ಬೇರೆ ದೇಶಗಳಲ್ಲಿ ಪಿಎಂ ಕೇರ್ಸ್, ಗೌತಮ್ ಅದಾನಿ ಪ್ರಕರಣಗಳು ನಡೆದಿದ್ದರೆ ಪ್ರಧಾನಿ ಅಧಿಕಾರ ತ್ಯಾಗಕ್ಕೆ ಒತ್ತಾಯ ಬರುತ್ತಿತ್ತು: ಯತೀಂದ್ರ ಸಿದ್ದರಾಮಯ್ಯ

3 years ago

ಬೆಂಗಳೂರು: ದೇಶದಲ್ಲಿ ಎಂದೂ ಕಾಣದ ಭ್ರಷ್ಟಾಚಾರ ನಡೆಯುತ್ತಿದೆ, ಹಾಡಹಾಗಲೆ ಮೋದಿ ಸರ್ಕಾರ ಹಾಗು ಅದನ್ನು ಸಾಕುತ್ತಿರುವ ಕೆಲ ಸಿರಿವಂತ ಬಂಡವಾಳಶಾಹಿಗಳು ಕಾನೂನು, ನಿಯಮಾವಳಿಗಳ ಕಟ್ಟುಪಾಡೆ ಇಲ್ಲದಂತೆ ವ್ಯವಸ್ಥೆಯನ್ನು ಹಾಳುಗೆಡುವುತ್ತಿದ್ದಾರೆ. ಪ್ರಜಾತಾಂತ್ರಿಕ ಸಂಸ್ಥೆಗಳು ಬಲಹೀನವಾಗಿ ಮೂಕಪ್ರೇಕ್ಷಕರಂತಿವೆ. ಇತ್ತೀಚಿನ ಈ ಎರಡು ಘಟನೆಗಳೇ ಸಾಕ್ಷಿ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಪಿಎಂ ಕೇರ್ಸ್ ಫಂಡ್ ವಿವಾದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪ್ರಧಾನಿ ಸ್ಥಾನ ಹಾಗು ಹೆಸರು ಬಳಸಿ ಕೊರೋನ ಸಂಕಷ್ಟಕ್ಕಾಗಿ ನಿಧಿ ಸ್ಥಾಪಿಸಿ, ಜನರ ತೆರಿಗೆ ಹಣದಿಂದ ಕೂಡಿದ ಸಂಸದರ ಅಭಿವೃದ್ಧಿ ನಿಧಿಯಿಂದ ದೇಣಿಗೆ ಪಡೆದು, ಸರ್ಕಾರಿ ನೌಕರರ ಸಂಬಳದಿಂದಲೂ ಬಲವಂತವಾಗಿ ದೇಣಿಗೆ ಪಡೆದು, ಪ್ರಧಾನಿ ಕಛೇರಿಯ ಅಧಿಕಾರಿಗಳಿಂದ ನಿರ್ವಹಿಸಲ್ಪಟ್ಟು ಈಗ ಮೋದಿ, ಪಿಎಂ ಕೇರ್ಸ್ ನಿಧಿ ಸರ್ಕಾರದ ಪರಿಧಿಗೆ ಬರದು, ಅದೊಂದು ದತ್ತಿ ಸಂಸ್ಥೆ ಎಂದು ದೆಹಲಿ ನ್ಯಾಯಾಲಯಕ್ಕೆ ತಿಳಿಸುತ್ತಿದ್ದಾರೆ. ಈ ನಿಧಿಗೆ ಎಷ್ಟು ದೇಣಿಗೆ ಬಂತು, ಅದರಲ್ಲಿ ಎಷ್ಟು ಹಣವನ್ನು ಕೊರೋನಾ ಸಂಕಷ್ಟದಲ್ಲಿ ಬಳಸಲಾಯಿತು, ಉಳಿದ ಹಣ ಏನಾಗಿದೆ ಎಂಬ ಮಾಹಿತಿ ನೀಡಲು ಮೋದಿ ನಿರಾಕರಿಸುತ್ತಿದ್ದಾರೆ ಎಂದಿದ್ದಾರೆ.

ಇನ್ನು ಮೋದಿ ಅಧಿಕಾರ ಹಿಡಿದ ಮೇಲೆ ಅವರ ಆಪ್ತ ಗೌತಮ್ ಅದಾನಿಯ ಆಸ್ತಿ 230% ರಷ್ಟು ಹೆಚ್ಚಾಗಿದೆ. ಈತನ ಒಡೆತನದ ಕಂಪನಿಗಳು ದೊಡ್ಡ ಪ್ರಮಾಣದ ಮಾರುಕಟ್ಟೆ ಅವ್ಯವಹಾರದಲ್ಲಿ ತೊಡಗಿದೆ ಎಂದು ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಗುರುತರವಾದ ಆರೋಪ ಮಾಡಿದ್ದರೂ ಆತನ ಮೇಲೆ ಯಾವುದೇ ತನಿಖೆ ನಡೆಯುತ್ತಿಲ್ಲ ಎಂದಿದ್ದಾರೆ.

ಇಂತಹ ಹಗರಣಗಳ ತನಿಖೆ ಮಾಡಬೇಕಾದ SEBI, ED ಮುಂತಾದ ಸಂಸ್ಥೆಗಳು ಕೈಕಟ್ಟಿ ಕುಳಿತಿವೆ. ಇಷ್ಟು ಬೃಹತ್ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದ್ದರೂ ಗಟ್ಟಿ ಧ್ವನಿಯಲ್ಲಿ ಇದರ ವಿರುದ್ದ ಮಾಧ್ಯಮಗಳು ಮಾತನಾಡುತ್ತಿಲ್ಲ. ಜನಾಕ್ರೋಶವೂ ಸಾಕಷ್ಟು ಕಾಣುತ್ತಿಲ್ಲ ಎಂದಿದ್ದಾರೆ.

ಬೇರೆ ದೇಶಗಳಲ್ಲಿ ಇಂತಹ ಗಂಭೀರ ಹಗರಣಗಳ ಆರೋಪ ಪ್ರಧಾನಿಗಳು ಎದುರಿಸಿದ್ದರೆ ಅಲ್ಲಿನ ವ್ಯವಸ್ಥೆ ಆತನನ್ನು ಅಧಿಕಾರ ತ್ಯಾಗ ಮಾಡುವಂತೆ ಮಾಡುತ್ತಿತ್ತು, ಆದರೆ ನಮ್ಮ ದೇಶದಲ್ಲಿ ಅದಾಗದೆ ಇರುವುದು ನಮ್ಮ ವ್ಯವಸ್ಥೆ ಎಷ್ಟು ಶಿಥಿಲಗೊಂಡಿದೆ ಎಂದು ತೋರಿಸುತ್ತಿದೆ ಎಂದಿದ್ದಾರೆ.

Leave a Reply