ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಿಸಿದ್ದೇಕೆ: ಬಿ ಕೆ ಹರಿಪ್ರಸಾದ್ ವಿವರಿಸಿದ್ದಾರೆ ಓದಿ

2 years ago

ಬೆಂಗಳೂರು: ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಪ್ರಧಾನಿಯಂತಹ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ಇದು ಶೋಭೆ ತರುವುದಿಲ್ಲ. ತುರ್ತು ಪರಿಸ್ಥಿತಿಯ ಕುರಿತು ಅವರು ನೀಡಿರುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ ಮತ್ತು ಸತ್ಯಕ್ಕೆ ದೂರವಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿ ಕುರಿತು ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸಂಸತ್ತಿನಲ್ಲಿ ಹೇಳಿದ ಒಂದು ಮಾತನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ; “ಸಂಸತ್ತಿನ ಸಮನ್ಸ್‌ಗಳು ಭಾರತದಲ್ಲಿ ಪ್ರಜಾಪ್ರಭುತ್ವವು ಕಾರ್ಯನಿರ್ವಹಿಸುತ್ತಿದೆ ಎಂಬುವುದಕ್ಕೆ ಪುರಾವೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿರೋಧ ಪಕ್ಷದ ಸದಸ್ಯರು ಹಾಜರಿದ್ದಾರೆ. ಅವರು ಬಂಧನಕ್ಕೊಳಗಾಗಿಲ್ಲ ಅಥವಾ ಜೈಲಿನ ಕಂಬಿ ಎಣಿಸುತ್ತಿಲ್ಲ ಎಂಬುವುದನ್ನು ಸಾಕ್ಷೀಕರಿಸುತ್ತದೆ.  ಈ ಕ್ರಮವು ಸಂಪೂರ್ಣವಾಗಿ ಸಾಂವಿಧಾನಿಕ ಚೌಕಟ್ಟಿನಲ್ಲಿದೆ. ಇದು ಸಂವಿಧಾನದ ಆಶಯಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲ. ಬದಲಾಗಿ ಸಂವಿಧಾನವನ್ನು ಸಂರಕ್ಷಿಸಲು, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಕೈಗೊಂಡಿರುವ ನಡೆಯಾಗಿದೆ.ʼʼ ಎಂದು ಇಂದಿರಾ ಗಾಂಧಿಯವರು ಸಂಸತ್ತಿನಲ್ಲಿ ಹೇಳಿದ್ದರು ಎಂದರು.

ಅಚ್ಚರಿದಾಯಕ ವಿಷಯವೆಂದರೆ , ತುರ್ತುಪರಿಸ್ಥಿತಿಯ ಹೇರಿಕೆಗೆ ಕಾರಣವಾದ ಸಂದರ್ಭ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಲೇ ಇಲ್ಲ. ಹೀಗಾಗಿಯೇ ಈ ಬಗ್ಗೆ ತಪ್ಪು ಕಲ್ಪನೆಗಳು, ಬೇಕಾಬಿಟ್ಟಿಯಾದ ವಿಶ್ಲೇಷಣೆಗಳು ನಡೆಯುತ್ತಲೇ ಇವೆ, ಮುಖ್ಯವಾಗಿ, ತುರ್ತುಪರಿಸ್ಥಿತಿ ಎಂಬುವುದು ಸಂವಿಧಾನೇತರ ವಿಷಯವಾಗಿರಲಿಲ್ಲ. ತುರ್ತು ಪರಿಸ್ಥಿತಿಯನ್ನು ಹೇರುವುದು ಸಂವಿಧಾನವೇ ಕೊಟ್ಟ ನಿಬಂಧನೆ ಅಥವಾ ಅವಕಾಶವಾಗಿದೆ.ಸಂವಿಧಾನದ ರಚನಾಕಾರರು ತುರ್ತು ಪರಿಸ್ಥಿತಿಯನ್ನು ಅಳವಡಿಸಿಕೊಂಡಿದ್ದೇ ಅಂದು ಘೋಷಣೆಯಾದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇದ್ದಂತಹ ಸನ್ನಿವೇಶಗಳಂಥವುಗಳನ್ನು ಸಮರ್ಥವಾಗಿ ನಿಭಾಯಿಸಲು ಎಂದರು.

