ಸಾಮಾಜಿಕ ಜವಾಬ್ದಾರಿ ಎಲ್ಲರಲ್ಲೂ ಇದ್ದರೆ ಜನಪರ ಬದಲಾವಣೆ ಸಾಧ್ಯ: ಸಿದ್ದರಾಮಯ್ಯ

3 years ago

#People #change #possible #everyone #social #responsibility #Siddaramaiah

ಬೆಂಗಳೂರು: ಸಮಾಜದಲ್ಲಿ ಅವಕಾಶ ವಂಚಿತರು ಮತ್ತು ಧ್ವನಿ ಇಲ್ಲದವರನ್ನು ಮುಖ್ಯವಾಹಿನಿಗೆ ತರುವುದು ತಮ್ಮ ಸಂಕಲ್ಪವಾಗಿದ್ದು ಈ ನಿಟ್ಟಿನಲ್ಲಿ ನನ್ನ ಪ್ರಯತ್ನ ನಿರಂತರವಾಗಿರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪತ್ರಿಕಾ ದಿನಾಚರಣೆ ಅಂಗವಾಗಿ, ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತ್ತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಜವಾಬ್ದಾರಿ ಪತ್ರಕರ್ತರಿಗೆ ಮಾತ್ರವಲ್ಲ ಸಾರ್ವಜನಿಕ ಕ್ಷೇತ್ರದಲ್ಲಿರುವ ಎಲ್ಲರಲ್ಲೂ ಇದ್ದರೆ ಜನಪರ ಬದಲಾವಣೆ ಸಾಧ್ಯ ಎಂದು ಪ್ರತಿಪಾದಿಸಿದರು.

ಧ್ವನಿ ಇಲ್ಲದವರಿಗೆ ಧ್ವನಿ ಕೊಡುವುದೇ ಪತ್ರಿಕಾ ವೃತ್ತಿಯ ಜವಾಬ್ದಾರಿ, ಉದ್ದೇಶ, ಆಶಯ, ಮಹಾತ್ಮ ಗಾಂಧಿ, ಅಂಬೇಡ್ಕರ್ ಅವರೂ ಪತ್ರಕರ್ತರಾಗಿ ಪತ್ರಿಕಾ ವೃತ್ತಿಗೆ ಮಾದರಿ ರೂಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಇವತ್ತಿನ ಬಹಳಷ್ಟು ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುವುದು ನನ್ನ ಭಾವನೆ. ಪತ್ರಿಕಾ ವೃತ್ತಿಯ ಆಶಯಕ್ಕೆ ತಕ್ಕಂತೆ ಇದ್ದೇವಾ, ಇಲ್ಲವಾ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ ಎಂದರು.

ಇವತ್ತು ಮಾಧ್ಯಮಗಳಲ್ಲಿ  ಸತ್ಯ ನ್ಯಾಯ ಸಿಗತ್ತೆ ಎನ್ನುವ ಪರಿಸ್ಥಿತಿ ಈಗ ಇಲ್ಲ. ನನ್ನ ಬಗ್ಗೆ ಸುಳ್ಳು ಸುದ್ದಿ ಬರೆದರೂ ನಾನು ಯಾಕಪ್ಪಾ ಸುಳ್ಳು ಬರಿತೀಯ ಅಂತ ಕೇಳಲ್ಲ. ಜನ ಸಾಮಾನ್ಯರು ಇತರೆ ಮೂಲಗಳಿಂದ ಸತ್ಯ ತಿಳಿದುಕೊಳ್ಳುವಷ್ಟು ಸಮರ್ಥರಿದ್ದಾರೆ ಎಂದರು.

ಸಮಾಜದಲ್ಲಿ ಇನ್ನೂ ಶೇ. 25 ರಷ್ಟು ಮಂದಿಗೆ ಶಿಕ್ಷಣ ಸಿಕ್ಕಿಲ್ಲ. ಆರ್ಥಿಕ ಅಸಮಾನತೆ ಇನ್ನೂ ಹೆಚ್ಚಾಗಿದೆ. ಹೀಗಾಗಿ ಅವಕಾಶ ವಂಚಿತರನ್ನು ಮುಖ್ಯವಾಹಿನಿಗೆ ತರುವ, ಸಮಾಜದ ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದೇನೆ‌ ಎಂದು ತಿಳಿಸಿದರು.

