ಕಲಬುರ್ಗಿ: ನಮ್ಮ ಸರ್ಕಾರ ಇದ್ದಾಗ ಅನ್ನಭಾಗ್ಯ ಯೋಜನೆಯಡಿ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆವು. ಈಗ 5 ಕೆ.ಜಿ ಗೆ ಇಳಿಸಿದ್ದಾರೆ. ಯಾಕಪ್ಪ ಅಕ್ಕಿ ಕಡಿಮೆ ಮಾಡಿದ್ರಿ ಎಂದರೆ ದುಡ್ಡಿಲ್ಲ ಎನ್ನುತ್ತಾರೆ, ಲೂಟಿ ಹೊಡೆಯುವುದು ಕಡಿಮೆ ಮಾಡಿದರೆ ಅಲ್ವಾ ಹಣ ಉಳಿಯುವುದು? ನಾವು ಮತ್ತೆ ಅಧಿಕಾರಕ್ಕೆ ಬಂದರೆ ಪ್ರತೀ ಕುಟುಂಬದ ಸದಸ್ಯನಿಗೆ ತಲಾ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಇಂದು ನಡೆದ ಬೈಕ್ ರ್ಯಾಲಿ ಹಾಗೂ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಮಾತಾಡಿದ ಅವರು, ನರೇಂದ್ರ ಮೋದಿ ಅವರು ಹೇಳಿದ್ದ ಅಚ್ಚೇದಿನ್ ಬಂತಾ? ಎಂದು ಪ್ರಶ್ನಿಸಿದರು.
ಇಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂಬ ಕಾರಣಕ್ಕೆ ನಾವು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಾಮಾನ್ಯ ಜನರ ಸಹಾಯಕ್ಕೆ ನಿಲ್ಲಬೇಕು ಎಂದು ಪ್ರತೀ ಮನೆಗೆ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ಮತ್ತು ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂಪಾಯಿ ನೀಡುವ ತೀರ್ಮಾನ ಮಾಡಿದ್ದೇವೆ. ಇವೆರೆಡು ಕಾರ್ಯಕ್ರಮಗಳಿಂದ ರಾಜ್ಯದ ಖಜಾನೆಗೆ 40,000 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದರು.
ನಾವು ಕೊಟ್ಟ ಮಾತಿನಂತೆ ನಡೆಯುವವರು. ನಮ್ಮ ಸರ್ಕಾರ ಚುನಾವಣಾ ಪ್ರಣಾಳಿಕೆ 99% ಭರವಸೆಗಳನ್ನು ಈಡೇರಿಸಿತ್ತು, ಈಗಿನ ಬಿಜೆಪಿ ಸರ್ಕಾರ 10% ಭರವಸೆಗಳನ್ನು ಕೂಡ ಈಡೇರಿಸಿಲ್ಲ. ಈ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚೆಗೆ ಬರಲು ಸಿದ್ಧನಿದ್ದೇನೆ, ವೇದಿಕೆಯನ್ನು ನೀವೆ ಸಿದ್ಧಮಾಡಿ ಎಂದು ಸವಾಲು ಹಾಕಿದ್ದೆ. ಬೊಮ್ಮಾಯಿ ಅವರಿಗೆ ಧಮ್ ಇಲ್ಲದ ಕಾರಣಕ್ಕೆ ಇವತ್ತಿನ ವರೆಗೆ ಚರ್ಚೆಗೆ ಬರುವುದಕ್ಕೆ ಒಪ್ಪಿಲ್ಲ ಎಂದರು.
371(ಜೆ) ಜಾರಿ ಹಿಂದಿನ ಶ್ರೇಯ ಮಲ್ಲಿಕಾರ್ಜುನ ಖರ್ಗೆ ಸಹಿತ ಈ ಭಾಗದ ಕಾಂಗ್ರೆಸ್ ನಾಯಕರಿಗೆ ಸಲ್ಲಬೇಕು. ಮನಮೋಹನ್ ಸಿಂಗ್ ಅವರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ಮಾಡಿ, ವಿಶೇಷ ಪ್ರಾತಿನಿಧ್ಯ ನೀಡಿತು. ಇದರಿಂದ ಈ ಭಾಗದ ಯುವ ಜನರು ಡಾಕ್ಟರ್, ಇಂಜಿನಿಯರ್, ಶಿಕ್ಷಕರಾಗಲು ಸಾಧ್ಯವಾಯಿತು. ನಮ್ಮ ಸರ್ಕಾರ ಈ ಭಾಗದ 30,000 ಹುದ್ದೆಗಳನ್ನು ಭರ್ತಿ ಮಾಡಿತ್ತು. ಈಗ 36,000 ಹುದ್ದೆಗಳ ಖಾಲಿ ಇವೆ, ಒಂದು ಹುದ್ದೆಯನ್ನು ಭರ್ತಿ ಮಾಡಿಲ್ಲ ಎಂದರು.
