ಅತ್ಯಾಚಾರ, ಕೊಲೆ ಖಂಡಿಸಿ ನೂರಾರು ಮಹಿಳೆಯರಿಂದ ಪ್ರತಿಭಟನೆ

5 years ago

ಸಿಂಧನೂರು: ಅತ್ಯಾಚಾರ, ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು.

ಸಿಂಧನೂರಿನಲ್ಲಿ ನೆರೆದ ಮಹಿಳೆಯರು ರಾಬಿಯಾ ಸೈಫಿ ಅತ್ಯಾಚಾರ, ಕೊಲೆ, ಮೈಸೂರು ವಿದ್ಯಾರ್ಥಿನಿ ಗ್ಯಾಂಗ್ ರೇಪ್, ಮುಂಬೈಯಲ್ಲಿ ಅತ್ಯಾಚಾರ, ಕೊಲೆ ಸೇರಿದಂತೆ ದೇಶದಾದ್ಯಂತ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಕೊಲೆಗಳು ನಿರಂತರವಾಗಿ ನಡೆಯುತ್ತಿರೂ ಇವುಗಳನ್ನು ತಡೆಗಟ್ಟುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿವೆ. ಜನ ಸರ್ಕಾರಗಳನ್ನು ನಂಬದೆ ಮಹಿಳೆಯರೇ ಒಗ್ಗಟ್ಟಾಗಿ ಇವುಗಳನ್ನು ತಡೆಗಟ್ಟಬೇಕು ಎಂದು ಸರಸ್ವತಿ ಪಾಟೀಲ್ ಕರೆ ನೀಡಿದರು.

ರಾತ್ರಿ 12ರ ಸಮಯದಲ್ಲಿ ಕೂಡ ಮಹಿಳೆ ನಿರ್ಭಯವಾಗಿ ಮನೆಗೆ ಬಂದಾಗ ಮಾತ್ರ ಸ್ವಾತಂತ್ರ ಸಿಕ್ಕಂತೆ. ಸ್ವಾತಂತ್ರ ಸಿಕ್ಕರೂ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲವಾಗಿದೆ. ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆಗಳನ್ನು ಮಾಡುವ ಮೂಲಕ ಮಹಿಳೆಯರು ಹೊರಗೆ ಬಾರದೆ ಮನೆಯಲ್ಲಿರುವಂತೆ ನೋಡಿಕೊಳ್ಳುವ ಉದ್ದೇಶ ಕಂಡುಬಂದಿದೆ ಎಂದರು.

ಇನ್ನು ಮುಂದಾದರು ಅತ್ಯಾಚಾರಿಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮಕೈಗೊಂಡು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಇಂತಹ ಪ್ರಕರಣಗಳು ನಡೆಯದಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಫಾತಿಮಾ ಖತಲ್ ಆಗ್ರಹಿಸಿದರು.

ಪ್ರಗತಿಪರ ಸಂಘಟನೆಗಳ ಮುಖಂಡರಾದ ಚಂದ್ರಶೇಖರ ಗೋರೆಬಾಳ, ನಾಗರಾಜ ಪೂಜಾರ, ಪಿ ಹುಸೇನ್ ಸಾಬ್, ಆರೋಗ್ಯಮ್ಮ, ಆಯಿಷಾ ಬೆಳಗಾವಿ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply