ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ವ್ಯಾಪ್ತಿಯ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ, ಪ್ರತಿವರ್ಷ ಸುಮಾರು 1,05,000 ವಿದ್ಯಾರ್ಥಿಗಳು ಪ್ರತಿವರ್ಷ ಪದವಿ ಪ್ರಮಾಣ ಪತ್ರವನ್ನು ಪಡೆಯುತ್ತಿದ್ದರು. ಆದರೆ 2019, 2020ನೇ ವರ್ಷದಲ್ಲಿ ಪದವಿ ಮುಗಿಸಿದ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಯಾವುದೇ ರೀತಿಯ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹುಬ್ಬಳ್ಳಿ – ಧಾರವಾಡಿ ಮಹಿಳಾ ಕಾಂಗ್ರೆಸ್ ಆರೋಪಿಸಿದೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ, ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ ಮಹಿಳಾ ಕಾಂಗ್ರೆಸ್ ನಾಯಕಿಯರು, ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆಯದೆ ಇರುವುದರಿಂದ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ನಿರ್ಮಾಣದ ಅವಕಾಶಗಳಿಂದ ವಂಚಿತರಾಗಿ, ಸಾಕಷ್ಟು ಪರದಾಡುವಂಥ ಪರಿಸ್ಥಿತಿ ಬಂದಿದೆ ಎಂದರು.
ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಈ ಸಮಸ್ಯೆ ಇಲ್ಲ. ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರ ಈ ಸಮಸ್ಯೆ ಇದ್ದು, ನಮ್ಮ ಘನತೆವೆತ್ತ ರಾಜ್ಯಪಾಲರು, ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಮಯಾವಕಾಶ ನೀಡದಿರುವುದೇ ಇದಕ್ಕೆ ಮುಖ್ಯ ಕಾರಣ. ಈ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ ಬಂದರು ಯಾವುದೇ ಪರಿಣಾಮವಾಗಿಲ್ಲ. ಆದ್ದರಿಂದ ಸಿಎಂ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಈ ಬಗ್ಗೆ ಗಮನ ಹರಿಸಿ ಸುಮಾರು 2 ಲಕ್ಷ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಿದರು.
ಜೊತೆಗೆ, ಈ ಕೂಡಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಮೇಲೆ ಕಾನೂನು ಕ್ರಮ ಕೈಕೊಂಡು, ಬಂಧಿಸಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ದಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಿಳಾ ಕಾಂಗ್ರೆಸ್ಸಿನ ಬ್ಲಾಕ್ ಅಧ್ಯಕ್ಷರಾದ ಬಾಳಮ್ಮ ಜಂಗಿನವರ್, ಚೇತನ ಲಿಂಗದಾಳ್, ಸುಜನ್ ಕಾಕೆ, ಜ್ಯೋತಿ ವಾಲಿಕಾರ, ಲಕ್ಷ್ಮಿ ಗುತ್ತೆ, ಅಕ್ಕಮ್ಮ ಕಂಬಳಿ, ಪ್ರೀತಿ ಜೈನ್ ಮುಂತಾದವರು ಉಪಸ್ಥಿತರಿದ್ದರು.



