ಮೊದಲೆಲ್ಲ ಕರ್ನಾಟಕದಲ್ಲಿನ ಫಲಕಗಳಲ್ಲಿ ಕನ್ನಡ-ಇಂಗ್ಲಿಷ್ ಜೊತೆಗೆ ಹಿಂದಿ ಇರುತ್ತಿತ್ತು. ಇತ್ತೀಚಿಗೆ ಕೆಲವು ಕಡೆ ಹಿಂದಿಯೊಂದೇ ಕಾಣುತ್ತಿದೆ.
ಇದೊಂತರ ಟೆಸ್ಟ್ ಡೋಸ್ ಕೊಟ್ಟ ಹಾಗೆ. ಪ್ರತಿರೋಧ ಕಾಣಿಸದಿದ್ದರೆ ಇದು ವ್ಯಾಪಕವಾಗಿ ಎಲ್ಲೆಡೆ ನಡೆಯಲಿದೆ. ನಿಧಾನವಾಗಿ ಹಿಂದಿ, ಕನ್ನಡವನ್ನು ಮೆಟ್ಟಿ ಮುಂದೆ ಸಾಗುತ್ತದೆ. ಜನ ಸಹ ನಿಧಾನವಾಗಿ ಹಿಂದಿಗೆ ಒಗ್ಗಿಕೊಳ್ಳುತ್ತಾರೆ. ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಗೆ ಕನ್ನಡದ ಪಳಿಯುಳಿಕೆ ಮಾತ್ರ ಉಳಿಯಬಹುದು. ನಮ್ಮ ಭಾಷೆ, ಬದುಕು, ಸಂಸ್ಕೃತಿ, ಅಸ್ಮಿತೆ, ಉದ್ಯೋಗ, ವ್ಯವಹಾರ ಎಲ್ಲವೂ ಸರ್ವ ನಾಶವಾಗುತ್ತದೆ.
ಈಗ ಆಳುತ್ತಿರುವವರ ಹಂಬಲವೂ ಸಹ ಇದೇ ಆಗಿದೆ. ಹಿಂದಿ ಪ್ರೇಮಿ ಕೇಂದ್ರ ಸರ್ಕಾರ ಮತ್ತು ಸಂಘಪರಿವಾರ ಸ್ಪಷ್ಟವಾಗಿ ಹಿಂದಿಯ ಪರವಾಗಿದೆ.
ಇಂತಹ ನಿರ್ಣಾಯಕ ಸಂದರ್ಭದಲ್ಲಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ಹಿಂದಿ ಪಕ್ಷಗಳ ಭಕ್ತರಲ್ಲದ ಸ್ವಾಭಿಮಾನಿ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿದ್ದೇವೆ. ನಮ್ಮ ತೆರಿಗೆಯ ಹಣದಲ್ಲಿ ನಡೆಯುವ ‘ಹಿಂದಿ ದಿವಸ’ವನ್ನೂ ಮತ್ತು ಸದಾ ನಡೆಯುತ್ತಿರುವ ಹಿಂದಿ ಹೇರಿಕೆಯನ್ನೂ ವಿರೋಧಿಸೋಣ.
– ರಮಾನಂದ ಅಂಕೋಲಾ, ಸಾಮಾಜಿಕ ಹೋರಾಟಗಾರ



