ಸಾರಿಗೆ ಖಾಸಗಿಯವರ ಪಾಲಾದರೆ ಎದುರಾಗುವ ಸಮಸ್ಯೆಗಳೇನು?

5 years ago

ಕಳೆದ ಆರು ದಿನಗಳಿಂದ ಕೆ.ಎಸ್.ಆರ್.ಟಿ.ಸಿ ಮತ್ತು ಬಿಎಂಟಿಸಿ ಸೇರಿದಂತೆ ಸಾರಿಗೆ ನಿಗಮಗಳ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. 10 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ನೌಕರರು ಆಗಾಗ ಸರ್ಕಾರದ ಮೇಲೆ ಒತ್ತಡಗಳನ್ನು ಹೇರಿದ್ದರು. ಪ್ರತಿಭಟನೆಯನ್ನೂ ನಡೆಸಿದ್ದರು. ಅವುಗಳಲ್ಲಿ ಕೆಲವನ್ನು ಸರ್ಕಾರ ಈಡೇರಿಸುವ ಭರವಸೆಯನ್ನೂ ನೀಡಿದೆ.

ಆದರೆ, ಕೊರೊನಾ ನಂತರ ದೇಶದಲ್ಲಿ ಅನೇಕ ಬಗೆಯ ವಿಷಮ ಸಮಸ್ಯೆಗಳು ಎದುರಾಗಿವೆ. ಪ್ರಮುಖವಾಗಿ ಜನರ ಬಳಿ ನಿಗದಿತ ಆದಾಯದಲ್ಲಿ ಖೋತಾ ಆಗಿದೆ. ಪೆಟ್ರೋಲ್, ಡೀಸೆಲ್, ಎಲ್.ಪಿ.ಜಿ. ಬೆಲೆ ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಜನರ ಕೊಳ್ಳುವ ಶಕ್ತಿ ಕುಸಿದಿದ್ದು, ಜೀವನ ನಡೆಸುವುದು ದುಸ್ತರವಾಗುತ್ತಿದೆ.

ಮತ್ತೊಂದು ಮಹತ್ವದ ಸಂಗತಿಯೆಂದರೆ, ಹೀಗೆ ಆದಾಯದಲ್ಲಿ ಕೊರತೆ ಒಂದುಕಡೆಯಾದರೆ ವೆಚ್ಚ ಏರುತ್ತಿದೆ. ಹಣದುಬ್ಬರ ಏರಿಕೆ, ಬಡತನ ವಿಸ್ತರಣೆಯಲ್ಲದೆ, ಕೊರೊನಾದಿಂದಾಗಿ ಪ್ರಾಥಮಿಕ ಶಿಕ್ಷಣ ಸ್ಥಬ್ಧವಾಗಿದೆ. ಮನೆಯಲ್ಲಿರುವ ಮಕ್ಕಳು ಓದಿನಿಂದ ವಿಮುಖವಾಗಿದ್ದಾರೆ. ಇದು ಇನ್ನೊಂದು ಬಗೆಯ ದುಷ್ಪರಿಣಾಮವನ್ನು ಭವಿಷ್ಯದಲ್ಲಿ ತಂದೊಡ್ಡಲಿದೆ. ಶೈಕ್ಷಣಿಕ ತಜ್ಞರ ಪ್ರಕಾರ, ಕೊರೊನಾ ಲಾಕ್ ಡೌನ್ ಪರಿಣಾಮದಿಂದಾಗಿ ಪ್ರಾಥಮಿಕ ಶಿಕ್ಷಣಕ್ಕೆ ಹಿಡಿದಿರುವ ಗ್ರಹಣದಿಂದಾಗಿ ಸುಮಾರು ಶೇ. 25ರಷ್ಟು ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗುವ ಸಾಧ್ಯತೆ ಇದೆ. ಯಾವುದೇ ಸರ್ಕಾರವಾದರೂ ಇಂತಹ ಸಮಸ್ಯೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಕು. ದುರಾದೃಷ್ಟವಶಾತ್ ಇದು ನಡೆಯುತ್ತಿಲ್ಲ.