ಜುಲೈ 22, 1975 ರಂದು ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಇಂದಿರಾ ಗಾಂಧಿಯವರು, “ನಮ್ಮ ಸಂವಿಧಾನದ ರಚನಕಾರರು ಬಾಹ್ಯ ಆಕ್ರಮಣ ಮಾತ್ರವಲ್ಲ, ಆಂತರಿಕ ಗಲಭೆಗಳು ಕೂಡಾ ರಾಷ್ಟ್ರೀಯ ಹಿತಾಸಕ್ತಿಗೆ ಬೆದರಿಕೆಯೊಡ್ಡಬಹುದು ಎಂದು ಊಹಿಸಿದ್ದರು. ಅದಕ್ಕಾಗಿಯೇ ಅವರು ತುರ್ತುಪರಿಸ್ಥಿತಿಯಂತಹ  ಒಂದು ಅವಕಾಶವನ್ನು ಒದಗಿಸಿದ್ದಾರೆ.ʼʼ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದರು.

ʻʻಸರ್ಕಾರದ ಈ ನಡೆಯಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಿಲ್ಲ.  ಆದರೆ ಕೋಮುವಾದಿ ವಿಚ್ಛಿದ್ರಕಾರಿ ಶಕ್ತಿಗಳ ಮಾರ್ಗದರ್ಶನದಲ್ಲಿ ವಿರೋಧ ಪಕ್ಷಕ್ಕೆ  ನೇರ ಕ್ರಮ ಮತ್ತು ಅದರ ವಿಧ್ವಂಸಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೆ ಒಳಗಾಗುತ್ತಿತ್ತು, ನಾಶವಾಗುತ್ತಿತ್ತು ಮತ್ತು ದುರ್ಬಲವಾಗುತ್ತಿತ್ತು. ಸೇನೆ, ಪೋಲೀಸ್ ಮತ್ತು ನಮ್ಮ ಕೈಗಾರಿಕಾ ಕಾರ್ಮಿಕರಲ್ಲಿ ಅತೃಪ್ತಿ ಮೂಡಿಸಲು ಸದಾ ಪ್ರಯತ್ನಿಸುತ್ತಿತ್ತುʼʼ ಎಂದು ಇಂದಿರಾಗಾಂಧಿಯವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದನ್ನು ನಾವು ಇಲ್ಲಿ ಮರೆಯುವಂತೆಯೇ ಇಲ್ಲ ಎಂದರು.

ತುರ್ತು ಪರಿಸ್ಥಿತಿ ಯುದ್ಧದಂತಹ ಸನ್ನಿವೇಶಗಳು ನಿರ್ಮಾಣವಾದರೆ ಅದಕ್ಕೆ ಸಾಂವಿಧಾನಿಕ ಪ್ರತಿಕ್ರಿಯೆಯಾಗಿದೆ. ಒಂದೆಡೆ ಸಂವಿಧಾನವು ಯುದ್ಧದ ಸಮಯದಲ್ಲಿ ಬಾಹ್ಯ ತುರ್ತು ಪರಿಸ್ಥಿತಿಯನ್ನು ಹೇರಿದರೆ, ಅದೇ ಸಂವಿಧಾನವು ದೇಶದೊಳಗೆ ಸೃಷ್ಟಿಯಾಗುವ ಯುದ್ಧದಂತಹ ಪರಿಸ್ಥಿತಿಯನ್ನು ಎದುರಿಸಲು ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತದೆ ಎಂದು ಹೇಳಿದರು.

