ವೈದ್ಯಕೀಯ ಪದವಿ ಇಲ್ಲದೇ ವೈದ್ಯವೃತ್ತಿ ಮಾಡುತ್ತಿದ್ದ 6 ಜನರಿಗೆ 1 ಲಕ್ಷ ರೂ. ದಂಡ

1 year ago

ವೈದ್ಯಕೀಯ ಪದವಿ ಇಲ್ಲದೇ ವೈದ್ಯವೃತ್ತಿ ಮಾಡುತ್ತಿದ್ದ 6 ಜನರಿಗೆ 1 ಲಕ್ಷ ರೂ. ದಂಡ: ಪ್ರಶಾಂತ್ ಕುಮಾರ್ ಮಿಶ್ರಾ 

ಬಳ್ಳಾರಿ: ಜಿಲ್ಲೆಯಲ್ಲಿ ವೈದ್ಯಕೀಯ ಪದವಿ ವೃತ್ತಿ ಪಡೆಯದೇ ವೈದ್ಯಕೀಯ ಸೇವೆ ನೀಡುವ ನಕಲಿ ವೈದ್ಯರ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ರಡಿ ದಂಡ ವಿಧಿಸುವ, ಅಗತ್ಯವೆನಿಸಿದಲ್ಲಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ಕಾನೂನಾತ್ಮಕ ಕ್ರಮ ಜರುಗಿಸಬೇಕು ಎಂದು ಕೆಪಿಎಮ್‌ಇ ಕಾಯ್ದೆಯ ಅಧ್ಯಕ್ಷರು ಆದ ಜಿಲ್ಲಾಧಿಕಾರಿ  ಪ್ರಶಾಂತ್ ಕುಮಾರ್ ಮಿಶ್ರಾ ಸೂಚಿಸಿದರು.



ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ಕೆಪಿಎಮ್‌ಇ ಕಾಯ್ದೆ ನೋಂದಣಿ ಮತ್ತು ಕುಂದು ಕೊರತೆಗಳ ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಯಾರಾದರು ಅಧಿಕೃತ ವೈದ್ಯಕೀಯ ಪದವಿ ಪಡೆಯದೇ ವೈದ್ಯ ವೃತ್ತಿ ಮಾಡುವವರ ಮನೆ, ಮಳಿಗೆ, ಇತರೆ ಯಾವುದೇ ರೀತಿಯ ಕಟ್ಟಡಗಳಿಗೆ ಆರೋಗ್ಯಾಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಬೇಕು. ಅಂತಹವರಿಗೆ ಬಾಡಿಗೆ ಕಟ್ಟಡ ನೀಡಿದ್ದಲ್ಲಿ ಕಟ್ಟಡ ಮಾಲೀಕರ ವಿರುದ್ಧ ಕೆಪಿಎಮ್‌ಇ ಕಾಯ್ದೆಯಡಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಅಧಿಕೃತ ವೈದ್ಯಕೀಯ ಪದವಿ ಪಡೆದ ವೈದ್ಯರ ಬಳಿ ತಪಾಸಣೆ ಮಾಡಿಸಲು ಸೂಚಿಸಬೇಕು. ಇದರಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳನ್ನು ತಡೆಯಬಹುದಾಗಿದೆ ಎಂದರು.

ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಅನಧಿಕೃತವಾಗಿ ವೈದ್ಯ ವೃತ್ತಿ ಮಾಡುತ್ತಿರುವವರು ಕಂಡುಬಂದಲ್ಲಿ ಅವರ ವೈದ್ಯಕೀಯ ಪದವಿಯ ಮಾಹಿತಿ ಹೊಂದಿ ಚಿಕಿತ್ಸೆ ಪಡೆಯಬೇಕು. ನಕಲಿ ವೈದ್ಯರು ಎಂದು ಕಂಡುಬಂದರೆ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯಕ್ಕೆ ದೂರು ನೀಡಿದರೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ರ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಬಳ್ಳಾರಿ ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ವೈದ್ಯವೃತ್ತಿ ಮಾಡುತ್ತಿದ್ದ ನಕಲಿ ವೈದ್ಯ ಬಸವರಾಜ್ ವಿರುದ್ಧ ಮೋಕ ಪೋಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸಲು ಸೂಚಿಸಿದ ಅವರು, ಕಪ್ಪಗಲ್ಲು ಗ್ರಾಮದ ರಾಜಣ್ಣ, ರೆಹಮಾನ್, ಶೇಕ್ಷಾವಲಿ, ಗುರು ಪ್ರಕಾಶ್, ಮಹಾದೇವ್ ಮತ್ತು ಸಿರುಗುಪ್ಪ ತಾಲ್ಲೂಕಿನ ಕೆ.ಸೂಗೂರು ಗ್ರಾಮದ ಬೆಂಚಿ ಕ್ಯಾಂಪ್‌ನ ಕೆ.ಚಂದ್ರಶೇಖರ್ ಸೇರಿದಂತೆ ಒಟ್ಟು 6 ಜನರ ವಿರುದ್ದ ತಲಾ 1 ಲಕ್ಷ ದಂಡ ವಿಧಿಸಲು ಸೂಚಿಸಿದರು.

Leave a Reply