ದೇವನೂರ ಮಹಾದೇವ ಎಡ – ಬಲ ಒಂದು ಮಾಡುವಿರಾ?

5 years ago

ಪ್ರೀತಿಯ ದೇವನೂರು ಅವರಿಗೆ

ಸಾರ್ ನಮಸ್ತೆ, ಹೇಗಿದ್ದೀರಿ.

ಇವತ್ತು ನಿಮ್ಮ ಜನುಮದಿನವಂತೆ. 73 ವರ್ಷ ತುಂಬಿ 74 ಕ್ಕೆ ಕಾಲಿಡುತ್ತಿದ್ದೀರಿ. ನಿಮಗೆ ಒಳಿತಾಗಲಿ ಸಾ… ನಮ್ಮೊಂದಿಗೆ ನೀವು ನೂರು ವರುಷಗಳ ಕಾಲ ಜೊತೆಗಿರಬೇಕು.

“ದೇವನೂರು ಮಹಾದೇವ ಎಂಬ ಈ ಹೆಸರಿನ ವ್ಯಕ್ತಿತ್ವಕ್ಕೆ ಏನೋ ಅವ್ಯಕ್ತ ಶಕ್ತಿ ಇದೆ.” ಅಂತ ಹಿರಿಯ ಪತ್ರಕರ್ತರಾದ ಶಿವಾಜಿ ಗಣೇಶನ್ ಅವರು ನಿಮ್ಮ ಬಗ್ಗೆ ಇವತ್ತು ಬರೆದಿದ್ದಾರೆ . ಅವರ ಮಾತು ಅಕ್ಷರಶಃ ನಿಜ.

ನಿಮ್ಮನ್ನು ನಾಡಿನ ಸಾಕಷ್ಟು ಜನರು “ಧರೆಗೆ ದೊಡ್ಡವರು” ಅಂತಲೇ ಕರೆಯೋದು.

ಇವತ್ತಿನ  ಜನ್ಮದಿನದ ಸಂದರ್ಭದಲ್ಲಿ ನಿಮ್ಮೊಂದಿಗೆ  ನನ್ನ ಮನಸ್ಸಿನ ಕೆಲ ಮಾತುಗಳನ್ನು ಮನೇಗೆ ಬಂದು ನಿಮ್ಮ ಎದುರಿಗೆ ಹೇಳಿಕೊಳ್ಳಬೇಕೆಂದು ಸಾಕಷ್ಟು ಬಾರಿ ಅಂದು ಕೊಂಡಿದ್ದೇನೆ. ಆದರೆ ಧೈರ್ಯ ಸಾಲದೆ ಕೆಲ ಆತ್ಮೀಯ ಗೆಳೆಯರಲ್ಲಿ, ಹಿರಿಯರಲ್ಲಿ ಹೇಳಿಕೊಂಡಿದ್ದೇನೆ.

ವಿಷಯ ಹೇಗೆ ಪ್ರಾರಂಭಿಸಬೇಕು, ಈ ವಿಷಯವನ್ನು ನಾನು ನಿಮ್ಮೊಂದಿಗೆ ಮಾತನಾಡಬಹುದೇ? ಈ ವಿಷಯ ಮಾತನಾಡಲು ನಾನು ಅರ್ಹನೆ? ಅನರ್ಹನೆ? ಈ ಯಾವ ವಿಚಾರವೂ ನನಗೆ ಈ ಕ್ಷಣ ಮುಖ್ಯವಲ್ಲ. ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ನಿಮ್ಮೊಂದಿಗೆ ಈ ವಿಚಾರ ಮಾತನಾಡಿದರಷ್ಟೆ ನನ್ನ ಮನಸ್ಸು ಕೊಂಚ ಹಗುರವಾಗಬಹುದೆಂಬ ಒಂದೇ ಒಂದು ಕಾರಣದಿಂದ ಹೇಳಿಕೊಳ್ಳುತ್ತಿದ್ದೇನೆ.