ಸಾಮಾಜಿಕ ಅಸಮಾನತೆ ಹಿಂದಿನಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಹೀಗಾಗಿ ಸಮಾಜದ ಬಹುಪಾಲು ಮಂದಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಮತ್ತು ತಾರತಮ್ಯಕ್ಕೆ ಬಲಿಯಾಗಿದ್ದಾರೆ. ಇದಕ್ಕಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಅನುಷ್ಠಾನಗೊಳ್ಳುವ ಹಿಂದಿನ ದಿನ ತಾವು ಮಾಡಿದ ಐತಿಹಾಸಿಕ ಭಾಷಣದಲ್ಲಿ, “ಆರ್ಥಿಕ-ಸಾಮಾಜಿಕ ಸ್ವಾತಂತ್ರ್ಯ ಸಿಗದೆ ಕೇವಲ ದೇಶಕ್ಕೆ ಆಡಳಿತಾತ್ಮಕ, ರಾಜಕೀಯ ಸ್ವಾತಂತ್ರ್ಯ ಸಿಕ್ಕರೆ ಅಸಮಾನತೆಗೆ ಬಲಿಯಾದ ಜನ ಮುಂದೊಂದು ದಿನ ಈ ಸ್ವಾತಂತ್ರ್ಯ ಸೌಧವನ್ನು ಧ್ವಂಸ ಮಾಡಿಬಿಡಬಹುದು” ಎಂದಿದ್ದರು. ದುಡಿಯುವ ವರ್ಗಗಳು ಹಸಿವಿನಿಂದ ಮಲಗಿದರೂ ಪರ್ವಾಗಿಲ್ಲ, ಅನ್ನಭಾಗ್ಯ ಮಾತ್ರ ಜಾರಿ ಮಾಡಬಾರದು ಎನ್ನುವ ಹೊಟ್ಟೆ ತುಂಬಿದವರ ಮನಸ್ಥಿತಿ ಸಮಾಜ ವಿರೋಧಿಯಾದದ್ದು ಎಂದು ವಿವರಿಸಿದರು.

ಜನರ ಜೇಬಿನಲ್ಲಿ ಹಣ ಇದ್ದರೆ ಮಾತ್ರ ದೇಶದ ಆರ್ಥಿಕತೆ ಬೆಳವಣಿಗೆ ಕಾಣುತ್ತದೆ. ಈ ಕಾರಣಕ್ಕೇ ನಮ್ಮ ಸರ್ಕಾರ ದುಡಿಯುವ ಜನರ ಜೇಬಿನಲ್ಲಿ ಹಣ ಇರುವ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಇದನ್ನು ವಿರೋಧಿಸುವ ಬಿಜೆಪಿಯವರ ಮನಃಸ್ಥಿತಿ ಸಮಾಜ ವಿರೋಧಿಯಾದದ್ದು. ಹೀಗಾಗಿ ಪತ್ರಿಕಾ ವೃತ್ತಿಯಲ್ಲಿರುವವರು ಬಡವರ ಪರವಾದ, ಜನರ ಪರವಾದ ಯೋಜನೆಗಳು ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.

ಹಿರಿಯ ಪತ್ರಕರ್ತೆ  ಡಾ.ಆರ್.ಪೂರ್ಣಿಮಾ ಪತ್ರಕರ್ತರ ಸಾಮಾಜಿಕ ಜವಾಬ್ದಾರಿ ಕುರಿತು ಉಪನ್ಯಾಸ ನೀಡಿದರು. ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು. 15 ಕ್ಕೂ ಹೆಚ್ಚು ಹಿರಿಯ ಪತ್ರಕರ್ತರು ಮತ್ತು ಛಾಯಾಗ್ರಾಹಕರುಗಳನ್ನು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.

Leave a Reply