19.20.21 ಮಂಸೋರೆ ಹೇಳಿದ್ದು, ಹೇಳದೇ ಉಳಿಸಿದ್ದು…

3 years ago

ಇದು ಸಿನಿಮಾ ರಿವ್ಯೂ ಅಲ್ಲ, ಒಂದು ಪ್ರತಿಕ್ರಿಯೆ.

ಗುರುವಾರ ಸ್ವಾಗತ್ ಶಂಕರ್ ನಾಗ್ ಥಿಯೇಟರಿನಲ್ಲಿ 19.20.21 ನೋಡುವಾಗಲೇ ಸಣ್ಣದಾಗಿ ಚಳಿಜ್ವರ ಶುರುವಾಗಿತ್ತು. ಮಾತಾಡಿಸಬೇಕಾದ ನೂರಾರು ಜನರು ಇದ್ದರೂ ಎದ್ದು ಸೀದಾ ಹೊರಗೆ ಬಂದುಬಿಟ್ಟೆ. ಸಿನಿಮಾ ಬಗ್ಗೆ ಬರೀಬೇಕು ಅಂದುಕೊಂಡರೂ ಎಡೆಬಿಡದ ಜ್ವರದಿಂದ ಬರೆಯಲಾಗದೆ, ಸುಮ್ಮನಾಗಿದ್ದೆ. ಜ್ವರ ಈಗ ಇಳಿದಿದೆ. ಆದರೆ ಮಂಸೋರೆ Manso Re ಹಬ್ಬಿಸಿರುವ 19.20.21 ರ ಜ್ವರ ಇಳಿಯವ ಹಾಗೆ ಕಾಣುತ್ತಿಲ್ಲ. ಸಿನಿಮಾ ನೋಡಿ ಬಂದಮೇಲೆ ಗೆಳೆಯರಾದ ಮುನೀರ್ ಕಾಟಿಪಳ್ಳ, Abdul Muneer ನವೀನ್ ಸೂರಿಂಜೆ Naveen Soorinje ಅವರುಗಳಿಗೆ ಫೋನ್ ಮಾಡಿ ಅಭಿನಂದಿಸಿದೆ, ಪರಿಚಯ ಇದ್ದಿದ್ದರೆ ದಿನೇಶ್ ಹೆಗ್ಡೆಯವರಿಗೂ ಫೋನ್ ಮಾಡುತ್ತಿದ್ದೆನೇನೋ. ಒಂದು ನಾಗರಿಕ ಸಮುದಾಯದ ಭಾಗವಾಗಿ ಈ ಮೂವರಿಗೆ ತಲೆಬಾಗಿ ಮಣಿಯುವುದು ನಮ್ಮ ಕರ್ತವ್ಯ. ವಿಠಲ ಮಲೆಕುಡಿಯನ ಹೋರಾಟವನ್ನು ಇವರು ನಿರ್ವಹಿಸಿದೇ ಹೋಗಿದ್ದರೆ ಆತ ದೇಶದ್ರೋಹಿ ಎನಿಸಿಕೊಂಡೇ ಜೈಲಿನಲ್ಲಿ ಕೊಳೆಯಬೇಕಿತ್ತು. ವಿಠಲ ಮಲೆಕುಡಿಯ ಇವರ ಜಾತಿಯವನಲ್ಲ, ಊರಿನವನಲ್ಲ ಮತ್ತೊಂದು ಮಗದೊಂದು ಏನೂ ಆಗಿರಲಿಲ್ಲ, ಸಹಮನುಷ್ಯನೆಂಬ ಮಮತೆಯ ಹೊರತಾಗಿ. ನಮ್ಮ ಜತೆಗಾರರು, ಒಡನಾಡಿಗಳು ಇಂಥದ್ದೊಂದು ಮಾನವೀಯ ಕಾರ್ಯಾಚರಣೆಯನ್ನು ಅತಿದೊಡ್ಡ ರಿಸ್ಕ್ ಗಳ ಜೊತೆ ನಡೆಸಿಯೇ ಬಿಟ್ಟರಲ್ಲ, ಇದು ನಿಜವಾದ ಗೆಲುವು. ಈ ಕಾರಣಕ್ಕಾಗಿಯೇ ನವೀನ್, ಮುನೀರ್ ಅವರಿಗೊಂದು ಥ್ಯಾಂಕ್ಸ್ ಹೇಳಲೇಬೇಕಿತ್ತು, ಹೇಳಿದೆ. ಈ ಕಾಲದಲ್ಲೇ ಬದುಕುತ್ತಿರುವ ನನ್ನಂಥವರು ಅನುಭವಿಸುವ ಸೋಷಿಯಲ್ ಗಿಲ್ಟ್ ನಿಂದ ಪಾರಾಗುವುದಕ್ಕೆ ಇನ್ನೇನು ಮಾಡಲು ಸಾಧ್ಯ?