ನಾವು ಮುಂದೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಈ ಭಾಗದ ಅಭಿವೃದ್ಧಿಗೆ ನೀಡುವ ಅನುದಾನವನ್ನು 10,000 ಕೋಟಿಗೆ ಹೆಚ್ಚಿಸುತ್ತೇವೆ, ಬಾಕಿ ಇರುವ 36,000 ಹುದ್ದೆಗಳನ್ನು ಭರ್ತಿಮಾಡುತ್ತೇವೆ, ಪ್ರತೀ ಗ್ರಾಮ ಪಂಚಾಯತಿಗೆ 1 ಕೋಟಿ ವಿಶೇಷ ಅನುದಾನ ನೀಡುತ್ತೇವೆ. ನಾವು ನುಡಿದಂತೆ ನಡೆಯುವವರು, ಕೊಟ್ಟ ಮಾತಿಗೆ ತಪ್ಪುವವರಲ್ಲ ಎಂದರು.
ಇಲ್ಲಿ ಕೋಲಿ ಸಮಾಜದ ಜನ ಹೆಚ್ಚಿದ್ದಾರೆ. ನಾನು ಮುಖ್ಯಮಂತ್ರಿಯಾಗಿರುವಾಗ ಕೋಲಿ, ಕಬ್ಬಲಿಗ ಸಮಾಜವನ್ನು ಎಸ್,ಟಿ ಗುಂಪಿಗೆ ಸೇರಿಸಬೇಕು ಎಂದು 3 ಬಾರಿ ಶಿಫಾರಸು ಮಾಡಿದ್ದೆ. ಪ್ರಿಯಾಂಕ್ ಖರ್ಗೆ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಸ್ಪಷ್ಟೀಕರಣವನ್ನು ನೀಡಿ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದಾರೆ. ದೆಹಲಿಗೆ ಹೋಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅವರಿಗೆ ವಿವರಣೆ ನೀಡಿ ಬನ್ನಿ ಎಂದು ಪ್ರಿಯಾಂಕ್ ಅವರನ್ನು ಕಳಿಸಿಕೊಟ್ಟಿದ್ದೆ, ಅಲ್ಲಿ ಹೋಗಿ ಎಲ್ಲಾ ರೀತಿಯ ಮಾಹಿತಿ ಕೊಟ್ಟು ಬಂದರೂ ಇವತ್ತಿನ ವರೆಗೆ ಕೋಲಿ ಸಮಾಜವನ್ನು ಎಸ್,ಟಿ ಗೆ ಸೇರಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿಲ್ಲ ಎಂದರು.
ನಮ್ಮದು ಡಬ್ಬಲ್ ಇಂಜಿನ್ ಸರ್ಕಾರ ಎನ್ನುವ ಬೊಮ್ಮಾಯಿ ಅವರು ಮೊದಲು ಈ ಕೆಲಸ ಮಾಡಿ ತೋರಿಸಲಿ. ಇದೇ ರೀತಿ ಕುರುಬರು, ಗೊಂಡ, ರಾಜಗೊಂಡ ಸಮಾಜವನ್ನು ಎಸ್,ಟಿ ಸೇರಿಸುವಂತೆ ಶಿಫಾರಸು ಮಾಡಿದ್ದೆ, ಅದನ್ನು ಮಾಡಿಲ್ಲ ಎಂದರು.
ಅಂಬಿಗರ ಚೌಡಯ್ಯನವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುವಂತೆ ಆದೇಶ ನೀಡಿದ್ದು ನಾವು. ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು ನಾವು. ಬಿಜೆಪಿ ಕೊಡುಗೆ ಏನಪ್ಪಾ? ಯುವಕರಿಗೆ ಪ್ರತೀ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದರು, ಕೊಟ್ಟಿದ್ದಾರ? ಹೀಗೆ ಮಹಿಳೆಯರಿಗೆ, ಯುವಕರಿಗೆ, ರೈತರಿಗೆ, ಬಡಜನರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಯಾವ ಸಮುದಾಯಗಳಿಗೂ ನ್ಯಾಯ ಒದಗಿಸದ ಬಿಜೆಪಿ ಪಕ್ಷವನ್ನು ನಂಬಿ ಮತ ಹಾಕುತ್ತೀರ? ಎಂದು ಪ್ರಶ್ನಿಸಿದರು.
ನಾವು ಮಾಡಿದ್ದ ಶಾದಿ ಭಾಗ್ಯ ಕಾರ್ಯಕ್ರಮವನ್ನು ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ನಿಲ್ಲಿಸಿದ್ರು, ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸಿದ್ರು, ನಾನು ಅಧಿಕಾರಕ್ಕೆ ಬರುವ ಮೊದಲು ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ವಾರ್ಷಿಕ ಅನುದಾನ 400 ಕೋಟಿ ಇತ್ತು, ಅದನ್ನು 3150 ಕೋಟಿಗೆ ಏರಿಕೆ ಮಾಡಿದ್ದೆ. ಈಗಿನ ಸರ್ಕಾರ 800 ಕೋಟಿ ಕೊಟ್ಟಿದೆ. ಈ ಸರ್ಕಾರ ಯಾವ ವರ್ಗದ ಜನರ ಪರವಾಗಿದೆ ಎಂದು ನೀವೆ ಯೋಚನೆ ಮಾಡಿನೋಡಿ ಎಂದರು.




