ಬೆಂಗಳೂರು: ನೇಕಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಅವರಿಗೆ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ ತಾಲೂಕು ಕೇಂದ್ರಗಳಲ್ಲಿ ಮಿನಿ ಟೆಕ್ಸ್ಟೈಲ್ ಪಾರ್ಕ್ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ವಿದ್ಯುತ್ ಮಗ್ಗ ನೇಕಾರರು ಮತ್ತು ಕಾರ್ಮಿಕರಿಗೆ ಡಿಬಿಟಿ ಮೂಲಕ ನೇಕಾರ್ ಸಮ್ಮಾನ್ ಯೋಜನೆಯ ಸಹಾಯಧನ ವರ್ಗಾವಣೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ನಂತರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ನೇಕಾರರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಯ ವಿಷಯ ತಿಳಿಸಿ ಆರಂಭದಲ್ಲಿ 25 ತಾಲ್ಲೂಕುಗಳಲ್ಲಿ ಪಾರ್ಕ್ ಸ್ಥಾಪನೆಗೆ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹತ್ತಿಯ ಸಂಸ್ಕರಣೆಯಿಂದ, ವಸ್ತ್ರ ತಯಾರಿಕೆ, ಸಿದ್ಧ ಉಡುಪು ತಯಾರಿಕೆವರೆಗಿನ ಎಲ್ಲ ಹಂತಗಳ ಸೌಲಭ್ಯಗಳನ್ನು ಒಳಗೊಂಡ ಮಿನಿ ಟೆಕ್ಸ್ಟೈಲ್ ಪಾರ್ಕ್ ಸ್ಥಾಪಿಸುವ ಮೂಲಕ ನೇಕಾರರಿಗೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು.
ನೇಕಾರರೊಂದಿಗೆ ವೈಯಕ್ತಿಕವಾಗಿ ಹೆಚ್ಚಿನ ಒಡನಾಟವನ್ನು ತಾವು ಹೊಂದಿದ್ದು, ಅವರ ಸಂಕಷ್ಟಗಳನ್ನು ಸಹ ಹತ್ತಿರದಿಂದ ಕಂಡಿರುವುದಾಗಿ ತಿಳಿಸಿದ ಅವರು, ನೇಕಾರರು ತಮ್ಮ ಉತ್ಪನ್ನಗಳ ಗುಣಮಟ್ಟ ವೃದ್ಧಿಸುವ ಮೂಲಕ ರಫ್ತು ಮಾಡಲು ಸಹ ಮುಂದಾಗಬೇಕು ಎಂದು ಸಲಹೆ ನೀಡಿದರು.
ಡಿಜಿಟಲ್ ವೇದಿಕೆಯ ಮೂಲಕ ಮಾರುಕಟ್ಟೆ ವಿಸ್ತರಿಸಬೇಕು. ಇದಕ್ಕೆ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಕಾರ ನೀಡಲಿದ್ದು, ಅಮೇಜಾನ್, ಫ್ಲಿಪ್ ಕಾರ್ಟ್ ಮತ್ತಿತರ ಆನ್ಲೈನ್ ವ್ಯಾಪಾರಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದರು.
ಇಲ್ಲಿಯವರೆಗೆ ಕೈಮಗ್ಗ ನೇಕಾರರಿಗೆ ಮಾತ್ರ ನೆರವು ನೀಡುವ ಯೋಜನೆ ಜಾರಿಯಲ್ಲಿತ್ತು. ಆದರೆ ವಿದ್ಯುತ್ ಮಗ್ಗದ ನೇಕಾರರು ಹಾಗೂ ಕಾರ್ಮಿಕರು ಸಹ ಸಂಕಷ್ಟದಲ್ಲಿರುವುದನ್ನು ಅರಿತು ಸರ್ಕಾರ ಸಂಕ್ರಾಂತಿಯ ಕೊಡುಗೆಯಾಗಿ ಮಗ್ಗಪೂರ್ವ ಚಟುವಟಿಕೆಗಳಲ್ಲಿ ತೊಡಗುವ ಕಾರ್ಮಿಕರು ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ಈ ಸೌಲಭ್ಯ ವಿಸ್ತರಿಸಿದೆ ಎಂದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅದರಲ್ಲೂ ಸ್ವದೇಶಿ ಆಂದೋಲನದಲ್ಲಿ ನೇಕಾರರ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು. ವಿದೇಶಿ ಉಡುಪುಗಳನ್ನು ತೊರೆದು, ಸ್ವದೇಶಿ ಬಳಕೆ ಮಾಡುವಂತೆ ಗಾಂಧೀಜಿಯವರು ನೀಡಿದ ಕರೆಗೆ ಸ್ಪಂದಿಸಿದ ನೇಕಾರರು ಹಗಲು ರಾತ್ರಿ ಶ್ರಮಿಸಿ, ಇಡೀ ದೇಶದ ಜನರಿಗೆ ಬಟ್ಟೆ ಒದಗಿಸಿದರು. ಆ ಮೂಲಕ ಸ್ವದೇಶಿ ಆಂದೋಲನ ಯಶಸ್ವಿಗೊಳಿಸಿದ್ದಲ್ಲದೆ, ದೇಶ ಸ್ವಾತಂತ್ರ್ಯ ಕಂಡುಕೊಳ್ಳಲು ನೆರವಾದರು ಎಂದರು.
ನೇಕಾರರಿಗೆ 2 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಒದಗಿಸಲಾಗುವುದು. ತಮಿಳುನಾಡು ಮಾದರಿಯಲ್ಲಿ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ 5 ಎಚ್.ಪಿ. ವರೆಗೆ ಉಚಿತ ವಿದ್ಯುತ್ ಹಾಗೂ ಫಿಕ್ಸೆಡ್ ಚಾರ್ಜಸ್ ನಲ್ಲಿ ಶೇ.50 ರಷ್ಟು ರಿಯಾಯ್ತಿ ನೀಡಲಾಗುತ್ತಿದೆ. ನೇಕಾರರ ಸಂಕಷ್ಟಗಳಿಗೆ ಸರ್ಕಾರ ಸದಾ ಸ್ಪಂದಿಸಿದೆ ಎಂದರು.




