ಆದಿವಾಸಿ ಕುಟುಂಬಗಳಿಗೆ ಹಕ್ಕುಪತ್ರ ಮತ್ತು ಮನೆಗಳನ್ನು ನೀಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಧಾರವಾಡ: ಅಣ್ಣಿಗೇರಿಯಲ್ಲಿ ಅರ್ಧ ಶತಮಾನದಿಂದ ನಿರಾಶ್ರಿತರಾಗಿ ವಾಸಿಸುತ್ತಿರುವ ಅಣ್ಣಿಗೇರಿಯ 90 ಕುಟುಂಬಗಳಿಗೆ ಹಕ್ಕುಪತ್ರ ಮತ್ತು ಮನೆಗಳನ್ನು ನೀಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಆದಿವಾಸಿ ಕುಟುಂಬಗಳಿಗೆ ಹಕ್ಕುಪತ್ರ ಮತ್ತು ಮನೆಗಳನ್ನು ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ತಮ್ಮ ನೇತೃತ್ವದ ನಿಯೋಗ ಅಣ್ಣಿಗೇರಿ ಆದಿವಾಸಿ ಹರಣಿ ಶಿಕಾರಿ ಆದಿವಾಸಿಗಳ ಹಾಡಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ ಮಾತನಾಡಿದ ಅವರು, ಎಸ್ಡಿಪಿಐ ಪಕ್ಷ ನಿಮ್ಮ ಪರವಾಗಿ ಹೋರಾಟ ರೂಪಿಸಲು ತಯಾರಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ನಿಮ್ಮ ಮನವಿಯನ್ನು ತಲುಪಿಸುವುದರೊಂದಿಗೆ ನ್ಯಾಯಕ್ಕಾಗಿ ನಿಮ್ಮ ಜೂತೆ ನಿಲ್ಲಲಿದೆ ಎಂದು ಭರವಸೆ ನೀಡಿದರು.
ನವಲಗುಂದ ರಸ್ತೆಯ ರೇಲ್ವೆ ಗೇಟ್ ಹತ್ತಿರ ಜನಾಬ ಮಾಬೂಸಾಬ ಮಹ್ಮದಸಾಬ ಗಾಡಗೋಳಿ ಇವರ ಸರ್ವೇ ನಂ.: 1070/4 ಕ್ಷೇತ್ರ 4 ಎಕರೆ ಜಮೀನು ಖರೀದಿಸಲು ಆಶ್ರಯ ಸಮಿತಿಯಲ್ಲಿ ನಿರ್ಧರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವರ್ಷಗಳೇ ಕಳೆದಿವೆ ಆದರೆ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಆಗಸ್ಟ್ 9 ರ ವಿಶ್ವ ಬುಡಕಟ್ಟು ಜನರ ದಿನಕ್ಕೆ ಅರ್ಥ ಬರಬೇಕಾದರೆ ಎಲ್ಲಾ ಆದಿವಾಸಿ/ಅಲೆಮಾರಿಗಳು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ (ಕೆಎಸ್ಟಿಆರ್ಐ) ಹರಣ ಶಿಕಾರಿ ಬುಡಕಟ್ಟು ಜನಾಂಗದ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಆಗ್ರಹಿಸಿದರು.
ಅರ್ಧ ಶತಮಾನದಿಂದ ಮೂಲಭೂತ ಸೌಕರ್ಯ ವಂಚಿತ, ಪ್ರಾಣಿಗಳಂತೆ ಬದುಕುತ್ತಿರುವ ಆದಿವಾಸಿ ಹರಣಿ ಶಿಕಾರಿ ಆದಿವಾಸಿಗಳ ಹಾಡಿಗೆ ನಿಯೋಗ ಭೇಟಿ ನೀಡಿದ ವೇಳೆ, ಜೈ ಭೀಮ ಅಖಿಲ ಭಾರತ ದಲಿತ ಹೋರಾಟ ಸಮಿತಿ ಅಧ್ಯಕ್ಷ ಧರ್ಮರಾಜು ಹರಣಿ ಶಿಕಾರಿ ಹಾಗೂ ಉಪಾಧ್ಯಕ್ಷ ಬಸಣ್ಣ, ಹರಣ ಶಿಕಾರಿ “ನಮ್ಮನ್ನು ದರಿದ್ರರು ಅಂತ ಹೇಳಿ ನಿಮ್ಗೆ ಜಾಗ, ಮನೆ ಕೊಡಲ್ಲ, ಊರು ಬಿಟ್ಟು ಹೋಗಿ ಎಂದು ದೌರ್ಜನ್ಯ ಎಸಗುತ್ತಿದ್ದಾರೆ” ಇದರ ಬದಲು ನಮಗೆ “ವಿಷ ಕೊಟ್ಟು ಬಿಡಿ “ಎಂದು ನೋವನ್ನು ತೋಡಿಕೊಂಡರು.
ನಿಯೋಗದಲ್ಲಿ ಎಸ್ಡಿಪಿಐ ಧಾರವಾಡ ಜಿಲ್ಲಾಧ್ಯಕ್ಷ ಮಕ್ತುಮ್ ಹುಸೇನ್ ಹೊಸಮನಿ, ಉಪಾಧ್ಯಕ್ಷ ಸಮೀರ್ ಬೆಟ್ಟೆಗೇರಿ, ಪ್ರದಾನ ಕಾರ್ಯದರ್ಶಿ ಗಪೂರ್ ಕುರಹಟ್ಟಿ ಇದ್ದರು.