ಏನೆಂದರೆ ಇವತ್ತು ನಮ್ಮ ಶೋಷಿತ ಸಮಾಜ ಎದುರಿಸುತ್ತಿರುವ ಅನೇಕ ಸಂಕಟಗಳಲ್ಲಿ  ಬಹುದೊಡ್ಡ  ಸಂಕಟ ಎಂದರೆ ಆ ಸಮುದಾಯದಲ್ಲಿನ ಎಡ-ಬಲದ ಸಮಸ್ಯೆ.

ಈ ಸಮಸ್ಯೆ ಇವತ್ತು ನಾಡಿನಲ್ಲಿ ಹೇಗಿದೆ ಎಂಬುದು ನನಗಿಂತ ನಿಮಗೆ ಚೆನ್ನಾಗಿ ತಿಳಿದಿದೆ.

ಈ ಎಡ-ಬಲದ ಸಮಸ್ಯೆಯ ಬಗ್ಗೆ ಗೆಳೆಯನೊಬ್ಬ ಕೊಟ್ಟ ಉದಾಹರಣೆ ಕೇಳಿ ಒಂದು ಕ್ಷಣ ಗಾಬರಿಯಾಯಿತು.

‘ಆತ ಹೇಳಿದ ಇವತ್ತು ‘ಎಡಗೈ’ನವನು, ‘ಬಲಗೈ’ನವನನ್ನು, ಕಂಡರೆ, ‘ಬಲಗೈ’ನವನು ‘ಎಡಗೈ’ನವನ್ನು ಕಂಡರೆ ಒಬ್ಬರನ್ನೊಬ್ಬರು ಕತ್ತರಿಸಿ ಹಾಕಿಬಿಡುವಷ್ಟು ಕತ್ತಿ ಮಸೆಯುತ್ತಾರೆ’

ಇದು ಉತ್ಪ್ರೇಕ್ಷೆಯೇ ಇರಬಹುದು.

ನೀವು ಈ ಹಿಂದೆ ಇದರ ಬಗ್ಗೆ ಗಂಡಬೇರುಂಡದ ಮೆಟಾಫರ್ ಮೂಲಕ ಈ ಸಮುದಾಯಗಳ ನಡುವಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಹೇಳಿದ್ದೀರಿ, ವಿವರಿಸಿದ್ದೀರಿ. ಆದರೆ ಬದುಕಿಗೆ ಸಾಹಿತ್ಯಿಕ ಮೆಟಾಫರ್ ನಿಂದ ಯಾವುದೇ ಪ್ರಯೋಜನಗಳಿಲ್ಲ. ಯಾಕೆ ಈ ಮಾತುಗಳನ್ನು ನಿಮ್ಮೊಂದಿಗೆ ಹೇಳುತ್ತಿದ್ದೇನೆ ಎಂದರೆ, ನಾನು ಮೈಸೂರಿಗೆ ಬಂದ ದಿನದಿಂದ ಗಮನಿಸುತ್ತಿದ್ದೇನೆ.

ಈ ಎರಡೂ ಗುಂಪುಗಳಲ್ಲಿ ನನ್ನ ಅನೇಕ ಆತ್ಮೀಯ ಗೆಳೆಯರಿದ್ದಾರೆ. ಅವರುಗಳೆಲ್ಲರೂ ಶೋಷಿತರು, ಅತ್ಯಂತ ಸೂಕ್ಷ್ಮ ತಿಳುವಳಿಕೆಯುಳ್ಳವರು, ಸಮ ಸಮಾಜದ ಕನಸುಳ್ಳವರು, ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳವರು. ಕನಸುಗಾರರು, ಪ್ರತಿಭಾವಂತರು ದುರಂತವೆಂದರೆ ಬಲಗೈ ಗೆಳೆಯ ನನ್ನ ಜೊತೆ ಇದ್ದರೆ, ಅಲ್ಲಿ ಎಡಗೈ ಗೆಳೆಯ ಕಾಣೆಯಾಗುತ್ತಾನೆ. ಅಕಸ್ಮಾತ್ ಇಬ್ಬರೂ ಸಿಕ್ಕರೆ ಅಪ್ಪಿ ತಪ್ಪಿಯೂ ಒಬ್ಬ ಮತ್ತೊಬ್ಬನ ಜೊತೆ ಮಾತನಾಡುವುದೇ ಇಲ್ಲ.

