ಆನೆಗಳ ಮಾರಣಹೋಮಕ್ಕೆ ಅರಣ್ಯ ಇಲಾಖೆಯ ಯಜ್ಞ

3 years ago

ಆನೆಗಳ ಮಾರಣ ಹೋಮಕ್ಕೆ ಅರಣ್ಯ ಇಲಾಖೆಯ ಯಜ್ಞ.

ಆನೆಗಳು ನಾಡು ಪ್ರವೇಶಿದಂತೆ ಸಿಮೆಂಟ್ ತಡೆಗೋಡೆ ನಿರ್ಮಿಸುತ್ತಿರುವ ವರದಿಯನ್ನು ಗಮನಿಸಿದೆ. ನನ್ನ ದೃಷ್ಟಿಯಲ್ಲಿ ಈ ಸಮಾಜಕ್ಕೆ ಕಾಡಾನೆಗಳಿಗಿಂತ ಸರ್ಕಾರವು ಸಾಕುತ್ತಿರುವ ಬಿಳಿಯಾನೆಗಳು ಹೆಚ್ಚು ಅಪಾಯಕಾರಿ.

ಕಳೆದ ವರ್ಷ ಇದೇ ಏಪ್ರಿಲ್‌ನಲ್ಲಿ ಕಥೆಗಾರ ಮಿತ್ರ ಕೇಶವರೆಡ್ಡಿ ಹಂದ್ರಾಳ ಮತ್ತು ಮೈಸೂರಿನ ಮಿತ್ರ ಸ್ವಾಮಿ ಆನಂದ್ ಜೊತೆ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಒಂದು ಹೆಣ್ಣಾನೆ ಮತ್ತು ಅದರ ಮರಿ ಕುಡಿಯುವ ನೀರಿಗಾಗಿ ನೂರು ಅಡಿ ಆಳದ ಕಣಿವೆಗೆ ಇಳಿದು ನಂತರ ಅವುಗಳು ಮೇಲತ್ತಲು ಶ್ರಮ ಪಡುವುದನ್ನು ನೋಡುತ್ತಾ ನಿಂತಾಗ ಬೇಸಿಗೆಯಲ್ಲಿ ಕಾಡು ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ಪಡುವ ಬವಣೆ ಅರ್ಥವಾಯಿತು.

ಆನೆಗಳ ನಿಯಂತ್ರಣಕ್ಕೆ ಕಂದಕ ಅಂದರೆ ಹತ್ತು ಅಗಲ ಏಳು ಎಂಟು ಅಡಿ ಅಳದ ನಾಲುವೆ ರೀತಿಯಲ್ಲಿ ನಿರ್ಮಿಸಲಾಯಿತು. ನಂತರ ಹಳೆಯ ರೈಲು ಕಂಬಿಗಳನ್ನು ನಾಲ್ಕು ಅಡಿ ಎತ್ತರದಲ್ಲಿ ಅಡ್ಡಲಾಗಿ ಕಟ್ಟುವುದರ ಮೂಲಕ ನಿಯಂತ್ರಿಸಲು ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಯಿತು. ಈಗ ಸಿಮೆಂಟ್ ಗೋಡೆ.

ಜಗತ್ತಿನ ದೈತ್ಯ ಪ್ರಾಣಿಯಾದ ಆನೆಗೆ ದಿನವೊಂದಕ್ಕೆ 150 ರಿಂದ 250 ಕೆ.ಜಿ. ಆಹಾರ ಬೇಕು. ನೀರು ಬೇಕು. ಇಂತಹ ವ್ಯವಸ್ಥೆ ನಮ್ಮ ಅರಣ್ಯದಲ್ಲಿ ಇದೆಯಾ? ಎಂದು ಯಾವೊಬ್ಬ ಅಧಿಕಾರಿಯೂ ಯೋಚಿದಂತೆ ಕಾಣುವುದಿಲ್ಲ ಈ ಜಗತ್ತಿನಲ್ಲಿ ನಾಯಿಯನ್ನು ಹೊರತು ಪಡಿಸಿದರೆ, ಮನುಷ್ಯನ ಜೊತೆಗೆ ಭಾವನಾತ್ಮಕವಾಗಿ ಹೊಂದಿಕೊಳ್ಳುವ ಪ್ರಾಣಿಯಲ್ಲಿ ಆನೆ ಕೂಡ ಪ್ರಮುಖವಾದುದು.

. ಉತ್ತರ ಭಾರತದಿಂದ ಬಂದಿರುವ ಅನೇಕ ಅಯೋಗ್ಯ ಐ.ಎಪ್. ಎಸ್. ಅಧಿಕಾರಿಗಳನ್ನು ನೋಡಿದರೆ ಈ ಮುಠಾಳರು ನಮ್ಮ ಫಾರೆಸ್ಟ್ ವಾಚರ್ ಗಳು ಎಂಬ ದಿನಗೂಲಿ ನೌಕರರಿಗೆ ಇರುವ ಕನಿಷ್ಠ ಜ್ಞಾನ ಇಲ್ಲದ ಬಿಳಿಯಾನೆಗಳೆಂಬ ದಂಡಪಿಂಡಗಳು ಎಂಬುದು ಖಾತರಿಯಾಗುತ್ತದೆ.

