ಕಿರಣ್ ಭಟ್ ಹೊನ್ನಾವರ ಮೂಲದವರಾಗಿದ್ದು ಕಳೆದ ಮೂರು ದಶಕಗಳಿಂದ ಹೊನ್ನಾವರ ಮತ್ತು ಶಿರಸಿಯ ರಂಗಭೂಮಿಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಬಿ.ಎಸ್.ಎನ್.ಎಲ್. ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ರಂಗಭೂಮಿಯ ಮೇಲಿನ ಅದಮ್ಯ ಕಾಳಜಿಯಿಂದಾಗಿ ಸ್ವಯಂ ನಿವೃತ್ತಿ ಪಡೆದು ಮಕ್ಕಳ ರಂಗಭೂಮಿಯಲ್ಲಿ ನಿದರ್ಶಕರಾಗಿ ತಲ್ಲಿನರಾಗಿದ್ದಾರೆ.
ನಾನು ಬಲ್ಲಂತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ, ಗೋಕರ್ಣ ಮತ್ತು ಹೊನ್ನಾವರದ ನಡುವಿನ ಅಲ್ಲಿನ ಭೂಮಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಭರ್ಜರಿ ಫಸಲು ನೀಡುವ ಚೈತನ್ಯವಿದೆ. ಗೌರೀಶ್ ಕಾಯ್ಕಿಣಿ, ದಿನಕರ ದೇಸಾಯಿ, ವಿಷ್ಣು ನಾಯ್ಕ, ಜಿ.ಹೆಚ್.ನಾಯಕ್, ಆರ್.ವಿ.ಭಂಡಾರಿ, ಯಶವಂತ ಚಿತ್ತಾಲರು, ಗಂಗಾಧರ ಚಿತ್ತಾಲರು, ಜಯಂತ್ ಕಾಯ್ಕಿಣಿ, ವಿವೇಕ್ ಶಾನಭೋಗ್, ಕೆರೆಮನೆ ಶಂಭು ಹೆಗ್ಡೆ, ಶಿವಾನಂದ ಹೆಗ್ಡೆ, ಶಿವರಾಮ ಹೆಗ್ಡೆ ಹೀಗೆ ಅನೇಕರನ್ನು ಹೆಸರಿಸಬಹುದು. ಇಂತಹ ಭವ ಪರಂಪರೆಯ ಇತಿಹಾಸವಿರುವ ನೆಲದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಪ್ರೊ.ಶ್ರೀಪಾದ ಭಟ್, ವಿಠಲ ಭಂಡಾರಿ ಮತ್ತು ಕಿರಣ್ ಭಟ್ ಕನ್ನಡದ ಸಾಂಸ್ಕೃತಿಕ ಲೋಕವನ್ನು ಜೀವಂತವಾಗಿಟ್ಟವರಲ್ಲಿ ಪ್ರಮುಖರು.
ದುರಂತದ ಸಂಗತಿ ಎಂದರೆ, ಹೊನ್ನಾವರ ಪರಿಸರದ ಎಲ್ಲಾ ಚಟುವಟಿಗೆ ಪಾದರಸದಂತೆ ಇದ್ದ ಆತ್ಮೀಯ ಮಿತ್ರ ಡಾ.ವಿಠಲ ಭಂಡಾರಿ ಒಂದೂವರೆ ವರ್ಷದ ಹಿಂದೆ ಕೋವಿಡ್ ಗೆ ತುತ್ತಾದದ್ದು ನಮ್ಮೆಲ್ಲರ ವೈಯಕ್ತಿಕ ದುರಂತವೂ ಹೌದು.ಇಂತಹ ಸೃಜ ನಶೀಲತೆಯ ಗುಂಪಿನ ನಡುವೆ ಬೆಳೆದು ಬಂದಿರುವ ಕಿರಣ್ ಭಟ್ ಅವರು ತಾವು ಕೇರಳದಲ್ಲಿ ಬಿ.ಎಸ್.ಎನ್.ಎಲ್. ಸಂಸ್ಥೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ, ಓರ್ವ ರಂಗಪ್ರೇಮಿಯಾಗಿ ಅಲ್ಲಿನ ರಂಗಚಟುವಟಿಕೆಗಳ ಕುರಿತಾಗಿ ಪ್ರವಾಸ ಕಥನದ ರೂಪದಲ್ಲಿ ಕಟ್ಟಿಕೊಟ್ಟಿರುವ ರಂಗ ಕೈರಳಿ ಇತ್ತೀಚೆಗಿನ ವರ್ಷಗಳಲ್ಲಿ ನಾನು ಓದಿದ ಅತ್ಯುತ್ತಮ ಕೃತಿಗಳಲ್ಲಿ ಒಂದು.