19.20.21 ಒಂದು ಸಿನಿಮಾಗಿಂತ ಹೆಚ್ಚಾಗಿ ಡಾಕ್ಯುಡ್ರಾಮಾ ಥರವೇ ನನಗೆ ಕಾಣಿಸಿತು. ಮಂಸೋರೆ ಇದನ್ನು ಪ್ರಜ್ಞಾಪೂರ್ವಕವಾಗಿ ಮಾಡಿದ್ದಾರೆ. ಇದ್ದಿದ್ದನ್ನು ಇದ್ದ ಹಾಗೆ ಹೇಳುತ್ತ ಹೋಗಿದ್ದಾರೆ. ಸಾಧಾರಣವಾಗಿ ಇಂಥ ಸಿನಿಮಾಗಳನ್ನು ನಿರ್ದೇಶಿಸುವಾಗ ನಿರ್ದೇಶಕ ಕ್ರಿಯೇಟಿವ್ ಲಿಬರ್ಟಿಯ ಮೊರೆ ಹೋಗುವುದು ಸಹಜ. ಮಂಸೋರೆ ತಾವು ಎತ್ತಿಕೊಂಡ ಕಥೆಗೆ ಕಿಂಚಿತ್ತೂ ಊನ ಬರಬಾರದೆಂದೋ ಅಥವಾ ಕಥೆಯಲ್ಲಿಯೇ ಬೇಕಾದಷ್ಟು ಸಿನಿಮ್ಯಾಟಿಕ್ ಅಂಶಗಳಿವೆ ಎಂದು ನಂಬಿರುವುದರಿಂದಲೋ ಹೊಸದಾಗಿ ಏನನ್ನೂ ಸೇರಿಸಲು ಹೋದಂತಿಲ್ಲ.

ಕೆ.ಪಿ.ಸುರೇಶ್ Suresha Kanjarpane ಅವರು ಬರೆದಂತೆ ಸಂವಿಧಾನದ ಅರಿವನ್ನು ಹೇಳುವುದು ಜೀವನ್ಮರಣದ ವಿಷಯವೇನೋ ಎಂಬಂತೆ ಮಂಸೋರೆ ಇಡೀ ಸಿನಿಮಾದುದ್ದಕ್ಕೂ ಮಾತಾಡಿದ್ದಾರೆ, ವಿಶೇಷವಾಗಿ ವಕೀಲರ ಪಾತ್ರದ ಮೂಲಕ. ಮಂಸೋರೆ ಹೆಚ್ಚು ಸ್ಕೋರ್ ಮಾಡುವುದೂ ಕೋರ್ಟ್ ಸೀನ್ ಗಳಲ್ಲೇ. ಸಿನಿಮಾದ ಮೂಲಕ ತಾವು ಏನನ್ನು ಹೇಳಲು ಹೊರಟಿದ್ದೇವೆ ಎಂಬುದನ್ನು ಅವರು ಕೋರ್ಟ್ ನಲ್ಲೇ ತಣ್ಣಗೆ ಹೇಳಿಮುಗಿಸುತ್ತಾರೆ.

