ಕುರಿ, ಕೋಳಿ, ದನದ ಮಾಂಸವನ್ನು ಯಾಕೆ ನೇತು ಹಾಕುತ್ತಾರೆ ? ಮಾಂಸ ತಿನ್ನಲಿ, ಹಾಗಂತ ಪ್ರಾಣಿಯ ಚರ್ಮ ಸುಲಿದು ನೇತಾಡಿಸುವುದು ಹಿಂಸೆಯ ವೈಭವೀಕರಣವಲ್ಲವೇ ? ಪೇಜಾವರ ಸ್ವಾಮೀಜಿ ಹೇಳಿರುವುದರಲ್ಲಿ ತಪ್ಪೇನಿದೆ ? ಎಂದು ಹಲವರು ಚರ್ಚಿಸುತ್ತಿದ್ದಾರೆ. ಸ್ವಾಮೀಜಿಗಳು ಉಡುಪಿ ಮಠಕ್ಕೆ ಉಚಿತವಾಗಿ ಬರುವ ಬಾಳೇ ಹಣ್ಣಿನ ಗೊನೆ, ರಾಶಿ ರಾಶಿ ಸೌತೇಕಾಯಿಯನ್ನು ಯಾಕೆ ನೇತಾಡಿಸಿ ಇಡುತ್ತಾರೆ ? ಅದಕ್ಕೆ ಉತ್ತರ ಕಂಡುಕೊಂಡರೆ ಮಾಂಸವನ್ನು ಯಾಕೆ ನೇತಾಡಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ.
ಕುರಿ, ಕೋಳಿ, ದನದ ಮಾಂಸವನ್ನು ಆಗಲೇ ಕಡಿದು ಆಗಲೇ ತಿನ್ನುವುದಾದರೆ ಮಾಂಸವನ್ನು ನೇತಾಡಿಸಲ್ಲ. ಕಡಿದು ಒಂದು ಗಂಟೆಯ ಬಳಿಕ ಗ್ರಾಹಕರಿಗೆ ನಿಧಾನವಾಗಿ ಮಾರಾಟ ಮಾಡುವಾಗ ಮಾಂಸದಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ. ಹಾಗೆ ನೀರು ನಿಂತರೆ ಮಾಂಸ ಬೇಗ ಹಾಳಾಗುತ್ತೆ. ಜೊತೆಗೆ ಮಾಂಸದಲ್ಲಿನ ರಕ್ತವೂ ಹೆಪ್ಪುಗಟ್ಟಿ ಮಾಂಸ ಹಾಳಾಗುತ್ತದೆ. ಅದಕ್ಕಾಗಿ ಮಾಂಸವನ್ನು ಕಷ್ಟಪಟ್ಟಾದರೂ ಹುಕ್ ನಲ್ಲಿ ನೇತಾಡಿಸುತ್ತಾರೆ.
ಇದೆಲ್ಲಾ ಮಾಂಸ ತಿನ್ನದ, ಒಂದೇ ಒಂದು ಬಾರಿಯೂ ಮಟನ್ ಶಾಪ್ ಗೆ ಹೋಗದ ಬ್ರಾಹ್ಮಣ ಸ್ವಾಮೀಜಿಗೆ ಗೊತ್ತಿರಲ್ಲ. ಹಾಗಂತ ಇದೆಲ್ಲಾ ಗೊತ್ತಿರಬೇಕಾದರೆ ಮಾಂಸದ ಅಂಗಡಿಗೆ ಹೋಗಿ ರೂಢಿಯಿರಲೇ ಬೇಕಿಲ್ಲ. ಕನಿಷ್ಟ ಗದ್ದೆಯಲ್ಲಿ ಉತ್ತುಬಿತ್ತಿ ಕೃಷಿ ಮಾಡಿ ದುಡಿದು ತಿನ್ನೋ ರೂಢಿ ಇದ್ದರೂ ಸಾಕು. ಬಿಟ್ಟಿ ತಿಂದರೆ ಇದೆಲ್ಲಾ ಗೊತ್ತಾಗಲ್ಲ. ನಮ್ಮ ಮನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೌತೇಕಾಯಿ ಬೆಳೆಯುತ್ತಿದ್ದರು. ಸೌತೆಕಾಯಿಗೆ ಬೇಡಿಕೆ ಬಂದಾಗ ಮಾರಾಟ ಮಾಡಬೇಕು ಎಂದರೆ ಅದನ್ನು ತೆಂಗಿನ ಗರಿಯಲ್ಲಿ ಕಟ್ಟಿ ನೇತು ಹಾಕುತ್ತಿದ್ದರು. ಇದರಿಂದ ಸೌತೇಕಾಯಿ ಒಳಗಿನ ನೀರು ಗಟ್ಟಿಯಾಗಲ್ಲ. ನೀರು ಗಟ್ಟಿಯಾದರೆ ಅಥವಾ ನೆಲದ ಪಸೆ ತಾಗಿದರೆ ಸೌತೇಕಾಯಿ ಹೆಚ್ಚು ಕಾಲ ಬಾಳಿಕೆ ಬರಲ್ಲ. ಬಾಳೆಕಾಯಿ ಕೂಡಾ ನೆಲದಲ್ಲಿ ಒತ್ತಿ ಇರಿಸಿದರೆ ಹಣ್ಣಾಗುವಾಗ ಗಂಟಾಗುತ್ತದೆ. ಅದಕ್ಕಾಗಿ ಕುಂಬಳಕಾಯಿ, ಸೌತೇಕಾಯಿ, ಸಿಹಿಗುಂಬಳ ಕಾಯಿ, ಬಾಳೆಕಾಯಿಯನ್ನು ಎಷ್ಟು ಕಷ್ಟವಾದರೂ ನೇತಾಡಿಸಿ ಇಡುತ್ತಾರೆ.
ಸ್ವಾಮೀಜಿಗೆ ಕ್ರೂರವಾಗಿ ಕಾಣುವ, ಹಿಂಸೆಯ ವೈಭವೀಕರಣವಾಗಿ ಕಾಣುವ ಮಾಂಸ ನೇತಾಡಿಸುವಿಕೆ ಅಮಾನವೀಯವಲ್ಲ. ಬದಲಾಗಿ ಕೊಂದ ಪ್ರಾಣಿಯನ್ನು ತಿನ್ನಲು ಯೋಗ್ಯವಾಗಿಡುವ ಮಾನವೀಯ ಕೆಲಸವದು.
– ನವೀನ್ ಸೂರಿಂಜೆ, ಪತ್ರಕರ್ತರು




