ಲಿಂಗಾಯತರನ್ನು, ಲಿಂಗಾಯತ ಮಠದ ಸ್ವಾಮಿಗಳನ್ನು ಓಲೈಸುತ್ತಾ, ಪಕ್ಷ ಕಟ್ಟಿ ಈಗ ಪಕ್ಷದಲ್ಲಿರುವ ಒಬ್ಬೊಬ್ಬ ಲಿಂಗಾಯತರನ್ನು ಮೂಲೆ ಗುಂಪು ಮಾಡುತ್ತಿರುವುದು ಯಾರ ಕಾರಸ್ತಾನ?
ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರೇ, ನಾಲ್ಕು ದಶಕಗಳ ಕಾಲ ರಕ್ತ-ಬೆವರು ಹರಿಸಿ ಪಕ್ಷ ಕಟ್ಟಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದವರು ಯಾರು? ಪಕ್ಷ ಅಧಿಕಾರದಲ್ಲಿದ್ದಾಗಲೇ ಅವರನ್ನು ಜೈಲಿಗೆ ಕಳಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಯಾರ ಷಡ್ಯಂತ್ರ? ನೀವೂ ಅದರಲ್ಲಿ ಷಾಮೀಲಾಗಿಲ್ಲವೇ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರ 75ನೇ ಅದ್ದೂರಿ ಜನ್ಮದಿನಾಚರಣೆ ಕುರಿತು ಕೊಂಕು ತೆಗೆದಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿರುವ ಅವರು, ಬಿ.ಎಸ್.ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನದ ಆಸೆ ತೋರಿಸಿ, ಅವರಿಂದಲೆ ಆಪರೇಷನ್ ಕಮಲ ಮಾಡಿಸಿದ್ದು ಯಾರು? ಕೊನೆಗೆ ಅವರನ್ನೇ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದು ಯಾರು? ಕೈಗೆ ಬಂದದ್ದು ನಿಮ್ಮ ಬಾಯಿಗೆ ಬಾರದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ ಬೆಂಕಿ ಬಿದ್ದದ್ದು ಯಾರ ಹೊಟ್ಟೆಗೆ? ಎಂದು ಪ್ರಶ್ನಿಸಿದ್ದಾರೆ.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪ್ರತಿದಿನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರರ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿರುವುದು ಯಾರ ಕುಮ್ಮಕ್ಕಿನಿಂದ? ಪಕ್ಷದ ಹಿರಿಯ ನಾಯಕನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಶಾಸಕರ ವಿರುದ್ಧ ಕ್ರಮಕೈಗೊಳ್ಳದಂತೆ ತಡೆಯುತ್ತಿರುವ ಕೈಗಳು ಯಾರದ್ದು? ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಗ ವಿಜಯೇಂದ್ರನವರಿಗೆ ಸಚಿವ ಸ್ಥಾನ ಸಿಗದಂತೆ ಮಾಡಲು ಪಂಚೆ ಎತ್ತಿಕಟ್ಟಿ ನಿಂತು ಸಂತೋಷ ಪಡುತ್ತಿರುವವರು ಯಾರು? ಆ ಸಂತೋಷದಲ್ಲಿ ಭಾಗಿಯಾಗಿರುವವರು ಯಾರು? ಹಗರಣಗಳಲ್ಲಿ ಅವರ ಹೆಸರನ್ನು ಸೋರಿಬಿಡುತ್ತಿರುವ ಸಂಚು ಯಾರದ್ದು? ಎಂದಿದ್ದಾರೆ.
ಲಿಂಗಾಯತರನ್ನು, ಲಿಂಗಾಯತ ಮಠದ ಸ್ವಾಮಿಗಳನ್ನು ಓಲೈಸುತ್ತಾ, ಪಕ್ಷ ಕಟ್ಟಿ ಈಗ ಪಕ್ಷದಲ್ಲಿರುವ ಒಬ್ಬೊಬ್ಬ ಲಿಂಗಾಯತರನ್ನು ಮೂಲೆ ಗುಂಪು ಮಾಡುತ್ತಿರುವುದು ಯಾರ ಕಾರಸ್ತಾನ? ಮುಖ್ಯಮಂತ್ರಿ ಸ್ಥಾನದ ಕನಸಿನಲ್ಲಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಶಾಸಕ ಅರವಿಂದ ಬೆಲ್ಲದ ಅವರ ಆಸೆಗೆ ತಣ್ಣೀರೆರಚಿದ್ದು ಯಾರು? ಎಂದಿದ್ದಾರೆ.
ಮೊದಲ ಅಧಿಕಾರದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಮಾಡಿದ್ದ ಬಿಜೆಪಿ, ಎರಡನೇ ಅವಧಿಯ ವರ್ಷ ಮುಗಿಯುವಷ್ಟರಲ್ಲಿ ಮೊದಲನೆಯವರನ್ನು ಪದಚ್ಯುತಿಗೊಳಿಸಿ ಎರಡನೇ ಮುಖ್ಯಮಂತ್ರಿಯನ್ನು ಮಾಡಿತ್ತು. ಈಗ ಎರಡನೆಯವರನ್ನೂ ಇಳಿಸಿ ಮೂರನೆಯವರನ್ನು ಕೂರಿಸಲು ಹೊರಟಿರುವ ನೀವು ಕಾಂಗ್ರೆಸ್ ಭಿನ್ನಮತದ ಬಗ್ಗೆ ಮಾತನಾಡುವುದು ತಮಾಷೆಯಾಗಿದೆ ಎಂದಿದ್ದಾರೆ.
ಸಾಧನೆಯ ಬಲದಿಂದ ಬಹುಮತ ಗಳಿಸಿ ಅಧಿಕಾರಕ್ಕೆ ಬರುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ. ನಿಮ್ಮದೇನಿದ್ದರೂ ಆಪರೇಷನ್ ಕಮಲದ ಹೊಲಸು ದಂಧೆ. ಎದುರಿಗಿದ್ದವರ ಊಟದೆಲೆಯ ಮೇಲಿನ ಸತ್ತ ನೊಣವನ್ನು ಹುಡುಕುವ ಚಾಳಿ ಬಿಡಿ, ನಿಮ್ಮ ಊಟದ ಎಲೆಯಲ್ಲಿ ಸತ್ತು ಬಿದ್ದಿರುವ ಆನೆಯನ್ನು ನೋಡಿ Pralhad Joshi ಯವರೇ ಎಂದು ಕಿಡಿಕಾರಿದ್ದಾರೆ.



