ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿ.ಜೆ.ಪಿ. ಕಳೆದ ಒಂಭತ್ತು ವರ್ಷಗಳಿಂದ ಧರ್ಮ, ದೇವರುಗಳನ್ನು ಮತ್ತು ಭಾವನಾತ್ಮಕ ವಿಚಾರಗಳನ್ನು ಮಾಧ್ಯಮಗಳ ಮೂಲಕ ಚರ್ಚೆಗೆ ಬಿಟ್ಟು ಜನರ ಗಮನ ಅತ್ತ ಇದ್ದಾಗ ಸದ್ದುಗದ್ದಲವಿಲ್ಲದೆ ಬಡ ಜನರ ರಕ್ತವನ್ನು ಹೀರುವ ಅನೇಕ ನಿಲುವುಗಳನ್ನು ಕೈಗೊಳ್ಳುತ್ತಿದ್ದರೂ ಸಹ ಜನರಿಗೆ ಇದು ತಿಳಿಯುತ್ತಲೇ ಇಲ್ಲ. ಇಂತಹ ಒಂದು ವ್ಯವಸ್ಥಿತವಾದ ರೀತಿಯಲ್ಲಿ ಕೆಲವು ಮಾಧ್ಯಮ ಮೂಲಕ ತಮ್ಮ ಇಷ್ಟದಂತೆ ಪ್ರಚಾರಗಳನ್ನು ಮಾಡುತ್ತಾ ಜನಸಾಮಾನ್ಯರನ್ನು ಒಂದು ರೀತಿಯಲ್ಲಿ ಯಾಮಾರಿಸುತ್ತಲೇ ಇದ್ದಾರೆ.
ಕಳೆದ ಒಂಭತ್ತು ವರ್ಷದ ಅವಧಿಯಲ್ಲಿ ಒಂಭತ್ತು ಕೋಟಿ ಜನರಿಗೆ ಉಜ್ವಲ್ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರ್‌ಗಳ ಸಂಪರ್ಕವನ್ನು ಕೊಟ್ಟಿದ್ದೇನೆಂದು ಹಲವಾರು ಪುಟಗಳಲ್ಲಿ ಪ್ರತಿದಿನವೂ ಜಾಹೀರಾತುಗಳನ್ನು ನೀಡುತ್ತಲ್ಲಿದ್ದಾರೆ. ಸತ್ಯದ ಸಂಗತಿ ಏನೆಂದರೆ, ಒಂಭತ್ತು ಕೋಟಿ ಜನರಲ್ಲಿ ಸುಮಾರು ಆರು ಕೋಟಿ ಜನರು ಗ್ಯಾಸ್ ಸಿಲಿಂಡರ್‌ಗಳನ್ನು ಖರೀದಿಸಲು ಹಣವಿಲ್ಲದೆ ಮತ್ತೆ ಸೌದೆ ಒಲೆಗಳಿಗೆ ಮೊರೆಹೋಗಿದ್ದಾರೆ.
ಏಕೆಂದರೆ, 2004ರಲ್ಲಿ 400 ರೂ.ಗಳಿದ್ದ ಗೃಹ ಬಳಕೆಯ ಅಡುಗೆ ಅನಿಲದ ದರ ಇಂದು 1200/- ರೂಪಾಯಿಗಳನ್ನು ಮುಟ್ಟಿದೆ. ಜೊತೆಗೆ ಸಬ್ಸಿಡಿ ಮೊತ್ತ ವರ್ಷದಿಂದ ವರ್ಷಕ್ಕೆ ಕಡಿತ ಮಾಡುತ್ತಾ ಈಗ ಸಂಪೂರ್ಣವಾಗಿ ಸಬ್ಸಿಡಿಯನ್ನೇ ನಿಲ್ಲಿಸಿದ್ದಾರೆ. ಉಜ್ವಲ್ ಯೋಜನೆಯ ಪ್ರಚಾರ ಮಾಡಿದಾಗ ಜನಸಾಮಾನ್ಯರು ನಿರೀಕ್ಷಿಸಿದ್ದು, ಪ್ರತಿ ತಿಂಗಳು ಉಚಿತವಾಗಿ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ವಿತರಿಸುತ್ತಾರೆ ಎಂದು. ಆದರೆ ಯಾವ ಕ್ಷಣದಲ್ಲಿ ಇದಕ್ಕೆ 1200/- ರೂಪಾಯಿಗಳ ಹಣವನ್ನು ನಾವೇ ಪಾವತಿಸಬೇಕೆಂದು ಅರಿವು ಬರುತ್ತಿದ್ದಂತೆ ದುಡಿದು ತಿನ್ನುವ ಕೂಲಿ ಮಾಡಿ ಬದುಕುವ ಹಲವಾರು ಕೋಟಿ ಮಂದಿ ಇದನ್ನು ಪಕ್ಕಕ್ಕೆ ಇಟ್ಟು ಮತ್ತೆ ಸೌದೆಯ ಒಲೆಯನ್ನು ಅವಲಂಬಿಸಿದ್ದಾರೆ. ಆದರೆ ಸತ್ಯವನ್ನು ಯಾರಿಗೂ ಹೇಳದೆ ನಮ್ಮ ಕೆಲವು ಮಾಧ್ಯಮದವರು ಈಗಲೂ ಸಹ ಉಜ್ವಲ್ ಯೋಜನೆಯ ಒಂಭತ್ತು ಕೋಟಿ ಫಲಾನುಭವಿಗಳ ಕಥೆಯನ್ನು ಹೇಳುತ್ತಲೇ ಇದ್ದಾರೆ.
ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ 2014ರ ಚುನಾವಣಾ ಭಾಷಣದ ಸಂದರ್ಭದಲ್ಲಿ ಅಬ್ಬರಿಸಿದಂತಹ ನಮ್ಮ ಪ್ರಧಾನಿಗಳು ಸರ್ಕಾರದ ಕಾರ್ಖಾನೆಗಳನ್ನು ಮತ್ತು ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಇಲ್ಲವೇ ನಷ್ಟವೆಂದು ಮುಚ್ಚಿ ಲಕ್ಷಾಂತರ ಕಾರ್ಮಿಕರನ್ನು ಮನೆಗೆ ಕಳುಹಿಸಿದ್ದಾರೆ. ಉದ್ಯೋಗ ಸೃಷ್ಟಿಯಾಗಲಿಲ್ಲ. ಆದರೆ ಎಪ್ಪತ್ತೈದು ವರ್ಷದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎನ್ನುವಂತೆ ಎಪ್ಪತ್ತೈದು ಸಾವಿರ ಮಂದಿಗೆ ಉದ್ಯೋಗದ ಪತ್ರವನ್ನು ನೀಡಿ ದೊಡ್ಡ ಪ್ರಚಾರವನ್ನು ಪಡೆದಿರುತ್ತಾರೆ.
ಕರ್ನಾಟಕದಲ್ಲಿ ಗೋವಿಂದೇಗೌಡರು ಎನ್ನುವ ಶಿಕ್ಷಣ ಸಚಿವರು ಒಂದು ಲಕ್ಷ ಜನರಿಗೆ ಉದ್ಯೋಗವನ್ನು ನೀಡಿದಾಗಲೂ ಸಣ್ಣ ಜಾಹೀರಾತನ್ನು ಪ್ರಕಟಿಸಿಕೊಳ್ಳಲಿಲ್ಲ. ನಿರುದ್ಯೋಗದ ಪ್ರಮಾಣ ದೇಶದಲ್ಲಿ ಹೆಚ್ಚಾಗುತ್ತಲೇ ಇದೆ.
ಜಿ.ಎಸ್.ಟಿ. ಜಾರಿಗೊಳಿಸಿ ಉದ್ಯಮಿಗಳಿಗೆ ಮತ್ತು ಸಣ್ಣಮಟ್ಟ ವ್ಯಾಪಾರಸ್ಥರಿಗೆ ಒಂದಷ್ಟು ಮನೆಗಳನ್ನು ಬಾಡಿಗೆ ಕೊಟ್ಟಿರುವ ಮಾಲೀಕರಿಗೆ ನೀಡುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ತೆರಿಗೆಯ ರೂಪದಲ್ಲಿ ಜನರ ರಕ್ತವನ್ನು ತಿಗಣೆಯಂತೆ ಹೀರುತ್ತಿದ್ದಾರೆ. ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿತೆಂಬ ಜಾಹೀರಾತನ್ನು ಪ್ರಕಟಿಸುತ್ತಾರೆ. ಈ ಜಿ.ಎಸ್.ಟಿ. ಪದ್ಧತಿಯಿಂದ ನಷ್ಟ ಹೊಂದಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಗಳು ಮತ್ತು ನೋವು ತಿನ್ನುತ್ತಿರುವ ವ್ಯಾಪಾರಸ್ಥರ ಬಗ್ಗೆ ನಮ್ಮ ಮಾಧ್ಯಮದವರು ಎಲ್ಲಿಯೂ ಮಾತನಾಡುವುದಿಲ್ಲ. ಇದು ಒಂದು ದೊಡ್ಡ ಸಾಧನೆಯೆಂದು ಇದಕ್ಕೂ ಜಾಹೀರಾತು ನೀಡುತ್ತಾರೆ.
