ಸಾಧನೆಗಳ ಸಾರಲು ಮತ್ತೆ ಮತ್ತೆ ಬರುತ್ತಿದ್ದಾರೆ ಪ್ರಧಾನಿಗಳು!!!

3 years ago

ದೇಶದ ಬಹುತೇಕ ಸುದ್ದಿವಾಹಿನಿಗಳು, ದೇಶದ ಎಲ್ಲಾ ಭಾಷೆಯ ಬಹುತೇಕ ಪತ್ರಿಕೆಗಳು, ವಾಟ್ಸ್‌ಅಪ್, ಫೇಸ್ ಬುಕ್ ಮುಂತಾದಂತಹ ಸಾಮಾಜಿಕ ಜಾಲತಾಣಗಳು ಬೆಳಿಗ್ಗೆಯಿಂದ ರಾತ್ರಿಯ ತನಕ ಮೋದಿಜೀರವರ ಸಾಧನೆಗಳ ನಮ್ಮ ಕರ್ನಾಟಕದ ವಾಹಿನಿಗಳು, ಪತ್ರಿಕೆಗಳು ನಮ್ಮ ಸರ್ಕಾರದ ಸಾಧನೆಗಳನ್ನು ಹೇಳುತ್ತಲೇ ಇದ್ದಾರೆ. ಜಾಹೀರಾತುಗಳಲ್ಲಿ ಪ್ರಕಟಿಸುತ್ತಲೇ ಇದ್ದಾರೆ. ಆದರೂ ನಮ್ಮ ರಾಜ್ಯದ ಜನರ ಮನಸ್ಸಿಗೆ ಈ ಸಾಧನೆ ಮುಟ್ಟಿರುವುದಿಲ್ಲ‌. ಅದಕ್ಕಾಗಿ ನಮ್ಮ ಪ್ರಧಾನಿಗಳು ಈಗಾಗಲೇ ಹಲವಾರು ಬಾರಿ ಹಲವಾರು ರ್ಯಾಲಿಗಳಲ್ಲಿ, ಹಲವಾರು ತಾಸುಗಳ ಕಾಲ ಮಾತನಾಡಿ ಸಾಧನೆಗಳನ್ನು ವಿವರಿಸಿದ್ದಾರೆ. ಈಗ ಮತ್ತೆ ಕರ್ನಾಟಕಕ್ಕೆ ಇನ್ನು ಅದೆಷ್ಟು ಬಾರಿ ಬಂದು ತಮ್ಮ ಸಾಧನೆಗಳನ್ನು ಹೇಳಿ ಜನರಿಗೆ ಮನದಟ್ಟು ಮಾಡಿಕೊಡಬೇಕೋ ತಿಳಿಯುತ್ತಿಲ್ಲ.

ಬಹುಶಃ ಪ್ರಧಾನಿಗಳು 224 ವಿಧಾನಸಭಾ ಕ್ಷೇತ್ರಗಳಿಗೂ ಬಂದು ಭಾಷಣಗಳನ್ನು ಮಾಡಿ ಜನರಿಗೆ ತಿಳಿಹೇಳಬೇಕಾಗಿದೆ ಏನೋ ಸಾಲದು ಎಂಬಂತೆ ನಮ್ಮ ಕೇಂದ್ರ ಗೃಹ ಸಚಿವರ ಚಾಣಕ್ಷತನದ ತಂತ್ರಗಳು. ಇದಲ್ಲದೇ ಕೇಂದ್ರದ ಮಹಾನ್ ನಾಯಕರುಗಳು, ಬಿ.ಜೆ.ಪಿ.ಯ ಅನೇಕ ಮುಖ್ಯಮಂತ್ರಿಗಳು ಮತ್ತೆ ಮತ್ತೆ ಬಂದು ರಸ್ತೆ ರಸ್ತೆಯಲ್ಲಿ ಸಭೆಗಳನ್ನು ಮಾಡಿ ಪ್ರತಿಯೊಬ್ಬ ನಾಗರಿಕರಿಗೂ ಸಾಧನೆಗಳನ್ನು ತಿಳಿಸಬೇಕಾಗಿದೆ.