ನಮ್ಮ ಎಲ್ಲ ಸಮಸ್ಯೆಗಳಿಗೂ ಸಂವಿಧಾನದಲ್ಲಿ ಉತ್ತರವಿದೆ ಎಂದೇ ನಾವು ಭಾವಿಸುತ್ತೇವೆ. ಆದರೆ ಅದು ಅರ್ಧಸತ್ಯ. ಯುಎಪಿಎ (Unlawful activities prevention act), ಸೆಡಿಷನ್ (ರಾಜದ್ರೋಹ- IPC 124 A) ನಂಥ ಕಾಯ್ದೆಗಳೂ ಸಂವಿಧಾನದ ಅಡಿಯಲ್ಲೇ ಜಾರಿಗೊಳಿಸಲಾಗಿದೆ ಮತ್ತು ಅದೂ ಕೂಡ ನಮ್ಮ ಸಂವಿಧಾನದ ಭಾಗವೇ ಆಗಿದೆ ಎಂಬುದನ್ನು ನಾವು ಮರೆಯುತ್ತೇವೆ. ಸಂವಿಧಾನ ಎಷ್ಟೇ ಒಳ್ಳೆಯದಿದ್ದರೂ ಅದನ್ನು ಅನುಷ್ಠಾನಗೊಳಿಸುವವರು ದುಷ್ಟರಾದಾಗ ಏನು ಮಾಡೋದು? ಸ್ಚತಃ ಬಾಬಾಸಾಹೇಬರೇ ಇದನ್ನು ಹೇಳಿದ್ದರಲ್ಲವೇ?

ಈ ಚರ್ಚೆ ಒಂದೆಡೆ ಇಟ್ಟುಬಿಡೋಣ‌. ಸಂವಿಧಾನವನ್ನೇ ಬದಲಿಸಲು ನಾವು ಗೆದ್ದುಬಂದಿದ್ದೇವೆ ಎಂದು ಬಲಪಂಥೀಯ ರಾಜಕಾರಣ ಬೊಬ್ಬೆ ಹೊಡೆಯುತ್ತಿರುವಾಗ, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಮಂಸೋರೆಯವರ ಪ್ರಬುದ್ದತೆಗೆ, ಧೈರ್ಯಕ್ಕೆ ತಲೆಬಾಗಬೇಕು. ಈ ಧೈರ್ಯಕ್ಕೆ ಅವರಿಗೆ ಕಮರ್ಷಿಯಲ್ ಗೆಲುವೂ ಸಿಗಬೇಕು. ಇಲ್ಲವಾದಲ್ಲಿ ಅವರ ತಪಸ್ಸಿಗೆ ಅರ್ಥವಿಲ್ಲದಂತಾಗುತ್ತದೆ. ಸಿನಿಮಾ ಎಂಬುದು ಉಳಿದೆಲ್ಲ ಮಾಧ್ಯಮಗಳಿಗಿಂತ ಹೆಚ್ಚು ಜನಪ್ರಿಯ ಮಾಧ್ಯಮ. ಆದರೆ ಅದನ್ನು ಜನರು ನೋಡುವಂತೆ ಮಾಡುವುದು ದೊಡ್ಡ ಸಾಹಸ. ಟೆಕ್ನಿಕಲಿ ಮಂಸೋರೆ ಸಾಕಷ್ಟು ಪಳಗಿದ್ದಾರೆ, ಕಮರ್ಷಿಯಲ್ ಸಿನಿಮಾ ವ್ಯಾಕರಣ ಅವರಿಗೆ ಗೊತ್ತಿದೆ. ಆಕ್ಟ್ 1978 ಇದಕ್ಕೆ ಒಂದು ಉದಾಹರಣೆ. ಆದರೆ ಮಲೆಕುಡಿಯರ ಕಥೆಯನ್ನು ಅದು ಇರುವ ಹಾಗೆಯೇ ಕನ್ನಡ ಪ್ರೇಕ್ಷಕರು ಸ್ವೀಕರಿಸುತ್ತಾರಾ? ಆಕ್ಟ್ ಸಿನಿಮಾ ಒಂದು ಫಿಕ್ಷನ್ ಆದ್ದರಿಂದ ಮಂಸೋರೆ ಪ್ರೇಕ್ಷಕರಿಗೆ ಬೇಕಾಗಿದ್ದನ್ನು ಕೊಡುವ ಅವಕಾಶವಿತ್ತು. ಆದರೆ 19.20.21 ರಲ್ಲಿ ಅದು ಸಾಧ್ಯವಾಗಿಲ್ಲ. ಏನೇ ಇರಲಿ, ಪರಿಣಾಮಗಳಿಗೆ ಅಂಜದೆ, ನಮ್ಮ ಕಾಲಘಟ್ಟದಲ್ಲಿಯೇ ನಮ್ಮ ಕಣ್ಣೆದುರೇ ನಡೆದ ಘಟನೆಯೊಂದನ್ನು ಮಂಸೋರೆ ಸಿನಿಮಾ ಮಾಡಿ ಗೆದ್ದಿದ್ದಾರೆ.

