ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅಲ್ಲಿನ ಅವ್ಯವಸ್ಥೆಯನ್ನು ಪ್ರಶ್ನೆ ಮಾಡಿದ್ದನ್ನೇ ಮುಂದಿಟ್ಟುಕೊಂಡು ನಿರ್ಮಲಾ ಎಲಿಗಾರ್ ಅವರ ಸದಸ್ಯತ್ವವನ್ನು ರದ್ದುಪಡಿಸಿದ್ದಲ್ಲದೆ ಅವರಿಗೆ ಈ ಹಿಂದೆ ನೀಡಲಾಗಿದ್ದ ಪ್ರಶಸ್ತಿಯನ್ನು ಹಿಂಪಡೆದಿರುವುದು ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎನ್ ಮಹೇಶ್ ಜೋಶಿಯವರ ವೈಯಕ್ತಿಕ ದ್ವೇಷ ಸಾಧನೆಯ ಪರಮಾವಧಿಯಾಗಿದೆ.
ಮಹೇಶ್ ಜೋಶಿ ಅವರು, ಆದಿಕವಿ ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಾಯಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆದು ಕನ್ನಡದ ಆದಿಕವಿಗೆ ಅವಮಾನ ಮಾಡಿದವರು. ಜೋಷಿಯವರು ಕಸಾಪ ಅಧ್ಯಕ್ಷ ಸ್ಥಾನ ಅಲಂಕರಿಸಿದಾಗಿನಿಂದ ಸದಾ ಒಂದಿಲ್ಲೊಂದು ಕನ್ನಡ ಮತ್ತು ಜನ ವಿರೋಧಿ ಕೆಲಸ ಮಾಡುತ್ತಾ ಬರುತ್ತಿದ್ದಾರೆ.
ಯಾವುದೇ ಪ್ರಾತಿನಿಧಿಕ ಸಂಘ ಸಂಸ್ಥೆಗಳಿಗೆ ಒಂದು ಬೈಲಾ ಇರುತ್ತದೆ. ಬೈಲಾದ ನಿಯಮಗಳ ಪ್ರಕಾರ ನಡೆದುಕೊಳ್ಳುವುದು ಕರ್ತವ್ಯ. ಅದೇ ಪ್ರಕಾರ ಕ್ರಮ ಜರುಗಿಸಬೇಕು. ನಿರ್ಮಲಾ ಎಲಿಗಾರ್ ಅವರು ಸಮ್ಮೇಳನದ ಅವ್ಯವಸ್ಥೆ ವಿರುದ್ಧ ಪ್ರಶ್ನಿಸುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನಿರ್ಮಲಾ ಅವರು ಚಂದನ ದೂರದರ್ಶನದ ಕಿರಿಯ ಅಧಿಕಾರಿಯಾಗಿದ್ದಾಗ, ಜೋಶಿಯವರು ಅನೇಕ ಪ್ರತಿಭಾವಂತ ತಳವರ್ಗದ ಪ್ರತಿಭೆಗಳನ್ನು ದೂರದರ್ಶನ ಹಾಗೂ ಆಕಾಶವಾಣಿಗೆ ನೇಮಿಸಲಾರದಂತೆ ವ್ಯವಸ್ಥಿತ ಸಂಚು ರೂಪಿಸಿದ್ದರು.
ನಿರ್ಮಲಾ ಎಲಿಗಾರ್ ಚಂದನ ದೂರದರ್ಶನದ ಹಿರಿಯ ಅಧಿಕಾರಿಯಾದ ಬಳಿಕ ಜನಮುಖಿ ಯೋಜನೆಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹೇಶ್ ಜೋಷಿ ದೂರದರ್ಶನದ ಅಧಿಕಾರಿಯಾಗಿದ್ದಾಗ ತೋರಿಸಿದ ಅಟ್ಟಹಾಸ ಎಲ್ಲೆ ಮೀರಿತ್ತು. ಇವರಿಂದ ಶೋಷಣೆಗೆ ಒಳಗಾದ ನೂರಾರು ಜನ ಇದ್ದಾರೆ. ವಿಶ್ವ ಮಹಿಳಾ ದಿನದ ಸಂದರ್ಭದಲ್ಲಿ ಒಬ್ಬ ಮಹಿಳೆ ಮೇಲೆ ಹೀಗೆ ದೌರ್ಜನ್ಯ ನಡೆದಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇದನ್ನು ಖಂಡಿಸುತ್ತೇವೆ.
– ಆರ್.ಜಿ.ಹಳ್ಳಿ ನಾಗರಾಜ್, ಡಾ.ಎ.ಆರ್.ಗೋವಿಂದ ಸ್ವಾಮಿ ನಾಯಕ್, ಡಾ.ವಡ್ಡಗೆರೆ ನಾಗರಾಜಯ್ಯ, ಬಿ.ಟಿ.ಲಲಿತ ನಾಯಕ್, ಹರಿಹರ ಪ್ರಿಯ, ರಂಗೋತ್ರಿ ಕುಮಾರ್, ವರಲಕ್ಷ್ಮಿ ಎನ್, ಡಾ ಪ್ರಿಯದರ್ಶಿನಿ, ವೈಕುಂಠಯ್ಯ ನಯನ ಡೀ ಸೊರಬ, ಶ್ರೀನಾಥ್ , ಜಾಣ ಜಾನೆ ಜಗದೀಶ್, ವೈಕುಂಠಯ್ಯ