3 ಜುಲೈ 1975 ರಂದು ಇಂದಿರಾ ಗಾಂಧಿಯವರು ʻಟೈಮ್ಸ್ ಆಫ್ ಇಂಡಿಯಾʼಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆಯೊಂದನ್ನು ಕೊಟ್ಟಿದ್ದರು, ಅದರಲ್ಲಿ “ಯಾರ ಸಿದ್ಧಾಂತವು ಹಿಂಸೆ ಮತ್ತು ಒಡಕನ್ನು ಸೃಷ್ಟಿಸುತ್ತದೆಯೋ ಅವು  ಪ್ರಜಾಪ್ರಭುತ್ವವಾಗಲು ಸಾಧ್ಯವಿಲ್ಲ. ಅಂತಹವರು ಪ್ರಜಾಪ್ರಭುತ್ದದ ಬಗ್ಗೆ ಮಾತನಾಡಿದರೆ, ಹದಿಹರೆಯದ ಹುಡುಗನೊಬ್ಬ ತನ್ನ ಹೆತ್ತವರನ್ನ ಕೊಂದ ಮೇಲೆ ತಾನು ಅನಾಥ, ಅದೇ ಕಾರಣಕ್ಕೆ ನನ್ನ ಕೇಸನ್ನು ವಿಶೇಷವಾಗಿ ಪರಿಗಣಿಸಿ ಎಂದು ಕಾನೂನಿನ ಮುಂದೆ ಕ್ಷಮೆಯಾಚನೆ ಕೋರಿಕೊಂಡಂತಾಗುತ್ತದೆʼʼ ಎಂದಿದ್ದರು ಎಂದರು.

ಪ್ರತಿಪಕ್ಷಗಳು ಸರ್ಕಾರವು ಘೋಷಿಸಿದ್ದ ತುರ್ತುಪರಿಸ್ಥಿತಿಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಎಲ್ಲಾ ಅವಕಾಶಗಳೂ ಇದ್ದವು. ಆದರೆ 1976ರ ಮಾರ್ಚ್‌ನಲ್ಲಿ ಚುನಾವಣೆಗಳು ನಡೆಯಲಿರುವುದರಿಂದ ಇನ್ನೂ 10 ತಿಂಗಳ ಕಾಲ ತನ್ನ ಪ್ರತಿರೋಧದ ಕಾವನ್ನು ಉಳಿಸಿಕೊಳ್ಳುವುದು ಪ್ರಜಾಸತ್ತಾತ್ಮಕ ಮಾರ್ಗವಾಗಿತ್ತು. ಆದರೆ ಪ್ರತಿಪಕ್ಷಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬದಲಾಗಿ ಬೆದರಿಕೆ ಮತ್ತು ಬಲತ್ಕಾರದ ರಾಜಕೀಯವನ್ನು ಆಶ್ರಯಿಸಿದವು ಎಂದರು.

ಇನ್ನು 10 ತಿಂಗಳ ಕಾಲ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಪಕ್ಷಗಳಿಗೆ ಆಯ್ಕೆ ಇತ್ತು. ಜನಮತವನ್ನು ಗಳಿಸಿ  ಮುಂದಿನ ಸುತ್ತಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬಹುದಿತ್ತು. ಇಂದಿರಾ ಗಾಂಧಿಯವರ ಚುನಾವಣಾ ಅರ್ಜಿಯಲ್ಲಿನ ಪ್ರತಿಕೂಲವಾದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ತುರ್ತು ಪರಿಸ್ಥಿತಿ ಘೋಷಣೆಗೆ  ತಳುಕು ಹಾಕುವವರೂ ಇದ್ದಾರೆ. ಅಂತಹ ವಾದಗಳಿಗೆ ಯಾವುದೇ ಹುರುಳಿಲ್ಲ ಎಂದರು.

ಜೂನ್ 12, 1975 ರಂದು  ಅಲಹಾಬಾದ್‌ಹೈಕೋರ್ಟಿನ ಈ ತೀರ್ಪನ್ನು ಮುನ್ನಲೆಯಾಗಿಟ್ಟುಕೊಂಡು ಇಂದಿರಾ ಗಾಂಧಿಯವರ ಚುನಾವಣೆಯನ್ನು ರದ್ದುಗೊಳಿಸಬೇಕೆಂದು ರಾಜ್ ನಾರಾಯಣ್ ಅವರು ಸಲ್ಲಿಸಿದ ಅರ್ಜಿಯಲ್ಲಿ ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಅವರು ತೀರ್ಪು ನೀಡಿದ್ದರು ಎಂದರು.