ದೇಶದ ಯಾವುದೇ ನಗರದಲ್ಲಿ ಹನ್ನೆರಡು ಚದರಕ್ಕಿಂತ ಮೇಲ್ಪಟ್ಟ ಮನೆಯನ್ನು ಕಟ್ಟಿದವರಿಗೆ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಎಂಬ ಹೆಸರಿನಲ್ಲಿ ಅಂದಾಜು ಪಟ್ಟಿಯ ಮೇಲೆ ಶೇಕಡಾ 1ರಷ್ಟು ತೆರಿಗೆಯನ್ನು ನಿಗದಿಪಡಿಸಿರುತ್ತಾರೆ. ಇದರಿಂದ ದೇಶದ ಬೊಕ್ಕಸಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಕೋಟಿ ಸಂಗ್ರಹವಾಗುತ್ತಿದೆ. ಈ ಯೋಜನೆಯನ್ನು ರೂಪಿಸಿದವರು ಮನಮೋಹನ ಸಿಂಗ್‌ರವರ ಸರ್ಕಾರ, ಫಲಾನುಭವಿಗಳು ಕೂಲಿ ಕಾರ್ಮಿಕರು. ಆದರೆ ಜಾಹೀರಾತು ಬಿ.ಜೆ.ಪಿಯದು. ಹಣ ಜನರದ್ದು.
ಬ್ಯಾಂಕ್‌ಗಳಲ್ಲಿ ನಗದು ರಹಿತ ವ್ಯವಹಾರ ಎಂಬ ಹೆಸರಿನಲ್ಲಿ ಅನೇಕ ಹಂತದಲ್ಲಿ ವಹಿವಾಟು ನಡೆಸುವ ನಾಗರಿಕರ ಬಳಿಯಲ್ಲಿ ನಮಗೆ ಅರಿವಿಲ್ಲದಂತೆ ಹಣವನ್ನು ಪಡೆಯುತ್ತಿದ್ದಾರೆ. ಇದರ ಮೊತ್ತ ಲಕ್ಷಾಂತರ ಕೋಟಿ. ಜನರ ಅರಿವಿಗೆ ಇಂತಹ ಹಣ ಕಳೆದುಕೊಳ್ಳುತ್ತಿರುವ ವಿಚಾರಗಳು ಬರುತ್ತಲೇ ಇಲ್ಲ. ಇದು ಒಂದು ದೊಡ್ಡ ಸಾಧನೆಯೇ?
ಅಂಗವಿಕಲರು, ಕೂಲಿ ಕಾರ್ಮಿಕರು, ಹಿರಿಯ ನಾಗರಿಕರು, ಬುದ್ಧಿಮಾಂಧ್ಯರು, ಪಿಂಚಣಿಯವರು ಸಹ ಪ್ಯಾನ್ ಕಾರ್ಡ್‌ಗಳಿಗೆ ಆಧಾರ್ ಲಿಂಕ್ ಮಾಡಬೇಕೆಂದು ಆದೇಶವನ್ನು ಹೊರಡಿಸಿ ಇದಕ್ಕೆ ಒಂದು ಸಾವಿರ ರೂಪಾಯಿಗಳನ್ನು ಜನರಿಂದ ವಸೂಲಿ ಮಾಡುತ್ತಿದ್ದಾರೆ. ಸುಮಾರು ಐವತ್ತು ಕೋಟಿ ಖಾತೆದಾರಿರುವ ತಮ್ಮ ಪ್ಯಾನ್ ಕಾರ್ಡ್‌ಗಳಿಗೆ ಆಧಾರ್ ಲಿಂಕ್ ಮಾಡದೇ ಉಳಿದುಕೊಂಡಿರುವವರ ಸಂಖ್ಯೆ ಹತ್ತಾರು ಸಾವಿರ ಕೋಟಿ. ಇದರಿಂದ ದೇಶದ ಬೊಕ್ಕಸಕ್ಕೆ ಬರುವ ಮೊತ್ತ ಹತ್ತಾರು ಸಾವಿರ ಕೋಟಿ, ಬಡವರು, ಮಧ್ಯಮ ವರ್ಗದವರು ತಾವು ದುಡಿಯುವ ಅಲ್ಪಸ್ವಲ್ಪ ಕೂಲಿಯ ಹಣದಲ್ಲಿ ಇದಕ್ಕಾಗಿ ಸಾವಿರ ರೂಪಾಯಿಗಳನ್ನು ಪಾವತಿಸಬೇಕೆಂದರೆ ಎಷ್ಟು ಸಂಕಟವಾಗಬಹುದು. ಇದರ ಬಗ್ಗೆ ಯಾವ ಮಾಧ್ಯಮದವರು ಮಾತನಾಡುವುದಿಲ್ಲ. ಇದರ ಅರಿವು ಜನರಿಗೆ ಆಗುತ್ತಿಲ್ಲ.
