ಹುಬ್ಬಳ್ಳಿ: ಮೇ ತಿಂಗಳಿಂದ ಆಗಸ್ಟ್ ಒಳಗಾಗಿ ರಾಜ್ಯಾದ್ಯಂತ ಉಪ ವಿಭಾಧಿಕಾರಿ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 32 ಸಾವಿರ ತಕರಾರು ಅರ್ಜಿಗಳ ಪೈಕಿ 16 ಸಾವಿರ ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಹುಬ್ಬಳ್ಳಿ – ಧಾರವಾಡ ಜಿಲ್ಲೆಯಲ್ಲೂ ಉತ್ತಮ ಪ್ರಗತಿ ಸಾಧಿಸಲಾಗಿದೆ. ಅಧಿಕಾರಿಗಳ ಕಾರ್ಯ ಕ್ಷಮತೆ ನಿಜಕ್ಕೂ ಶ್ಲಾಘನೀಯ ಎಂದು ಸಚಿವ ಕೃಷ್ಣ ಬೈರೇಗೌಡ ಮೆಚ್ಚುಗೆ ಸೂಚಿಸಿದರು.
ಹುಬ್ಬಳ್ಳಿ-ಧಾರವಾಡ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ಬೆಳಗಾವಿ ವಿಭಾಗದ ಮೊದಲ ಸಭೆಯಲ್ಲೇ ತಹಶೀಲ್ದಾರ್ ಹಾಗೂ ಎಸಿ-ಡಿಸಿ ನ್ಯಾಯಾಲಯದಲ್ಲಿ ಬಾಕಿ ಇರುವ ಎಲ್ಲಾ ತಕರಾರು ಅರ್ಜಿಗಳನ್ನೂ ಶೀಘ್ರ ವಿಲೇವಾರಿಗೆ ಸೂಚಿಸಲಾಗಿತ್ತು. ಅದರಂತೆ ರಾಜ್ಯಾದ್ಯಂತ ಶೇ.50 ರಷ್ಟು ಅರ್ಜಿಗಳನ್ನು ಈಗಾಗಲೇ ವಿಲೇ ಮಾಡಲಾಗಿದೆ. ಅರ್ಜಿ ವಿಲೇ ವಿಚಾರದಲ್ಲಿ ಹುಬ್ಬಳ್ಳಿ-ಧಾರವಾಡವೂ ಉತ್ತಮ ಸಾಧನೆ ಮಾಡಿದೆ. ಈ ಮೂಲಕ ಸಾರ್ವಜನಿಕರು ದಿನನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆಯದಂತೆ ಸುಮಗ ಮತ್ತು ಸರಳ ಆಡಳಿತ ನೀಡಲಾಗುತ್ತಿದೆ. ಇದು ನಿಜಕ್ಕೂ ಉತ್ತಮ ಬೆಳೆವಣಿಗೆಯಾಗಿದ್ದು, ಶೀಘ್ರದಲ್ಲೇ ಶೇ.100 ರಷ್ಟು ಅರ್ಜಿ ವಿಲೇ ಮುಂದಾಗಬೇಕು” ಎಂದು ಅಧಿಕಾರಿಗಳಿಗೆ ಕರೆ ನೀಡಿದರು.
ಹುಬ್ಬಳ್ಳಿ-ಧಾರವಾಡದ ಬಾಕಿ ಅರ್ಜಿಗಳು?: ಪ್ರಗತಿ ಪರಿಶೀಲನಾ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಅರ್ಜಿ ವಿಲೇವಾರಿ ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ, “ಇತರ ಜಿಲ್ಲೆಗಳಿಗೆ ಹೋಲಿಸಿದರೆ, ತಕರಾರು ಅರ್ಜಿಗಳ ವಿಲೇ ವಿಚಾರದಲ್ಲಿ ಹುಬ್ಬಳ್ಳಿ-ಧಾರವಾಡ ಉತ್ತಮ ಸಾಧನೆ ಮಾಡಿದೆ. ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಒಟ್ಟು 24 ತಕರಾರು ಅರ್ಜಿಗಳಿದ್ದು, ಈ ಪೈಕಿ 17 ಅರ್ಜಿಗಳು ಮಾತ್ರ ಬಾಕಿ ಇದೆ. ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ 138 ಅರ್ಜಿಗಳಿದ್ದು, ಈ ಪೈಕಿ 62 ಅರ್ಜಿಗಳು ಮಾತ್ರ ಬಾಕಿ ಇದೆ.
ಇನ್ನೂ ತಹಶೀಲ್ದಾರ್ ನ್ಯಾಯಾಲಯಗಳ ಪೈಕಿ ಹುಬ್ಬಳ್ಳಿ ನಗರದಲ್ಲಿ 2 ಅರ್ಜಿಗಳು ಮಾತ್ರ ಬಾಕಿ ಇದೆ. ಉಳಿದಂತೆ ಹುಬ್ಬಳ್ಳಿ ಗ್ರಾಮೀಣ 8, ಧಾರವಾಡ 35, ಅಳ್ನಾವರ 6, ಕಲಘಟಗಿ 4, ಕುಂದಗೋಳ 38, ನವಲಗುಂದ 06 ಹಾಗೂ ಅಣ್ಣಿಗೇರಿ 13 ಅರ್ಜಿಗಳು ಮಾತ್ರ ಬಾಕಿ ಇದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ” ಎಂದು ಅವರು ಪ್ರಶಂಶಿಸಿದರು.
ಅತಿಕ್ರಮಣದ ವಿರುದ್ಧ ಕ್ರಮಕ್ಕೆ ಸೂಚನೆ: ಸಭೆಯಲ್ಲಿ ಅತಿಕ್ರಮಣದ ಬಗ್ಗೆಯೂ ಚರ್ಚೆಯಾಯಿತು. ಈ ವೇಳೆ ಅಧಿಕಾರಿಗಳು ಹುಬ್ಬಳ್ಳಿ-ಧಾರವಾಡದಲ್ಲಿ ಅತಿಕ್ರಮಣಕ್ಕೊಳಗಾದ ಪ್ರದೇಶ ಮಾಹಿತಿ ನೀಡಲಾಯಿತು. ಧಾರವಾಡ ತಾಲ್ಲೂಕಿನಲ್ಲಿ ಒಟ್ಟು 10.05 ಎಕರೆ ಕೆರೆ ಪ್ರದೇಶ ಒತ್ತುವರಿಯಾಗಿದೆ. ಹುಬ್ಬಳ್ಳಿ ನಗರ ತಾಲ್ಲೂಕಿನಲ್ಲಿ 48.09 ಎಕರೆ , ಕುಂದಗೋಳ ತಾಲ್ಲೂಕಿನಲ್ಲಿ 17.30 ಎಕರೆ, ಅಣ್ಣಿಗೇರಿಯಲ್ಲಿ 2.24 ಎಕರೆ ಹಾಗೂ ಕಲಘಟಗಿಯಲ್ಲಿ 02.20 ಎಕರೆ ಸರ್ಕಾರಿ ಜಮೀನು ಹಾಗೂ ಕೆರೆ ಪ್ರದೇಶ ಒತ್ತುವರಿಯಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಈ ವೇಳೆ ಸೂಚನೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಶೀಘ್ರದಲ್ಲೇ ಒತ್ತುವರಿ ತೆರವಿಗೆ ಸೂಚಿಸಿದರು.
ಕುಡಿಯುವ ನೀರಿಗೆ ಸಮಸ್ಯೆ ಇಲ್ಲ: ಆಗಸ್ಟ್ 22 ರಿಂದ 15 ದಿನಗಳ ಕಾಲ ನವಿಲು ತೀರ್ಥ ಜಲಾಶಯದಿಂದ MRBC ಕಾಲುವೆ ಮುಖಾಂತರ ಕುಡಿಯುವ ನೀರನ್ನು ಬಿಡಲಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ನವಲಗುಂದ ತಾಲೂಕಿನ 45 ಗ್ರಾಮಗಳ 45 ಕೆರೆಗಳನ್ನು, ಹುಬ್ಬಳ್ಳಿ ತಾಲೂಕಿನ 7 ಗ್ರಾಮಗಳ 7 ಕೆರೆಗಳನ್ನು, ಕುಂದಗೋಳ ತಾಲೂಕಿನ 16 ಗ್ರಾಮಗಳ 16 ಕೆರೆಗಳನ್ನು ಈಗಾಗಲೇ ತುಂಬಿಸಿಕೊಳ್ಳಲಾಗಿದೆ, ಹೀಗಾಗಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲಾ ಎಂದು ಅಧಿಕಾರಿಗಳು ಸಭೆಯಲ್ಲಿ ಸಚಿವರಿಗೆ ಮಾಹಿತಿ ನೀಡಿದರು.
ಅಕ್ಟೋಬರ್ 1 ರೊಳಗೆ ಇ-ಆಫೀಸ್ ಗೆ ಸೂಚನೆ: ಹುಬ್ಬಳ್ಳಿ-ಧಾರವಾದಲ್ಲಿ ಅಧಿಕಾರಿಗಳು ಈವರೆಗೆ ಇ-ಆಫೀಸ್ ಜಾರಿಗೊಳಿಸದಿರುವ ಬಗ್ಗೆಯೂ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಅವರು, “ಜನರ ಶೀಘ್ರ ಮತ್ತು ಸರಳ ಆಡಳಿತ ನೀಡಲು ಇ-ಆಫೀಸ್ ಸಹಕಾರಿ. ಹೀಗಾಗಿ ಎಲ್ಲಾ ಕಡತಗಳನ್ನೂ ಇ-ಆಫೀಸ್ ಮೂಲಕವೇ ವಿಲೇವಾರಿ ಮಾಡಬೇಕು ಎಂಬುದು ನಮ್ಮ ಮಹತ್ವಾಕಾಂಕ್ಷೆಯ ಯೋಜನೆ. ಆದರೆ, ಈ ವರೆಗೆ ಜಿಲ್ಲೆಯಲ್ಲಿ ಇ-ಆಫೀಸ್ ಜಾರಿಯಾಗದಿರುವುದು ದುರಾದೃಷ್ಟಕರ” ಎಂದರು.
“ಜಿಲ್ಲಾಧಿಕಾರಿಗಳು ಆಗಸ್ಟ್-15ರಿಂದಲೇ ಇ-ಆಡಳಿತವನ್ನು ಪಾಲಿಸಬೇಕು ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ಗಳು ಸೆಪ್ಟೆಂಬರ್ 01 ರಿಂದ ಇ-ಆಫೀಸ್ ಆಡಳಿತಕ್ಕೆ ಮುಂದಾಗಬೇಕು ಎಂದು ಈಗಾಗಲೇ ಹೇಳಿದ್ದರೂ ಸಹ ಹುಬ್ಬಳ್ಳಿ-ಧಾರವಾಡದ ಅಧಿಕಾರಿಗಳು ಸೂಚನೆಯನ್ನು ಪಾಲಿಸಿಲ್ಲ. ಇದಕ್ಕೆ ಕಾರಣವೇನು? ಇಂಟರ್ ನೆಟ್ ಸಮಸ್ಯೆ ಸೇರಿದಂತೆ ಬೇರೆ ಯಾವುದೇ ಸಮಸ್ಯೆ ಇದ್ದರೂ ಸಹ ಶೀಘ್ರದಲ್ಲೇ ಪರಿಹರಿಸಬೇಕು. ಅಕ್ಟೋಬರ್ 1 ರಿಂದಲಾದರೂ ಅಧಿಕಾರಿಗಳು ಇ-ಆಡಳಿತಕ್ಕೆ ಮುಂದಾಗಬೇಕು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಾಡ ಕಚೇರಿ-ಗ್ರಾಮ ಆಡಳಿತಾಧಿಕಾರಿ ಕಚೇ ದಿಢೀರ್ ಭೇಟಿ, ಪರಿಶೀಲನೆ: ಕಲಘಟಗಿ ತಾಲೂಕಿನ ವಿವಿಧ ಗ್ರಾಮ ಆಡಳಿತ ಅಧಿಕಾರಿ-ನಾಡ ಕಚೇರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ದಿಢೀರ್ ಭೇಟಿ ನೀಡಿದರು. ಸಚಿವರ ಅನಿರೀಕ್ಷಿತ ಭೇಟಿಯಿಂದಾಗಿ ಅಧಿಕಾರಿಗಳು ಕೆಲಕಾಲ ತಬ್ಬಿಬ್ಬಾದರು. ಧುಮ್ಮವಾಡ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿದ ಸಚಿವರು ವಿವಿಧ ಕಡತ, ದಾಖಲಾತಿ, ಕಂಪ್ಯೂಟರ್ ಎಂಟ್ರಿ ಪರಿಶೀಲಿಸಿ ಮಾಹಿತಿ ಪಡೆದರು.