ಸ್ವತಃ ನ್ಯಾಯಮೂರ್ತಿ ಜಗನ್ಮೋಹನ್ ಲಾಲ್ ಸಿನ್ಹಾ ಅವರು ಶ್ರೀಮತಿ ಇಂದಿರಾ ಗಾಂಧಿ ಅವರು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ಮತ್ತು ತಡೆಯಾಜ್ಞೆ ಪಡೆಯುವುದಕ್ಕೆ ಅನುವು ಮಾಡಿಕೊಡಲು ತಮ್ಮ ತೀರ್ಪನ್ನು ಎರಡು ವಾರಗಳವರೆಗೆ ತಡೆಹಿಡಿದಿದ್ದರು. ಆದ್ದರಿಂದ, ಆರಂಭದಲ್ಲಿ, ತೀರ್ಪನ್ನು ಎರಡು ವಾರಗಳವರೆಗೆ ತಡೆಹಿಡಿಯಲಾಗಿತ್ತು. ಈ ಅವಧಿಯಲ್ಲಿ, ಶ್ರೀಮತಿ ಇಂದಿರಾ ಗಾಂಧಿ ಸುಪ್ರೀಂ ಕೋರ್ಟ್ನ ಮೊರೆ ಹೋದರು. ಸುಪ್ರೀಂ ಕೋರ್ಟ್ ನ ರಜಾಕಾಲದ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ಅವರು ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಷರತ್ತುಬದ್ಧ ತಡೆಯಾಜ್ಞೆ ನೀಡಿ, ಶ್ರೀಮತಿ ಇಂದಿರಾ ಗಾಂಧಿಗೆ ಸಂಸತ್ತಿನ ಕಾರ್ಯಕಲಾಪಗಳಲ್ಲಿ ಭಾಗವಹಿಸಲು ಅನುಮತಿ ನೀಡಿದರು. ಆದರೆ ಸಂಸತ್ತಿನ ಮತದಾನದಲ್ಲಿ ಭಾಗವಹಿಸದಂತೆ ನಿರ್ಬಂಧವನ್ನು ಹಾಕಿದರು ಎಂದರು.

ಅಂತಿಮವಾಗಿ ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತು. ಸಂಸತ್ತು ಕೂಡ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಸ್ಪೀಕರ್ ಅವರನ್ನು ಕಿರಿಕಿರಿ ಮತ್ತು ಕ್ಷುಲ್ಲಕ ಮೊಕದ್ದಮೆಗಳಿಂದ ರಕ್ಷಿಸುವ ಕಾನೂನನ್ನು ಜಾರಿಗೆ ತಂದಿತು. ಹಾಗಾಗಿ, ಇಂದಿರಾ ಗಾಂಧಿ ಅವರಿಗೆ ಬೇರೆ ಆಯ್ಕೆಗಳ ಮೊರೆ ಹೋಗಲು ಕೋರ್ಟ್‌ ಪ್ರಕರಣವು ಎಂದಿಗೂ ಗಂಭೀರವಾದ ಸವಾಲನ್ನು ಒಡ್ಡಲಿಲ್ಲ ಎನ್ನುವುದು ನ್ಯಾಂಗದ  ಇತಿಹಾಸದಲ್ಲಿ ದಾಖಲಾಗಿದೆ ಎಂದರು.

ಇಂದಿರಾ ಗಾಂಧಿ ಪರವಾಗಿ ವಕಾಲತ್ತು ನಡೆಸಿದ ಖ್ಯಾತ ಕಾನೂನು ತಜ್ಞ ಮತ್ತು ಸಂವಿಧಾನ ತಜ್ಞ ನಾನಿ ಎ ಪಾಲ್ಖಿವಾಲಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ, ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ತೀವ್ರವಾಗಿ ಖಂಡಿಸಿದ್ದರು. “ತೀರ್ಪು ಬರೆದ ನ್ಯಾಯಾಧೀಶರಿಗೆ ಕಾನೂನು ತಿಳಿದಿಲ್ಲ. ಇದು ಸಂಚಾರ ಕಾನೂನು ಉಲ್ಲಂಘನೆಗಾಗಿ ಪ್ರಧಾನಿಯನ್ನು ಹುದ್ದೆಯಿಂದ ಕೆಳಗಿಳಿಸಿದಂತೆ” ಎಂದು ಪಾಲ್ಖಿವಾಲಾ ಅವರು ವಾದಿಸಿದ್ದರು. ಸರ್ವೋಚ್ಛ ನ್ಯಾಯಾಲಯದ ತಡೆಯಾಜ್ಞೆಯ ಹೊರತಾಗಿಯೂ, ಪ್ರತಿಪಕ್ಷಗಳು ಹತಾಶಕ್ಕೊಳಗಾದವು ಎಂದರು.

ಜಯಪ್ರಕಾಶ್ ನಾರಾಯಣ್ ಅವರು ಸರ್ಕಾರದ ಆದೇಶಗಳನ್ನು ಪಾಲಿಸದಂತೆ, ಪೊಲೀಸ್ ಮತ್ತು ಸೈನ್ಯಕ್ಕೆ ದಂಗೆ ಏಳುವಂತೆ ಕರೆ ನೀಡಿದರು. ತುರ್ತುಪರಿಸ್ಥಿತಿ ಘೋಷಣೆಗೂ ಮುನ್ನ ಉಂಟಾದ ಪರಿಸ್ಥಿತಿಯು ಪ್ರತಿಪಕ್ಷಗಳ ಕುತಂತ್ರದ ಯೋಜನೆಯನ್ನು ತಲೆಕೆಳಗೆ ಮಾಡಿತು. 1974 ರಲ್ಲಿ ರೈಲ್ವೇ ಮುಷ್ಕರವು ದೇಶದ ಜೀವನಾಡಿಯಾದ ರೇಲ್ವೆ ಸಂಚಾರ ನಿಷ್ಕ್ರಿಯಗೊಳ್ಳುವುದಕ್ಕೆ ಕಾರಣವಾಯಿತು. ಇದು ಜನರಿಗೆ ಇನ್ನಿಲ್ಲದ ತೊಂದರೆಗಳನ್ನು ಉಂಟುಮಾಡಿತು ಎಂದರು.

ನ್ಯಾಯಯುತವಾಗಿ ಚುನಾಯಿತಗೊಂಡಿದ್ದ ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸಲು ಅವಕಾಶವಿರಲಿಲ್ಲ ಮತ್ತು ಕೆಲವು ರಾಜ್ಯಗಳಲ್ಲಿ, ವಿಧಾನಸಭೆಗಳನ್ನು ವಿಸರ್ಜಿಸುವಂತೆ ಒತ್ತಾಯಿಸುವ ಸಲುವಾಗಿ, ಶಾಸಕರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಲು ಬೆದರಿಕೆ ಮತ್ತು ಬಲಾತ್ಕಾರದ ಕುತಂತ್ರಗಳನ್ನು ಬಳಸಲಾಯಿತು.  ಗುಜರಾತ್ ಮತ್ತು ಬಿಹಾರದಲ್ಲಿ ನಡೆದ ನವ ನಿರ್ಮಾಣ್ ಚಳುವಳಿ ಇದಕ್ಕೆ ಉದಾಹರಣೆಗಳು ಎಂದರು.