ಇವೆಲ್ಲ ಬೆಳವಣಿಗೆಗಳ ನಡುವೆ ಸಾರಿಗೆ ನಿಮಗಗಳ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಿದ್ದಾರೆ. ಇಲ್ಲಿ ಎರಡು ವಾದಗಳಿವೆ.

ಒಂದು ಸರ್ಕಾರದ್ದು, ಅದರ ಪ್ರಕಾರ, ನೌಕರರ ಬೇಡಿಕೆಗಳಿಗೆ ಸರ್ಕಾರ ಈಗಾಗಲೇ ಸ್ಪಂದಿಸಿದೆ ಎನ್ನುವುದು. ಜೊತೆಗೆ, ಕೊರೊನೋತ್ತರದಲ್ಲಿ ಸರ್ಕಾರಕ್ಕೆ ಆದಾಯದಲ್ಲಿ ಕೊರತೆಯಾಗಿದೆ. ಆದ್ದರಿಂದ ವೇತನ ಪರಿಷ್ಕರಣೆ ಅಸಾಧ್ಯ.

ಎರಡನೆಯದು ನೌಕರರ ವಾದ. ಅವರ ಪ್ರಕಾರ, ಸರ್ಕಾರ 6ನೇ ವೇತನ ಆಯೋಗದ ಪ್ರಕಾರ ವೇತನ ನೀಡಬೇಕು. ನಿಜಕ್ಕೂ ಸಾರಿಗೆ ನೌಕರರು, ಪೊಲೀಸ್ ಸಿಬ್ಬಂದಿಯ ಮೇಲೆ ಇಡೀ ದೇಶಾದ್ಯಂತ ಭಾರೀ ಒತ್ತಡವಿದೆ. ವಾರದ ರಜೆ, ದಿನದಲ್ಲಿ 8 ಗಂಟೆ ದುಡಿಮೆಯ ಅವಧಿಯ ನಿಯಮಗಳು ಇವರಿಗೆ ಅನ್ವಯಿಸುತ್ತಿಲ್ಲ. ಇದರಿಂದಾಗಿ ಅವರಿಗೆ ಕೌಟುಂಬಿಕ ಮತ್ತು ಆರೋಗ್ಯದ ಸಮಸ್ಯೆಗಳು ಎದುರಾಗುತ್ತಿವೆ. ಇದರ ಅಂತಿಮ ಪರಿಣಾಮ ಅವರ ಮೇಲಷ್ಟೇ ಅಲ್ಲ; ಸಮಾಜದ ಮೇಲೂ ಆಗುತ್ತದೆ ಎಂಬುದನ್ನು ಇದುವರೆಗೆ ದೇಶ, ರಾಜ್ಯಗಳನ್ನು ಆಳಿರುವ ಸರ್ಕಾರಗಳು ಅರಿಯುವ ಗೋಜಿಗೇ ಹೋಗಿಲ್ಲ.