ಸಾಮಾಜಿಕ ಜಾಲತಾಣಗಳಲ್ಲಂತೂ ಇದು ಯಾವ ಸ್ಥಿತಿ ಮುಟ್ಟಿದೆ ಎಂದರೆ? ಒಂದು ಕಾಲದಲ್ಲಿ ಆತ್ಮೀಯರಾಗಿದ್ದ ಗೆಳೆಯರು ಇವತ್ತು ಒಬ್ಬನನ್ನು ಮತ್ತೊಬ್ಬ ಮಾತಿನಲ್ಲೇ ಕತ್ತರಿಸಲು ಸಿದ್ಧನಿದ್ದಾರೆ. ಇಲ್ಲಿ ಪ್ರತಿಯೊಂದು ವಿಷಯವೂ ಕಡೆಗೆ  ಎಡ-ಬಲದ ವಿಚಾರಕ್ಕೆ ಬಂದು ಕೂರುತ್ತದೆ.

ಇವತ್ತು ನಾಡಿನಲ್ಲಿ ಇತರ ಸಮುದಾಯದ ಯುವ ಲೇಖಕರಿಗಿಂತ ಹೆಚ್ಚು ದಲಿತ ಸಮುದಾಯಕ್ಕೆ ಸೇರಿದ ಪ್ರತಿಭಾವಂತ, ಕವಿ, ಕತೆಗಾರ, ಕಾದಂಬರಿಕಾರ, ಬರಹಗಾರ, ಕಲಾವಿದರು ಹೆಚ್ಚಿದ್ದಾರೆ. ದುರಂತವೆಂದರೆ ಅವರೂ ಎಡಗೈ-ಬಲಗೈ ಗುಂಪುಗಳಾಗಿ ಒಡೆದು ಹೋಗಿದ್ದಾರೆ.  ಬಹುಶಃ  ಇವತ್ತಿನ ಚಳುವಳಿಯ  ಗುಂಪುಗಳ ವಿಷಯದಲ್ಲೂ ಇದು ನಿಜ ಅನ್ನಿಸುತ್ತೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ನಾನೇ ಕೆಲವು ವಿಚಿತ್ರಗಳನ್ನು ಕಂಡಿದ್ದೇನೆ.

ಎಡಗೈ ಸಮುದಾಯಕ್ಕೆ ಸೇರಿದ ಕವಿ, ಹೋರಾಟಗಾರ, ಬರಹಗಾರ, ಕಲಾವಿದರೊಬ್ಬರ  ಪುಸ್ತಕ ಬಿಡಗಡೆಗೊ, ಸನ್ಮಾನ ಸಮಾರಂಭಕ್ಕೊ ಬಲಗೈ ಸ್ನೇಹಿತರ ಹಾಜರಿ ಇರುವುದೇ ಇಲ್ಲ.

ಹಾಗೆಯೇ ಬಲಗೈ ಸಮುದಾಯಕ್ಕೆ ಸೇರಿದ ಹೋರಾಟಗಾರ, ಕವಿ, ಕಲಾವಿದ, ಬರಹಗಾರರ ಕಾರ್ಯಕ್ರಮಕ್ಕೆ ಎಡಗೈನವರ ಹಾಜರಾತಿ ಇರುವುದೇ ಇಲ್ಲ.

ಅದರಲ್ಲೂ ಹಿರಿಯರಾದ ನಿಮ್ಮಂತಹ ವ್ಯಕ್ತಿತ್ವಗಳೇ ಅಲ್ಲಿ ಕಾಣೆಯಾಗಿರುತ್ತವೆ.

