ಒಬ್ಬರ ನೋವಿಗೆ ಬೇರೆಯವರು ದನಿಯಾಗಲೇಗಬಾರದೇ?

3 years ago

ಹೋರಾಟದಲ್ಲಾಗಲೀ ಕಲೆಯಲ್ಲಾಗಲೀ ನೋವುಂಡ ಸಮುದಾಯಗಳೇ ತಮ್ಮ ನೋವುಗಳನ್ನು ರೆಪ್ರೆಸೆಂಟ್‌ ಮಾಡಬೇಕು ಎಂಬುದು ಒಪ್ಪುವ ವಿಚಾರವೇ. ಅಲೆಮಾರಿಗಳ ಕುರಿತ ಸಿನಿಮಾವನ್ನು ಒಬ್ಬ ಒಬಿಸಿ ಜಾತಿಯ ಅತವಾ ಬ್ರಾಹ್ಮಣ ಜಾತಿಯ ನಿರ್ದೇಶಕನಿಗಿಂತಲೂ ಚನ್ನಾಗಿ ಅದೇ ಅಲೆಮಾರಿ ಸಮುದಾಯದವರೇ ಆದ ಸೂಕ್ಷ್ಮ ಪ್ರಜ್ಞೆಯ ನಿರ್ದೇಶಕರೊಬ್ಬರು ಚನ್ನಾಗಿ ರೆಪ್ರೆಸೆಂಟ್‌ ಮಾಡಬಲ್ಲರು. ಕಾಂತಾರ ಸಿನಿಮಾವನ್ನು ತುಳುನಾಡಿನ, ದೈವಾರಾದನೆ ಪರಂಪರೆಯ ರಿಶಬ್‌ ಅಲ್ಲದೇ ಬೇರೆಯವರಿಗೆ ಅಶ್ಟು ಅದ್ಬುತವಾಗಿ ಮಾಡಲು ಸಾದ್ಯವಿರಲಿಲ್ಲ. ಆದರೆ ಅದರಲ್ಲಿಯೂ ದೈವ ನರ್ತಕ ಸಮುದಾಯವನ್ನು ರಿಶಬ್‌ ಒಬ್ಬ ʼಹೊರಗಿನʼವ್ಯಕ್ತಿಯಾಗಿ ಗ್ರಹಿಸಿದ್ದರಿಂದಲೇ ಸಮಸ್ಯೆಗಳೂ ಆಗಿವೆ. ಮಹಿಳೆಯರ ಸಮಸ್ಯೆಗಳ ಕುರಿತಾದ ಒಂದು ಸಮಸ್ಯೆಯನ್ನು ಒಬ್ಬ ಮಹಿಳಾ ನಿರ್ದೇಶಕಿ ಮಾಡುವಷ್ಟು ಪರಿಣಾಮಕಾರಿಯಾಗಿ ಒಬ್ಬ ಪುರುಷ ನಿರ್ದೇಶಕ ಮಾಡಲು ಸಾದ್ಯವಿಲ್ಲ. ನಾವು ನಾಗರಾಜ್‌ ಮಂಜುಳೆ, ಪಾ. ರಂಜಿತ್‌ ಅವರನ್ನು ಮೇಲೆ ಇಟ್ಟು ನೋಡಲು ಇದೇ ಕಾರಣ. ಅವರುಗಳು ತಮ್ಮ ಸಿನಿಮಾಗಳ ಮೂಲಕ ಬಿಂಬಿಸುತ್ತಿರುವ ರೀತಿ ಬೇರೆಯವರಿಗೆ ಸಾದ್ಯವಿರಲಿಲ್ಲ.

