ಮೂಡ್ನಾಕೂಡು ಚಿನ್ನಸ್ವಾಮಿ ನಮ್ಮ ಪ್ರೀತಿಯ ಕವಿಗಳಲ್ಲಿ ಒಬ್ಬರು. ತುಂಬ ಸೌಮ್ಯ ಸ್ವಭಾವದವರು. ಅವರಿಗೂ ಗದಗಕ್ಕೂ ಹಳೆಯ ನಂಟಿದೆ. ಅವರು ರಾಜ್ಯ ಸಾರಿಗೆ ಸಂಸ್ಥೆಯ ಡಿಸಿ ಆಗಿ ಹಲವು ವರ್ಷ ಇಲ್ಲಿ ಕಾರ್ಯನಿರ್ವಹಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಸುಧಾ ಪತ್ರಿಕೆಯಲ್ಲಿ ಅಂಕಣವಾಗಿ ಬಂದ ಬರಹಗಳನ್ನು ಒಟ್ಟಾಗಿಸಿ ನೀವು ಪ್ರಕಟಿಸ್ತಿರಾ ಎಂದು ಕೇಳಿದರು. ಒಪ್ಪಿದೆ. ಆ ವರ್ಷ ನಡೆದ ಮೇ ಸಾಹಿತ್ಯ ಮೇಳದ ಮೇನ್ ಥೀಮು ಬಹುತ್ವ ಭಾರತ ಎಂಬುದಾಗಿತ್ತು. ಆ ಹೆಸರಿಟ್ಟುಕೊಂಡೇ ಪುಸ್ತಕ ಪ್ರಕಟಿಸಿದೇವು. ಪ್ರಕಟವಾದ ಪುಸ್ತಕ ಆರು ತಿಂಗಳಲ್ಲಿ ಮರುಮುದ್ರಣಗೊಂಡಿತು. ಜನ ಇಷ್ಟಪಟ್ಟರು. ಜನರ ಮಾನ್ಯತೆ ಪಡೆದ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ 2022 ನೇ ಸಾಲಿನ ಪುರಸ್ಕಾರ ನೀಡಿ ಗೌರವಿಸಿದೆ.
ಸದಾ ನಮ್ಮ ಯೋಚನೆ/ಸಂಘಟನೆ/ವಿಚಾರಗಳ ಜತೆಗಿರುವ ಮೂಡ್ನಾಕೂಡು ಅವರನ್ನು ಈ ಸಂದರ್ಭದಲ್ಲಿ ಸಮಾನ ಮನಸ್ಕ ಗೆಳೆಯರು ಅವರ ಜತೆ ದಿನ ಕಳೆಯಲು ಮತ್ತು ಅವರ ಬರಹಗಳ ಅವಲೋಕನಕ್ಕಾಗಿ, ಅವರನ್ನು ಗೌರವಿಸುವುದಕ್ಕಾಗಿ ಮಾರ್ಚ್ 26 ರಂದು ಗದಗದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸೇರಲಿದ್ದೇವೆ. ಅವರನ್ನು ಗೌರವಿಸುವುದೆಂದರೆ ನಮ್ಮನ್ನು ನಾವು ಗೌರವಿಸಿಕೊಂಡ ಹಾಗೆ.
ಅವರ ಅಭಿನಂದನಾ ಕಾರ್ಯಕ್ರಮ ನಿಮಿತ್ತ ಒಂದು ದಿನ ಜತೆಗಿರುವ ಸದವಕಾಶ…

ಇಲ್ಲಿ ಪ್ರತಿ ಗೋಷ್ಠಿಯ ಸ್ವಾಗತವೆಂದರೆ ಅವರ ಒಂದು ಕವಿತೆ ಓದೋದು.. ವಂದನಾರ್ಪಣೆ ಎಂದರೂ ಕವಿತೆ ಓದೋದು.. ಹೀಗೆ ಹತ್ತು ಜನ ಗೆಳೆಯ ಗೆಳತಿಯರು ನೂರ ಅಹ್ಮದ ನಾಗನೂರ, ಬಿ. ಎಂ ಮರಳಿಹಳ್ಳಿ, ಕಲಕೇಶ ಗುಡ್ಲಾನೂರ, ಜಯಶ್ರೀ ಅಂಗಡಿ, ರಶ್ಮಿ ಅಂಗಡಿ, ಮಂಜುಳಾ ವೆಂಕಟೇಶಯ್ಯ, ಎಂ. ಎಂ. ಹೆಬ್ಬಾಳ, ಬಸವರಾಜ ಸಂಶಿ, ಸೂರ್ಯಕಾಂತ ಚೌಹಾಣ್, ಕೇಶವ ಕಟ್ಟೀಮನಿ ಮೂಡ್ನಾಕೂಡು ಅವರ ಕವನ ವಾಚನ ಮಾಡಲಿದ್ದಾರೆ. ನೀವೂ ಅವರೊಡನೆ ಒಂದು ಆಪ್ತ ಸಂವಾದ ಮಾಡಬಹುದು. ನಿಮ್ಮ ಉಪಸ್ಥಿತಿ ಅದಕ್ಕೊಂದು ಗೌರವ.
ಆ ದಿನ ರಂಜಾನ ದರ್ಗಾ, ರಹಮತ್ ತರೀಕೆರೆ, ಶಿವಗಂಗಾ ರುಮ್ಮಾ, ಸೋಮಶೇಖರ ಅಪ್ಪಗೆರೆ, ಸುಭಾಷ ರಾಜಮಾನೆ, ಬೇಲೂರ ರಘುನಂದನ, ನಿಂಗಪ್ಪ ಮುದೇನೂರ, ಬಿ. ಶ್ರೀನಿವಾಸ, ವಿಜಯಕಾಂತ ಪಾಟೀಲ, ಅನಿಲ ಹೊಸಮನಿ, ಎಚ್.ಎಸ್. ಅನುಪಮಾ ಅವರನ್ನು ಮೊದಲುಗೊಂಡು ಹಲವಾರು ಸಾಹಿತ್ಯ ಲೋಕದ ಸಾಕ್ಷಿಪ್ರಜ್ಞೆಯ ಮನಸುಗಳು ನಮ್ಮ ಜತೆಗೆ ಹಾಜರಿರುವವು. ಕಾರ್ಯಕ್ರಮ ಆಮಂತ್ರಣ ಪತ್ರಿಕೆಯನ್ನು ಗಮನಿಸಿ.
ಕಾರ್ಯಕ್ರಮ ಮಾರ್ಚ್ 26 ರವಿವಾರ ಬೆಳಗ್ಗೆ 10.30 ಯಿಂದ ಗದಗದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸುರುವಾಗಲಿದೆ. ಬನ್ನಿ. ನಿಮಗಿದು ನಮ್ಮ ಪ್ರೀತಿಯ ಕರೆಯೋಲೆ.
– ಬಸೂ




