ಬೆಂಗಳೂರು: ಟಿಪ್ಪೂವಿನ ನಿಜ ಕನಸುಗಳು ನಾಟಕದ ಮೂಲಕ ಬೆಳಕಿಗೆ ಬಂದು ತೀವ್ರ ವಿವಾದ ಸೃಷ್ಟಿಸಿದ ಉರಿಗೌಡ, ನಂಜೇಗೌಡ ಪ್ರಕರಣಗಳಿಗೆ ಆದಿ ಚುಂಚನಗಿರಿ ಮಠಾಧೀಶ ನಿರ್ಮಲಾನಂದ ಶ್ರೀಗಳು ಮದ್ದಿಟ್ಟಿದ್ದಾರೆ.
ಸಮುದಾಯದ ಭಾವನೆಗಳಿಗೆ ಧಕ್ಕೆ ತಾರದೆ ತಕ್ಷಣವೇ ಉರಿಗೌಡ, ನಂಜೇಗೌಡ ಕಾಲ್ಪನಿಕ ಪಾತ್ರದ ಕುರಿತು ಯಾರೊಬ್ಬರು ಮಾತನಾಡಬಾರದು ಎಂದು ಸಲಹೆ ಮಾಡಿದ್ದಾರೆ.
ಈ ಕಾಲ್ಪನಿಕ ಪಾತ್ರಗಳು ರಾಜ್ಯ ರಾಜಕಾರಣದಲ್ಲಿ ವಿವಾದದ ತರಂಗಗಳನ್ನೆಬ್ಬಿಸಿದ ಬೆನ್ನಲ್ಲೇ ಸಿನಿಮಾ ನಿರ್ಮಾಪಕರೂ ಆದ ತೋಟಗಾರಿಕೆ ಸಚಿವ ಮುನಿರತ್ನ ಈ ಹೆಸರುಗಳ ಸಿನಿಮಾ ಮಾಡುವುದಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರು ನೊಂದಾಯಿಸಿದ್ದರು.
ಇದರೊಂದಿಗೆ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತು. ಇದರ ಬೆನ್ನಲ್ಲೇ ಮಧ್ಯ ಪ್ರವೇಶಿಸಿದ ನಿರ್ಮಲಾನಂದ ಶ್ರೀಗಳು ತೋಟಗಾರಿಕೆ ಸಚಿವ ಮುನಿರತ್ನ ಅವರನ್ನು ತಮ್ಮ ಮಠಕ್ಕೆ ಕರೆಯಿಸಿಕೊಂಡು ಈ ವಿಷಯವಾಗಿ ಸುದೀರ್ಘ ಮಾತುಕತೆ ನಡೆಸಿದರು. ಕಾಲ್ಪನಿಕ ಪಾತ್ರಗಳು ರಾಜ್ಯದಲ್ಲಿ ವಿವಾದ ಸೃಷ್ಟಿಸುವ ಮೂಲಕ ಸಮುದಾಯಗಳ ನಡುವೆ ಒಡಕು ಮೂಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿಯುವಂತೆ ಸಲಹೆ ಮಾಡಿದರು.
ಇದಾದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ಜೊತೆ ದೂರವಾಣಿಯಲ್ಲಿ ಮಾತನಾಡಿ ಈ ವಿವಾದಕ್ಕೆ ತಿಲಾಂಜಲಿ ಹಾಡುವಂತೆ ಸಲಹೆ ಮಾಡಿದರು.
ಇದಾದ ಬಳಿಕಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾನಂದ ಶ್ರೀಗಳು, ಯಾವುದೇ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಕೆಲಸಗಳನ್ನು ಯಾರೊಬ್ಬರೂ ಮಾಡಬಾರದು. ಪ್ರಸ್ತುತ ಎದ್ದಿರುವ ವಿವಾದ ಸುಖಾಂತ್ಯ ಕಾಣಬೇಕು ಎಂಬುದು ನಮ್ಮ ಆಶಯವಾಗಿದೆ. ಇಲ್ಲಿಗೆ ಈ ವಿಷಯವನ್ನು ಎಲ್ಲರೂ ಕೈಬಿಡಬೇಕೆಂದು ಸಲಹೆ ಮಾಡಿದರು.
ಸಚಿವರಾದ ಆರ್.ಅಶೋಕ್, ಡಾ.ಅಶ್ವಥನಾರಾಯಣ, ಗೋಪಾಲಯ್ಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಕೂಡ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆಂಬ ವಿಶ್ವಾಸವಿದೆ. ಅವರಿಗೆ ಇತಿಹಾಸದ ಬಗ್ಗೆ ತಿಳಿದಿದೆ ಎಂದು ಭಾವಿಸುತ್ತೇನೆ ಎಂದರು.
ಇನ್ನು ಮುಂದೆ ಅವರು ಕೂಡ ಸುಮ್ಮನಾಗುತ್ತಾರೆ ಎಂದು ಭಾವಿಸುತ್ತೇನೆ ಮತ್ತು ಇತಿಹಾಸದ ಬಗ್ಗೆ ಎಲ್ಲರಿಗೂ ತಿಳಿ ಹೇಳಲಾಗಿದೆ. ಕಲ್ಪನೆ ಮಾಡಿಕೊಂಡು ಬರೆದರೆ ಕಾದಂಬರಿ, ಶಾಸನ ಮತ್ತು ಇತಿಹಾಸದ ಹಿನ್ನಲೆಯಿಂದ ಬರೆದರೆ ಮುಂದಿನ ಪೀಳಿಗೆಗೆ ಶಕ್ತಿಯಾಗುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಉರಿಗೌಡ, ನಂಜೇಗೌಡರು ಕಾಲ್ಪನಿಕ ವ್ಯಕ್ತಿಗಳೋ ಅಥವಾ ಜೀವಂತವಾಗಿ ಇದ್ದರೋ ಎಂಬುದರ ಬಗ್ಗೆ ನಮಗೆ ಇದುವರೆಗೂ ಯಾವುದೂ ಕೂಡ ಕಂಡುಬಂದಿಲ್ಲ. ಯುವಕರು ಮತ್ತು ಸಮಕಾಲೀನ ಜಗತ್ತಿನಲ್ಲಿ ಗೊಂದಲ ಸೃಷ್ಟಿಸುವುದು ಬೇಡ. ಮಿಥ್ಯಗಳು ಯುವಕರ ಶಕ್ತಿಗಳನ್ನು ಹಾಳುಮಾಡಬಾರದು ಎಂದು ಕಿವಿಮಾತು ಹೇಳಿದರು.
ಉರಿಗೌಡ, ನಂಜೇಗೌಡ ಕುರಿತು ಶಾಸನಗಳು ಸಿಕ್ಕಲ್ಲಿ ಅದನ್ನು ಸುಕ್ಷೇತ್ರ ಆದಿಚುಂಚನಗಿರಿ ಸಂಸ್ಥಾನಕ್ಕೆ ತಂದೊಪ್ಪಿಸಿ. ಇತಿಹಾಸವನ್ನು ವಿಮರ್ಶೆ ಮಾಡುವಂತಹ ಐತಿಹಾಸಿಕ ಶ್ರೇಷ್ಠರು ನಮ್ಮಲ್ಲಿದ್ದಾರೆ. ಮಾಹಿತಿಯನ್ನು ಓರೆಗೆ ಹಚ್ಚಿ ನಂತರ ಅದರ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.