ಬಸ್ಸಲ್ಲೇ ಊಟ, ವಸತಿ, ಬಯಲೇ ನಿತ್ಯಕರ್ಮಕ್ಕೆ ಗತಿ

ಕೆ.ಎಸ್.ಆರ್.ಟಿ.ಸಿ ಮತ್ತು ಬಿಎಂಟಿಸಿ ನೌಕರರು ತುಂಬಾ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೊದಲನೆಯ ಸಮಸ್ಯೆ ಅವರಿಗೆ ಎಲ್ಲ ನೌಕರರಂತೆ ಪ್ರತಿದಿನ ಮನೆಗೆ ಹೋಗಲು ಅವಕಾಶ ಸಿಗುತ್ತಿಲ್ಲ. ಇನ್ನು ಈ ನೌಕರರು ತಮ್ಮ ಕಡೆಯ ಟ್ರಿಪ್ ಎಲ್ಲಿ ಮುಗಿಯುತ್ತದೆಯೋ ಅಲ್ಲೇ ಊಟ, ಶೌಚಾಲಯ, ವಸತಿ ಇತ್ಯಾದಿ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಿದೆ. ನಿಗಮದ ನೀತಿಯ ಪ್ರಕಾರ, ನೌಕರರು ಬಸ್ ಬಿಟ್ಟು ಹೊರಗೆ ವಸತಿ ಮಾಡುವಂತಿಲ್ಲ.

ರಾಜ್ಯದ ವಿವಿಧ ಪ್ರದೇಶಗಳಿಂದ ಬೆಂಗಳೂರಿಗೆ ಬರುವ ವಿವಿಧ ಸಾರಿಗೆ ನಿಗಮಗಳ ನೌಕರರು ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ. ಅವರಲ್ಲಿ ಬಹುತೇಕರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮತ್ತು ಡಿಪೋಗಳಲ್ಲಿ ಬಸ್ ಗಳಲ್ಲೇ ಊಟ, ವಸತಿ ಮಾಡುತ್ತಿದ್ದಾರೆ. ಬಿಎಂಟಿಸಿ ನೌಕರರದೂ ಇದೇ ಪರಿಸ್ಥಿತಿ. ಬಸ್ ಗಳಲ್ಲಿ ಸೊಳ್ಳೆ ಕಾಟ ಮತ್ತು ಇತರ ಸಮಸ್ಯೆಗಳ ನಡುವೆ ಉಳಿದುಕೊಂಡು, ಅವರು ಮುಂಜಾನೆಯೇ ಕರ್ತವ್ಯವನ್ನು ಆರಂಭಿಸಬೇಕು. ಮುಂಜಾನೆ ನಿತ್ಯಕರ್ಮಗಳನ್ನು ಪೂರೈಸಿಕೊಳ್ಳಲು ಕೂಡ ಅವರು ಕಷ್ಟಪಡುತ್ತಿದ್ದಾರೆ.

ಸಾರಿಗೆ ನೌಕರರಿಗೆ ಹಬ್ಬಗಳ ಸಂಭ್ರಮವೇ ಇಲ್ಲ

ರಾಜ್ಯದ ಜನರಿಗೆ ರಜೆ ಅನುಭವಿಸಲು, ಹಬ್ಬದ ರಜೆಗಳಲ್ಲಿ ಸಾರಿಗೆ ನೌಕರರಿಗೆ ರಜೆ ಇಲ್ಲ. ಇವರು ನಮ್ಮಂತಹ ಜನರ ಸೇವೆಗಾಗಿ ತಮ್ಮ ವೈಯಕ್ತಿಕ ಬದುಕಿನ ಸುಂದರ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಅವರ ತ್ಯಾಗಕ್ಕೆ ವೇತನ ಪರಿಷ್ಕರಣೆಯ ಬೇಡಿಕೆಯನ್ನು ಪ್ರತಿಷ್ಠೆ, ಅಧಿಕಾರದ ದರ್ಪಗಳ ಮೂಲಕ ನೋಡಬಾರದು.