ದಿನದಿಂದ ದಿನಕ್ಕೆ ಆಹಾರ ಪದಾರ್ಥಗಳ ಬೆಲೆ, ಅಡಿಗೆ ಎಣ್ಣೆಯ ಬೆಲೆ ಗಗನಕ್ಕೇರುತ್ತಿದೆ ಇದರ ಬಗ್ಗೆ ಮಾತನಾಡಿದರೆ ಕೆಲವು ಇವರ ಬೆಂಬಲಿತ ಧ್ವನಿಗಳು ಸಂಬಳಗಳನ್ನು ಹೆಚ್ಚಿಸಿಲ್ಲವೇ ಎನ್ನುತ್ತಾರೆ. ಸರ್ಕಾರ ಮತ್ತು ಅರೆ ಸರ್ಕಾರ ಅಥವಾ ಸರ್ಕಾರದ ಅನುದಾನದ ಅಡಿಯಲ್ಲಿ ಉದ್ಯೋಗಗಳನ್ನು ಪಡೆಯುತ್ತಿರುವ ಸಂಖ್ಯೆ 5-6 ಕೋಟಿಯನ್ನು ಮೀರುವುದಿಲ್ಲ. ಉಳಿದವರ ಪಾಲಿಗೆ ಯಾವ ಸಂಬಳ ಹೆಚ್ಚಾಗುತ್ತದೆ. ಅವರ ಕೂಲಿ ಯಾರು ಹೆಚ್ಚಿಸುತ್ತಾರೆ ಇದರ ಬಗ್ಗೆ ಯಾರು ಮಾತನಾಡುವುದಿಲ್ಲ.
ಕಳೆದ ಒಂಭತ್ತು ವರ್ಷದ ಅವಧಿಯಲ್ಲಿ ವಾಹನ ಮಾಲೀಕರುಗಳು ತಮ್ಮ ವಾಹನಗಳ ವಿಮೆ ಕಂತನ್ನು ಪಾವತಿಸುವ ಸಂದರ್ಭದಲ್ಲಿ ಮೊತ್ತ ಪ್ರತಿ ವರ್ಷವು ಹೆಚ್ಚಾಗುತ್ತಿರುವುದನ್ನು ಗಮನಿಸಿ ಗಾಬರಿಗೊಂಡಿರುತ್ತಾರೆ. ಇನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ಗಳ ಶುಲ್ಕವಂತು ಹೇಳುವವರು ಕೇಳುವವರು ಇಲ್ಲದೆ ದರವನ್ನು ನಿಗದಿ ಮಾಡಿದ್ದಾರೆ. ಇದರ ಬಗ್ಗೆ ಯಾರು ಮಾತನಾಡುವುದಿಲ್ಲ.
ವಿಶ್ವದಲ್ಲಿ ಭಾರತ 5ನೇ ಬಲಿಷ್ಠ ಆರ್ಥಿಕ ಸ್ಥಿತಿಯನ್ನು ಹೊಂದಿದೆ ಎಂದು ಮಾಧ್ಯಮದವರು ಅಬ್ಬರಿಸುತ್ತಾರೆ. ಹಾಗಿದ್ದ ಮೇಲೆ 52 ಲಕ್ಷ ಕೋಟಿ ರೂಪಾಯಿಗಳ ದೇಶದ ಸಾಲ 156 ಲಕ್ಷ ಕೋಟಿಗೆ ತಲುಪಿರುವುದಾದರೂ ಏತಕ್ಕೆ? ಇದಕ್ಕೂ ಒಂದು ಸಬೂಬು ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರ ಮಾಡಿದ ಸಾಲವನ್ನು ತೀರಿಸಿದ್ದೇವೆ ಎಂದು. ಸಾಲವನ್ನು ತೀರಿಸಲು ಮತ್ತೆ ಸಾಲ ಮಾಡಿದ್ದಾರೆ ಎಂಬ ಅನುಮಾನ ಬರುತ್ತಿದೆ.