ಕಿರಣ್ ಭಟ್ ಅವರು ಎಲ್ಲಿಯೂ ನಾನೊಬ್ಬ ಲೇಖಕ ಎಂಬ ಭ್ರಮೆಯನ್ನು ತೊರೆದು, ತಾನು ಪ್ರೀತಿಸುವ ಆಪ್ತ ಮಿತ್ರನೊಂದಿಗೆ ಮಾತನಾಢುವ ಶೈಲಿಯಲ್ಲಿ ಅತ್ಯಂತ ಲವಲವಿಕೆಯ ಭಾಷೆ ಜೊತೆಗೆ ಶಬ್ದಾಲಂಕಾರವಿಲ್ಲದೆ ಕಟ್ಟಿಕೊಟ್ಟಿದ್ದಾರೆ. ಈ ಕೃತಿಯ ಪ್ರತಿಯೊಂದು ಲೇಖನಗಳು ಹಾಗೂ ನಾಟಕ ಮತ್ತು ಇತರೆ ಕಲೆಯ ವಿವರಗಳು ಓದುಗರ ಎದೆಯನ್ನು ತಟ್ಟುತ್ತವೆ.
1978 ರಿಂದ 1981 ರ ವರ್ಷಗಳಲ್ಲಿ ನಾವು ಒಂದಿಷ್ಟು ಮಂದಿ ಬೆಂಗಳೂರಿನಲ್ಲಿ ಪದವಿ ಓದುತ್ತಿರುವಾಗ ಪ್ರತಿ ದಿನ ಸಂಜೆ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಕುಳಿತು ಭಟ್ಟರ ಕ್ಯಾಂಟಿನ್ ನಿಂದ ಭೈಟು ಕಾಫಿ ಕುಡಿಯುತ್ತಾ ಕಾಲ ಕಳೆಯುತ್ತಿದ್ದೆವು. ಏಕೆಂದರೆ, ಈ ವರ್ಷಗಳ ಅವಧಿಯಲ್ಲಿ ಎಂ.ಎಸ್.ಸತ್ಯು, ಸಮುದಾಯದ ಮೂಲಕ, ಕುರಿಯಿಂದ ಹಿಡಿದು ಸಿ.ಆರ್.ಸಿಂಹ ನಟರಂಗದ ಮೂಲಕ ತೊಘಲಕ್, ಸಂಕ್ರಾಂತಿ, ತಲೆದಂಡ,ನಾಟಕಗಳು ಪ್ರದರ್ಶನಗೊಂಡವು. ಜೊತೆಗೆ ಲೋಕೇಶ್, ಲೋಕನಾಥ್, ವಿಜಯಕಾಶಿ, ಸುಂದರಾಜ್, ಟಿ.ಎಸ್.ರಂಗಾ ಇವರೆಲ್ಲರೂ ಕಾರ್ನಾಡ್ ಮತ್ತು ಕಾರಾಂತರ ಮೂಲಕ ಕನ್ನಡ ರಂಗಭೂಮಿಗೆ ಹೊಸ ಲೋಕವನ್ನು ಪರಿಚಯಿಸಿದ್ದರು.
