ಬೆಂಗಳೂರು: ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಭರ್ಜರಿ ರಂಗು ಬಂದಿರುವ ಬೆನ್ನಲ್ಲೇ ಇದೀಗ ಅಖಾಡದಲ್ಲಿ ಒಳ ಒಪ್ಪಂದದ ಆರೋಪ ಕೇಳಿ ಬಂದಿದೆ. ಅದರಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಈ ಬಾರಿ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ, ಶಿಕಾರಿಪುರ, ವರುಣಾ ಕ್ಷೇತ್ರ ಸೇರಿದಂತೆ ಹಲವು ಕಡೆಗಳಲ್ಲಿ ಕಾಂಗ್ರೆಸ್ -ಬಿಜೆಪಿ ನಡುವೆ ಒಳ ಒಪ್ಪಂದವೇ ನಡೆಯುತ್ತಿದೆ. ರಾಮನಗರ ಒಂದೇ ಅಲ್ಲ, ಹಲವಾರು ಕಡೆ ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ. ಚುನಾವಣೆಯಲ್ಲಿ ಗುಮ್ಮ ಬಂತು, ಗುಮ್ಮ ಎಂದು ತೋರಿಸಿ ಮತಪರಿವರ್ತನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿ ಜನರು ಮತ ಹಾಕುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಯಾವ ರೀತಿ ಲಾಭವಾಗುತ್ತದೆ ಎಂಬುದನ್ನು ಕಾದು ನೋಡೋಣ. ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಧಾನಿ ಅವರ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೋದಿ ಅವರು ಚನ್ನಪಟ್ಟಣಕ್ಕೆ ಬಂದರೆ ಸಂತೋಷ. ನಮ್ಮ ಕ್ಷೇತ್ರವನ್ನು ನೋಡಿಕೊಂಡು ಹೋಗಲಿ. ಅವರು ಬರುವುದರಲ್ಲಿ ತಪ್ಪೇನಿಲ್ಲ ಎಂದರು.




