ಮಂಗಳೂರು: ರಾಜ್ಯದಲ್ಲಿದ್ದ BJP ಸರಕಾರ ನಿತ್ಯ ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಿ ದುಡಿಯುವ ವರ್ಗದ ಜನತೆಯ ಬದುಕನ್ನೇ ಸರ್ವನಾಶಗೊಳಿಸಿದೆ. ದುಡಿಮೆಯ ಅವಧಿಯನ್ನು ಹೆಚ್ಚಳಗೊಳಿಸಿದ್ದು ಮಾತ್ರವಲ್ಲದೆ ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ದುಡಿಸುವ ಮೂಲಕ ತೀರಾ ಅಮಾನವೀಯ ಕಾರ್ಯಕ್ಕೆ ಮುಂದಾಗಿದೆ. ಜನರಲ್ಲಿ ಬೆಳೆದು ಬರುತ್ತಿರುವ ತೀವ್ರ ಪ್ರತಿರೋಧವನ್ನು ಬಗ್ಗು ಬಡಿಯಲು ಕೋಮುವಾದದ ಭೂತವನ್ನು ಮುನ್ನೆಲೆಗೆ ತಂದು ತಾನು ಮಾಡುತ್ತಿರುವ ಅನ್ಯಾಯವನ್ನು ಮರೆಮಾಚಲಾಗುತ್ತಿದೆ.ಇಂತಹ ಫ್ಯಾಸಿಸ್ಟ್ ಮನೋಭಾವದ ಸರಕಾರ ಮತ್ತೆ ಅಧಿಕಾರಕ್ಕೇರಿದರೆ ಜನತೆಯ ಬದುಕಿಗೆ ಮಾತ್ರವಲ್ಲ ನಾಡಿನ ಸೌಹಾರ್ದ ಪರಂಪರೆಗೆ ಅಪಾಯ ಕಟ್ಟಿಟ್ಟ ಬುತ್ತಿ.ಅದನ್ನು ತಡೆಯಲು ಕಾರ್ಮಿಕ ವರ್ಗ ಒಂದಾಗಿ ನಿಲ್ಲಬೇಕಾಗಿದೆ ಎಂದು CITU ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಜಿಲ್ಲೆಯ ಕಾರ್ಮಿಕ ವರ್ಗಕ್ಕೆ ಕರೆ ನೀಡಿದರು.
ಅವರು ಮಂಗಳೂರಿನಲ್ಲಿ ಜರುಗಿದ CITU ದ. ಕ. ಜಿಲ್ಲಾ ಮಟ್ಟದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುತ್ತಾ ಈ ಮಾತುಗಳನ್ನು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ದುಡಿಯುವ ಜನತೆಯ ಯಾವುದೇ ಪ್ರಶ್ನೆಗಳಿಗೆ ಸ್ಪಂದಿಸದ ರಾಜ್ಯದ BJP ಸರಕಾರ ಬ್ರಹ್ಮಾಂಡ ಬ್ರಷ್ಟಾಚಾರದಲ್ಲಿ ಮುಳುಗಿದ್ದು ಮಾತ್ರವಲ್ಲದೆ, 40% ಕಮಿಷನ್ ಸರಕಾರವೆಂದು ಕುಖ್ಯಾತಿ ಗಳಿಸಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ CITU ಜಿಲ್ಲಾಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿಯವರು ಮಾತನಾಡುತ್ತಾ ದ.ಕ ಜಿಲ್ಲೆಯು ಅಭಿವೃದ್ದಿಯಾಗಬೇಕಾದರೆ ಸೌಹಾರ್ದತೆ ತೀರಾ ಅಗತ್ಯ. ದುಡಿಯುವ ವರ್ಗದ ಚಳುವಳಿಯಿಂದ ಮಾತ್ರವೇ ಸೌಹಾರ್ದತೆ ಮತ್ತು ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಸಭೆಯಲ್ಲಿ CITU ಜಿಲ್ಲಾ ನಾಯಕರಾದ ಯು ಬಿ ಲೋಕಯ್ಯ, ಯೋಗೀಶ್ ಜಪ್ಪಿನಮೋಗರು, ಸುಕುಮಾರ್, ಮುನೀರ್ ಕಾಟಿಪಳ್ಳ,ರಾಧಾ ಮೂಡಬಿದ್ರಿ, ನೋಣಯ್ಯಾ ಗೌಡ,ಸುಂದರ ಕುಂಪಲ, ಬಿ ಕೆ ಇಮ್ತಿಯಾಜ್,ವಸಂತಿ ಕುಪ್ಪೆಪದವು,ಗಿರಿಜಾ ಮೂಡಬಿದ್ರಿ, ಲೋಲಾಕ್ಷಿ ಬಂಟ್ವಾಳ ಮುಂತಾದವರು ಉಪಸ್ಥಿತರಿದ್ದರು.