ಬ್ರೆಕ್ಟ್ ನ ಕಾಕಶಿಯನ್ ಚಾಕ್ ಸರ್ಕಲ್, ಗೆಲಿಲಿಯೋ, ಸಾಕ್ರೇಟಿಸ್, ಈಡಿಪಸ್, ಮ್ಯಾಕ್ ಬತ್, ಹ್ಯಾಮ್ಲೆಟ್ ಹೀಗೆ ಅನೇಕ ಪಾಶ್ಚಿಮಾತ್ಯ ನಾಟಕಗಳ ಜೊತೆಗೆ ಕಂಬಾರರ ಮೂಲಕ ಸಂಗ್ಯಾ ಬಾಳ್ಯ, ಋಷ್ಯ ಶೃಂಗದಂತಹ ಉತ್ತರ ಕರ್ನಾಟಕದ ನಾಟಕಗಳು ನಮಗೆ ಪರಿಚಯವಾಗಿದ್ದವು. ಈ ಕಾರಣದಿಂದಾಗಿ ನನಗೆ ದಕ್ಷಿಣ ಭಾರತದ ರಂಗಭೂಮಿಯ ಪ್ರಯೋಗದಲ್ಲಿ ಕರ್ನಾಟಕ ಮೊದಲನೆಯದು ಎಂಬ ನಂಬಿಕೆಯಿತ್ತು.
ಆದರೆ, ಕಿರಣ್ ಭಟ್ ಅವರು ರಂಗ ಕೈರಳಿ ಕೃತಿಯಲ್ಲಿ ಬರೆದಿರುವ ಇಪ್ಪತ್ತೈದು ಲೇಖನಗಳನ್ನು ಓದುತ್ತಿದ್ದರೆ, ಅಲ್ಲಿನ ಸಾಹಿತ್ಯ, ರಂಗಭೂಮಿ ಮತ್ತು ವೈಚಾರಿಕತೆ ಹಾಗೂ ಅಲ್ಲಿನ ದೇಶಿ ಕಲೆಗಳನ್ನು ಉಳಿಸಿಕೊಂಡು ಬಂದಿರುವ ಇತಿಹಾಸವನ್ನು ಗಮನಿಸಿದಾಗ ನನಗೆ ಅಚ್ಚರಿ ಮೂಡಿಸಿತು. ಅಲ್ಲಿನ ಮಂದಿ ಶಿಕ್ಷಣಕ್ಕೆ ನಮಗಿಂತ ಹೆಚ್ಚು ತೆರೆದುಕೊಂಡಿರುವ ಕಾರಣ ಮತ್ತು ಎಡಪಂಥೀಯ ಚಿಂತನೆಗಳ ನೆಲವಾದ ಕೇರಳದಲ್ಲಿ ಸದಾ ಹೊಸತನಕ್ಕಾಗಿ ಹುಡುಕಾಟ ನಡೆದಿರುವುದುನ್ನು ಕಿರಣ್ ಭಟ್ ಅವರು ಅಲ್ಲಿನ ರಂಗ ಪ್ರಯೋಗಳ ಕುರಿತಾಗಿ ಸೊಗಸಾಗಿ ನಮಗೆ ಪರಿಚಯಿಸಿದ್ದಾರೆ. ನಮಗೆ ಈ ಕೃತಿ ಅನುಭವವನ್ನು ನೀಡುತ್ತದೆ.
ಕನ್ನಡಕ್ಕೆ ಅನ್ಯ ಭಾಷೆಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಇಂತಹ ಒಂದು ಕೃತಿಯ ಅಗತ್ಯವಿತ್ತು. ಕಿರಣ್ ಭಟ್ ಅವರು ಇದರಲ್ಲಿ ಯಶಸ್ವಿಯಾಗುವುದರ ಜೊತೆಗೆ ಇತರರಿಗೆ ಮಾದರಿಯಾಗಿದ್ದಾರೆ. ಪ್ರತಿಯೊಬ್ಬ ರಂಗಾಸಕ್ತರು ಓದಬೇಕಾದ ಕೃತಿ ಇದಾಗಿದೆ.
-ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