ಒಮ್ಮೆ ಬೇಸಿಗೆಯ ದಿನಗಳಲ್ಲಿ ಬಂಡಿಪುರ, ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟ ದ ಅರಣ್ಯಗಳಿಗೆ ಭೇಟಿ ನೀಡಿದರೆ ಅಲ್ಲಿನ ಕಾಡುಪಾಣಿಗಳ ಸಂಕಟ ನಮಗೆ ಅರ್ಥವಾಗಬಲ್ಲದು. ಆದರೆ ಅಲ್ಲಿಗೆ ಭೇಟಿ ನೀಡುವ ಈ ನಾಡಿನ ಪ್ರಾಣಿಗಳೆಂಬ ದಂಡಪಿಂಡಗಳು ಮೋಜು ಮಸ್ತಿಗಾಗಿ ಮತ್ತು ಕೈಯಲ್ಲಿ ಇರುವ ಮೊಬೈಲ್ ನ ಸೆಲ್ಪಿಗಾಗಿ ಭೇಟಿ ನೀಡುತ್ತಿವೆ. ನಿಜಕ್ಕೂ ಈ ಕಾಂಕ್ರೀಟ್ ಕಾಡಿನ ಪ್ರಾಣಿಗಳು ಹೆಚ್ಚು ಅಪಾಯಕಾರಿ.

ಅಭಿವೃದ್ಧಿ ಹೆಸರನಿಲ್ಲಿ ದೇಶದುದ್ದಕ್ಕೂ ನಿರ್ಮಾಣವಾದ ಹೆದ್ದಾರಿಗಳು, ಜಲಾಶಯಗಳು, ರೈಲು ಮಾರ್ಗಗಳು ಆನೆಗಳ ಸಹಜ ಬದುಕಿಗೆ ಅಡ್ಡಿಯಾಗುತ್ತಿವೆ ಎಂಬುದನ್ನು ಯಾವ ಅರಣ್ಯ ಅಧಿಕಾರಿಯೂ ಗಂಭೀರವಾಗಿ ಯೋಚಿಸಲಿಲ್ಲ. ಯೋಚಿಸುವ ಅಧಿಕಾರಿ ಅಥವಾ ಪರಿಸರ ತಜ್ಞರಿಗೆ ಇಂದಿನ ಸಮಾಜ ಅಥವಾ ಸರ್ಕಾರದಲ್ಲಿ ಮೂರು ಕಾಸಿನ ಬೆಲೆಯಿಲ್ಲ.

ಆಯಾ ಋತುಮಾನಕ್ಕೆ ಅನುಗುಣವಾಗಿ ಆನೆಗಳು ಆಹಾರ ಮತ್ತು ನೀರನ್ನು ಅರೆಸಿಕೊಂಡು ಇತರೆ ಪ್ರದೇಶಗಳಿಗೆ ನಿರ್ಧಿಷ್ಟವಾದ ಮಾರ್ಗದಲ್ಲಿ ವಲಸೆ ಹೋಗುತ್ತಿದ್ದವು. ಈ ಮಾರ್ಗವನ್ನು ಆನೆಗಳ ಕಾರಿಡಾರ್ ಎಂದು ಕರೆಯಲಾಗುತ್ತಿತ್ತು. ಈಗ ದಕ್ಷಿಣ ಭಾರತ ಹಾಗೂ ಈಶಾನ್ಯ ಭಾರತದಲ್ಲಿ ಶೇಕಡಾ ತೊಂಬತ್ತರಷ್ಟು ಕಾರಿಡಾರ್ ಗಳು ಮುಚ್ಚಿಹೋಗಿವೆ.

ಆಹಾರ ಮತ್ತು ನೀರಿಗಾಗಿ ದಾರಿ ಕಾಣದ ಆನೆಗಳು ಗ್ರಾಮಗಳಿಗೆ ನುಗ್ಗಿ ರೈತರ ಬೆಳೆಗಳನ್ನು ನಾಶಪಡಿಸುತ್ತಿವೆ. ಈ ಕಾರಣ ಅರಣ್ಯಾಧಿಕಾರಿಗಳಿಗೆ ಗೊತ್ತಿಲ್ಲವೆ? ಬೇಸಿಗೆಯಲ್ಲಿ ಅವುಗಳಿಗೆ ಕುಡಿಯುವ ನೀರು ಮತ್ತು ಯಥೇಚ್ಚವಾದ ಆಹಾರ ಅಥವಾ ಮೇವು ದೊರೆಯುವಂತೆ ಮಾಡುವುದರ ಬದಲು ಈ ಕಾಂಕ್ರೀಟ್ ಅಡ್ಡಗೋಡೆಯ ದಂಧೆಯಲ್ಲಿ ನಿರತರಾಗಿದ್ದಾರೆ.

ಈ ಹಣದದಲ್ಲಿ ಯಥೇಚ್ಚವಾಗಿ ಬಿದಿರು ಹಾಗೂ ಇನ್ನಿತರೆ ಸೊಪ್ಪಿನ ಮರ ಬೆಳಸುವುದು ಅವುಗಳಿಗೆ ಬೇಸಿಗೆಯಲ್ಲಿ ನೀರುಣಿಸುವ ಕಾರ್ಯ ಮಾಡುವುದು, ಅರಣ್ಯದಲ್ಲಿ ಹೊಂಡಗಳನ್ನು ನಿರ್ಮಿಸಿ ಅಲ್ಲಿ ನೀರು ತುಂಬಿಸುವ ಕೆಲಸ ಮಾಡಬಹುದಾಗಿದೆ.
ಈಗ ಅಭಿವೃದ್ಧಿ ಎನ್ನುವುದು ಹಗಲು ದರೋಡೆಗೆ ಪರ್ಯಾಯವಾಗಿರುವಾಗ ಯಾವ ಸರ್ಕಾರ, ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಪ್ರಾಣಿಗಳ ಕುರಿತು ಚಿಂತಿಸಲು ಸಮಯವಿಲ್ಲ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply