500, 1000 ನೋಟುಗಳ ನಿಷೇಧ: ಹೇಳಿದ್ದೇನು? ಆಗಿದ್ದೇನು?

2 years ago

ಕಪ್ಪುಹಣ, ಭ್ರಷ್ಟಾಚಾರ, ಭಯೋತ್ಪಾದನೆ ನಿಯಂತ್ರಿಸುವ ಉದ್ದೇಶದಿಂದ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 08, 2016ರಂದು ಹೇಳಿದ್ದರು. ವಾಸ್ತವದಲ್ಲಿ ಆಗಿದ್ದೇನು?

ಭಾರತದ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿರುವುದು ಭ್ರಷ್ಟಾಚಾರ ಮತ್ತು ಕಪ್ಪುಹಣ ಎಂಬುದು ಎಲ್ಲರಿಗೂ ಗೊತ್ತು. ಈ ಎರಡು ವಿಷಯಗಳ ವಿರುದ್ಧ ಹೋರಾಡುವ ಹಲವು ನಾಯಕರನ್ನು ನಾವು ಸಿನಿಮಾಗಳಲ್ಲಿ ನೋಡಿರುತ್ತೇವೆ. ನಿಜಜೀವನದಲ್ಲೂ ಯಾರಾದರೂ ಇಂತಹ ನಾಯಕರು ಬರಬಾರದೇ ಎಂದು ಬಸವಳಿದಿದ್ದ ಭಾರತದ ಜನಕ್ಕೆ, ಮೋದಿಯವರ ‘ಕಪ್ಪುಹಣವನ್ನು ಭಾರತಕ್ಕೆ ತರುವ ಕನಸು’ ನರನಾಡಿಗಳಲ್ಲಿ ಮಿಂಚಿನ ಸಂಚಾರ ಮೂಡಿಸಿತ್ತು. ಭಾರತದ ಜನ ತಮ್ಮ ಕೈಯಲ್ಲಿದ್ದ ಮತದ ಅಧಿಕಾರವನ್ನು ಮೋದಿಯವರ ಕೈಗಿಟ್ಟುಬಿಟ್ಟರು. ಮೋದಿ ಪಟ್ಟಾಭಿಷೇಕ ಅದ್ಧೂರಿಯಾಗೇ ನಡೆಯಿತು. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ನಂತರದಲ್ಲಿ ವಿದೇಶಗಳಲ್ಲಿರುವ ಕಪ್ಪುಹಣ ಜಪ್ತಿ ಮಾಡುವ ಪ್ರಯತ್ನಕ್ಕೆ ಕವಡೆಕಾಸಿನ ಕಿಮ್ಮತ್ತು ಸಿಗಲಿಲ್ಲ. ಅಂತರರಾಷ್ಟ್ರೀಯ ಪ್ರವಾಸಗಳ ಮೂಲಕ ಕಪ್ಪುಹಣದ ಬೇಟೆಗೆ ಇಳಿದ ಮೋದಿ, ಮನೆಗೆ ಬರುವಾಗ ಏನನ್ನೂ ತರಲಿಲ್ಲ; ಬರಿಗೈಲಿ ಬಂದರು!

ನಂತರ ಭಾರತದ ಒಳಗಿಂದಲೇ ಕಪ್ಪುಹಣವನ್ನು ಸುಟ್ಟುಬಿಡುವ ಮಾಸ್ಟರ್ ಪ್ಲಾನ್ ಡಿಮಾನಿಟೈಸೇಷನ್ ಮಾಡುವ ಸಾಹಸಕ್ಕೆ ಮೋದಿ ಮುಂದಡಿಯಿಟ್ಟರು. ವಾಸ್ತವದಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಮೂಲಕ ಕಪ್ಪುಹಣ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ, ಯಾವುದೇ ಕಪ್ಪುಹಣ ಹೊಂದಿರುವ ದೊಡ್ಡ ಕುಳ, ತನ್ನ ಕಪ್ಪುಹಣವನ್ನು ಸಂಪೂರ್ಣವಾಗಿ ಹಣದ ರೂಪದಲ್ಲಿ ಸಂಗ್ರಹಿಸಿಟ್ಟುಕೊಂಡಿರುವುದಿಲ್ಲ. ಕಪ್ಪುಹಣ ಬಂಗಾರ, ಆಸ್ತಿಗಳ ರೂಪಕ್ಕೆ ಪರಿವರ್ತನೆಯಾಗಿರುತ್ತದೆ. ಆದ್ದರಿಂದ ಕಪ್ಪು ಹಣ ನಿಯಂತ್ರಣಕ್ಕಾಗಿ ನೋಟು ನಿಷೇಧ ಮಾಡುವುದರಿಂದ ಗರಿಷ್ಠ ಪ್ರಮಾಣದ ಫಲಿತಾಂಶ ಲಭ್ಯವಾಗುವುದಿಲ್ಲ ಎಂಬುದು ಸ್ಪಷ್ಟ. ಆದರೆ, ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗರಿಗೆ ಮಾತ್ರ ಈ ಸತ್ಯ ಬೇಕಾಗಿರಲಿಲ್ಲ. ಅವರಿಗೆ ಬೇಕಾಗಿದ್ದದ್ದು ದೇಶಭಕ್ತಿಯ ಉನ್ಮಾದವೊಂದೇ. ಇಂತಹ ಹಲವು ಆರ್ಥಿಕ ಲೆಕ್ಕಾಚಾರಗಳನ್ನು; ಮಾಹಿತಿಗಳನ್ನು ಮೀರಿ ಸಾಹಸಕ್ಕೆ ಕೈ ಹಾಕಿದ ಅವರು ಬೆಟ್ಟ ಅಗೆದರು. ಸಿಕ್ಕಿಹಾಕಿಕೊಂಡದ್ದು ಮಾತ್ರ ಇಲಿಯೇ! ಆ ಇಲಿಯ ಗಾತ್ರವೇನು? ಅದು ಎಷ್ಟು ಕಪ್ಪುಹಣ ತಿಂದಿದೆ? ಎಂಬ ಅಂಕಿ ಅಂಶಗಳನ್ನು ಪ್ರಕಟಿಸಲು ಮೋದಿಯೇ ನಾಚಿದರು. ಇದುವರೆಗೂ ಸ್ಪಷ್ಟ ಮಾಹಿತಿ ಬಿಡುಗಡೆ ಮಾಡಿಲ್ಲ.

ಕೈಯಲ್ಲಿ ತನ್ನ ಮೂತ್ರಚೀಲ ಹಿಡಿದುಕೊಂಡು ತನ್ನದೇ ಹಣಕ್ಕಾಗಿ ದಿನಪೂರ್ತಿ ಸರತಿ ಸಾಲಿನಲ್ಲಿ ನಿಂತ ನೆನಪಿಗೆ ಇವತ್ತು(08/11/2023) ಏಳನೇ ವಾರ್ಷಿಕೋತ್ಸವ.

ಅವರು ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದ ನಿರ್ಧಾರವನ್ನು 2016 ನವೆಂಬರ್ 8ರಂದು ರಾತ್ರಿ 8 ಗಂಟೆಗೆ ದೂರದರ್ಶನದಲ್ಲಿ ದೇಶವನ್ನ ಉದ್ದೇಶಿಸಿ ಮಾತನಾಡುವ ಮೂಲಕ ಘೋಷಿಸಿದ್ದರು. ಈ ವೇಳೆ ನೋಟು ನಿಷೇಧಕ್ಕೆ ಅವರು ಪ್ರಮುಖವಾಗಿ ಮೂರು ಕಾರಣಗಳನ್ನು ನೀಡಿದ್ದರು. 1. ಭ್ರಷ್ಟಾಚಾರ ನಿಯಂತ್ರಣ, 2. ಕಪ್ಪುಹಣ ತಡೆ, 3. ಭಯೋತ್ಪಾದನೆ ನಿಗ್ರಹ. ಇದಕ್ಕಾಗಿ ತಾವು ನೋಟು ನಿಷೇಧ ನಿರ್ಧಾರ ಕೈಗೊಂಡಿದ್ದಾಗಿ ಹೇಳಿಕೊಂಡಿದ್ದರು. ಆದರೆ ಮೋದಿ ತಮ್ಮ ಇಂತಹ ಆತುರದ ಮೂಲಕ ದೇಶದ 125 ಕೋಟಿ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ನೋಟ್‌ಬ್ಯಾನ್‌ನ ಕುರುಡು ನರ್ತನ ಇನ್ನೂ ಹಾಗೇ ಸಾಗುತ್ತಲಿದೆ.

ಪ್ರಧಾನಿ ಮೋದಿ ತಮ್ಮ ನಿರ್ಧಾರದ ಮೂಲಕ ದೇಶದಲ್ಲಿ ಚಲಾವಣೆಯಲ್ಲಿದ್ದ 500 ಮತ್ತು 1,000 ರೂ. ಮುಖಬೆಲೆಯ 16 ಲಕ್ಷ ಕೋಟಿ ರೂ. ಮೊತ್ತದ ಹಣವನ್ನು ತತ್‌ಕ್ಷಣದಿಂದ ನಿಷೇಧಿಸಿಬಿಟ್ಟರು. ಇದರಿಂದ ಹಳೆಯ ನೋಟುಗಳನ್ನು ಬದಲಿಸಿಕೊಳ್ಳಲು ದೇಶಾದ್ಯಂತ ಬಡವರು, ಮಹಿಳೆಯರು, ಮುದುಕರು ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಯಿತು. ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಹಳೆಯ ನೋಟುಗಳನ್ನು ಬದಲಿಸಿಕೊಳ್ಳುವುದು ಅನಿವಾರ್ಯವಾಯಿತು. ಆಗ ವಯಸ್ಸಾದ, ಅಸಹಾಯಕರಾದ, ಅಮಾಯಕರಾದ ನೂರಕ್ಕೂ ಹೆಚ್ಚು ಜನ ನೋಟ್‌ಬ್ಯಾನ್‌ಗಾಗಿ ಬಲಿಯಾಗಿದ್ದರು. ಈ ಯಾವನ ನರಳಿಕೆಯೂ ದೆಹಲಿ ದೊರೆಯಾದ, ತಮ್ಮನ್ನು ತಾವು ಚೌಕಿದಾರ, ಪ್ರಧಾನ ಸೇವಕ ಎಂದು ಕರೆದುಕೊಳ್ಳುವ ಮೋದಿಯವರ ಕಿವಿಯನ್ನು ತಲುಪಲೇ ಇಲ್ಲ.

ಈ ನಡುವೆ ನೋಟು ಬದಲಿಸಿಕೊಡುವ ಶ್ರೀಮಂತರ ದಲ್ಲಾಳಿಗಳು ಹುಟ್ಟಿಕೊಂಡರು. ಮತ್ತದೇ ಬಡಜನರನ್ನು ಕೂಲಿ ಕೊಟ್ಟು ಬಳಸಿಕೊಂಡರು. ಸ್ವತಃ ಬ್ಯಾಂಕ್ ಅಧಿಕಾರಿಗಳೇ ಉದ್ಯಮಿಗಳು ಮತ್ತು ಕೋಟ್ಯಧಿಪತಿಗಳ ಮನೆಯಿಂದ ನೇರವಾಗಿ ಹಳೆಯ ನೋಟುಗಳನ್ನು ತಂದು ಹೊಸ ನೋಟುಗಳನ್ನು ಕೊಡುವ ಅವ್ಯವಹಾರ ಸೃಷ್ಟಿಮಾಡಿದರು. ಬ್ಯಾಂಕುಗಳಲ್ಲಿ ಹೊಸ ನೋಟುಗಳು ಬಂದಷ್ಟೇ ವೇಗದಲ್ಲಿ ಮಾಯವಾಗುತ್ತಿದ್ದವು. ದಿನನಿತ್ಯದ ಬಳಕೆಗಾಗಿ ಹಳೆ ನೋಟು ತಂದವರಿಗೆ ಹೊಸನೋಟುಗಳು ದೊರಕದಂತಾಯಿತು, ಅವರ ಕುಟುಂಬಗಳ ಹಸಿವು, ಬಾಯಾರಿಕೆಗಳು ಹೆಚ್ಚಾದವು. ಪತ್ರಿಕೆಗಳಲ್ಲಿ ಹಲವು ಸುದ್ದಿಗಳು ಬಿತ್ತರವಾಗಿ, ಹಲವರು ಭ್ರಷ್ಟಾಚಾರಗಳಲ್ಲಿ ಸಿಲುಕಿ ಬಂಧನಕ್ಕೆ ಒಳಗಾಗಿದ್ದರು. ಈ ಮೂಲಕ ಕೆಲ ಸರ್ಕಾರಿ ಕಚೇರಿಗಳಿಗೆ ಮಾತ್ರ ಸೀಮಿತವಾಗಿದ್ದ ಭ್ರಷ್ಟಾಚಾರದ ಪೆಡಂಭೂತ ಬ್ಯಾಂಕುಗಳನ್ನೂ ಪ್ರವೇಶಿಸಿತು. ನೋಟು ನಿಷೇಧಿಸಿದ ಕೆಲವೇ ದಿನಗಳಲ್ಲಿ ಹೊಸ ನೋಟಿನ ನಕಲಿ ನೋಟುಗಳು ಕೂಡ ಪತ್ತೆಯಾಗಿದ್ದವು. ಇದು ಮೋದಿ ಸರ್ಕಾರದ ಬಹುದೊಡ್ಡ ಕೊಡುಗೆಯಾಗಿದೆ.

ನೋಟು ನಿಷೇಧ ವೇಳೆ ಬ್ಯಾಂಕ್ ಮುಂದೆ, ಕೊರೋನ ವೇಳೆ ಸ್ಮಶಾನದ ಮುಂದೆ ಸರದಿ!

ನಂತರದಲ್ಲಿ 2017ರ ಜನವರಿ – ಏಪ್ರಿಲ್ ಅವಧಿಯಲ್ಲಿ ಬರೋಬ್ಬರಿ 15 ಲಕ್ಷ ನಾಗರಿಕರು ಉದ್ಯೋಗ ಕಳೆದುಕೊಂಡಿದ್ದರು. ಇದರ ಜೊತೆಗೆ ಕೇಂದ್ರ ಸರ್ಕಾರ ಹೊಸನೋಟುಗಳ ಮುದ್ರಣಕ್ಕೆ 21,000 ಕೋಟಿ ರೂ.ಗಳನ್ನು ಖರ್ಚುಮಾಡಿ, ದೇಶದ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ದುಃಸ್ಥಿತಿಗೆ ತಳ್ಳಿತ್ತು. ಇಂತಹ ಪ್ರಕ್ಷುಬ್ಧ ಸ್ಥಿತಿಯಲ್ಲಿ ಎಲ್ಲರಿಗೂ ಅಚ್ಚರಿಯೆಂಬಂತೆ, ನಿಷೇಧಿತ ಹಳೆನೋಟುಗಳ ಪೈಕಿ ಶೇ. 99ರಷ್ಟು ಮೊತ್ತದ ಹಣ ಬ್ಯಾಂಕ್‌ಗಳ ಮೂಲಕ ಆರ್‌ಬಿಐಗೆ ಕಾನೂನುಬದ್ಧವಾಗಿ ವಿನಿಮಯವಾದವು. ಈ ಮೂಲಕ ದೇಶದಲ್ಲಿ ಅಸ್ತಿತ್ವದಲ್ಲಿದ್ದ ಕಪ್ಪುಹಣ ಕೂಡ ಹೊಸನೋಟಗಳಾಗಿ ಬದಲಾಗಿಬಿಟ್ಟಿದ್ದವು! ಹಳೆನೋಟುಗಳು ಲೋಡುಗಟ್ಟಲೆ ಆರ್‌ಬಿಐಗೆ ಬಂದು ಬಿದ್ದಿದ್ದವು. ಇದರಿಂದ ಆರ್‌ಬಿಐಗೆ ಹಳೆಯ ನೋಟುಗಳನ್ನು ಎಣಿಸುವುದೋ ಅಥವಾ ಹೊಸ ನೋಟುಗಳನ್ನು ಮುದ್ರಿಸುವುದೋ ಎಂಬ ಗೊಂದಲ ಉಂಟಾಗಿತ್ತು!

ಆರ್‌ಬಿಐ ಗವರ್ನರ್‌ಗೆ ಸಮನ್ಸ್ ಜಾರಿ

ಇಡೀ ದೇಶದ ಆರ್ಥಿಕ ವ್ಯವಸ್ಥೆ ಹಳ್ಳಹಿಡಿಯುತ್ತಿರುವುದನ್ನು ಮನಗಂಡ ಆರ್ಥಿಕ ಸಂಸದೀಯ ಸಮಿತಿ ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಕುರಿತು ವಿವರಣೆ ನೀಡುವಂತೆ ಅಂದಿನ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ನೋಟ್ ರದ್ದು ಪ್ರಕ್ರಿಯೆಯಲ್ಲಿ ಯಾರೆಲ್ಲ ಭಾಗವಹಿಸಿದ್ದರು? ನೋಟ್ ಬ್ಯಾನ್ನಿಂದ ಎಷ್ಟು ಕಪ್ಪು ಹಣ ಸಂಗ್ರಹವಾಗಿದೆ? ಅಂದಿನ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಂಸತ್ತಿನಲ್ಲಿ ನೀಡಿದ ಹೇಳಿಕೆಯ ಸತ್ಯಾಸತ್ಯತೆ ಏನು? ಹೀಗೆ ಹಲವು ಪ್ರಶ್ನೆಗಳನ್ನು ಊರ್ಜಿತ್ ಪಟೇಲರಿಗೆ ಸಮಿತಿ ಕೇಳಿತ್ತು. ನೋಟ್ ಬ್ಯಾನ್ ವಿಚಾರದಲ್ಲಿ ಕೇಂದ್ರ ಹಾಗೂ ಪ್ರತಿಪಕ್ಷಗಳ ವಿರುದ್ಧ ಆರೋಪ ಪ್ರತ್ಯಾರೋಪಗಳು ನಡೆದಿದ್ದವು.

ಅಂದಿನ ಸಂಸದ ವೀರಪ್ಪ ಮೊಯ್ಲಿಯವರ ನೇತೃತ್ವದ ಸಂಸತ್ತಿನ ಆರ್ಥಿಕ ಸ್ಥಾಯಿ ಸಮಿತಿಯ ಮುಂದೆ ವಿವರಣೆ ನೀಡಲು ಹಾಜರಾಗಿದ್ದ ಊರ್ಜಿತ್ ಪಟೇಲ್, ನೋಟ್ ಬ್ಯಾನ್ ಪ್ರಕ್ರಿಯೆ 2016ರ ಜನವರಿಯಿಂದಲೇ ಆರಂಭವಾಗಿತ್ತು ಎಂದು ಹೇಳಿಕೆ ನೀಡಿ, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ನಂತರ ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದ ನಂತರ, ಬ್ಯಾಂಕುಗಳಲ್ಲಿ ಎಷ್ಟು ಪ್ರಮಾಣದ ಹಣ ಜಮಾ ಆಗಿದೆ ಎಂಬ ವಿಷಯ ಗೊತ್ತಿಲ್ಲ. ಕೆಲವು ದಿನಗಳ ಹಿಂದೆ ನವೆಂಬರ್ 7ರಂದು ಕೇಂದ್ರ ಸರ್ಕಾರ ನೋಟು ನಿಷೇಧ ಕುರಿತು ಸಲಹೆ ಕೇಳಿತ್ತು ಎಂದು ಆರ್ಬಿಐ ಗವರ್ನರ್ ಯೂಟರ್ನ್ ಹೊಡೆದಿದ್ದರು. ಇದೇ ವೇಳೆ ಹಾಜರಿದ್ದ ಆರ್ಥಿಕ ಸಚಿವಾಲಯದ ಅಧಿಕಾರಿಗಳು ನವೆಂಬರ್ 8ರ ನಂತರ ಇದುವರೆಗೆ ಎಷ್ಟು ಹೊಸ ನೋಟುಗಳನ್ನು ಮುದ್ರಿಸಲಾಗಿದೆ? ನಿಷೇಧಿಸಲ್ಪಟ್ಟ ನೋಟುಗಳಲ್ಲಿ ಎಷ್ಟು ಪ್ರಮಾಣದ ನೋಟುಗಳು ಬ್ಯಾಂಕಿಗೆ ಜಮಾ ಆಗಿವೆ? ಎಂದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಊರ್ಜಿತ್ ನಿರಾಕರಿಸಿದ್ದರು. ಜೊತೆಗೆ, ಬ್ಯಾಂಕಿಂಗ್ ಕ್ಷೇತ್ರ ಸಹಜ ಸ್ಥಿತಿಗೆ ಮರಳುವುದಕ್ಕೆ ಎಷ್ಟು ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಇದೇ ವೇಳೆ ಸ್ಪಷ್ಟೀಕರಣ ನೀಡಿದ್ದರು.

ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಪ್ರಹಸನದಿಂದಾಗಿ ದೇಶದ ಜಿಡಿಪಿ ದರ ಶೇ.7.93ರಿಂದ ಶೇ.6.50ಗೆ ಕುಸಿಯಿತು. ದೇಶದ ಒಂದು ಅಂಶ ಜಿಡಿಪಿಯು 1.5 ಲಕ್ಷ ಕೋಟಿ ರೂ.ಗೆ ಸಮವಾಗುವುದೆಂಬ ಆರ್ಥಿಕ ಲೆಕ್ಕಾಚಾರವನ್ನು (ಇದು 2016ರ ಅಂದಾಜು) ತಿಳಿದರೆ, ನೋಟ್‌ಬ್ಯಾನ್ ಮಾಡಿದ ನಷ್ಟ ತಿಳಿಯುತ್ತದೆ. ಈ ನಡುವೆ 3-4 ಲಕ್ಷ ಕೋಟಿ ಮೊತ್ತದ ತೆರಿಗೆ ರಹಿತ ಹಣವನ್ನು ಬ್ಯಾಂಕುಗಳಿಗೆ ಜಮಾ ಮಾಡಲಾಗಿದೆ ಎಂದು ವರದಿಯಾಗಿತ್ತು. ಒಟ್ಟು 80 ಸಾವಿರ ಕೋಟಿ ರೂ. ಸಾಲದ ಮೊತ್ತವನ್ನು ಹಳೆ ನೋಟುಗಳ ಮೂಲಕ ಬ್ಯಾಂಕುಗಳಿಗೆ ಮರುಪಾವತಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿತ್ತು. ಜೊತೆಗೆ ಸಹಕಾರಿ ಬ್ಯಾಂಕುಗಳಲ್ಲಿ 16 ಸಾವಿರ ಕೋಟಿ, ಗುಪ್ತ ಖಾತೆಗಳಲ್ಲಿ 25 ಸಾವಿರ ಕೋಟಿ ರೂ. ಮೊತ್ತದ ಹಣ ಠೇವಣಿಯಾಗಿದೆ ಎಂಬ ವಿಚಾರ ಹರಿದಾಡಿತ್ತು. ಈ ನೆಲೆಯಲ್ಲಿ ಮೋದಿಯವರ ನೋಟು ನಿಷೇಧವು ಭಾರತದ ಆರ್ಥಿಕತೆಯನ್ನು ದುರವಸ್ಥೆಗೆ ತಳ್ಳಿದ ಅತ್ಯಂತ ಕೆಟ್ಟ ನಿರ್ಧಾರ ಎಂಬುದು ಸಾಬೀತಾಗುತ್ತದೆ.

ಇನ್ನು ನೋಟು ನಿಷೇಧದಿಂದ ದೇಶದಾದ್ಯಂತ ಸಣ್ಣ ಉದ್ಯಮಗಳು, ಅಸಂಘಟಿತ ವಲಯಗಳು ಸಂಪೂರ್ಣವಾಗಿ ಆಘಾತಕ್ಕೆ ಸಿಲುಕಿದ್ದವು. ಸರದಿ ಸಾಲಿನಲ್ಲಿ ನಿಂತವರು ಸೇರಿದಂತೆ ನೋಟು ನಿಷೇಧ ಕಾರಣದಿಂದಲೇ ದೇಶದಲ್ಲಿ ಸುಮಾರು 120 ನಾಗರಿಕರು ಬಲಿಯಾಗಿದ್ದರು. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನೂ ಒಳಗೊಂಡಂತೆ ಕೇಂದ್ರ ಸರ್ಕಾರದ ಯಾವ ಪ್ರತಿನಿಧಿಯೂ ಒಂದು ಸಣ್ಣ ಕ್ಷಮೆಯನ್ನೂ ಕೋರಲಿಲ್ಲ.

ತಮ್ಮ ಹಣವನ್ನು ವಿನಿಮಯ ಮಾಡಿಕೊಳ್ಳಲು ಸರದಿ ಸಾಲಿನಲ್ಲಿ ನಿಂತು ಜೀವತೆತ್ತ ಜನರ ಸಾವಿನ ನಡುವೆ ಕೂಡ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನೇ ಸಮರ್ಥಿಸಿಕೊಂಡಿತ್ತು. ಇನ್ನು ಪ್ರಧಾನಿ ಮೋದಿಯವರು ಕೂಡ ಕಪ್ಪು ಹಣಕ್ಕೆ ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧವೇ ಮದ್ದು ಅಂದಿದ್ದರು. ಕೇಂದ್ರ ಸಚಿವರು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಈ ವಿಚಾರವಾಗಿ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಿದ್ದವು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ನೋಟು ನಿಷೇಧ ವಿಷಯದಲ್ಲಿ ವಿಪಕ್ಷಗಳು ಪ್ರತಿಭಟನೆಯ ಹಾದಿ ಹಿಡಿದಾಗ, ಕಲಾಪಕ್ಕೆ ಹಾಜರಾಗದ ಪ್ರಧಾನಿ, ಸದನದ ಹೊರಗೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ, ಈ ಕುರಿತು ಆರ್‌ಬಿಐ ಕೊಟ್ಟಿರುವ ಅಂಕಿ -ಅಂಶಗಳು, ಪ್ರಧಾನಿ ಮೋದಿಯವರ ಆಶಯ ಈಡೇರಿಯೇ ಇಲ್ಲ ಅನ್ನೋದಕ್ಕೆ ಸಾಕ್ಷಿಯಾಗಿದ್ದವು.

ನಿಜಕ್ಕೂ ಕಪ್ಪುಹಣ ಬ್ಯಾಂಕುಗಳಿಗೆ ಡಿಪಾಸಿಟ್ ಆಗಲಿಲ್ಲ ಮತ್ತು ಅದನ್ನು ನಾಶಪಡಿಸುವುದಕ್ಕೂ ಸಾಧ್ಯವಾಗಲಿಲ್ಲ. ನೋಟು ನಿಷೇಧ ವಿಚಾರದ ನಂತರ ಕಪ್ಪುಹಣವನ್ನು ನದಿಗೆ ಎಸೆಯಲಾಗುತ್ತೆ ಅಥವಾ ಬೀದಿಬದಿಯ ತಿಪ್ಪೆಗುಂಡಿಗಳಿಗೆ ಎಸೆಯಲಾಗುತ್ತೆ ಅಂತಲೇ ವ್ಯಾಖ್ಯಾನಿಸಲಾಗಿತ್ತು. ಆದರೆ, ಆಗಿದ್ದೇ ಬೇರೆ. ಪ್ರಧಾನಿ ಮೋದಿಯವರ ಕನಸಿನ ಘೋಷಣೆಯಾದ ನೋಟು ನಿಷೇಧ ದೇಶದಲ್ಲಿ ಅಸ್ತಿತ್ವದಲ್ಲಿದ್ದ ಬಹುತೇಕ ಹಳೆಯ ನೋಟುಗಳನ್ನು ಬ್ಯಾಂಕಿನ ಮೂಲಕ ಹೊಸನೋಟಾಗಿಸಲು ಮಾತ್ರ ಬಳಕೆಯಾಗಿತ್ತು. ಒಟ್ಟಾರೆಯಾಗಿ ಕಪ್ಪುಹಣ ಹೊಸ ನೋಟುಗಳಿಗೆ ಪರಿವರ್ತನೆಯಾಗಿತ್ತಷ್ಟೇ. ಈ ಪರಿವರ್ತನೆಗೆ ಬ್ಯಾಂಕ್ ಉದ್ಯೋಗಿಗಳು, ಬಡವರು ಹಾಗೂ ಪ್ರಧಾನಮಂತ್ರಿ ಜನಧನ್ ಖಾತೆಗಳನ್ನು ಬಳಸಿಕೊಳ್ಳಲಾಗಿತ್ತು. ಈ ಮೂಲಕ ಪ್ರಧಾನಿಯವರ ಭ್ರಷ್ಟಾಚಾರವನ್ನು ತಡೆಯುವ ಉದ್ದೇಶ ತಂತಾನೆ ವಿಫಲವಾಗಿತ್ತು.

ಇನ್ನೊಂದು ಸಂಗತಿ ಏನೆಂದರೆ, ದೇಶದಲ್ಲಿ ನೋಟುಗಳ ರೂಪದಲ್ಲಿ ಅಸ್ತಿತ್ವದಲ್ಲಿರೋ ಕಪ್ಪುಹಣದ ಪ್ರಮಾಣ ಕೇವಲ ಶೇ. 15. ಇನ್ನುಳಿದ ಶೇ. 85ರಷ್ಟು ಪ್ರಮಾಣದ ಕಪ್ಪುಹಣ ಆಸ್ತಿ, ಒಡವೆ ಇತ್ಯಾದಿ ಸ್ಥಿರ ಮತ್ತು ಚರ ರೂಪಗಳಲ್ಲಿ ಅಸ್ತಿತ್ವದಲ್ಲಿದೆ. ಆದ್ದರಿಂದ, ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದ ನಿರ್ಧಾರ ಪ್ರಧಾನಿ ಮೋದಿಯವರ ಅತ್ಯುತ್ಸಾಹದ ಮತ್ತು ಅಬ್ಬರದ ಘೋಷಣೆಯಾಗಿತ್ತು ಅನ್ನುವುದಷ್ಟೇ ಸತ್ಯ.

ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದ ನಂತರ, ವಿದೇಶಗಳಿಂದ 500 ಮತ್ತು 1000 ಮುಖಬೆಲೆಯ ನೋಟುಗಳು ಕೊರಿಯರ್‌ಗಳ ಮೂಲಕ ಬಂದಿದ್ದವು. ಗಿಫ್ಟ್ ಪ್ಯಾಕ್‌ಗಳಲ್ಲಿ ಸಣ್ಣ ಆಟದ ಸಾಮಾನುಗಳನ್ನು ಇಟ್ಟು ಅದರ ತುಂಬ ರದ್ದಾದ ನೋಟುಗಳನ್ನು ಕಳುಹಿಸಿದ 500ಕ್ಕೂ ಹೆಚ್ಚು ಪ್ರಕರಣಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾಖಲಾಗಿರುವುದನ್ನು ಅಲ್ಲಿನ ಅಧಿಕಾರಿಗಳು ಹೇಳಿಕೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ತಪಾಸಣೆ ನಿಧಾನವಾಗಿ, ಕೆಲವು ಪ್ರಯಾಣಿಕರ ವಸ್ತುಗಳನ್ನು ಪರಿಶೀಲಿಸಿ ಹಿಂದಿರುಗಿಸಲು ಮೂರರಿಂದ ನಾಲ್ಕು ದಿನಗಳ ಸಮಯ ತೆಗೆದುಕೊಂಡ ಉದಾಹರಣೆಗಳೂ ಬೆಳಕಿಗೆ ಬಂದವು. ಇದಕ್ಕಾಗಿ ಪ್ರಯಾಣಿಕರು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

5,000ಕ್ಕಿಂತ ಕಡಿಮೆ ಮೊತ್ತವನ್ನು ತರಲು ಸರ್ಕಾರದ ಅನುಮತಿಯ ಅಗತ್ಯವಿಲ್ಲ. ಆದರೆ, ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಕೊಂಡೊಯ್ಯಲು ಆರ್‌ಬಿಐನಿಂದ ಅನುಮತಿ ಪಡೆಯಬೇಕಾದ ನಿಯಮ ಮಾಡಲಾಗಿತ್ತು. ಈ ಪ್ರಕರಣಗಳಲ್ಲಿ ಆರ್‌ಬಿಐನಿಂದ ನಿರಾಕ್ಷೇಪಣೆ ಪತ್ರ ಸಿಕ್ಕ ನಂತರವೇ ವಸ್ತು ಮತ್ತು ಹಣವನ್ನು ಹಿಂದಿರುಗಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದರೊಂದಿಗೆ 20,000 ಅಮೆರಿಕನ್ ಡಾಲರ್, 40,000 ವೆನಿಜುವೆಲದ ಕರೆನ್ಸಿಗಳ ಕಳ್ಳಸಾಗಣೆಯನ್ನು ಕೂಡ ಪತ್ತೆ ಮಾಡಲಾಗಿತ್ತು. ಅಮೆರಿಕ ಮತ್ತು ಪಶ್ಚಿಮ ಏಷ್ಯಾದೇಶಗಳಿಂದ ಹೆಚ್ಚಿನ ಕರೆನ್ಸಿ ಆಮದಾಗತೊಡಗಿತ್ತು.

ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ನಿಯಂತ್ರಣ ಸತ್ಯವೇ?