ದೇಶ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಖಾಸಗೀಕರಣದ ಪರವಿದೆ. ಇಂತಹ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ನಿಗಮಗಳ ನೌಕರರು ಪ್ರತಿಭಟನೆಯ ಮಾದರಿ, ಪ್ರತಿಭಟನೆಯಿಂದ ದೂರಗಾಮಿಯಾಗಿ ಆಗಬಹುದಾದ ದುಷ್ಪರಿಣಾಮಗಳನ್ನು, ಗೊತ್ತುಗುರಿಗಳನ್ನು ಅರಿಯಬೇಕಿತ್ತು. ಏಕೆಂದರೆ, ಈಗ ಕೇಂದ್ರದಲ್ಲಿರುವ ಸರ್ಕಾರ ರೈಲ್ವೇ, ಬಿ.ಎಸ್.ಎನ್.ಎಲ್., ತೈಲಕಂಪನಿಗಳು, ಎಲ್.ಐ.ಸಿ., ವಿಮಾನ ನಿಲ್ದಾಣಗಳನ್ನೇ ಖಾಸಗೀಕರಿಸುತ್ತಿದೆ. ಇದೇ ಚಿಂತನೆಯ ಪಕ್ಷ ರಾಜ್ಯದಲ್ಲೂ ಅಧಿಕಾರದಲ್ಲಿದೆ. ಇದಕ್ಕೆ ಪೂರಕವಾಗಿ ಮೈಸೂರಿನ ಸಂಸದ ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮೊದಲಾದವರು ನೀಡಿರುವ ಹೇಳಿಕೆಯನ್ನು ಸಾರಿಗೆ ನೌಕರರು ಗಂಭೀರವಾಗಿ ಪರಿಗಣಿಸಬೇಕು. ಅವರ ಉದ್ದೇಶವೇ ಖಾಸಗೀಕರಣ. ಅದನ್ನು ಸಾರಿಗೆ ನೌಕರರ ಮುಷ್ಕರವನ್ನೇ ಗಮನದಲ್ಲಿಟ್ಟುಕೊಂಡು ಸಾಧಿಸಲು ಯೋಜನೆ ರೂಪಿಸುತ್ತಾರೆ.

ಸಾರಿಗೆ ಖಾಸಗೀಕರಣವಾದರೆ ಎದುರಾಗುವ ಸಮಸ್ಯೆಗಳೇನು?

ಕೆ.ಎಸ್.ಆರ್.ಟಿ.ಸಿಯ ವಿವಿಧ ನಿಗಮಗಳು ಮತ್ತು ಬಿಎಂಟಿಸಿ ಇರುವುದು ಲಾಭಕ್ಕಲ್ಲ. ಇದು ಕೆಎಂಎಫ್ ಗೆ ಕೂಡ ಅನ್ವಯವಾಗುತ್ತದೆ. ಅದರ ಮುಖ್ಯ ಕೆಲಸ ಸೇವೆ. ವ್ಯಾಪಾರಂ ದ್ರೋಹ ಚಿಂತನಂ ಎಂಬ ಮಾತು ಸಂಸ್ಕೃತದಲ್ಲಿದೆ. ಇದರ್ಥ ವ್ಯಾಪಾರವೆಂದರೆ ದ್ರೋಹ ಚಿಂತನೆ. ಲಾಭಕ್ಕಾಗಿ ವ್ಯಾಪಾರಿಗಳು ದ್ರೋಹವನ್ನು ಮಾಡಲೇಬೇಕು. ಆದ್ದರಿಂದ ಅವರಿಗೆ ಸೇವೆಯ ಉದ್ದೇಶ ಮತ್ತು ಗುರಿಗಳು ಇರಲು ಸಾಧ್ಯವಿಲ್ಲ.

ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಕತೆ ಏನಾಗುತ್ತದೆ?

ರಾಜ್ಯದಲ್ಲಿ ಬಡವರು, ಶೋಷಿತರು ಶಿಕ್ಷಣ ಪಡೆಯುವುದು ಇಂದಿಗೂ ದುಸ್ತರವಾಗಿದೆ. ಸರ್ಕಾರ 14 ವರ್ಷದವರೆಗೆ ಕಡ್ಡಾಯ ಶಿಕ್ಷಣ ಕೊಡುವುದು ಸಂವಿಧಾನದಿಂದ ನಿರ್ದೇಶಿತವಾಗಿದೆ. ಆದರೆ, ಅದರಿಂದ ಮುಕ್ತವಾಗಿರುವ ಸರ್ಕಾರಗಳು ಶಿಕ್ಷಣವನ್ನು ಖಾಸಗಿಯವರಿಗೆ ಜಹಗೀರಾಗಿ ಕೊಟ್ಟಿವೆ. ಇದರಿಂದಾಗಿ ಶಿಕ್ಷಣ ದುಬಾರಿಯಾಗಿದೆ. ಬಡವರು, ಶೋಷಿತರು, ದಲಿತರು ಖಾಸಗಿಯಲ್ಲಿ ಶಿಕ್ಷಣ ಪಡೆಯುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಸಾರಿಗೆ ನಿಗಮ ಇರುವುದರಿಂದಾಗಿಯೇ ಇಂತಹ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಸಿಗುತ್ತಿದೆ.