ಇಡೀ ಸಿನಿಮಾದಲ್ಲಿ ಪ್ರತಿಭಾವಂತ ನಟರ ದಂಡೇ ಇದೆ. ಅದರಲ್ಲೂ ರಂಗಭೂಮಿ ಹಿನ್ನೆಲೆಯ ನಟರೇ ಇದ್ದರೂ, ಅವರೆಲ್ಲರೂ ಚೆನ್ನಾಗಿ ಅಭಿನಯಿಸಿದ್ದರೂ ನಿಜಕ್ಕೂ ಕಾಡುವುದು ವಿಠಲ ಮಲೆಕುಡಿಯನ ಪಾತ್ರ ನಿರ್ವಹಿಸಿರುವ ಶೃಂಗ. ಕೊನೆಯಲ್ಲಿ ಮೀಡಿಯಾ ಮೈಕುಗಳ ಮುಂದೆ ನಿಂತಾಗಿನ ಆತನ ಮಂದಹಾಸ ನಮ್ಮೆದೆಗಳಲ್ಲಿ ಸ್ಥಾಯಿಯಾಗಿ ಉಳಿದುಹೋಗುತ್ತದೆ. ಆ ಮೌನಕ್ಕೆ, ಮಂದಹಾಸಕ್ಕೆ ಎಷ್ಟೊಂದು ಗಂಟಲು! ನಿಮ್ಮ ಗಂಟಲು ಉಬ್ಬಿ ಬರುವಂತೆ ಮಾಡುತ್ತಾನೆ ಈ ಹುಡುಗ. ಮಂಸೋರೆ ತಮ್ಮ ಕಥಾಪಾತ್ರಧಾರಿಗಳ ಆಯ್ಕೆಯಲ್ಲೂ ಸೋತಿಲ್ಲ ಎಂಬುದಕ್ಕೆ ಶೃಂಗ ಸಾಕ್ಷಿ.

19.20.21 ನಕ್ಸಲರ ಕಥೆಯಲ್ಲ. ಮಂಸೋರೆ ನಕ್ಸಲರನ್ನು ಪ್ರಜ್ಞಾಪೂರ್ವಕವಾಗಿ ಕಥೆಯ ಹೊರಗಿಟ್ಟೇ ಸಿನಿಮಾ ಮಾಡಿದಂತಿದೆ. ಇಲ್ಲಿ ನಕ್ಸಲರು ಮಾತನಾಡುವುದು ಪೊಲೀಸರ ಕಟ್ಟುಕಥೆಗಳಲ್ಲಿ ಮಾತ್ರ. ವಿಠಲನ ಕಥೆ ಹೇಳುವ ಧೈರ್ಯ ತೋರಿದ ಮಂಸೋರೆ ನಕ್ಸಲರ ಕಥೆ ಹೇಳುವಲ್ಲಿ ಅಳುಕಿದಂತೆ ತೋರುತ್ತಾರೆ. ಅದಕ್ಕೆ ಇವತ್ತಿನ ಕಾಲಘಟ್ಟವೂ ಕಾರಣವಿರಬಹುದು. ವಿಠಲ ಯಾವ ಊರಿನವನೋ ಅದೇ ಊರಿನ ಮೂವರು ನಕ್ಸಲ್ ಚಳವಳಿಗೆ ಸೇರಿ, ಅದರಲ್ಲಿಬ್ಬರು ಪೊಲೀಸರಿಂದ ಹತರಾಗುವುದನ್ನು ಸಿನಿಮಾದಲ್ಲಿ ಹೇಳಿಲ್ಲ. ಅದನ್ನು ಹೇಳಿದರೆ ವಿಠಲನ ಕಥೆ ದುರ್ಬಲವಾಗುತ್ತದೆ ಎಂದು ಅವರು ಭಾವಿಸಿದ್ದಿರಬಹುದು. ಆದರೆ ಆ ಮೂವರ ಕಥೆಗಳೂ ಹೇಳಬೇಕಾದಂಥವೇ. ಅವೂ ಅಮಾಯಕ ಜೀವಗಳೇ.

