ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ ಡಿ.ಕೆ.ಸುರೇಶ್

3 years ago

ಬೆಂಗಳೂರು: ಅಚ್ಚರಿಯ ಹಾಗೂ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಕನಕಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಡಿ.ಕೆ.ಶಿವಕುಮಾರ ಅವರ ‌ಸ್ಪರ್ಧೆಗೆ ವಿವಿಧ ಕಾರಣಗಳು ಹಾಗೂ ಕಾನೂನಿನ ತೊಡಕುಗಳು ಉಂಟಾಗುವ ಲಕ್ಷಣಗಳು ಗೋಚರಿಸಿವೆ. ಈ ಸುಳಿವನ್ನು ಅರಿತಿರುವ ಕಾಂಗ್ರೆಸ್ ಚಿಂತಕರ ಚಾವಡಿ ಈ ಪರ್ಯಾಯ ಮಾರ್ಗ ಹಿಡಿದಿದೆ.

ಕೊನೆಯ ಕ್ಷಣದಲ್ಲಿ ತಮ್ಮ ಅಭ್ಯರ್ಥಿತನವನ್ನು ಅನರ್ಹಗೊಳಿಸುವ ಸಂಚು ನಡೆದಿದೆ ಎಂಬ ಸುಳಿವು ಅರಿತಿರುವ ಕಾಂಗ್ರೆಸ್ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರದಲ್ಲಿ ಅವರೊಂದಿಗೆ ಅವರ ಸಹೋದರ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿದೆ.

ವರಿಷ್ಠರ ಸೂಚನೆಯ ಮೇರೆಗೆ, ಡಿ.ಕೆ.ಸುರೇಶ್ ಅವರು ಕನಕಪುರ ತಹಸೀಲ್ದಾರ್ ಕಚೇರಿಯಲ್ಲಿ ಕೆಲವೇ ಕೆಲವು ಮಂದಿ ಜೊತೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ಏ.17ರಂದು ಡಿ.ಕೆ.ಶಿವಕುಮಾರ್ ಸಾವಿರಾರು ಜನರ ಸಮ್ಮುಖದಲ್ಲಿ ಬೃಹತ್ ಮೆರವಣಿಗೆ ಮೂಲಕ ಕನಕಪುರಕ್ಕೆ ನಾಮಪತ್ರ ಸಲ್ಲಿಸಿದ್ದರು.

ಈ ಕ್ಷೇತ್ರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಕಣಕ್ಕಿಳಿದಿದ್ದು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಲು ಅಶೋಕ್ ಅವರ ಸ್ವಕ್ಷೇತ್ರ ಪದ್ಮನಾಭನಗರದಲ್ಲಿ ಸುರೇಶ್ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿಗಳು ಇದ್ದವು.
ಆದರೆ ದಿಢೀರ್ ಬೆಳವಣಿಗೆಯಲ್ಲಿ ಸುರೇಶ್ ಕನಕಪುರದಲ್ಲೇ ನಾಮಪತ್ರ ಸಲ್ಲಿಸುವುದು ಕುತೂಹಲ ಕೆರಳಿಸಿದೆ.

ನಿನ್ನೆ ಸುರೇಶ್ ಅವರು ನಾಮಪತ್ರ ಸಲ್ಲಿಕೆಗೆ ಅಗತ್ಯವಾದ ಎಲ್ಲ ಕಾಗದ ಪತ್ರಗಳನ್ನು ಸಿದ್ದ ಮಾಡಿಕೊಂಡಿದ್ದರು. ಆರಂಭದಲ್ಲಿ ಅವರನ್ನು ರಾಜರಾಜೇಶ್ವರಿನಗರ ಕ್ಷೇತ್ರದಿಂದ ಕಣಕ್ಕಿಳಿಸಲಾಗುವುದು ಎಂಬ ವದಂತಿಗಳು ಇದ್ದವು. ಆನಂತರ ಪದ್ಮನಾಭನಗರಕ್ಕೆ ಹೆಸರು ಪ್ರಸ್ತಾಪವಾಗಿತ್ತು.

Leave a Reply