ಆದರೆ ಹೀಗೆಂದ ಮಾತ್ರಕ್ಕೆ ಒಬ್ಬರ ನೋವಿಗೆ ಬೇರೆಯವರು ದನಿಯಾಗಲೇಗಬಾರದೇ? ಆದಿವಾಸಿ ವಿಟಲ ಮಲೆಕುಡಿಯನ ನೋವಿಗೆ ʼಹೊರಗಿನʼ ವಕೀಲ ದಿನೇಶ್‌ ಹೆಗಡೆ ಉಳೇಪಾಡಿಯವರು ಕೋರ್ಟಿನಲ್ಲಿ ದನಿಯಾಗದಿದ್ದರೆ ಬೇರಾರಿದ್ದರು? ಅವರೇ ಅಲ್ಲವೇ ಅವನ ಪಾಲಿಗೆ ಬಿಡುಗಡೆಯ ದಾರಿ ತೋರಿದವರು. ಸಂವಿದಾನದ ಅಸ್ತ್ರ ಬಳಸಿಕೊಂಡು ಅಂತಿಮವಾಗಿ ಪೊಲೀಸರ ದಮನ ದೌರ್ಜನ್ಯದಿಂದ ಮುಕ್ತಿ ಕೊಡಿಸಿದವರು? ಹಾಗಾದರೆ ಆದಿವಾಸಿಯೇ ಆದ ಒಬ್ಬ ವಕೀಲ ಬರಲಿ ಎಂದು ವಿಟಲ್‌ ಮಲೆಕುಡಿಯ ಕಾಯುತ್ತಾ ಕೂರಬೇಕಿತ್ತೆ? ಅವನ ಪರವಾಗಿ ಬೀದಿ ಹೋರಾಟ ನಡೆಸಿದ ಡಿವೈಎಪ್‌ಐ ಸಂಗಟನೆಯ ಮುನೀರ್‌ ಕಾಟಿಪಳ್ಳ ಮಾಡಿದ್ದು ಅಪರಾದವೇ? ಸಿಪಿಎಂ ನಾಯಕ ಪ್ರಕಾಶ್‌ ಕಾರಟ್‌ ಜೈಲಿಗೆ ಹೋಗಿ ವಿಟಲ ಮಲೆಕುಡಿಯನನ್ನು ಬೇಟಿ ಮಾಡಿದ್ದು ಅಪರಾದವೇ?
ಈ ಸಂಗತಿಗಳನ್ನು ಆದಿವಾಸಿಯಲ್ಲದ ಮಂಸೋರೆ ಸಿನಿಮಾ ಮಾಡಿ ಅಪರಾದ ಎಸಗಿಬಿಟ್ಟರೆ?
ಎಲ್ಲಾ ಮೇಲ್ಜಾತಿಯ ವ್ಯಕ್ತಿಗಳೂ ತಾವು ಹೀರೋಗಳಾಗಲೆಂದೇ ಹೋರಾಟ ಮಾಡುತ್ತಾರಾ? ಅತವಾ ಅವರನ್ನು ಹೀರೋಗಳಾಗಿ ಮಾಡಲೆಂದೇ ಸಿನಿಮಾ ಮಾಡಲಾಗುತ್ತದೆಯಾ?

ಈ ಹಿನ್ನೆಲೆಯಲ್ಲಿ ಎಲ್ಲರೂ ನೋಡಬೇಕಾದ ಒಂದು ಸಿನಿಮಾ ಕುರಿತು ಹೇಳುತ್ತೇನೆ.
ಅದು ಬಿಳಿಯ ವಸಾಹತುಶಾಹಿಗಳು ಆಕ್ರಮಿಸಿಕೊಂಡು ಕಪ್ಪು ಜನರ ಮೇಲೆ ಹೇಳಲಾರದಶ್ಟು ದಮನ, ಕ್ರೌರ್ಯ, ದೌರ್ಜನ್ಯ, ಹಿಂಸೆ ನಡೆಸುತ್ತಿದ್ದ ದಕ್ಷಿಣಾ ಆಪ್ರಿಕಾದ ಕಪ್ಪು ಹೋರಾಟಗಾರ ಸ್ಟೀವ್‌ ಬಿಕೋ ಕುರಿತ ಸಿನಿಮಾ – ಕ್ರೈ ಪ್ರೀಡಂ- CRY FREEDOM.