2014ಕ್ಕೆ ಮುನ್ನ ನಮ್ಮ ಪ್ರಧಾನ ಮಂತ್ರಿಗಳು ಅಧಿಕಾರಕ್ಕೆ ಬರುವ ಮೊದಲು ದೇಶದ ಯಾರ ಮನೆಯಲ್ಲಿಯೂ ವಿದ್ಯುತ್‌ ದೀಪಗಳು ಇರಲಿಲ್ಲ, ಯಾರ ಮನೆಯ ನಲ್ಲಿಗಳಲ್ಲಿ ಕುಡಿಯುವ ನೀರು ಬರುತ್ತಿರಲಿಲ್ಲ, ಯಾವುದೇ ಹಳ್ಳಿಯಲ್ಲೂ ರಸ್ತೆಗಳಿರಲಿಲ್ಲ, ಶಾಲಾ ಕಟ್ಟಡಗಳಿರಲಿಲ್ಲ, ಆಸ್ಪತ್ರೆಗಳೇ ಇರಲಿಲ್ಲ, ವಿಶ್ವವಿದ್ಯಾನಿಲಯವೇ ಇರಲಿಲ್ಲ, ಅಣೆಕಟ್ಟುಗಳು ಇರಲಿಲ್ಲ, ಸಂಶೋಧನಾ ಸಂಸ್ಥೆಗಳು ಇರಲಿಲ್ಲ, ಮೊಬೈಲ್ ಫೋನ್‌ಗಳೇ ಇರಲಿಲ್ಲ, ಕಂಪ್ಯೂಟರ್ ನೋಡೇ ಇರಲಿಲ್ಲ, ಔಷಧಿಗಳೇ ಇರಲಿಲ್ಲ, ಸೈನಿಕರಿಗೆ ಯುದ್ಧ ಮಾಡಲು ಶಸ್ತ್ರಸ್ತ್ರಾಗಳು ಇರಲಿಲ್ಲ, ಕಾರ್ಖಾನೆಗಳಿರಲಿಲ್ಲ, ಕಾರ್ಮಿಕರಿಗೆ ಕೆಲಸವೇ ಇರಲಿಲ್ಲ, ವಿಮಾನಗಳಿರಲಿಲ್ಲ. ರೈಲು ಇರಲಿಲ್ಲ, ಇವೆಲ್ಲವೂ ಬಂದದ್ದು 2014ರ ನಂತರ ಎಂಬುದನ್ನು ಹೇಳುವುದರ ಜೊತೆಗೆ ಪ್ರವಾಹಗಳನ್ನು ನಿಲ್ಲಿಸಿದವರೇ ಇವರೇ, ಬಿರುಗಾಳಿ ತಡೆದವರು ಇವರೇ ಎಂಬುದನ್ನು ತಿಳಿಸಿಕೊಡಬೇಕಾಗಿದೆ!

ಇನ್ನು ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ನಡೆದಿರುವಂತಹ ಅನೇಕ ಪುಣ್ಯದ ಕೆಲಸಗಳನ್ನು ಬಿಡಿಸಿ ಬಿಡಿಸಿ ಹೇಳಬೇಕಾಗಿದೆ. ಒಟ್ಟಾರೆಯಾಗಿ ಇಷ್ಟೇಲ್ಲಾ ಸಾಧನೆಗಳನ್ನು ಎಷ್ಟೇ ಬೊಬ್ಬೆ ಹೊಡೆದು ಹೇಳುತ್ತಿದ್ದರೂ ಇನ್ನು ಅರ್ಥ ಮಾಡಿಕೊಳ್ಳದ ನಮ್ಮ ಜನ ಪ್ರಧಾನಮಂತ್ರಿಯವರೇ ಬಂದು ಹೇಳುವ ಮಟ್ಟಕ್ಕೆ ಕಾಯುತ್ತಿರುವುದು ಎಷ್ಟು ಸರಿ?

ಪಾಪ, ಪ್ರಧಾನಮಂತ್ರಿಗಳಿಗೆ ಪ್ರತಿಯೊಂದು ಚುನಾವಣೆಗಳಲ್ಲೂ, ಪ್ರತಿಯೊಂದು ರಾಜ್ಯದಲ್ಲೂ ಹಲವಾರು ತಿಂಗಳುಗಳ ಕಾಲ ನೂರಾರು ಸಭೆಗಳಲ್ಲಿ ಭಾಷಣಗಳನ್ನು ಮಾಡುತ್ತಾ ಹೋದರೆ ಆಯಾಸವಾಗುವುದಿಲ್ಲವೇ. ಇನ್ನಾದರೂ ನಮ್ಮ ಸುದ್ದಿ ಹೆಚ್ಚು ಕಾಲ ಇವರ ಸಾಧನೆಯನ್ನು ಮಾಧ್ಯಮದವರು ಮತ್ತು ಕೆಲವು ಪತ್ರಿಕೆಯವರು ಇನ್ನು ಹೆಚ್ಚು ಕಾಲ ಧಾರಾವಾಹಿಗಳ ರೂಪದಲ್ಲಿ ತೋರಿಸಿ ಜನರ ಮನಸ್ಸಿಗೆ ಮುಟ್ಟಿಸಿ.


– ಕೆ.ಎಸ್‌. ನಾಗರಾಜ್, ಬೆಂಗಳೂರು

Leave a Reply