ಹೋಗಲಿ ಈ ದೇಶದಲ್ಲಿ 2014ಕ್ಕೆ ಮುನ್ನ ಯು.ಪಿ.ಎ. ಸರ್ಕಾರ ಅಧಿಕಾರವನ್ನು ಬಿಡುವ ಮುನ್ನ ಮಾಡಿದ್ದ ಸಾಲವನ್ನು, ತಾನು ತೀರಿಸಿರುವ ಸಾಲವೆಷ್ಟು ಎಂಬುದನ್ನು ಕೇಂದ್ರದ ಹಣಕಾಸು ಸಚಿವರು ಉತ್ತರಿಸಬೇಕು. ವಾಟ್ಸ್ ಅಪ್ ಮತ್ತು ಫೇಸ್ ಬುಕ್ ಯೂನಿವರ್ಸಿಟಿಗಳಲ್ಲಿ ಅಲ್ಲಿನ ಆರ್ಥಿಕ ತಜ್ಞರು ಬೊಗಳೆ ಅಂಕಿ-ಅಂಶಗಳನ್ನು ನೀಡುತ್ತಾ ಸುಳ್ಳನ್ನು ಸತ್ಯವನ್ನಾಗಿಸುವ ಉತ್ಸಾಹದಲ್ಲಿದ್ದಾರೆ.
ರೈತರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ವಿಮೆ ಮೊತ್ತವನ್ನು ಪಾವತಿಸಿಕೊಂಡು ಪ್ರತಿಯಾಗಿ ಅವರಿಗೆ ನೀಡುತ್ತಿರುವುದು ಸಂಗ್ರಹವಾದ ಒಟ್ಟು ಮೊತ್ತದಲ್ಲಿ ಶೇಕಡಾ 50 ರಷ್ಟು ಅಲ್ಲ. ಆಗಿದ್ದ ಮೇಲೆ ಈ ಹಣ ಎಲ್ಲಿಗೆ ಹೋಗುತ್ತಿದೆ?
ಈ ರೀತಿಯಲ್ಲಿ ಪಟ್ಟಿ ಮಾಡುತ್ತಾ ಹೋದರೆ ಕೇಂದ್ರ ಸರ್ಕಾರದ ವತಿಯಿಂದ ಕಳೆದ 9 ವರ್ಷದ ಅವಧಿಯಲ್ಲಿ ಜನಸಾಮಾನ್ಯರ ಮೇಲೆ ಹೊರೆಯನ್ನು ಮಾಡಿ ಸಂಗ್ರಹಿಸಿಕೊಂಡಿರುವ ಮೊತ್ತ ಅದೆಷ್ಟು ಲಕ್ಷ ಕೋಟಿಗಳು ತಿಳಿಯುತ್ತಲೇ ಇಲ್ಲ. ಆದರೂ ಸಹ ದೇಶದ ಪ್ರಗತಿಗಾಗಿ ದುಡಿಯುತ್ತಿದ್ದೇವೆ ಎಂಬ ಜಾಹೀರಾತಿಗೆನೂ ಕಡಿಮೆ ಇಲ್ಲ.
ಉಸಿರೆತ್ತಿದ್ದರೆ ಡಬ್ಬಲ್ ಇಂಜಿನ್ ಸರ್ಕಾರವಿದ್ದರೆ ರಾಜ್ಯಗಳಿಗೆ ಹೆಚ್ಚು ಅನುದಾನ ಕೊಡುತ್ತೇವೆ ಎನ್ನುತ್ತಾರೆ. ಮಾನ್ಯ ಬಿ.ಜೆ.ಪಿ. ನಾಯಕರೇ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಕೊಡುತ್ತಿರುವುದು ಬಿ.ಜೆ.ಪಿ. ಕೇಂದ್ರ ಕಛೇರಿಯ ಬೊಕ್ಕಸದಿಂದಲ್ಲ; ನಮ್ಮ ರಾಜ್ಯ ಕಟ್ಟುವ ಲಕ್ಷಾಂತರ ಕೋಟಿ ತೆರಿಗೆಯ ನ್ಯಾಯಸಮ್ಮತವಾದ ಪಾಲು, ನ್ಯಾಯಯುತವಾಗಿ ಬರಬೇಕಾದಂತಹ ನಮ್ಮ ಪಾಲೇ ನಮಗೆ ಬರುತ್ತಿಲ್ಲ. ಇನ್ನು ಹೆಚ್ಚಿನ ಅನುದಾನದ ಬಗ್ಗೆ ಮಾತನಾಡುವ ಇವರಿಗೆ ನಾಚಿಕೆಯಾಗಬೇಕು.
– ಕೆ.ಎಸ್. ನಾಗರಾಜ್, ಬೆಂಗಳೂರು




