ್ನು ತಿಂದು ಮುಗಿಸಿರುವ ಈತನ ಅಟ್ಟಹಾಸಗಳ ಕುರಿತು ಯಾರೊಬ್ಬರೂ ಈವರೆಗೆ ಧ್ವನಿ ಎತ್ತಲಿಲ್ಲ.
ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಗೆ ತಾನೇ ಕ್ರೀಡಾಪಟುಗಳನ್ನು ಆಯ್ಕೆ ಮಾಡುವುದು ಮತ್ತು ಸ್ಪರ್ಧೆಯಲ್ಲಿ ತೀರ್ಪುಗಾರರನ್ನು ಬದಿಗೆ ಸರಿಸಿ ತಾನೇ ವಿಜಯಿ ಅಭ್ಯರ್ಥಿಗಳನ್ನು ಘೋಷಿಸಿ ಬಹುಮಾನ ನೀಡುವುದು ನಿರಂತರವಾಗಿ ನಡೆದು ಬಂದಿದೆ. ಕೇಂದ್ರ ಸರ್ಕಾರ ನೀಡಿರುವ 117 ಕೋಟಿ ಹಣ ಹೇಗೆ ವ್ಯಯವಾಯಿತು ಎಂದು ಕೇಳುವ ಧೈರ್ಯ ಯಾರಿಗೂ ಇಲ್ಲವಾಗಿದೆ.
ಪಂಜಾಬ್ ಮಣ್ಣಿನಲ್ಲಿ ಧೈರ್ಯ ಮತ್ತು ಸಾಹಸ ಇವುಗಳು ಅದರ ಮೂಲ ಗುಣಗಳಾಗಿವೆ. ಹಾಗಾಗಿ ಅಲ್ಲಿನ ಹೆಣ್ಣು ಮಕ್ಕಳು ಈತನ ವಿರುದ್ಧ ಧ್ವನಿ ಎತ್ತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಹಲವಾರು ಕೊಲೆ, ಸುಲಿಗೆ ಆಪಾದನೆ ಎದುರುಸುತ್ತಿರುವ ಈ ಗೂಂಡಾ ಮಹಾರಾಜ ಈಗ ತನ್ನ ವಿರುದ್ಧ ಸಾಮಾಜಿಕ ತಾಣದಲ್ಲಿ ಯಾರೂ ಏನನ್ನೂ ಬರೆಯಬಾರದು ಎಂದು ಉತ್ತರ ಪ್ರದೇಶದಲ್ಲಿ ಆದೇಶ ಹೊರಡಿಸಿದ್ದಾನೆ.
ಈಗ ಕರ್ನಾಟಕದ ಚುನಾವಣೆಗೆ ಆಗಮಿಸುತ್ತಿರುವ ರಾಷ್ಟ್ರೀಯ ನಾಯಕರೆಂಬ ಮುತುನ ರತುನಗಳಿಗೆ ಈ ಕುರಿತು ಹಾಗೂ ಮಹಿಳಾ ಸಚಿವೆಯರೆಂಬ ಹೆಸರಿನಲ್ಲಿ ಗಂಟಲು ಹರಿದುಕೊಳ್ಳುವ ಸ್ತ್ರೀ ರತುನಗಳಿಗೆ ಈ ಕುರಿತು ಪ್ರಶ್ನೆ ಕೇಳುವ ಗುಂಡಿಗೆ ಅಥವಾ ಧೈರ್ಯ ಕರ್ನಾಟಕದ ಯಾವ ಪತುರಕರುತನಿಗೆ ಇದೆ ದಯವಿಟ್ಟು ಕೈ ಎತ್ತಿ. ನೋಡೋಣ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು



