ಬೆಂಗಳೂರು: ರಾಜಕೀಯ ಲಾಭಕ್ಕೆ ತಕ್ಕಂತೆ ಟೇಬಲ್ ಮೇಲೆ ವರದಿ ಸಿದ್ದಪಡಿಸಿ, ಸಮುದಾಯಗಳಿಗೆ ಮಂಕುಬೂದಿ ಎರಚುವ Siddaramaiah ಷಡ್ಯಂತ್ರ ಜಗಜ್ಜಾಹೀರಾಗಿದೆ. ಸಮುದಾಯಗಳ ನಡುವೆ ಭಿನ್ನಮತ ಸೃಷ್ಟಿಸಿ ಡೋಲಾಯಮನ ಪರಿಸ್ಥಿತಿ ನಿರ್ಮಿಸಿ ಚುನಾವಣೆ ಗೆಲ್ಲುವ ಕೀಳುಮಟ್ಟ ನಿಮ್ಮದು ಎಂದು ಜೆಡಿಎಸ್ ಹೇಳಿದೆ.
ಜಾತಿಗಣತಿ ವರದಿಯನ್ನು ಸ್ವೀಕರಿಸಬಾರದು ಎಂದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಸಚಿವರು, ನಾಯಕರು ಒತ್ತಡ ಹೇರುತ್ತಿರುವ ಮಧ್ಯೆ, ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿ ವರದಿ ಸ್ವೀಕರಿಸುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಜೆಡಿಎಸ್, ಒಡೆದು ಆಳುವ ಬ್ರಿಟಿಷರ ಬುದ್ದಿ ಇನ್ನೂ ನಿಮ್ಮ ತಲೆಯಲ್ಲಿ ಬದುಕಿದಂತಿದೆ. ಅವೈಜ್ಞಾನಿಕ ವರದಿ ಸ್ವೀಕಾರದ ಹಿಂದಿನ ರಾಜಕೀಯ ಲೆಕ್ಕಾಚಾರವೇನು ಸ್ವಾಮಿ? ಎಂದು ಪ್ರಶ್ನಿಸಿದೆ.
‘ಜಾತಿಗಣತಿ ಅವೈಜ್ಞಾನಿಕ’, ಎಂದು ನಿಮ್ಮ ಸಂಪುಟದ ನಾಯಕರೆ ತಿರಸ್ಕರಿಸಿದರು ‘ವರದಿ ಸ್ವೀಕಾರಕ್ಕೆ ಬದ್ದ’ ಎನ್ನುತ್ತಿರುವ ಸಿದ್ದರಾಮಯ್ಯ ಸರ್ವಾಧಿಕಾರಿ ಎಂಬ ಮನೋಭಾವದಲ್ಲಿರಬೇಕು. ಅವೈಜ್ಞಾನಿಕ ವರದಿ ಮುಂದಿಟ್ಟುಕೊಂಡು ಚುನಾವಣೆ ಗೆಲ್ಲುವ ಹಪಾಹಪಿತನ ನಿಮ್ಮಲ್ಲಿ ಶುರುವಾಗಿದೆ. ಸಮುದಾಯಗಳನ್ನು ಜೋಡಿಸುವ ಕೆಲಸ ಮಾಡಿ, ಒಡೆಯಬೇಡಿ ಎಂದು ಸಲಹೆ ನೀಡಿದೆ.




