5 ಹಾಗೂ 8 ನೇ ತರಗತಿ ಬೋರ್ಡ್ ಪರೀಕ್ಷೆಗೆ ನ್ಯಾಯಾಲಯದ ಅನುಮತಿ : ಸರ್ಕಾರದ ಒಣ ಪ್ರತಿಷ್ಠೆಗೆ ಗೆಲವು , ಮಕ್ಕಳ ನೈಜ ಹಿತಾಸಕ್ತಿಗೆ ಸೋಲು

3 years ago

5 ಹಾಗೂ 8ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡುವ ಮೂಲಕ ಶಿಕ್ಷಣ ಹಕ್ಕು ಕಾಯಿದೆಯ ಪ್ರಕರಣ 29ನ್ನು ಅದರಲ್ಲೂ ವಿಶೇಷವಾಗಿ29 (e ) , (g ) ಮತ್ತು (h ) ನ ಮೂಲ ಆಶಯವನ್ನೇ ತಿಳಿಗೊಳಿಸಿದಂತಾಗಿದೆ .

5 ಹಾಗೂ 8ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಹಕ್ಕು ಕಾಯ್ದೆಯಡಿ ನಿರ್ಬಂಧವಿಲ್ಲ ಎಂಬ ನ್ಯಾಯಾಲಯದ ವ್ಯಾಖ್ಯಾನ ತಪ್ಪಿನಿಂದ ಕೂಡಿದೆ. ಪ್ರಕರಣ16 (1) ರಲ್ಲಿ ರೆಗ್ಯುಲರ್ ಪರೀಕ್ಷೆ ನಡೆಸಬಹುದು ಎಂದು ಹೇಳಿದೆಯೇ ಹೊರತು, ವಾರ್ಷಿಕ ಪಬ್ಲಿಕ್ ಪರೀಕ್ಷೆ ನಡೆಸಿ ಎಂದು ಹೇಳಿಲ್ಲ .

ರೆಗ್ಯುಲರ್ ಪರೀಕ್ಷೆ ಎಂದರೆ ವ್ಯಾಪಕ ಹಾಗು ನಿರಂತರ ಮೌಲ್ಯಮಾಪನದ ಭಾಗವಾಗಿ ಈಗಾಗಲೇ ನಡೆದಿರುವ ನಾಲ್ಕು ರೆಗ್ಯುಲರ್ ರೂಪಣಾತ್ಮಕ ಮತ್ತು ಒಂದು ಸಂಕಲನಾತ್ಮಕ ಪರೀಕ್ಷೆ. ಇನ್ನೆಷ್ಟು ಪರೀಕ್ಷೆಗಳು ನಡೆಯಬೇಕು . ಈಗ ನಡೆದಿರುವ 5 ಪರೀಕ್ಷೆಗಳು, 5 ಹಾಗೂ 8ನೇ ತರಗತಿ ಮಕ್ಕಳ ಮೌಲ್ಯಾ೦ಕನ ಮಾಡಲು ಹತ್ತಾರು ಬಗೆಯ ಮಾಹಿತಿ ಒದಗಿಸುತ್ತವೆ . ಇದಕ್ಕಿಂತ ಬೇರೇನು ಬೇಕು!

ಪರೀಕ್ಷೆಗೆಂದು ಸರ್ಕಾರ ವ್ಯಯ ಮಾಡುತ್ತಿರುವ ಆರ್ಥಿಕ ಹಾಗು ಮಾನವ ಸಂಪನ್ಮೂಲ ಜೊತೆಗೆ ದೊಡ್ಡ ಮಟ್ಟದ ಸಮಯವನ್ನು ಮಕ್ಕಳ ಕಲಿಕೆಗೆ ವಿನಯೋಗಿಸಿದ್ದರೆ, ಮಕ್ಕಳ ಕಲಿಕೆ ಹತ್ತಾರು ಪಟ್ಟು ಉತ್ತಮವಾಗುತಿತ್ತು. ಒಟ್ಟಾರೆ ಈ ಅನಗತ್ಯ ಹೋರಾಟದಲ್ಲಿ ಸರಕಾರದ ಒಣ ಪ್ರತಿಷ್ಠೆ ಗೆದ್ದು ಮಕ್ಕಳ ಹಿತಾಸಕ್ತಿಗೆ ಸೋಲುಂಟಾಗಿದೆ . ಮಕ್ಕಳು ತಾವು ಮಾಡದ ತಪ್ಪಿಗೆ, ಕಲಿಸಲು ಸಂಪೂರ್ಣ ವಿಫಲವಾಗಿರುವ ವ್ಯವಸ್ಥೆಯು ಬಲವಂತವಾಗಿ ಹೇರುತ್ತಿರುವ ಪರೀಕ್ಷೆಗೆ ಬಲಿಪಶುಗಳಾಗಿದ್ದಾರೆ . ಇದು ನಮ್ಮ ಶೈಕ್ಷಣಿಕ ವ್ಯವಸ್ಥೆಯ ದುರಂತ.

-ನಿರಂಜನಾರಾಧ್ಯ ವಿ. ಪಿ., ಅಭಿವೃದ್ಧಿ ಶಿಕ್ಷಣ ತಜ್ಞ

Leave a Reply