ಬಲಗೈ ಸಮುದಾಯಕ್ಕೆ ಸೇರಿದ ನೀವು ಮೈಸೂರಿನಲ್ಲಿ ನಡೆಯುವ ಎಡಗೈ ಸಮುದಾಯದ ಎಲ್ಲ ಕಾರ್ಯಕ್ರಮಗಳಿಗೂ ಹಾಗೆ ಸುಮ್ಮನೇ  ಬಂದು ಒಂದು ಹಾಜರಿ ಹಾಕುವ ನಡೆಗೆ ನೀವು ಇನ್ನು ಮುಂದೆ ಚಾಲನೆ ಕೊಟ್ಟರೆ, ಹಾಗೆಯೇ ಬಲಗೈ ಸಮುದಾಯದ ಯಾವುದೇ ಕಾರ್ಯಕ್ರಮಕ್ಕೆ ಎಚ್.ಗೋವಿಂದಯ್ಯನವರು ಹಾಜರಿ ಕೊಟ್ಟರೆ, ಹಿರಿಯರಾದ ನಿಮ್ಮಗಳ ಈ ಒಂದು ನಡೆ ಇವತ್ತಿನ ಯುವ ಸಮುದಾಯದಲ್ಲಿ ಉಂಟಾಗಿರುವ ಬಹುದೊಡ್ಡ ಕಂದಕ ಹಂತ ಹಂತವಾಗಿ ಮುಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ.

ತಾಂತ್ರಿಕವಾಗಿ ಎಡಗೈ ಮತ್ತು ಬಲಗೈ ಸಮುದಾಯಗಳಲ್ಲಿ ಉಂಟಾಗಿರುವ ಮೀಸಲಾತಿ ವಿಷಯಗಳನ್ನು ಆನಂತರ ಮಾತುಕತೆಯ ನಂತರ ಬಗೆಹರಿಸಿಕೊಳ್ಳಬಹುದು ಅನ್ನಿಸುತ್ತೆ.

ಇದಕ್ಕೆ ನಿಮ್ಮ ಈ ಒಂದು ನಡೆ ಇವತ್ತಿಗೆ ಬಹುದೊಡ್ಡ ಕೊಡುಗೆ ಅನ್ನಿಸುತ್ತದೆ.

ಇದು ವಯಸ್ಸಾಗಿರುವ ನಿಮಗೆ ಅತ್ಯಂತ ಕಷ್ಟಕರ ಎಂಬುದು ನನಗೆ ಗೊತ್ತು. ಆದರೆ ಇವತ್ತು ಈ ದಾರಿ ಬಿಟ್ಟರೆ ಬೇರೆ ಯಾವುದೇ ದಾರಿಗಳಿಲ್ಲ ಎಂಬ ನಂಬಿಕೆ ಬಂದಿದೆ ನನಗೆ. ಹಾಗಾಗಿಯೇ ಇದೊಂದು ವಿನಂತಿ.

ಮೈಸೂರಿನಲ್ಲಿ ನೀವು ಮತ್ತು ಎಚ್.ಗೋವಿಂದಯ್ಯನವರು ಮುಂದಿನ ದಿನಗಳಲ್ಲಿ ಈ ನಡೆಗೆ ಕಾರಣರಾದರೆ ಇದಕ್ಕಿಂತ ಸಂತೋಷದ ವಿಷಯ ಮತ್ತೊಂದಿಲ್ಲ. ಇಬ್ಬರೂ ಎರಡೂ ಸಮುದಾಯಗಳ ಕಾರ್ಯಕ್ರಮಗಳಲ್ಲಿ ಯುವಕ/ಯುವತಿಯರನ್ನು ಉತ್ತೇಜಿಸುತ್ತಾ, ಬುದ್ದಿ ಮಾತುಗಳನ್ನು ಹೇಳುತ್ತಾ, ಮಾರ್ಗದರ್ಶನ ಕೊಟ್ಟರೆ ಅದಕ್ಕಿಂತ ಬಹುದೊಡ್ಡ ಕಾಣಿಕೆ ಬೇರೊಂದಿಲ್ಲ.

ನಿಮ್ಮ ಬರವಣಿಗೆಯಷ್ಟೇ ಮಹತ್ವದ್ದು ನಿಮ್ಮ ಈ ನಡೆ  ಖಂಡಿತಾ ಆಗುತ್ತದೆ ಎಂಬ ನಂಬಿಕೆಯೊಂದಿಗೆ ಈ ಮಾತುಗಳನ್ನು ಮುಗಿಸುತ್ತಿದ್ದೇನೆ.

ಪ್ರೀತಿಯಿಂದ ನಿಮ್ಮವ

ರೇಣುಕಾರಾಧ್ಯ ಎಚ್ ಎಸ್

Leave a Reply