ಹಾಗೆ ನೋಡಿದರೆ ಪಶ್ಚಿಮಘಟ್ಟ ಭಾಗದಲ್ಲಿ ನಕ್ಸಲ್ ಚಳವಳಿ ಆರಂಭವಾದಾಗಿನಿಂದ ಆದ ಎಲ್ಲ ಸಾವುಗಳು ಅನ್ಯಾಯದ ಸಾವುಗಳೇ ಆಗಿದ್ದವು. ಮೊದಲ ಎನ್ ಕೌಂಟರ್ ನಲ್ಲಿ ಪಾರ್ವತಿ, ಹಾಜಿಮಾ (ಸಿನಿಮಾದಲ್ಲಿ ಗೌರಿ, ರಬಿಯಾ) ಹತ್ಯೆಗೀಡಾದಾಗ ನಾನು ಆಗ ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ ಈ ಸಾವು ನ್ಯಾಯವೇ? ಎಂಬ ಶೀರ್ಷಿಕೆಯ ಮುಖಪುಟ ಲೇಖನ ಬರೆದಿದ್ದೆ. ಈ ರಕ್ತಚರಿತ್ರೆ ಬಹಳ ದಿನಗಳವರೆಗೆ ನಡೆದವು. ಪೊಲೀಸ್ ಇನ್ಫಾರ್ಮರ್ ಗಳೆಂಬ ಕಾರಣಕ್ಕೆ ಸಾಮಾನ್ಯ ಜನರನ್ನು ನಕ್ಸಲರು ಕೊಂದರು. ನಕ್ಸಲರನ್ನು ಪೊಲೀಸರು ಬೇಟೆಯಾಡಿ ಕೊಂದರು. ಸಾಕೇತ್ ರಾಜನ್ ಸಾವಿನ ನಂತರ ಪಾವಗಡದ ಸಿಆರ್ ಪಿಎಫ್ ಕ್ಯಾಂಪ್ ಮೇಲೆ ನಡೆದ ದಾಳಿ, ಮಾರಣಹೋಮ ಅತ್ಯಂತ ಭೀಕರ. ಅಲ್ಲಿ ಸತ್ತವರೂ ಶೋಷಿತ ಸಮಯದಾಯಗಳಿಂದ ಬಂದ, ಬಡವರ್ಗದಿಂದ ಬಂದ ಪೊಲೀಸರು. ಈ ಕಾಲಕ್ಕೂ ನಾವು ಈ ಎಲ್ಲ ಸಾವುಗಳು ನ್ಯಾಯವೇ ಎಂದು ಪ್ರಶ್ನಿಸುತ್ತಲೇ ಇರಬೇಕಾಗುತ್ತದೆ.