ಒಂದು ವೇಳೆ ಸಾರಿಗೆ ಖಾಸಗಿಯವರ ಪಾಲಾದರೆ ಈಗ ಸಿಗುತ್ತಿರುವ ರಿಯಾಯಿತಿ ಬಸ್ ಪಾಸ್ ದರ ರದ್ದಾಗುತ್ತದೆ. ಭವಿಷ್ಯದಲ್ಲಿ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮುಂದುವರೆದು ದೇಶದ ಆರ್ಥಿಕತೆ ಮತ್ತು ಸಾಮಾಜಿಕ ಸ್ವಾಸ್ಥ್ಯದ ಮೇಲೆ ಕೂಡ ಇದರ ಪ್ರಭಾವ ಉಂಟಾಗುತ್ತದೆ.

ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ರಿಯಾಯಿತಿ ರದ್ದು

ಸರ್ಕಾರ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಹಿರಿಯ ನಾಗರಿಕರಿಗೆ ರಿಯಾಯಿತಿಯನ್ನು ನೀಡಿದೆ. ಜೊತೆಗೆ, ಅಂಗವಿಕಲರಿಗೆ ಉಚಿತ ಪಾಸ್ ನೀಡಿದೆ. ಇನ್ನು ಮಾನ್ಯತೆ ಪಡೆದ ಸುದ್ದಿ ಸಂಸ್ಥೆಗಳ ಪತ್ರಕರ್ತರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೂಡ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಕೊಡಲಾಗಿದೆ. ವಿಶೇಷ ಸಂಗತಿ ಎಂದರೆ, ಪತ್ರಕರ್ತರಿಗೆ ನೀಡಲಾಗುವ ಉಚಿತ ಬಸ್ ಪಾಸ್ ಕರ್ನಾಟಕದ ಒಳಗೆ ಐರಾವತ ಬಸ್ ಸೇರಿದಂತೆ ಎಲ್ಲ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶವಿದೆ. ಸಾರಿಗೆ ವ್ಯವಸ್ಥೆ ಖಾಸಗಿಯವರ ಪಾಲಾದರೆ ಇವೆಲ್ಲ ಕ್ಷಣಮಾತ್ರದಲ್ಲಿ ಇಲ್ಲವಾಗುತ್ತವೆ.

ಮಹಿಳೆಯರಿಗೆ ಸೀಟುಗಳಲ್ಲಿ ಮೀಸಲಾತಿ

ಸಾರಿಗೆ ನಿಗಮಗಳು ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಸುಮಾರು ಶೇ. 33ರಷ್ಟು ಆಸನಗಳನ್ನು ಮೀಸಲಿಡಲಾಗುತ್ತದೆ. ಬೆಂಗಳೂರಿನಲ್ಲಿ ಇದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತದೆ. ದುಡಿದು ದಣಿದ ಮಹಿಳೆಯರು ಈ ಮೀಸಲಾತಿಯಿಂದಾಗಿ ಆಸನದಲ್ಲಿ ಕುಳಿತು ತಾವು ಕ್ರಮಿಸಬೇಕಾದ ಪ್ರಯಾಣದಲ್ಲಿ ಹಿತಾನುಭವ ಪಡೆಯುತ್ತಾರೆ. ಸಾರಿಗೆ ಖಾಸಗಿಯವರ ಪಾಲಾದಲ್ಲಿ ಈ ಸುಖಕ್ಕೆ ತಡೆಬೀಳುತ್ತದೆ.

ಲಾಭಕ್ಕಾಗಿ ಖಾಸಗಿ ಬಸ್ ಗಳು ಓಡುತ್ತವೆಯೇ ಹೊರತು ಸೇವೆಗಲ್ಲ

ಇವೆಲ್ಲ ಸಂಗತಿಗಳಿಗಿಂತ ಮುಖ್ಯವಾದ ಒಂದು ವಿಷಯವಿದೆ. ನೀವು ಖಾಸಗಿಯವರ ಮೇಲೆ ಹಿಡಿತ ಸಾಧಿಸಲು ಸಾಧ್ಯವಿಲ್ಲ. ಖಾಸಗಿ ಬಸ್ ನವರು ಸೀಟು ಪೂರ್ಣವಾಗದೆ ಬಸ್ ಮುಂದಕ್ಕೆ ಚಲಿಸುವುದಿಲ್ಲ. ಅರ್ಧ ಗಂಟೆ ಪ್ರಯಾಣದ ಅವಧಿಗೆ ಅರ್ಧಗಂಟೆ ಬಸ್ ಆಸನಗಳು ಪೂರ್ಣವಾಗುವವರೆಗೆ ಕಾಯಬೇಕಾದ ಪರಿಸ್ಥಿತಿ ಇರುತ್ತದೆ. ಬಿಎಂಟಿಸಿ, ಸಾರಿಗೆ ನಿಗಮಗಳಲ್ಲಿ ಕೂಡ ಕೆಲವು ಕಡೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ, ಖಾಸಗಿಯವರಷ್ಟು ವಿಳಂಬ ಖಂಡಿತ ಆಗುವುದಿಲ್ಲ.

ಇಲ್ಲಿ ಲಾಭಕ್ಕಾಗಿ ನಡೆಸುವ ಖಾಸಗಿಯವರು ನಿಮ್ಮ ಊರಿಗೆ ರಾತ್ರಿ ಹತ್ತುಗಂಟೆಗೆ ಕಡೆಯ ಬಸ್ ಬಿಡುತ್ತಾರೆಯೇ? ಇಂದಿಗೂ ಕತ್ತಲಾಗುವ ಮುನ್ನ ಮನೆ ಸೇರಿಕೊಳ್ಳಬೇಕು ಎಂಬ ಪರಿಸ್ಥಿತಿ ಅನೇಕ ಕಡೆ ಇದೆ. ಇದಕ್ಕೆ ಮೂಲ ಕಾರಣವೇ ಸಾರಿಗೆ ವ್ಯವಸ್ಥೆಯ ಕೊರತೆ. ಬಿಎಂಟಿಸಿ ಮತ್ತು ಸಾರಿಗೆ ಸಂಸ್ಥೆಗಳ ಬಸ್ ಗಳು ಕೆಲವೇ ಜನ ಪ್ರಯಾಣಿಕರಿದ್ದರೂ ಟ್ರಿಪ್ ಮುಗಿಸುತ್ತಾರೆ. ಏಕೆಂದರೆ, ಇವುಗಳ ಸ್ಥಾಪನೆಯ ಹಿಂದಿರುವ ಮೂಲ ಉದ್ದೇಶವೇ ಸೇವೆ. ಬೆಂಗಳೂರಿನಲ್ಲಿ ರಾತ್ರಿ ಹತ್ತಕ್ಕೆ ಕೆಂಪೇಗೌಡ ಬಸ್ ನಿಲ್ದಾಣ ಅಥವಾ ಕೃಷ್ಣರಾಜೇಂದ್ರ ಮಾರುಕಟ್ಟೆಯಿಂದ ಹೊರಟ ಬಸ್ ಯಾವುದೋ ಒಂದು ಪ್ರದೇಶಕ್ಕೆ ರಾತ್ರಿ ಹನ್ನೊಂದಕ್ಕೆ ತಲುಪುತ್ತದೆ. ಅದೇ ಬಸ್ ಮುಂಜಾನೆ 5:30ಕ್ಕೆ ಹೊರಡುತ್ತದೆ. ಇದರಿಂದ ಅನೇಕ ಉಪಯೋಗಗಳು ಜನರಿಗಿವೆ. ರಾತ್ರಿ ನೆಮ್ಮದಿಯಾಗಿ ಕೆಲವರು ಮನೆ ಸೇರಿದರೆ, ಮುಂಜಾನೆ ಮಾರುಕಟ್ಟೆ, ವ್ಯವಹಾರ, ಓದು, ಕ್ರೀಡಾ ತರಬೇತಿ, ಟ್ಯೂಷನ್, ಜಿಮ್, ಸಂಗೀತ ಕಲಿಕೆ ಮತ್ತು ಇತರ ಕೆಲಸಗಳಿಗೆ ನಾಗರಿಕರಿಗೆ ಅನುಕೂಲವಾಗುತ್ತಿದೆ.  ಇದು ಕೆ.ಎಸ್.ಆರ್.ಟಿಸಿ ಮತ್ತು ಇತರ ನಿಗಮಗಳಿಗೂ ಅನ್ವಯವಾಗುತ್ತದೆ.