ಹಿರೇಹೊನ್ನಳ್ಳಿ ಗ್ರಾಮ ಆಡಳಿತ ಅಧಿಕಾರಿ ಕಚೇರಿಯ ಟಪಾಲು ಶಾಖೆಗೆ ತೆರಳಿ ಕೂಲಂಕುಷ ಪರಿಶೀಲನೆ ನಡೆಸಿದ ಸಚಿವರು, ಈ ವೇಳೆ ಸಾರ್ವಜನಿಕರ ಅರ್ಜಿಯೊಂದು ತಿಂಗಳುಗಟ್ಟಲೆ ಕಳೆದರೂ ವಿಲೇವಾರಿಯಾಗದ್ದನ್ನು ಗಮನಿಸಿ ಸಂಬಂಧಿತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, “ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎಂಬುದು ನಮ್ಮ ಸಂಕಲ್ಪ. ಈ ಹಿನ್ನೆಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಕಚೇರಿಗಳಿಗೆ ಭೇಟಿ ನೀಡಲಾಗುತ್ತಿದೆ.
ಜನರು ಸಣ್ಣ ಪುಟ್ಟ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡುವಂತಾಗಬಾರದು. ಜನರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸರ್ಕಾರವೇ ಮನೆ ಬಾಗಿಲಿಗೆ ಬರಲಿದೆ. ಕಂದಾಯ ಇಲಾಖೆಯ ಪಹಣಿ ಸಮಸ್ಯೆ, ಮಾಶಾಸನ ಸಮಸ್ಯೆ, ಜಾತಿ, ಆದಾಯ ಪ್ರಮಾಣ ಪತ್ರಗಳು ಸೇರಿದಂತೆ ವಿವಿಧ ರೀತಿಯ ಸೇವೆಗಳನ್ನು ನೀಡುವಲ್ಲಿ ವಿಳಂಬದಂತಹ ಹತ್ತು ಹಲವು ಸಮಸ್ಯೆಗಳನ್ನು ಆಲಿಸಬೇಕು, ಸ್ಥಳದಲ್ಲಿಯೇ ಇತ್ಯರ್ಥಗೊಳಿಸುವಂತಾಗಬೇಕು” ಎಂದು ತಿಳಿಸಿದರು.
ಬರ ಘೋಷಣೆಯಲ್ಲಿ ಗೊಂದಲ ಇಲ್ಲ: ಪ್ರಗತಿ ಪರಿಶೀಲನಾ ಸಭೆಗೆ ಮುನ್ನವೇ ಬರಗಾಲ ಘೋಷಣೆ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದ ಸಚಿವರು, “ಬರಗಾಲ ವಿಚಾರದಲ್ಲಿ ನಮಗೆ ಯಾವುದೇ ಗೊಂದಲ ಇಲ್ಲ. ಆದರೆ, ಕೇಂದ್ರ ಸರ್ಕಾರ ರೈತರನ್ನು ಗೊಂದಲಕ್ಕೀಡು ಮಾಡಿದೆ. ನಾವು ನಿನ್ನೆ ಸಂಪುಟ ಉಪ ಸಮಿತಿ ಸಭೆ ನಡೆಸಿ ಬರಗಾಲ ಘೋಷಣೆಗೆ ಸಿಎಂ ಗೆ ಶೀಫಾರಸು ಮಾಡಿದ್ದೇವೆ. 195 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ.
ಆದರೆ, ಕೇಂದ್ರ ಸರ್ಕಾರದ “ಬರ ಮಾನದಂಡ” ಗಳು ಸಾಕಷ್ಟು ಕಠಿಣವಾಗಿದ್ದು ರಾಜ್ಯಗಳ ಪಾಲಿಗೆ ಕಗ್ಗಂಟಾಗಿದೆ. ಈ ಬಗ್ಗೆ ಜುಲೈ 1 ನೇ ವಾರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅವರ ಪತ್ರಕ್ಕೆ ಈವರೆಗೆ ಉತ್ತರ ಬಂದಿಲ್ಲ. ಪ್ರಧಾನಿ ಭೇಟಿಗೆ ಅವಕಾಶ ಕೇಳಲಾಗಿದ್ದು, ಆದಕ್ಕೂ ಅವಕಾಶ ಕಲ್ಪಿಸಿಲ್ಲ. ಅಂತಹ ಸವಾಲಿನ ಮಧ್ಯೆಯೂ ನಾವು ಬರ ಘೋಷಣೆಗೆ ಸಿದ್ದತೆ ಮಾಡಿದ್ದೇವೆ” ಎಂದರು. ಅಲ್ಲದೆ, “ಕೇಂದ್ರ ಸರ್ಕಾರ ಪ್ರತಿಷ್ಠೆ ಬಿಟ್ಟು ಬರ ಮಾನದಂಡಗಳನ್ನು ಬದಲಿಸಬೇಕು” ಎಂದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್ ಕುಮಾರ್ ಉಪಸ್ಥಿತರಿದ್ದರು.




