ಬೆಂಗಳೂರು: ಪವಿತ್ರ ಅಮರನಾಥ ಯಾತ್ರೆಗೆ ತೆರಳಿರುವ ಕನ್ನಡಿಗರ ಪೈಕಿ 80 ಮಂದಿ ಕನ್ನಡಿಗರು ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರೆಲ್ಲರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, ಅಮರನಾಥ ಯಾತ್ರೆಗೆ ಗದಗದಿಂದ ತೆರಳಿರುವ 23 ಮಂದಿ ಸೇರಿದಂತೆ ಒಟ್ಟು 80 ಮಂದಿ ಕನ್ನಡಿಗರು ಇದೀಗ ಸಂಕಷ್ಟದಲ್ಲಿದ್ದಾರೆ. ಅಮರನಾಥ ಮಂದಿರದಿಂದ 6 ಕಿಮೀ ದೂರದಲ್ಲಿರುವ ಪಂಚತಾರ್ನಿ ಟೆಂಟ್‍ನಲ್ಲಿ ಇವರನ್ನು ಇರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ರಕ್ಷಣಾ ಕಾರ್ಯ ಕೈಗೊಂಡು, ಎಲ್ಲರನ್ನೂ ಸುರಕ್ಷಿತವಾಗಿ ವಾಪಸು ಕರೆತರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ನೆರವಿಗಾಗಿ ಕಂದಾಯ ಇಲಾಖೆಯ ಅಧಿಕಾರಿ ರಶ್ಮಿ ನಿಯೋಜನೆ ಮಾಡಲಾಗಿದೆ. ಅವರು ಅಲ್ಲಿನ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದು, ಸದ್ಯ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿಯಿದೆ ಎಂದು ತಿಳಿಸಿದ್ದಾರೆ.
ಭಾರಿ ಮಳೆ ಹಿನ್ನೆಲೆ ಹೆಲಿಕಾಪ್ಟರ್ ಮತ್ತು ವಿಮಾನದ ಮೂಲಕ ನೆರವಿಗೆ ಧಾವಿಸಲು ಸಾಧ್ಯವಿಲ್ಲ. ಬೆಟ್ಟ ಗುಡ್ಡಗಳ ಕಡಿದಾದ, ದುರ್ಗಮ ಪ್ರದೇಶದಲ್ಲಿ ಯಾತ್ರಿಕರು ಸಿಲುಕಿದ್ದು, ಮಳೆ ಕಡಿಮೆಯಾದ ಬಳಿಕ ರಕ್ಷಣಾ ಕಾರ್ಯ ನಡೆಸಲಾಗುತ್ತದೆ. ಉತ್ತರಾಖಂಡದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಕರ್ನಾಟಕದ ಯಾತ್ರಿಕರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಅವರೊಂದಿಗೆ ರಶ್ಮಿ ಆವರು ಸಂಪರ್ಕದಲ್ಲಿದ್ದಾರೆ. ಯಾತ್ರಿಗಳ ಜೊತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದೆ. ಊಟ, ಉಪಹಾರ ಯಾವುದೇ ಸಮಸ್ಯೆ ಇಲ್ಲ. ಕೂಡಲೇ ಅಲ್ಲಿಂದ ರಕ್ಷಣೆ ಮಾಡಲಾಗುತ್ತೆ ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಮಾಹಿತಿ ನೀಡಿದ್ದಾರೆ.