ಇನ್ನು ಭ್ರಷ್ಟಾಚಾರ ನಿಯಂತ್ರಣ ಮತ್ತು ಭಯೋತ್ಪಾದನೆ ನಿಗ್ರಹ ಎಂಬ ಎರಡು ಭರವಸೆಗಳು ಸಹ ಕೇವಲ ಭ್ರಮೆಗಳಾಗಿಯೇ ಉಳಿದುಬಿಟ್ಟವು. ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಣವಾಗದೆ, ಪಾಕ್ ಯೋಧರು ಮತ್ತು ಭಯೋತ್ಪಾದಕರ ಅಟ್ಟಹಾಸದಲ್ಲಿ ಏರಿಕೆಯಾಗುತ್ತಲೇ ಸಾಗಿದೆ. ಈ ಮೂಲಕ ಉದ್ದೇಶಿತ ಯಾವ ಗುರಿಯೂ ನೋಟು ನಿಷೇಧದಿಂದ ಈಡೇರಲಿಲ್ಲ ಎನ್ನುವುದು ಸಾಬೀತಾಗುತ್ತದೆ.

ಖೋಟಾ ನೋಟು ನಿಯಂತ್ರಣವಾಯಿತೇ?

ಖೋಟಾ ನೋಟುಗಳನ್ನು ನಿಯಂತ್ರಿಸುವ ಕ್ರಮದಲ್ಲಿ ಕೂಡ ಆರ್‌ಬಿಐ ವಿಫಲವಾಗಿತ್ತು. ಹೊಸ ಕರೆನ್ಸಿ ಚಲಾವಣೆಗೆ ಬಂದ ಕೆಲವೇ ದಿನಗಳಲ್ಲಿ ಜಮ್ಮು ಕಾಶ್ಮೀರ ಸೇರಿದಂತೆ ಅನೇಕ ರಾಜ್ಯಗಳಲ್ಲಿ 2000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದವು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ನಕಲಿ ನೋಟು ನಿಯಂತ್ರಣದ ಕನಸು ನನಸಾಗಲಿಲ್ಲ.

ದೇಶದಲ್ಲಿ ನೋಟು ನಿಷೇಧದ ನಂತರ ಜನ ಪರದಾಡುವ ಪರಿಸ್ಥಿತಿ ತಲುಪಿದ್ದರು. ದೈನಂದಿನ ವ್ಯವಹಾರಕ್ಕೆ ಇರಲಿ ಜೀವನ ನಡೆಸುವುದಕ್ಕೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಕೂಡ ಹಣವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಚಲಾವಣೆಯಲ್ಲಿದ್ದ ನೋಟುಗಳನ್ನು ನಿಷೇಧಿಸಿ, ಎಟಿಎಂನಿಂದ ಹಣ ಪಡೆಯಲು ದಿನಕ್ಕೆ ನಾಲ್ಕೂವರೆ ಸಾವಿರ ರೂ. ಮಿತಿ ವಿಧಿಸಲಾಗಿತ್ತು. ಬ್ಯಾಂಕಿನಲ್ಲಿ ಕೂಡ ಇದಕ್ಕೆ ನಿರಂತವಾಗಿ ಮಿತಿ ವಿಧಿಸುತ್ತಾ ಅನೇಕ ತಿದ್ದುಪಡಿಗಳನ್ನು ಜಾರಿಗೆ ತರಲಾಗಿತ್ತು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಮತ್ತೊಂದು ಹೇಳಿಕೆ ನೀಡಿದ್ದರು. ದೇಶದ ಆರ್ಥಿಕತೆಯನ್ನು ಡಿಜಿಟಲೈಸ್ ಮಾಡುವ ಉದ್ದೇಶದಿಂದ ನೋಟು ನಿಷೇಧಿಸಿರುವುದಾಗಿ ಸಮರ್ಥಿಸಿಕೊಂಡಿದ್ದರು. ಅವರ ಈ ಹೇಳಿಕೆ ಯುದ್ಧ ಆರಂಭಿಸಿ, ತನ್ನ ಸೇನೆಯಲ್ಲಿ ನಿರಂತರ ಸಾವಿಗೀಡಾಗುವ ಸೈನಿಕರನ್ನು ಕಂಡ ನಾಯಕನ ಹತಾಶೆಯ ಮಟ್ಟದಲ್ಲಿತ್ತು. ಆದರೆ, ಅವರು ತಮ್ಮ ತಪ್ಪು ನಿರ್ಧಾರದಿಂದ ದೇಶದ ನಾಗರಿಕರು ಹಣ ವಿನಿಮಯ ಮಾಡಿಕೊಳ್ಳುವ ಸಲುವಾಗಿ ದಿನಗಟ್ಟಲೇ ಬಿಸಿಲಲ್ಲಿ ನಿಂತದ್ದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ತಮ್ಮ ಗಂಡ, ಮಕ್ಕಳ ಕಣ್ಣಿಗೆ ಕಾಣದಂತೆ ಅಡುಗೆ ಮನೆಯ ಡಬ್ಬಿ ಮತ್ತು ಕಪ್ಪುಗಳಲ್ಲಿದ್ದ, ಗೃಹಿಣಿಯರು ಕಷ್ಟಕಾಲಕ್ಕೆ ಎಂದು ಕೂಡಿಟ್ಟಿದ್ದ ‘ಕಪ್ಪಿನ’ಹಣವನ್ನು ಹೊರಬರುವಂತೆ ನೋಟು ನಿಷೇಧ ಮಾಡಿತ್ತು. ಆದರೆ, ದೊಡ್ಡವರ ಬಳಿ ಇದ್ದ ಕಪ್ಪುಹಣ ಮತ್ತಷ್ಟು ಸದೃಢವಾಯಿತು. ಸ್ವತಃ ಬ್ಯಾಂಕ್ ಅಧಿಕಾರಿಗಳು ಹೊಸ ನೋಟುಗಳನ್ನು ಅಕ್ರಮವಾಗಿ ವಿನಿಮಯ ಮಾಡಲು ನೆರವಾಗಿ ಬಂಧನಕ್ಕೊಳಗಾಗಿ, ಮೋದಿಯವರ ಭ್ರಷ್ಟಾಚಾರ ತಡೆಯುವ ನಡೆಯೇ ಮತ್ತೊಂದು ರೀತಿಯಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾಗಿದ್ದನ್ನು ನಿರೂಪಿಸಿತು.

