ಅಕ್ರಮ ಮದ್ಯಸಾರ ಮತ್ತು ಸಾಗಾಣಿಕೆ ವಾಹನ ಸೇರಿ 79 ಲಕ್ಷ ಮೌಲ್ಯದ ವಸ್ತು ಜಪ್ತಿ

1 year ago

ಧಾರವಾಡ: ಕಲಘಟಗಿ ಪಟ್ಟಣದ ಕಡೆಗೆ ಚಲಿಸುತ್ತಿದ್ದ ನೋಂದಣಿ ಸಂಖ್ಯೆ: ಜಿಜೆ 39 ಟಿ 2941 ಟ್ಯಾಂಕರ್ ರ ವಾಹನದಲ್ಲಿ ಅಕ್ರಮವಾಗಿ ಮದ್ಯಸಾರವನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಲಘಟಗಿ ಶಹರದ ನ್ಯೂ ಶೆಟ್ಟಿ ಲಂಚ್ ಹೋಮ್ ಮುಂಭಾಗದಲ್ಲಿ ವಾಹನವನ್ನು ತಡೆದು ತಪಾಸಣೆ ನಡೆಸಿ 79 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಬೆಳಗಾವಿ ಕೇಂದ್ರಸ್ಥಾನ ಅಪರ ಅಬಕಾರಿ ಆಯುಕ್ತರು (ಜಾರಿ ಮತ್ತು ಅಪರಾಧ) ಡಾ. ವೈ ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಬೆಳಗ್ಗೆ 5 ಗಂಟೆ ಸಮಯದಲ್ಲಿ ಕಲಘಟಗಿ ಶಹರದ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿರುವಾಗ ನಡೆಸಿದ ತಪಾಸಣೆಯಲ್ಲಿ, ಟ್ಯಾಂಕರನಲ್ಲಿ ಒಟ್ಟು 40 ಸಾವಿರ ಲೀಟರ ಮದ್ಯಸಾರವನ್ನು ಜಫ್ತಿ ಮಾಡಲಾಗಿದೆ. ಈ ಮದ್ಯಸಾರವನ್ನು ಗೋವಾ ರಾಜ್ಯಕ್ಕೆ ಸಾಗಿಸಲಾಗುತ್ತಿತ್ತು ಎಂದು ವಾಹನ ಚಾಲಕ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ವಶಪಡಿಸಿಕೊಂಡ ಮದ್ಯಸಾರದ ಮೌಲ್ಯ ರೂ. 24 ಲಕ್ಷ ಹಾಗೂ ವಾಹನದ ಮೌಲ್ಯ ರೂ. 55 ಲಕ್ಷ ಒಟ್ಟು ಮೌಲ್ಯ ರೂ. 79. ವಾಹನ ಚಾಲಕ ಓಂ ಪ್ರಕಾಶ ವಿರಾದ ರಾಮ್, ಬಾರಮರ ಜಿಲ್ಲೆ, ರಾಜಸ್ಥಾನ ರಾಜ್ಯದವನಾಗಿದ್ದು, ವಾಹನ ಮಾಲಿಕನ ಹೆಸರು ಸುಖದೇವ ಬಯ್ಯಾರಾಮ, ಇಂದಿರಾ ನಗರ, ಕಜ್ ಗುಜರಾತ ರಾಜ್ಯ ಎಂದು ತಿಳಿದುಬಂದಿದೆ.

ಈ ಕುರಿತು ಧಾರವಾಡ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಮೊಕದ್ದಮೆ (ಸಂಖ್ಯೆ :14/2024-25) ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಮದ್ಯಸಾರ ಸಾಗಾಣಿಕೆಯಲ್ಲಿ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆಯಿಂದ ಸತ್ಯ ಬಹಿರಂಗವಾಗಬೇಕಿದೆ. 

ದಾಳಿಯಲ್ಲಿ ಧಾರವಾಡ ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ಅಧೀಕ್ಷಕ ಆತ್ಮಲಿಂಗಯ್ಯ ಮಠಪತಿ, ಧಾರವಾಡ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ (ಪ್ರಭಾರ) ಲಿಂಗರಾಜ ಕೆ. ಹಾಗೂ ಕಲಘಟಗಿ ವಲಯದ ಅಬಕಾರಿ ನಿರೀಕ್ಷಕ ಶಿವಪ್ಪ ಸಣ್ಣಮನಿ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಈ ದಾಳಿಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಬೆಳಗಾವಿ ಕೇಂದ್ರಸ್ಥಾನದ  ಅಪರ ಅಬಕಾರಿ ಆಯುಕ್ತರು (ಜಾರಿ ಮತ್ತು ಅಪರಾಧ) ಡಾ. ವೈ ಮಂಜುನಾಥ ಅವರು ಅಭಿನಂದಿದ್ದಾರೆ. 

Leave a Reply