ಆದರೆ, ಸಾರಿಗೆ ವ್ಯವಸ್ಥೆ ಖಾಸಗಿಯವರ ಪಾಲಾದರೆ ರಾತ್ರಿ ಹತ್ತು ಗಂಟೆಗೆ ಬಸ್ ನ ಆಸನಗಳು ಪೂರ್ಣವಾದರೆ ಮಾತ್ರ ಟ್ರಿಪ್ ಆರಂಭವಾಗುತ್ತದೆ. ಇಲ್ಲವಾದಲ್ಲಿ ಟ್ರಿಪ್ ರದ್ದುಪಡಿಸುವ ಅಧಿಕಾರ ಖಾಸಗಿಯವರಿಗೆ ಇರುತ್ತದೆ. ಲಾಭವಿದ್ದಲ್ಲಿ ಮಾತ್ರ ಖಾಸಗಿಯವರು ಬಸ್ ವ್ಯವಸ್ಥೆ ಮಾಡುತ್ತಾರೆ. ರಾಜ್ಯದ ಜನರ ಸೇವೆಗಿಂತ ಅವರಿಗೆ ಅವರ ಲಾಭವೇ ಮುಖ್ಯವಾಗಿರುತ್ತದೆ.

ಖಾಸಗೀಕರಣವಾದರೆ ಸಾರಿಗೆ ನೌಕರರಿಗೆ ಎದುರಾಗಲಿದೆ ಸಂಕಷ್ಟ

ಸಾರಿಗೆ ನಿಗಮದ ನೌಕರರಿಗೆ ಪಿಎಫ್, ಇ ಎಸ್ ಐ, ಟಿಎ, ಡಿಎ, ಗ್ರಾಚ್ಯುಟಿ, ಪೆನ್ಶನ್, ಸಾರಿಗೆ ನಿಮಗಳ ಬಸ್ ಗಳಲ್ಲಿ ಸಂಚರಿಸಲು ಉಚಿತವಾಗಿ ಅವಕಾಶ, ಕ್ವಾಟ್ರಸ್, ಸರ್ಕಾರದ ಇನ್ನಿತರೆ ಸೌಲಭ್ಯಗಳು ಸಿಗುತ್ತಿವೆ. ಆದರೆ, ಒಂದು ವೇಳೆ ಸಾರಿಗೆ ನಿಗಮವನ್ನು ಖಾಸಗೀಕರಿಸಿದರೆ ಇವೆಲ್ಲ ಸವಲತ್ತುಗಳು ಇಲ್ಲವಾಗುತ್ತವೆ. ಜೊತೆಗೆ, ಎಲ್ಲಕ್ಕಿಂತ ಮುಖ್ಯವಾಗಿ ಸೇವಾಭದ್ರತೆಯ ಮಾತೇ ಇಲ್ಲ. ಖಾಸಗಿಯವರು ಯಾವುದೇ ಸಮಯದಲ್ಲಿ ಯಾವುದೋ ಕಾರಣಕ್ಕೆ ನೌಕರರನ್ನು ಕೆಲಸದಿಂದ ತೆಗೆಯಲು ಅವಕಾಶ ಇರುತ್ತದೆ.