ಈ ಸಿನಿಮಾ ಮಾಡಿದ್ದು ಲೋಕಪ್ರಸಿದ್ದ ನಿರ್ದೇಶಕ ರಿಚರ್ಡ್‌ ಅಟೆನ್‌ಬರೋ- ಒಬ್ಬ ಬಿಳಿಯ. ವಸಾಹತುಶಾಹಿ ದೇಶದ ಬಿಳಿಯ. ಆ ಸಿನಿಮಾಕ್ಕೆ ಆದಾರವಾಗಿದ್ದ ಕತೆ ಡೊನಾಲ್ಡ್‌ ವುಡ್ಸ್‌ ಎಂಬ ಮತ್ತೊಬ್ಬ ಬಿಳಿಯ ಬರೆದ ಕೃತಿ. ಈ ಡೊನಾಲ್ಡ್‌ ವುಡ್ಸ್‌ ದಕ್ಷಿಣ ಆಪ್ರಿಕಾದ ಒಂದು ದೊಡ್ಡ ಪತ್ರಿಕೆಯ ಸಂಪಾದಕ. ಅವನದೇ ಪ್ರಿಂಟಿಂಗ್‌ ಪ್ರೆಸ್‌, ಸಾಕಷ್ಟು ಆಸ್ತಿ, ದೊಡ್ಡ ಬಂಗಲೆ ಸಂಪಾದಿಸಿಕೊಂಡಿದ್ದ ದೊಡ್ಡ ಪತ್ರಕರ್ತ. ಒಬ್ಬ ಲಿಬರಲ್‌ ಪತ್ರಕರ್ತ. ಅವನು ಸ್ಟಿವ್‌ ಬಿಕೋ ಒಬ್ಬ ಕಪ್ಪು ಜನಾಂಗೀಯವಾದಿ ಎಂದು ಜರಿದು ದೊಡ್ಡ ಸಂಪಾದಕೀಯ ಅಂಕಣ ಬರೆದಿರುತ್ತಾನೆ. ಬಿಳಿಯರ ದಬ್ಬಾಳಿಕೆ ಸರಿಯಲ್ಲ ಎಂಬ ನಿಲುವು ಹೊಂದಿದ್ದರೂ ಕರಿಯರ ಸ್ವಾವಲಂಬಿತನವನ್ನು ಮೂಲಬೂತವಾದ ಎಂದು ಜರಿದು ಅದರಲ್ಲಿ ಬರೆದಿರುತ್ತಾನೆ. ಮರುದಿನವೇ ಸ್ಟೀವ್‌ ಬಿಕೋನಿಂದ ಕರೆ ಬರುತ್ತದೆ. ಅವನನ್ನು ನಿರ್ಬಂದಿಸಲಾದ ಜಾಗದಲ್ಲಿ ಡೊನಾಲ್ಡ್‌ ವುಡ್ಸ್‌ ಗುಪ್ತವಾಗಿ ಬೇಟಿ ಮಾಡಲು ಹೋಗುತ್ತಾನೆ…