ನಕ್ಸಲರು ಕಾರ್ಯಾಚರಣೆ ನಡೆಸುತ್ತಿದ್ದ ಭಾಗದಲ್ಲಿ ವಾಸಿಸುವ ಜನರು ಎರಡೂ ಕಡೆಗಳಿಂದಲೂ ಏಟು ತಿಂದರು. ಅವರನ್ನು ಬೆಂಬಲಿಸಿದರೆ ಇವರಿಂದ, ಇವರನ್ನು ಬೆಂಬಲಿಸಿದರೆ ಅವರಿಂದ ದಾಳಿಗಳಿಗೆ ಒಳಗಾದರು. ಅವರ ತಪ್ಪೇನಿತ್ತು? 19.20.21 ಒಂದು ಮುಖವನ್ನಷ್ಟೇ ಪರಿಚಯಿಸಿದೆ.

ಒಂದು ವಿಶೇಷವೆಂದರೆ ಈ ಸಿನಿಮಾ ಹಿಂಸಾತ್ಮಕ ಹೋರಾಟವನ್ನು ವಿಜೃಂಬಿಸಲು ಹೋಗದೆ ಮುನೀರ್ ಕಾಟಿಪಳ್ಳ ಮಾದರಿಯ ಪ್ರಜಾತಾಂತ್ರಿಕ ಹೋರಾಟವನ್ನು ಎತ್ತಿಹಿಡಿಯುತ್ತದೆ. ಅದು ಸರಿಯಾದ ಕ್ರಮವೂ ಹೌದು. ನಕ್ಸಲನೆಂದು ಬಿಂಬಿತನಾದ ವಿಠಲನ ಬೆಂಬಲಕ್ಕೆ ನಿಲ್ಲುವುದು ನಕ್ಸಲರ ಕಟುಟೀಕಾಕಾರರಾಗಿದ್ದ ಮುನೀರ್ ಮತ್ತು ಅವರ ಕಮ್ಯುನಿಸ್ಟ್ ಪಕ್ಷದ ಸಂಘಟನೆ ಎಂಬುದು ವಿಶೇಷ. ಅವರ ಪಕ್ಷದ ಪ್ರಮುಖರು ಬಂದಾಗಲೂ ‘ನೀನು ನಕ್ಸಲರ ಜೊತೆ ಇಲ್ಲ ತಾನೇ?’ ಎಂದು ಕೇಳಿ ಉತ್ತರ ಪಡೆಯುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬಹುದು. ವಿಠಲ ಒಂದು ಸಣ್ಣ ದುಡುಕಿನಿಂದ ನಕ್ಸಲರ ಜೊತೆ ಸಂಪರ್ಕ ಸಾಧಿಸಿದ್ದರೆ ಪ್ರಜಾತಂತ್ರವಾದಿಗಳ ಬೆಂಬಲವೂ ಇರುತ್ತಿರಲಿಲ್ಲ!

ಸಿನಿಮಾದಲ್ಲಿ ನೀವು ಒಂದನ್ನು ಗಮನಿಸಿರುತ್ತೀರಿ. ಕಾಡಿನ ಒಳಗೂ ಲಾಲ್ ಸಲಾಂ, ಇನ್ಕಿಲಾಬ್ ಜಿಂದಾಬಾದ್ ಮೊಳಗುತ್ತದೆ. ನಾಡಿನ ಒಳಗೂ ಅದೇ ಘೋಷಣೆಗಳು! ಅಲ್ಲೂ ಕೆಂಬಾವುಟ, ಇಲ್ಲೂ ಕೆಂಬಾವುಟ! ಆದರೆ ಎರಡೂ ಕೂಡ ಎಷ್ಟು ಭಿನ್ನ ಎಂಬುದು ಪತ್ರಕರ್ತರಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಸುಲಭವಾಗಿ ಅರ್ಥವಾಗುತ್ತದೆ. ಆದರೆ ಸಾಮಾನ್ಯ ಪ್ರೇಕ್ಷಕರಿಗೆ ಅರ್ಥವಾದೀತೇ?

