H1N1, H3N2 ತಡೆಗೆ ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರನ್ನು ಆಗಾಗ ಕುಡಿಯಿರಿ

3 years ago

ಬೆಂಗಳೂರು: ರಾಜ್ಯದಲ್ಲಿ ಬಿರು‌ ಬಿಸಿಲಿನ ಜೊತೆಗೆ ಜನರನ್ನು ವೈರಾಣು ರೋಗಗಳು ಜನರನ್ನು ಹೈರಾಣಗೊಳಿಸತೊಡಗಿವೆ. ಜ್ವರ, ಬಳಲಿಕೆ, ಕೆಮ್ಮು, ನೆಗಡಿ, ಮೈ ಕೈ ನೋವಿನಿಂದ ಜನರು ಬಳಲುತ್ತಿದ್ದಾರೆ.

ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಕಾಣಿಸುವ ವೈರಾಣು ಸಂಬಂಧಿತ ಖಾಯಿಲೆಗಳ ಜೊತೆಗೆ
ಜಾಗತಿಕ ಆತಂಕ ಸೃಷ್ಟಿಸಿರುವ ಹೆಚ್1ಎನ್1 ಮತ್ತು ಹೆಚ್3ಎನ್2 ಸೋಂಕುಗಳು ಕಾಣಿಸಿಕೊಂಡ ಪರಿಣಾಮ ಜನರು ‌ನರಳುವಂತಾಗಿದೆ.

ಹಂದಿಜ್ವರ ಎಂದು ಹೇಳಲಾಗುವ ಹೆಚ್1ಎನ್1 ಸೋಂಕಿನ 10೦ ಕ್ಕೂ‌ ಹೆಚ್ಚು ಪ್ರಕರಣಗಳು, ಹಾಂಗ್‍ಕಾಂಗ್ ಸೋಂಕು ಎಂದು ಗುರುತಿಸುತ್ತಿರುವ ಹೆಚ್3ಎನ್2 ಸೋಂಕಿನ 16 ಪ್ರಕರಣಗಳು ಕಳೆದ ಜನವರಿಯಿಂದ ಮಾರ್ಚ್‍ವರೆಗೂ ರಾಜ್ಯದಲ್ಲಿ ವರದಿಯಾಗಿವೆ.

ಹಾಂಗ್‍ಕಾಂಗ್ ಸೋಂಕಿಗೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ 87 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ತಡವಾಗಿ ಪತ್ತೆಯಾಗಿದೆ. ಈ ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡಾಗಲೂ ರಾಷ್ಟ್ರದಲ್ಲೇ ಮೊದಲ ಬಾರಿಗೆ ಕಲಬುರಿಗಿಯ ವ್ಯಕ್ತಿ ಮೃತಪಟ್ಟಿದ್ದರು. ಈಗ ಹಾಂಗ್‍ಕಾಂಗ್ ಸೋಂಕಿಗೆ ರಾಜ್ಯದಲ್ಲೇ ಮೊದಲ ಸಾವು ಸಂಭವಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಇಲಾಖೆಯ ಆಯುಕ್ತ ಡಿ.ರಂದೀಪ್, ಹಾಸನದ ಹಿರಿಯ ವ್ಯಕ್ತಿಗೆ ಜ್ವರ, ಕೆಮ್ಮು ಹಾಗೂ ಇತರ ರೋಗ ಲಕ್ಷಣಗಳಿಂದ ಫೆಬ್ರವರಿ 24ರಂದು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ದಾಖಲಾಗುವ ಮುನ್ನ 5 ದಿನಗಳಿಂದ ಅವರನ್ನು ಕೆಮ್ಮು ಹಾಗು ಇತರೆ ಸಮಸ್ಯೆಗಳು ಬಾಸುತ್ತಿದ್ದವು. ವಯೋಸಹಜವಾದ ಹೈಪರ್ ಟೆನ್‍ಶಷನ್, ಮೂತ್ರಪಿಂಡ ಸಮಸ್ಯೆ ಹಾಗೂ ಮೊದಲಿನಿಂದಲೂ ಇದ್ದ ಅಸ್ತಮಾ ಕೂಡ ಕಾಡುತ್ತಿತ್ತು. ಅನೇಕ ಕೋ ಮಾರ್ಬಿಡ್ ಸಮಸ್ಯೆಗಳಿಂದ ಬಳಲುತ್ತಿದ್ದ ವ್ಯಕ್ತಿ ಮಾರ್ಚ್ 1ರಂದು ಮೃತಪಟ್ಟಿದ್ದರು. ಹೆಚ್3ಎನ್2 ಸೋಂಕಿನ ಲಕ್ಷಣಗಳಿದ್ದ ಕಾರಣಕ್ಕೆ ಮಾರ್ಚ್ 3ರಂದು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮಾರನೆಯ ದಿನ ಲಭ್ಯವಾದ ಪರೀಕ್ಷಾ ಫಲಿತಾಂಶದಲ್ಲಿ ಹೆಚ್3ಎನ್2 ಸೋಂಕು ಖಚಿತವಾಗಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜನರು ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಬಿರು ಬಿಸಿಲಿನ ಹಿನ್ನೆಲೆಯಲ್ಲಿ ಮಕ್ಕಳು ಬೆಳಗ್ಗೆ 11 ರಿಂದ ಮದ್ಯಾಹ್ನ 3 ರ ವರೆಗೆ ಬಿಸಿಲಿನಲ್ಲಿ ಆಟವಾಡದೇ ಇರಲು ಸೂಚನೆ ನೀಡಲಾಗಿದೆ. ಅಗತ್ಯ ಸಂದರ್ಭದಲ್ಲಿ ಹೊರಗೆ ಹೋಗಲೇಬೇಕಾದ ವೇಳೆ ಪಾದರಕ್ಷೆ, ಕೊಡೆ, ಟೊಪ್ಪಿ ಬಳಕೆ ಮಾಡುವಂತೆ ಸೂಚಿಸಲಾಗಿದೆ.

ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರನ್ನು ಆಗಾಗ ಕುಡಿಯುವುದು ಮುಖ್ಯ ಎಂದು ತಿಳಿಸಿದ್ದಾರೆ. ನಿಯಮಿತವಾಗಿ ಕೈ ತೊಳೆದು ಆಹಾರ ಸೇವಿಸುವುದು ಮುಖ್ಯ ಎಂದು ಹೇಳಲಾಗಿದೆ. ಅಡುಗೆ ತಯಾರಿ ಸಂದರ್ಭದಲ್ಲಿ ಕಿಟಕಿ ಬಾಗಿಲುಗಳನ್ನು ತೆರೆದಿಡುವಂತೆ, ಆಹಾರದಲ್ಲಿ ಸೊಪ್ಪು ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಬಳಕೆ ಮಾಡಲು ಸೂಚಿಸಲಾಗಿದೆ.

Leave a Reply