ಯಡಿಯೂರಪ್ಪ ಮನೆ ಮೇಲೆ ದಾಳಿ ಮಾಡಿದ್ದು ಯಾರ “ಸಂತೋಷ”ದ ಕಾರಣಕ್ಕೆ?: ಕೆಪಿಸಿಸಿ

3 years ago

ಬೆಂಗಳೂರು: ಗೃಹಸಚಿವರ ತವರು ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಮನೆಗೆ ರಕ್ಷಣೆ ಇಲ್ಲವೆಂದರೆ ಏನರ್ಥ ಎಂದು ಕೆಪಿಸಿಸಿ ಪ್ರಶ್ನಿಸಿದೆ.

ಸರ್ಕಾರದ ಮೀಸಲಾತಿ ಹಂಚಿಕೆ ವಿರೋಧಿಸಿ ನಿನ್ನೆ ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಮಾಜಿ ಸಿಎಂ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಗುಪ್ತಚರ ಇಲಾಖೆ ಯಾವ ಬಿಲದಲ್ಲಿ ಗೆಣಸನ್ನು ಹುಡುಕುತ್ತಿತ್ತು? Araga Jnanendra ಅವರೇ? ಇದು ಕಾನೂನು ಸುವ್ಯವಸ್ಥೆಯ ವೈಫಲ್ಯವೇ ಅಥವಾ ವ್ಯವಸ್ಥಿತ ಷಡ್ಯಂತ್ರವೇ? ಎಂದು ಪ್ರಶ್ನಿಸಿದೆ.

ಮೀಸಲಾತಿ ಅವಾಂತರಕ್ಕು, ಇದಕ್ಕೆ ಹೊಣೆಗಾರರಲ್ಲದ ಬಿ.ಎಸ್ ಯಡಿಯೂರಪ್ಪ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೂ ಅವರ ಮನೆ ಮೇಲೆ ದಾಳಿ ಮಾಡಿದ್ದು ಯಾರ “ಸಂತೋಷ”ದ ಕಾರಣಕ್ಕೆ? ಎಂದಿದೆ.

BS Yediyurappa ಅವರು ಮುಖ್ಯಮಂತ್ರಿಯೂ ಅಲ್ಲ,
BJP Karnataka ದ ಅಧ್ಯಕ್ಷರೂ ಅಲ್ಲ,
ಸರ್ಕಾರದ ನಿರ್ಧಾರಗಳಲ್ಲಿ ಅವರ ಪಾತ್ರವಿಲ್ಲ,
ಹೀಗಿದ್ದರೂ ಸರ್ಕಾರ ಸೃಷ್ಟಿಸಿದ ಅವಾಂತರಕ್ಕೆ ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ಆಗಿದ್ದೇಕೆ? ಎಂದಿದೆ.

ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆಗಳು ಕಣ್ಮುಚ್ಚಿ ಕುಳಿತಿದ್ದೇಕೆ ಎನ್ನುವುದೇ ಯಕ್ಷಪ್ರಶ್ನೆ. ಯಡಿಯೂರಪ್ಪ ಅವರ ಮನೆಯ ಮೇಲಿನ ದಾಳಿಯ ಹಿಂದೆ ಬಿಜೆಪಿಯ “ಸಂತೋಷ ಕೂಟ”ದ ಕೈವಾಡ ಇರುವುದು ನಿಶ್ಚಿತ ಎಂದಿದೆ.

ಕಾನೂನು ಸುವ್ಯವಸ್ಥೆ ಉಲ್ಲಂಘನೆಯ ಪ್ರಕರಣಗಳು, ಗಲಭೆಗಳು, ಘರ್ಷಣೆಗಳೆಲ್ಲದರ ಬೀಜ ಬಿತ್ತುವುದು ಗೃಹಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲೇ ಏಕೆ? ತನ್ನ ತವರಿನಲ್ಲಿ, ಅದರಲ್ಲೂ ಮಾಜಿ ಸಿಎಂ ಮನೆ ಬಳಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದ ಅರಗ ಜ್ಞಾನೇಂದ್ರ ಅವರದ್ದು ಹೊಣೆಗೇಡಿತನವೋ ಅಥವಾ “ಸಂತೋಷ ಕೂಟ”ವನ್ನು ಮೆಚ್ಚಿಸುವ ಷಡ್ಯಂತ್ರವೋ? ಎಂದು ಪ್ರಶ್ನಿಸಿದೆ.

Leave a Reply