ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆ ನಿರ್ಮಿಸಲು ರಾಜ್ಯ ಸರ್ಕಾರದ ಯೋಜನೆ

2 years ago

ಬೆಂಗಳೂರು: ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ 2500 ಕಿ.ಮೀ. ಉದ್ದದ ಮಾನವ ಸರಪಳಿಯನ್ನು ರಾಜ್ಯಾದ್ಯಂತ ನಿರ್ಮಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ರಾಜ್ಯ ಸರ್ಕಾರ  ಯೋಜನೆ ರೂಪಿಸಿದೆ.

ರಾಜ್ಯದ ಗಡಿ ಜಿಲ್ಲೆಗಳಾದ  ಬೀದರ್ ಜಿಲ್ಲೆಯಿಂದ ಚಾಮರಾಜನಗರದವರೆಗೂ ಸಮಾಜದ ಎಲ್ಲಾ ವರ್ಗದ ಜನರೂ ಸೇರಿದಂತೆ ಸುಮಾರು 2.500ಲಕ್ಷ ಮಂದಿ ಕೈಕೈ ಹಿಡಿದು ರಾಜ್ಯದುದ್ದಕ್ಕೂ ವಿಶ್ವದ ಬೃಹತ್ ಮಾನವ ಸರಪಳಿ ನಿರ್ಮಿಸಲಿದ್ದಾರೆ.

ಈ ಮೂಲಕ ಅಸ್ಪ್ರಶ್ಯತೆ ನಿವಾರಣೆ ಮಾಡಿ ಭ್ರಾತೃತ್ವ ಬೆಳೆಸುವ ಪ್ರಯತ್ನ ಮಾಡಿ ಸಮಾನತೆಯ ಹೆಜ್ಜೆ ಇಡಲಿದ್ದಾರೆ. ಇದೇವೇಳೆ ಸಂವಿಧಾನದ ಮಹತ್ವ ಸಾರುವ ಪ್ರಸ್ತಾವನೆ ಓದುವುದು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಗಾರಿಕೆ ನೆನಪಿಸುವ ಮಾತುಗಳನ್ನಾಡಿ ಜಾಗೃತಿ ಮೂಡಿಸಲಿದ್ದಾರೆ. ಜೊತೆಗೆ  ಸುತ್ತಮುತ್ತ ಪ್ರದೇಶದಲ್ಲಿ  ಗಿಡಗಳನ್ನೂ ನೆಡಲಿದ್ದಾರೆ. ಈ ಮೂಲಕ ಅಂದು ರಾಜ್ಯಾದ್ಯಂತ 10ಲಕ್ಷ ಗಿಡಗಳನ್ನು  ಹಾಕಲಾಗುತ್ತದೆ.

ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ರಾಜ್ಯ 32 ಇಲಾಖೆಗಳ ಸುಮಾರು 8ಲಕ್ಷಕ್ಕೂ ಅಧಿಕ ಸಿಬ್ಬಂದಿ ಇಡೀ ಕಾರ್ಯಕ್ರಮಕ್ಕಾಗಿ ಶ್ರಮಿಸುತ್ತಿದ್ದು, ಸಚಿವ ಡಾ.ಮಹಾದೇವಪ್ಪ ಹೆಚ್ಚಿನ ಆಸಕ್ತಿ ವಹಿಸಿ ಸಿದ್ಧತೆಗಳನ್ನು  ನಡೆಸಿದ್ದಾರೆ.

ಈ ವಿನೂತನ ಮತ್ತು ಬೃಹತ್ ಕಾರ್ಯಕ್ರಮಕ್ಕೆ  ಲಂಡನ್ ನ ವಿಶ್ವ ದಾಖಲೆ ಪರಿಶೀಲಿಸುವ ತಂಡ ಆಗಮಿಸಲಿದ್ದು, ಎಲ್ಲವೂ ದಾಖಲೆಗಳ ನಿಯಮದಂತಿದ್ದರೆ, ಕಾರ್ಯಕ್ರಮವನ್ನು ವಿಶ್ವದಾಖಲೆಗೆ ಸೇರಿಸಲಿದೆ. ಇದೆಲ್ಲದಕ್ಕೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ತಮ್ಮದೇ ವಿಶ್ವ ಸುಧಾರಿತ ತಂತ್ರಜ್ಞಾನದ ಜಾಲದೊಂದಿಗೆ ಸಿದ್ಧತೆ ನಡೆಸಿದ್ದಾರೆ.

ಈ ವಿಶೇಷ ಮಾನವ ಸರಪಳಿ ಪ್ರತಿಜಿಲ್ಲೆ, ತಾಲೂಕು ಹಾಗೂ ಪ್ರಮುಖ ಗ್ರಾಮಗಳಲ್ಲಿ ಹಾದು  ಹೋಗುವ  ಹೆದ್ದಾರಿಗಳಲ್ಲಿ ಹಾದು ಹೋಗಲಿದ್ದು, ಎಲ್ಲಾ ಹಳ್ಳಿಗಳಲ್ಲೂ ಇದೊಂದು ಹಬ್ಬದಂತೆ ಆಚರಿಸುವಂತೆ ಮಾಡಲು ಸರಕಾರ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದೆ.  ಈ ಮೂಲಕ ಕಳೆದೆರಡು ತಿಂಗಳಿನಿಂದ ಬರೀ ರಾಜಕೀಯ ಜಿದ್ದಾಜಿದ್ದಿ  ಹೇಳಿಕೆಗಳು  ಮತ್ತು ಅಧಿಕಾರದ ಅಳಿವು, ಉಳಿವುಗಳ ಗಳ ಚರ್ಚೆಯಿಂದ ಮಂಕಾಗಿದ್ದ ಸರಕಾರಕ್ಕೆ ಹೊಸ ಉತ್ಸಾಹದೊಂದಿಗೆ ವಿಶ್ವದ ಗಮನ ಸೆಳೆಯಲು ಮುಂದಾಗಿದೆ.
3 ಕೋಟಿ ನಾಗರಿಕರು ಭಾಗವಹಿಸುವ ಸಾಧ್ಯತೆ: ವಿಶ್ವಸಂಸ್ಥೆ 2007ರ ಸೆ.15 ಅನ್ನು ವಿಶ್ವ ಪ್ರಜಾಪ್ರಭುತ್ವದ ದಿನ ಎಂದು ಘೋಷಿಸಿತ್ತು. ಇದರ ಅಂಗವಾಗಿ ಅನೇಕ ದೇಶಗಳಲ್ಲಿ ಅಂದು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿವೆ. ಆದರೆ ಇದರ ಮೌಲ್ಯವನ್ನು ಹೆಚ್ಚು ಪ್ರಚಾರ ಮಾಡಿ ವಿಶ್ವ ಮಟ್ಟದಲ್ಲಿ ಸಾರುವ ಪ್ರಯತ್ನಕ್ಕೆ ಸರಕಾರ ಈ ಹಿಂದೆಯೇ  ಕೈ ಹಾಕಿತ್ತು. ಹೀಗಾಗಿ ಕಳೆದ ವರ್ಷ 2023 ಸೆ.15ರಂದು ರಾಜ್ಯಾದ್ಯಂತ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಕಾರ್ಯಕ್ರಮ ನಡೆಸಲಾಗಿತ್ತು. ಇದರಲ್ಲಿ ಸುಮಾರು 2.3 ಕೋಟಿ ಭಾಗವಹಿಸಿ ಸರಕಾರಕ್ಕೆ ಆಶ್ಚರ್ಯ ಉಂಟು ಮಾಡಿದ್ದರು. ಇದರಿಂದ ಸ್ಫೂರ್ತಿ ಪಡೆದ ಸರಕಾರ ಈ ಬಾರಿ  2.50 ಲಕ್ಷ ಜನ ರಾಜ್ಯದುದ್ದಕ್ಕೂ ನಿಂತು ಸಂವಿಧಾನ ಓದುವಂತೆ ಮಾಡುತ್ತಿದೆ. ಹೀಗಾಗಿ ಇದರಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು 3 ಕೋಟಿ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಇದರಿಂದ ಇಡೀ ವಿಶ್ವ ಕರ್ನಾಟಕದ ಕಡೆ ನೋಡುವಂತಾಗಿದೆ ಎಂದು  ಹಿರಿಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಜಿಲ್ಲೆಗಳಲ್ಲಿ ಮಾನವ ಸರಪಳಿ ಹೇಗೆ?: ಸೆ.15ರ ಬೆಳಗ್ಗೆ 9 ಗಂಟೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗದಲ್ಲಿ ಸಂವಿಧಾನದ ಪೀಠಿಕೆ ಓದುವ ಮೂಲಕ ಚಾಲನೆ ನೀಡಲಿದ್ದಾರೆ. ಆನಂತರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಗಳ ಸಮಸ್ತ ಜನ ಸಂವಿಧಾನ ಪೀಠಿಕೆ ಓದಿ ಮಾನವ ಸರಪಳಿ ನಿರ್ಮಿಸುತ್ತಾರೆ.  ಆ ಪ್ರದೇಶದಲ್ಲೇ ಗಿಡ ನೆಡುತ್ತಾರೆ. ಹೀಗಾಗಿ ಪ್ರತಿ ಜಿಲ್ಲೆ ತಾಲೂಕುಗಳಲ್ಲೂ  ಕಾರ್ಯಕ್ರಮ ನಡೆಯಲಿದ್ದು,  ದಕ್ಷಿಣ ಕನ್ನಡದಲ್ಲಿ ಕೆಲವರು ಸಮುದ್ರದಲ್ಲೇ ನಿಂತು ಮಾನವ ಸರಪಳಿ ರಚಿಸಲಿದ್ದಾರೆ.

ಇದೇರೀತಿ ವೇಷಭೂಷಣ ಹಾಗೂ ವಿಶೇಷ ಸಂದೇಶ ಸಾರುವ ವಿಭಿನ್ನ ಪ್ರಯತ್ನ ಮಾಡಿದ ಜಿಲ್ಲೆಗೆ ಪ್ರಶಸ್ತಿಯನ್ನೂ ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ತಿಳಿಸಿದ್ದಾರೆ.

Leave a Reply