19.20.21 ತನ್ನ ಸೀಮಿತ ಅವಕಾಶಗಳಲ್ಲಿ ವಿಠಲನ ಗೆಲುವಿನಲ್ಲಿ ತಾನೂ ಗೆಲ್ಲುತ್ತದೆ. ಭಾರತ ಸಂವಿಧಾನವೇ ಅವನನ್ನು ಬದುಕಿಸಿತು ಎಂದು ನಾವು ಭಾವಿಸುವಂತೆ ಮಾಡುತ್ತದೆ. ಆದರೆ ಈಗಲೂ ಯುಎಪಿಎ ಅಡಿಯಲ್ಲಿ ಬಂಧಿತರಾಗಿ ಜೈಲುಗಳಲ್ಲೇ ಕೊಳೆಯುತ್ತಿರುವ, ಅಲ್ಲೇ ಕೊಳೆತು ಸಾಯುತ್ತಿರುವವರನ್ನು ನೆನೆದಾಗ ವಿಠಲನ ಕೇಸು exceptional ಅನಿಸದೇ ಇರದು. ವಿಠಲನ ಮನೆಯಲ್ಲಿ ಸೀಜು ಮಾಡಿದ ತರಕಾರಿ ಕತ್ತರಿಸುವ ಚಾಕು, ಆಟಿಕೆ ಬೈನಾಕುಲರ್, ಭಗತ್ ಸಿಂಗ್ ಕುರಿತ ಪುಸ್ತಕಗಳ ಜೊತೆ ಪೊಲೀಸರು ನಕ್ಸಲ್ ಹೋರಾಟಕ್ಕೆ ಸಂಬಂಧಿಸಿದ ಪೇಪರ್ ಕಟಿಂಗ್ ಇಟ್ಟರು. ಅದರ ಬದಲು ಭೀಮಾ ಕೋರೆಗಾವ್ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತರ ಲ್ಯಾಪ್ ಟಾಪ್ ಗಳನ್ನು ಹ್ಯಾಕ್ ಮಾಡಿ ದೇಶದ ಅತಿಗಣ್ಯರ ಕೊಲೆಸಂಚಿನ ಪತ್ರಗಳನ್ನು ಪ್ಲಾಂಟ್ ಮಾಡಿದಂತೆ ಪ್ರಬಲ ಸಾಕ್ಷಿ ಸೃಷ್ಟಿಸಿದ್ದರೆ? ಆಗ ವಿಠಲನನ್ನು ರಕ್ಷಿಸಲು ಸಾಧ್ಯವಿತ್ತೆ? ಪ್ರಶ್ನೆಯೇ ತುಂಬ ಕಿರಿಕಿರಿ ಹುಟ್ಟಿಸುತ್ತದೆ.

19.20.21 ಸಿನಿಮಾದಲ್ಲಿ ದುರ್ಬಲ ಅಂಶಗಳು ಇಲ್ಲವೆಂದೇನಿಲ್ಲ. ದಕ್ಷಿಣ ಕನ್ನಡ ಶೈಲಿಯ ಭಾಷೆ ಒಮ್ಮೊಮ್ಮೆ ಕೃತಕ ಎನಿಸುತ್ತದೆ, ಅತ್ಯುತ್ತಮ ನಟರ ಬಾಯಲ್ಲೂ! ದಕ್ಷಿಣ ಕನ್ನಡದ ಕನ್ನಡವೆಂದರೆ ಪುಸ್ತಕದಲ್ಲಿ ಬರೆದಿದ್ದನ್ನು ಓದುವಂತೆ ಅಲ್ಲ. ಅದಕ್ಕೆ ತನ್ನದೇ ಆದ ರಾಗವಿದೆ, ಏರಿಳಿತಗಳಿವೆ, ವೈಯಾರವಿದೆ. ಅದು ಇಲ್ಲಿ ಮಿಸ್ ಆಗಿದೆ. ಕೆಲವು ದೃಶ್ಯಗಳ ಸಂಯೋಜನೆ ಪೇಲವವಾಗಿದೆ. ರಿವರ್ಸ್ ಸ್ಕ್ರೀನ್ ಪ್ಲೇ ಇಲ್ಲದೆಯೂ ಪೊಲೀಸ್ ಅಧಿಕಾರಿ ತನ್ನ ಮಗಳಿಗೆ ಹೇಳುವ ಫ್ಲಾಶ್ ಬ್ಯಾಕ್ ಜೊತೆಯೇ ಅಥವಾ ವಿಠಲನ ಪ್ರಯಾಣದ ಜೊತೆಯೇ ನೇರವಾಗಿ ಕಥೆಯನ್ನು ಹೇಳಬಹುದಿತ್ತು. ಎರಡು ಟೈಮ್ ಲೈನ್ ಕಥೆ ನೋಡುಗರನ್ನು ಒಮ್ಮೊಮ್ಮೆ ಕಸಿವಿಸಿಗೊಳಿಸುತ್ತದೆ, ಕಥೆಯಿಂದ ಡಿಸ್ ಕನೆಕ್ಟ್ ಮಾಡುತ್ತಲೂ ಇರುತ್ತದೆ. ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಹಿನ್ನೆಲೆ ಸಂಗೀತ ಇನ್ನೂ ಚೆನ್ನಾಗಿ ಮಾಡಬಹುದಿತ್ತು.

