ಬೆಂಗಳೂರು: ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಆಹಾರ ಕಿಟ್ ಗಳನ್ನು ಬೆಂಗಳೂರಿನ ಪ್ರತಿ ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿತರಿಸಲಾಗುತ್ತಿದೆ. ಕೊವಿಡ್ ನಿಂದ ಲಕ್ಷಾಂತರ ಜನ ಸಾವನ್ನಪ್ಪಿದ್ದರು ಕೊರೋನ ಸಾಂಕ್ರಮಿಕ ರೋಗ ನಿಯಂತ್ರಣ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಪಕ್ಷದ ಸತತ ಹೋರಾಟದ ಪ್ರತಿಫಲ ಇಂದು ದೇಶದ ನಾಗರಿಕರಿಗೆ ಕೊವಿಡ್-19ಲಸಿಕೆ ಲಭಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಪಕ್ಷ ಬಡವರ ಪರ ಇರುವ ಪಕ್ಷ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಜನಜೀವನ ನಡೆಸುವುದು ಕಷ್ಟವಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಇದೇ ವೇಳೆ ಮಾತಾಡಿದ ರಾಮಲಿಂಗಾರೆಡ್ಡಿ, ಬಿ.ಜೆ.ಪಿ. ಆಂತರಿಕ ಕಿತ್ತಾಟದಿಂದ ಆಡಳಿತ ಸಂಪೂರ್ಣ ವಿಫಲವಾಗಿದೆ. ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಮತ್ತು ಬೆಡ್ ಸಿಗದೇ ಬೀದಿಯಲ್ಲಿ ಸಾಯುವ ಪರಿಸ್ಥಿತಿ ಬಂದಿದೆ. ಲಾಕ್ ಡೌನ್ ಸಮಯದಲ್ಲಿ ಹಸಿವಿನಿಂದ ಯಾರೂ ಬಳಲಬಾರದು ಎಂದು ಆಹಾರ ಕಿಟ್ ವಿತರಸಲಾಗುತ್ತಿದೆ ಎಂದರು.
ಈ ವೇಳೆ ಮಾತಾಡಿದ ಎಮ್.ಶಿವರಾಜು, ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರ ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚಿನ ಜನಸಂಖ್ಯೆಯುಳ್ಳ ಕ್ಷೇತ್ರ. ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ಬಡವರು, ಕೂಲಿ ಕಾರ್ಮಿಕರು ಮತ್ತು ಮಹಿಳೆಯರು ಮತ್ತು ಮಕ್ಕಳಿಗೆ ಪ್ರತಿ ದಿನ ಆಹಾರ ಪ್ಯಾಕೇಟ್ ಮತ್ತು ಆಹಾರ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರ, ಶಂಕರಮಠ ವಾರ್ಡ್ ಕೆಂಪೇಗೌಡ ಆಟದ ಮೈದಾನ ಮತ್ತು ಮಹಾಲಕ್ಷ್ಮೀಪುರಂ ವಾರ್ಡ್ ಜೆ.ಸಿ.ನಗರದಲ್ಲಿ ಕೊವಿಡ್-19 ಲಾಕ್ ಡೌನ್ ನಿಂದ ಬಡವರು, ಕೂಲಿ ಕಾರ್ಮಿಕರು ಮತ್ತು ಮಹಿಳೆಯರಿಗೆ ದಿನಸಿ ಸಾಮಗ್ರಿಗಳ ಆಹಾರ ಕಿಟ್ ಮತ್ತು ತರಕಾರಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್, ಮಾಜಿ ಗೃಹ ಸಚಿವ, ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸಲೀಮ್ ಅಹಮದ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮತ್ತು ಮಾಜಿ ಆಡಳಿತ ಪಕ್ಷದ ನಾಯಕ ಎಮ್.ಶಿವರಾಜು, ಬಿ.ಬಿ.ಎಂ.ಪಿ. ಮಾಜಿ ಸದಸ್ಯ ಕೇಶವಮೂರ್ತಿ, ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಸಾವಿರಾರು ಜನಕ್ಕೆ ಅಕ್ಕಿ, ಬೇಳೆ ಮತ್ತು ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಆಹಾರ ಕಿಟ್ ಮತ್ತು ವಿವಿಧ ಬಗೆಯ ತರಕಾರಿಗಳುವುಳ್ಳ ಕಿಟ್ ವಿತರಿಸಲಾಯಿತು.