ಆನ್ ಲೈನ್ ವಹಿವಾಟು ಉತ್ತೇಜನವೆಂಬ ಪ್ರಹಸನ!

ಆನ್‌ಲೈನ್ ವಹಿವಾಟಿಗೆ ಉತ್ತೇಜನ ನೀಡುತ್ತೇನೆ ಎನ್ನುವ ಸರ್ಕಾರ ಆನ್ಲೈನ್ ಬ್ಯಾಂಕಿಂಗ್ ವಹಿವಾಟು, ಎಟಿಎಂಗಳಲ್ಲಿ ಹಣ ಪಡೆಯುವುದಕ್ಕೆ ದುಬಾರಿ ದರ ವಸೂಲಿ ಮಾಡುವುದಕ್ಕೆ ತಡೆ ಹಾಕಲಿಲ್ಲ. ಇತರ ಬ್ಯಾಂಕುಗಳ ಎಟಿಎಂಗಳನ್ನು ಬಳಸಿದರೆ 24 ರೂ. ದಂಡ ತೆರಬೇಕಾದ ಪರಿಸ್ಥಿತಿಯನ್ನು ನಿಯಂತ್ರಿಸುವ ಬದಲು ಪ್ರಧಾನಿ, ಹಣಕಾಸು ಸಚಿವರು, ಆರ್‌ಬಿಐ ಗವರ್ನರ್ ಕಣ್ಮುಚ್ಚಿಕೊಂಡು ಕುಳಿತಿದ್ದರು.

ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಣವಾಯಿತೇ?

ನೋಟ್ ಬ್ಯಾನ್ ವೇಳೆ ಮೋದಿ ಕಂಡ ಇನ್ನೊಂದು ಕನಸು ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಣ. 2016ರ ನವೆಂಬರ್ 16 – 21ರವರೆಗೆ ಒಟ್ಟು 27 ಬಾರಿ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಅಲ್ಲಿಂದ ಮುಂದೆ ಕೂಡ ಕಾಶ್ಮೀರದಲ್ಲಿ ಗಲಭೆಗಳು ನಿರಂತರವಾಗಿ ನಡೆದವು. ನೋಟ್ ನಿಷೇಧಿಸಿದ ನವೆಂಬರ್‌ನಿಂದ ಜನವರಿ ಹೊತ್ತಿಗೆ 100ಕ್ಕೂ ಹೆಚ್ಚು ಬಾರಿ ಕದನ ವಿರಾಮವನ್ನು ಪಾಕಿಸ್ತಾನ ಉಲ್ಲಂಘಿಸಿತ್ತು.

ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದ (ಅಂದಿನ) ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಇದೇ ವಿಷಯವನ್ನು ಪ್ರಸ್ತಾಪಿಸಿ, ನೋಟ್ ಬ್ಯಾನ್ ಆದ ನಂತರ ಗಡಿಯಲ್ಲಿ ಸಂಭವಿಸಿರುವ ಸೈನಿಕರ ಸಾವಿನ ಪ್ರಮಾಣಕ್ಕಿಂತ ನೋಟ್ ಬ್ಯಾನ್ ದುಷ್ಪರಿಣಾಮದಿಂದ ಸತ್ತ ಜನರ ಸಂಖ್ಯೆ ಹೆಚ್ಚಾಗಿದೆ ಎಂದಿದ್ದರು. ದೇಶಭಕ್ತರು ಈ ಹೇಳಿಕೆಯ ಹಿಂದಿನ ಕಾಳಜಿಯನ್ನು ಅರಿಯುವ ಬದಲು, ಗುಲಾಂ ನಬಿ ಆಜಾದ್ ಅವರ ವಿರುದ್ಧ ಮುಗಿಬಿದ್ದಿದ್ದರು. ಇಲ್ಲಿ ಸೈನಿಕರ ಸಾವನ್ನು ಗುಲಾಂ ನಬಿ ಆಜಾದ್ ಅವರೇನು ಬಯಸಿರಲಿಲ್ಲ. ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದಿಂದಾಗಿ ಜನಸಾಮಾನ್ಯರಿಗೆ ಆಗಿರುವ ತೊಂದರೆಗಳನ್ನು ಪರಿಣಾಮಕಾರಿಯಾಗಿ ಹೇಳುವ ಸಲುವಾಗಿ ಈ ಹೋಲಿಕೆಯನ್ನು ಅವರು ನೀಡಿದ್ದರು. ಆದರೆ ಆಡಳಿತ ಪಕ್ಷದ ಸದಸ್ಯರು ರಾಜ್ಯಸಭೆ ಕಲಾಪವನ್ನು ನಾಲೆಗೆ ತಳ್ಳಿಬಿಟ್ಟಿದ್ದರು. ಇನ್ನು ನೋಟ್ ಬ್ಯಾನ್ ನಂತರ ಜನರಿಗೆ ಎದುರಾಗಿರುವ ಸಮಸ್ಯೆಗಳನ್ನು ಕುರಿತು ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ತಮಗೆ ಬೆದರಿಕೆ ಇದೆ ಎಂದು ಕಣ್ಣೀರು ಹರಿಸಿದ್ದರು.

  • ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ

Leave a Reply