ಇದೂ ಸಾಲದೆಂಬಂತೆ, ಆಂದೋಲನಗಳು ದೇಶಾದ್ಯಂತ ಆವರಿಸಿ, ಹಿಂಸಾಚಾರ ಮತ್ತು ಅರಾಜಕತೆಗೆ ಕಾರಣವಾದವು. ರಾಜಧಾನಿಯಲ್ಲಿ ಸರ್ವೊಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎ.ಎನ್.ರೇ ಅವರ ಮೇಲೆ ಗಂಭೀರ ಹಲ್ಲೆ ಹಾಗೂ ಕೊಲೆ ಯತ್ನ ನಡೆಯಿತು. ಕೇಂದ್ರ ರೈಲ್ವೆ ಸಚಿವ ಲಲಿತ್ ನಾರಾಯಣ್ ಮಿಶ್ರಾ ಅವರನ್ನು ಬಿಹಾರದ ಸಮಸ್ತಿಪುರದಲ್ಲಿ ಹತ್ಯೆ ಮಾಡಲಾಯಿತು. ಜೂನ್ 25, 1975 ರಂದು ಸಶಸ್ತ್ರ ಪಡೆಗಳು ಮತ್ತು ಪೊಲೀಸರಿಗೆ ದಂಗೆ ಏಳಲು ಪ್ರಚೋದನೆ ನೀಡಲಾಯಿತು. ಇವೆಲ್ಲವೂ ಪ್ರತಿಪಕ್ಷಗಳು ಎಷ್ಟು ಕೀಳು ಮಟ್ಟಕ್ಕೆ ಇಳಿಯಬಹುದು ಎಂಬುದನ್ನು ತೋರಿಸಿತು ಎಂದರು.

“ರಕ್ಷಣಾ ಪಡೆಗಳು ಮತ್ತು ಪೊಲೀಸರು ಶಿಸ್ತುಬದ್ಧ ಮತ್ತು ಅಪ್ರತಿಮ ದೇಶಭಕ್ತರಾಗಿದ್ದಾರೆ. ಹಾಗಾಗಿ ಗಂಭೀರವಾಗಿ ನಡೆದ ಪ್ರಚೋದನೆಕಾರಿ ಕರೆಗಳು ಅವರನ್ನು ಪ್ರಭಾವಿಸಲಿಲ್ಲ” ಎಂದು ಇಂದಿರಾ ಗಾಂಧಿ ಅವರು ಹೇಳಿಕೆಯನ್ನೂ ನೀಡಿದರು ಎಂದರು.

ಬ್ರಿಟಿಷ್ ಮಾಜಿ ಉಪಪ್ರಧಾನಿ ಮೈಕೆಲ್ ಫೂಟ್ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯನ್ನು ನಿಭಾಯಿಸಿದ್ದನ್ನೂ ನೋಡಿ, “ಇಂತಹ ನಿರ್ಣಾಯಕ ಘಟ್ಟದಲ್ಲಿ ಭಾರತವನ್ನು ಐಕ್ಯತೆಯನ್ನು ಹಿಡಿದಿಟ್ಟುಕೊಂಡರೆ, ಅದರ ಶ್ರೇಯಸ್ಸು ಇಂದಿರಾ ಗಾಂಧಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದು ಎಂದರು.

ಇತಿಹಾಸವನ್ನೇ ಅರಿಯದ ಪ್ರಧಾನಿ ನರೇಂದ್ರ ಮೋದಿ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿರುವುದು ಇತಿಹಾಸಕ್ಕೆ ಮಾಡುವ ಅಪಚಾರ. ಬಿಜೆಪಿಯವರಿಗೆ ಅಗ್ರಗಣ್ಯ ನಾಯಕರೆಸಿಕೊಂಡ ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ತುರ್ತು ಪರಿಸ್ಥಿತಿಯಲ್ಲಿ ಗೃಹ ಬಂಧನದಲ್ಲಿಡಲಾಗಿತ್ತೇ ಹೊರತು, ಜೈಲಿನಲ್ಲಲ್ಲ ಎಂಬುದನ್ನ ಮೊದಲು ಅರಿತುಕೊಳ್ಳಲಿ. ಈ ಎಲ್ಲ ಹಿನ್ನೆಲೆಯನ್ನು ತಿಳಿಯದೇ  ತುರ್ತು ಪರಿಸ್ಥಿತಿಯ ಕುರಿತು ಸುಳ್ಳಿನ ಭಾಷಣ ಮಾಡುವುದು ಪ್ರಧಾನಿ ಹುದ್ದೆಗೆ ಶೋಭೆ ತರುವ ಕೆಲಸವಲ್ಲ ಎಂದರು.

Leave a Reply