ವಾಲ್ಮೀಕಿ ನಿಗಮ ಅಕ್ರಮ ತನಿಖೆಗೆ ಆತುರ ಏಕಿಲ್ಲ?: ಆರ್.ಅಶೋಕ

2 years ago

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣ ಕುರಿತು ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಕುಟುಂಬ ಸದಸ್ಯರ ವಿರುದ್ಧ ಕೇಳಿ ಬಂದ ಆರೋಪದ ಬಗ್ಗೆ ಕ್ರಮಕ್ಕೆ ತೋರಿದ ಆತುರ ವಾಲ್ಮೀಕಿ ನಿಗಮದ ಅಕ್ರಮದ ತನಿಖೆಗೆ ಯಾಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ರೇವಣ್ಣ ಅವರ ಕುಟುಂಬ ಸದಸ್ಯರ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾತ್ರ ಆತುರದಲ್ಲಿ ಎಸ್ಐಟಿ ರಚನೆ ಮಾಡಿ, ನೋಟೀಸ್ ನೀಡಿ, ವಿಚಾರಣೆ ಮಾಡಿ, ನ್ಯಾಯಾಂಗ ಬಂಧನಕ್ಕೂ ಕಳಿಸುತ್ತೀರಿ. ಆದರೆ ಅದೇ ಆಸಕ್ತಿ ವಾಲ್ಮೀಕಿ ನಿಗಮದ ಹಗರಣದಲ್ಲಿ ಯಾಕೆ ತೋರಿಸುತ್ತಿಲ್ಲ? ಇದು ಯಾವ ಸೀಮೆ ನ್ಯಾಯ ಸಿದ್ದರಾಮಯ್ಯನವರೇ? ಎಂದಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಬಗ್ಗೆ ತನಿಖೆಗಾಗಿ ಎಸ್ಐಟಿ ರಚನೆಯಾಗಿದ್ದು 31.05.2024 ರಂದು. ಆದರೆ ಎಸ್ಐಟಿ ರಚನೆಯಾಗಿ 40 ದಿನ ಕಳೆದರೂ ಮಾಜಿ ಸಚಿವ ನಾಗೇಂದ್ರ ಅವರನ್ನಾಗಲಿ, ಶಾಸಕ ಬಸವರಾಜ ದದ್ದಲ್ ಅವರನ್ನಾಗಲಿ ವಿಚಾರಣೆ ಮಾಡಲಿಲ್ಲ. ವಿಚಾರಣೆ ಹೋಗಲಿ ಒಂದು ನೋಟಿಸ್ ಕೂಡಾ ಕೊಡಲಿಲ್ಲ. ಅಂದಮೇಲೆ ನಿಮಗೆ ಸತ್ಯ ಸಂಗತಿ ಹೊರಬರುವುದು ಬೇಕಾಗಿಯೇ ಇರಲಿಲ್ಲ. ಎಸ್ಐಟಿ ರಚಿಸಿದ್ದೇ ಈ ಹಗರಣ ಮುಚ್ಚಿಹಾಕಲು ಅಲ್ಲವೇ ಸಿದ್ದರಾಮಯ್ಯನವರೇ? ಎಂದು ಕಿಡಿಕಾರಿದ್ದಾರೆ.

ಎಸ್ಐಟಿ ನಿಮ್ಮ ಕೈಗೊಂಬೆ ಎನ್ನುವುದಕ್ಕೆ ಪರಶುರಾಮ್ ಮತ್ತು ಪದ್ಮನಾಭ್ ಅವರ ನಡುವೆ ನಡೆದಿರುವ ಫೋನ್ ಸಂಭಾಷಣೆಯೇ ಸಾಕ್ಷಿ. ಸಿಬಿಐ, ಇಡಿ ಆದರೆ ನಮಗೆ ಜೈಲೇ ಗತಿ, ಎಸ್ಐಟಿ ಆದರೆ ನೋಡಿಕೊಳ್ಳಬಹುದು ಎಂದು ಪದ್ಮನಾಭ್ ಹೇಳಿರುವುದು ಸತ್ಯವಲ್ಲವೇ ಸಿದ್ದರಾಮಯ್ಯನವರೇ? ನಿಮ್ಮ ಎಸ್ಐಟಿ ಎಷ್ಟು ನಿಷ್ಪಕ್ಷಪಾತಿ ಎಂದು ತಿಳಿಯಲು ಇದಕ್ಕಿಂತ ಪುರಾವೆ ಬೇಕೆ? ಎಂದಿದ್ದಾರೆ.

ಹಗರಣದ ಬಗ್ಗೆ ಇಡಿ ಮಧ್ಯ ಪ್ರವೇಶವಾದ ನಂತರ ಕೇವಲ ನೆಪ ಮಾತ್ರಕ್ಕೆ ವಿಚಾರಣೆಯ ನಾಟಕ ಮಾಡಿದ್ದು ಸುಳ್ಳಾ ಸಿದ್ದರಾಮಯ್ಯನವರೇ? ವಿಚಾರಣೆಗೂ ಮುನ್ನ ಎಸ್ಐಟಿ ಮುಂದೆ ನೆಪ ಮಾತ್ರಕ್ಕೆ ಹೋಗಿ ಬಾ, ನಾನು ಅಧಿಕಾರಿಗಳಿಗೆ ಹೇಳಿಕೊಳ್ಳುತ್ತೇನೆ ಎಂದು ಪ್ರಭಾವಿ ನಾಯಕರೊಬ್ಬರು ನಾಗೇಂದ್ರ ಅವರಿಗೆ ಅಭಯ ಕೊಟ್ಟಿದ್ದು ಸುಳ್ಳೇ ಸಿದ್ದರಾಮಯ್ಯನವರೇ? ಎಂದು ಪ್ರಶ್ನೆ ಮಾಡಿದ್ದಾರೆ.

Leave a Reply