ಮುಂದೆ ಏನಾಗುತ್ತದೆ ಎಂಬುದು ಇವತ್ತಿಗೆ ಇತಿಹಾಸ. ಆ ಇತಿಹಾಸವನ್ನೇ CRY FREEDOM ಸಿನಿಮಾ ದಾಕಲಿಸಿದೆ. 19.20.21 ಸಿನಿಮಾದಂತೆಯೇ ಇದೂ ಕೂಡಾ ಅರ್ದ ಡಾಕ್ಯುಮೆಂಟರಿ ಇನ್ನರ್ದ ಡ್ರಾಮಾ. ಆದರೆ ಆ ಸಿನಿಮಾ ನೋಡಿದಾಗ ನಿಮ್ಮ ಮನಸ್ಸು ಹೆಪ್ಪುಗಟ್ಟುತ್ತದೆ, ಕಪ್ಪು ಜನರಿಗಾಗಿ ನಿಮ್ಮ ಮನಸ್ಸು ಮಿಡಿಯುತ್ತದೆ, ಬಿಳಿಯರ ಕ್ರೌರ್ಯದ ಕುರಿತು ನಿಮ್ಮ ಹೃದಯದಲ್ಲಿ ಆಕ್ರೋಶ ಮೂಡಿಸುತ್ತದೆ.. ಎಲ್ಲಕ್ಕಿಂತ ಮುಕ್ಯವಾಗಿ ಕಪ್ಪು ಪ್ರಜ್ಞೆಯ ಜೊತೆಗೆ ಬಿಳಿಯರಾದವರೂ, ಮನುಶ್ಯರಾಗಿ ಯಾಕೆ ನಿಲ್ಲಬೇಕು ಎಂದು ಅದ್ಬುತ ರೀತಿಯಲ್ಲಿ ಮನವರಿಕೆ ಮಾಡುತ್ತದೆ. ಮತ್ತು ಇದು ಕಲ್ಪಿತ ಕತೆಯಲ್ಲ.. ಅದರ ಒಂದೊಂದು ದೃಶ್ಯಗಳೂ ಇತಿಹಾಸದ ದಾಕಲೆಗಳೇ…

ಕಪ್ಪು ಹೋರಾಟಗಾರ ಸ್ಟಿವ್‌ ಬಿಕೋ ಕುರಿತು ಇಡೀ ಜಗತ್ತಿಗೆ ತಾನು ತಿಳಿದ ಸತ್ಯ ಹೇಳಲೇಬೇಕೆಂದು ಹೊರಡುವ ಬಿಳಿಯ ಪತ್ರಕರ್ತ ಡೊನಾಲ್ಡ್‌ ವುಡ್ಸ್‌ ಗೆ ತನ್ನ ಎಲ್ಲಾ ಆಸ್ತಿ ಸಂಪತ್ತನ್ನು ತ್ಯಜಿಸಿ, ಸರ್ಕಾರದ ದೃಶ್ಟಿಯಲ್ಲಿ ದೇಶದ್ರೋಹಿಯಾಗಿ ದೇಶವನ್ನೇ ಬಿಟ್ಟು ಹೋಗುವುದು ಒಂದೇ ದಾರಿಯಾಗುತ್ತದೆ. ತನ್ನ ಐದು ಜನ ಮಕ್ಕಳು ಮತ್ತು ಹೆಂಡತಿಯನ್ನು ಇದಕ್ಕೆ ಒಪ್ಪಿಸುವುದು ಅಷ್ಟು ಸುಲಬವಾಗಿರಲಿಲ್ಲ. ತಾನು ತನ್ನ ಜೀವಮಾನವಿಡೀ ಗಳಿಸಿದ ಎಲ್ಲಾ ಸಂಪತ್ತನ್ನು, ಇಡೀ ಪತ್ರಿಕೆಯನ್ನು ಎಲ್ಲವನ್ನೂ ಬಿಟ್ಟು ತಲೆಮರೆಸಿಕೊಂಡು ಹೊರಡುತ್ತಾನೆ… ಅವನ ಮನೆಯ ಮೇಲೆ ಪೊಲೀಸ್‌ ದಾಳಿಯಾಗುತ್ತದೆ.. ಮಕ್ಕಳ ಮೇಲೆ ಹಿಂಸೆಯಾಗುತ್ತದೆ… ಆದರೆ ತನ್ನ ಎಲ್ಲಾ ಪ್ರಿವಿಲಿಜ್‌ಗಳನ್ನು ಪಣಕ್ಕಿಟ್ಟು ʼಸತ್ಯʼದ ಪರ ನಿಂತು ಇಂಗ್ಲೆಂಡಿಗೆ ಓಡಿ ಹೋಗಿ ಪುಸ್ತಕ ಬರೆಯುತ್ತಾನೆ. ಅದೇ ಕೃತಿಯನ್ನು ಅಟೆನ್‌ಬರೋ ಸಿನಿಮಾ ಮಾಡುತ್ತಾನೆ.
ದಕ್ಷಿಣ ಆಪ್ರಿಕಾದಲ್ಲಿ ಕಪ್ಪು ಪ್ರಜ್ಞೆಗೆ ಬುನಾದಿ ಹಾಕಿದ ಸ್ಟಿವ್‌ ಬಿಕೋ ಎಂಬ ಲೆಜಂಡರಿ ಹೋರಾಟಗಾರನ ಬದುಕು ಮತ್ತು ದಾರುಣ ಸಾವು ಇಂದು ನಮಗೆ ದಕ್ಕಿರುವುದು ಈ “ಹೊರಗಿನʼ ಪತ್ರಕರ್ತ ಡೊನಾಲ್ಡ್‌ ವುಡ್ಸ್‌ ಮತ್ತು ಹೊರಗಿನ ನಿರ್ದೇಶಕ ರಿಚರ್ಡ್‌ ಅಟೆನ್‌ಬರೋ ಮೂಲಕʼ. ಸಿನಿಮಾದಲ್ಲಿ ಬಿಕೋನ black consciousness ಮತ್ತು ಡೊನಾಲ್ಡ್ ವುಡ್ಸ್ ನ ಲಿಬರಲ್ ಪರಿಕಲ್ಪನೆಗಳು ಡಿಕ್ಕಿ ಹೊಡೆಯುತ್ತವೆ… ಬಿಕೋನೊಂದಿಗಿನ ಒಡನಾಟದ ಮಾತುಕತೆಯಲ್ಲಿ ವುಡ್ಸ್ ಗೆ ಹಲವಾರು ಸಂಗತಿಗಳು ಅರಿವಿಗೆ ಬರುತ್ತವೆ…. ಅವನಿಗೇ ಅರಿವಿಲ್ಲದಂತೆ ಅವನಲ್ಲಿ ಬದಲಾವಣೆ ಉಂಟಾಗುತ್ತದೆ… ಕೊನೆಗೆ ಬಿಕೋ ಸಾವಿನ ಸತ್ಯವನ್ನು ಜಗತ್ತಿಗೆ ತಿಳಿಸಲು ತನ್ನ ಜೀವವೇ ಹೋಗಬೇಕಾಗಿಬಂದರೂ ಸರಿ ಮಾಡಲೇಬೇಕು ಎಂದು ನಿರ್ದರಿಸುವ ಮಟ್ಟಿಗೆ!

ನೊಂದವರು ಮತ್ತು ನೋವನ್ನು ಕಾಣಬಲ್ಲವರು ಇಬ್ಬರೂ ಕೂಡಿಯೇ ʼನ್ಯಾಯʼ ಪಡೆಯಲು ಸಾದ್ಯ. ಸ್ವತಃ ನೋವು ಉಣ್ಣದವರಿಗೂ ನೋವನ್ನು ತಣಿಸುವಲ್ಲಿ ಹೊಣೆಗಾರಿಕೆ ಇರುತ್ತದೆʼ ಎಂದು ಅರ್ತ ಮಾಡಿಕೊಳ್ಳುವಲ್ಲಿ ಕ್ರೈಪ್ರೀಡಂ ಸಿನಿಮಾ ಸಹಕಾರಿಯಾಗಿದೆ.

ಎಲ್ಲಾದರೂ ಸಿಕ್ಕಿದರೆ CRY FREEDOM ಸಿನಿಮಾ ನೋಡಿ.

– ಹರ್ಶಕುಮಾರ್‌ ಕುಗ್ವೆ, ಪತ್ರಕರ್ತರು

Leave a Reply