ಮಂಗಳೂರು: ಪ್ರತಿಯೊಬ್ಬರ ಬದುಕಿನಲ್ಲಿ ಅಪದ್ಭಾಂಧವರಾಗಿ ಬರುವ ಆಟೋರಿಕ್ಷಾ ಚಾಲಕರು ತಮ್ಮ ಜೀವನದ ಬಹುಪಾಲು ಸಮಯವನ್ನು ಜನರ ಸೇವೆಗಾಗಿ ಮೀಸಲಿಟ್ಟು, ಅಂತಿಮವಾಗಿ ಹಿಂತಿರುಗಿ ನೋಡಿದಾಗ ಅವರ ಶ್ರಮಕ್ಕೆ ಯಾವುದೇ ಪ್ರತಿಫಲವಿಲ್ಲವಾಗಿದೆ ಎಂದು ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಹೇಳಿದರು.
ನಗರದಲ್ಲಿಂದು ಜರುಗಿದ ಆಟೋ ರಿಕ್ಷಾ ಚಾಲಕರ ದ. ಕ.ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರ್ಷಕ್ಕೆ ಸುಮಾರು 3000 ಕೋಟಿಯಷ್ಟು ಹಣ ಸರಕಾರದ ಬೊಕ್ಕಸಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಆಟೋರಿಕ್ಷಾ ಚಾಲಕರು ತೆರಿಗೆ ಕಟ್ಟುತಿದ್ದರೂ ವಾಪಸ್ ಅವರಿಗೆ ಯಾವುದೇ ಸವಲತ್ತುಗಳಿಲ್ಲ. ಇಂತಹ ಸಂದರ್ಭದಲ್ಲಿ ರಿಕ್ಷಾ ಚಾಲಕರ ಉತ್ತಮ ಬದುಕಿಗಾಗಿ ಕಲ್ಯಾಣ ಮಂಡಳಿ ರಚನೆ ಮಾಡಬೇಕು ಮಾತ್ರವಲ್ಲ ಕನಿಷ್ಟ 1000 ಕೋಟಿ ಹಣವನ್ನು ಮೀಸಲಿಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ CITU ಜಿಲ್ಲಾ ಉಪಾಧ್ಯಕ್ಷ ಬಿ ಎಂ ಭಟ್ ರವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿತ್ಯ ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಾ ಸಾರಿಗೆ ರಂಗದ ಕಾರ್ಮಿಕರು ತೀವ್ರ ಸಂಕಷ್ಟಗೊಳಗಾಗಿದ್ದಾರೆ. ಅದರಲ್ಲೂ ಆಟೋರಿಕ್ಷಾ ಚಾಲಕರ ಬವಣೆಯಂತೂ ಹೇಳತೀರದಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ FKARDU ಜಿಲ್ಲಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಆಟೋರಿಕ್ಷಾ ಚಾಲಕರನ್ನು ತಮ್ಮ ದಾಳವನ್ನಾಗಿಸುತ್ತಾ ಅವರ ಬದುಕಿನ ಪ್ರಶ್ನೆಗಳನ್ನು ಕೇಳುವವರೇ ಇಲ್ಲವಾಗಿದೆ. ಮುಂಬರುವ ದಿನಗಳಲ್ಲಿ ರಿಕ್ಷಾ ಚಾಲಕರ ಬಲಿಷ್ಠ ಚಳುವಳಿಯನ್ನು ಕಟ್ಟಲು ಎಲ್ಲರೂ ಒಂದಾಗಬೇಕಿದೆ ಎಂದು ಹೇಳಿದರು.
ವೇದಿಕೆಯಲ್ಲಿ DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಹಿರಿಯ ರಿಕ್ಷಾ ಚಾಲಕ ಮುಖಂಡ ಕೃಷ್ಣಪ್ಪ ಗೌಡ, ಯುವ ಕಾರ್ಮಿಕ ನಾಯಕ ಬಿ ಕೆ ಇಮ್ತಿಯಾಜ್ ಉಪಸ್ಥಿತರಿದ್ದರು.
ಬಳಿಕ ಸಮಾವೇಶವು ನೂತನ ಸಮಿತಿಯನ್ನು ಆಯ್ಕೆಗೊಳಿಸಿತು. ಫೆಡರೇಶನ್ ನ ಜಿಲ್ಲಾ ಗೌರವಾಧ್ಯಕ್ಷರಾಗಿ ಬಿ ಎಂ ಭಟ್, ಅಧ್ಯಕ್ಷರಾಗಿ ಸುನಿಲ್ ಕುಮಾರ್ ಬಜಾಲ್, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಅನ್ಸಾರ್, ಖಜಾಂಚಿಯಾಗಿ ವಿಶ್ವನಾಥ್ ಶೆಟ್ಟಿ ಸೇರಿದಂತೆ 16 ಪದಾಧಿಕಾರಿಗಳು ಹಾಗೂ 17 ಕಾರ್ಯಕಾರಿ ಸಮಿತಿ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು.