ಇದೆಲ್ಲ ಏನೇ ಇರಲಿ, ಇಂಥ ಕಥೆಯೊಂದನ್ನು ಸಿನಿಮಾ ಮಾಡುವುದೇ ಒಂದು ದೊಡ್ಡ ಸಾಹಸ, ಅದೇ ದೊಡ್ಡ ಯಶಸ್ಸು. ಮಂಸೋರೆ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದಕ್ಕೆ ಅಂಜುವವರಲ್ಲ‌. ಈವರೆಗಿನ ಅವರ ಸಿನಿಮಾಗಳು ತುಂಬ ದೊಡ್ಡ ಬಜೆಟ್ ಸಿನಿಮಾಗಳೇನಲ್ಲ, ಆದರೆ ದೊಡ್ಡ ಬಜೆಟ್ ನಿರೀಕ್ಷಿಸುವ ಸಿನಿಮಾಗಳನ್ನು ಅವರು ಸಣ್ಣ ಬಜೆಟ್ ನಲ್ಲೇ ಮಾಡುತ್ತ ಬಂದಿದ್ದಾರೆ. ಅವರ ಕ್ರಿಯಾಶೀಲತೆಯನ್ನು ಮೆಚ್ಚಬೇಕು. ಕನ್ನಡದಲ್ಲಿ ಈ ಬಗೆಯ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡುವವರ ಸಂಖ್ಯೆ ಹೆಚ್ಚುವಂತೆ ಮಾಡುತ್ತಿದ್ದಾರೆ ಮಂಸೋರೆ. ಇದು ಸಾಮಾನ್ಯ ಸಾಧನೆಯೇನಲ್ಲ.

ಅಂದಹಾಗೆ ಮಂಸೋರೆಗೆ ನೆರಳಿನಂತೆಯೇ ಇರುವ, ಅವರ ದೊಡ್ಡ ಶಕ್ತಿಯೇ ಆಗಿರುವ Veerendra Mallanna ವೀರೇಂದ್ರ ಮಲ್ಲಣ್ಣ ಅವರನ್ನು ಅಭಿನಂದಿಸಲೇಬೇಕು. ಮಂಸೋರೆ-ವೀರು ಜೋಡಿಗೆ ಇನ್ನೂ ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸುವ ಶಕ್ತಿ, ಸಾಮರ್ಥ್ಯಗಳಿವೆ. ಇಬ್ಬರಿಗೂ ಪ್ರೀತಿಯ ಅಪ್ಪುಗೆಗಳು. ಹಾಗೆಯೇ ಈ ಸಿನಿಮಾಗೆ ಬಂಡವಾಳ ಹೂಡಿದ ದೇವರಾಜ್ ಅವರ ಬದ್ಧತೆಗೆ ಶರಣು!

– ದಿನೇಶ್ ಕುಮಾರ್ ಎಸ್.ಸಿ., ಹಿರಿಯ ಪತ್ರಕರ್ತರು

Leave a Reply