ಮೀಸಲಾತಿಗೆ ಇಲ್ಲ ಖಾಸಗಿಯಲ್ಲಿ ಅವಕಾಶ

ಈಗಾಗಲೇ ಹೇಳಿದಂತೆ ಬಿಜೆಪಿ ಮೀಸಲಾತಿ ವಿರೋಧಿ. ಇದನ್ನು ಜಾರಿಗೆ ತರಲು ಖಾಸಗೀಕರಣದ ಪರ ಕಾಯ್ದೆ, ಕಾನೂನುಗಳನ್ನು ರೂಪಿಸುತ್ತಿದೆ. ಖಾಸಗಿಯಲ್ಲಿ ಮೀಸಲಾತಿಯ ಕುರಿತು ಸೊಲ್ಲೆತ್ತುವಂತಿಲ್ಲ. ಸರ್ಕಾರದ ಇನ್ನಿತರ ಸೌಲತ್ತುಗಳನ್ನು ಖಾಸಗಿಯವರು ಕೊಟ್ಟರೆ ಪಡೆಯಬೇಕು, ಇಲ್ಲವಾದರೆ ಇಲ್ಲ. ಈಗ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಂತೆ ಖಾಸಗಿಯವರ ವಿರುದ್ಧ ಮುಷ್ಕರ ನಡೆಸಲು ಅವಕಾಶವೇ ಇರುವುದಿಲ್ಲ.

ಒಂದುವೇಳೆ ಸಾರಿಗೆ ಖಾಸಗೀಕರಣಗೊಂಡರೆ ಇದರ ದುಷ್ಪರಿಣಾಮವನ್ನು ಊಹಿಸುವುದೂ ಕೂಡ ಕಷ್ಟಕರ. ಆದ್ದರಿಂದ, ಕೆಲವು ಸೇವೆಗಳನ್ನು ಖಾಸಗೀಕರಿಸುವ ಕುರಿತು ಸರ್ಕಾರ ಯಾವುದೇ ಕಾರಣಕ್ಕೂ ಕನಸಿನಲ್ಲಿ ಕೂಡ ಚಿಂತನೆ ನಡೆಸಬಾರದು.

ಸರ್ಕಾರಕ್ಕೆ 1,30,000 ಜನರಿಗೆ ವೇತನ ಪರಿಷ್ಕರಣೆ ದೊಡ್ಡ ಸವಾಲಾಗದು. ಶಾಸಕರಿಗೆ ಬೇಕಾದ ಸಮಯದಲ್ಲಿ ವೇತನ ಪರಿಷ್ಕರಿಸುವ ಕ್ರಮವಿದೆ. ಆದರೆ, ಮನೆ, ಮಾರು, ಊರು, ಕುಟುಂಬ, ಬಂಧು ಬಳಗಗಳನ್ನು ತೊರೆದು, ಹಗಲಿರುಳು ಜನರ ಸೇವೆ ಮಾಡುತ್ತಿರುವ ನೌಕರರ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು.

ಡಾ. ಪ್ರದೀಪ್ ಮಾಲ್ಗುಡಿ, ಸಂಶೋಧಕ

Leave a Reply