ಬೆಂಗಳೂರು: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರವನ್ನು ಕರ್ನಾಟಕ ಬಿಜೆಪಿ ಸರ್ಕಾರ ಪೊಲೀಸ್ ಬಲದ ಮೂಲಕ ದಮನಿಸಲು ಹೊರಟಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ ಅಮಾನವೀಯ ನಡೆ ಕೂಡಾ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶವ್ಯಕ್ತಪಡಿಸಿದ್ದಾರೆ.
ಆರನೇ ವೇತನ ಆಯೋಗ ಜಾರಿ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರ ದಮನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಪರ್ಯಾಯವಾಗಿ ನೌಕರರು ಇಂದು ತಟ್ಟೆ ಲೋಟ ಚಳುವಳಿ ನಡೆಸಿದರು. ನಾಳೆ ಭಿಕ್ಷೆ ಚಳವಳಿಯನ್ನು ನಡೆಸಲು ಉದ್ದೇಶಿಸಿದ್ದಾರೆ. ಈ ನಡುವೆ ಪ್ರತಿಭಟನಾ ನಿರತ ನೌಕರರನ್ನು ಸರ್ಕಾರ ಬಂಧಿಸಲು ಮುಂದಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನಡೆಸಿರುವ ಸಿದ್ದರಾಮಯ್ಯ, ರಾಜ್ಯದ ಬಹಳ ಕಡೆಗಳಲ್ಲಿ ಬಿಜೆಪಿ ಸರ್ಕಾರ ಮುಷ್ಕರ ನಿರತ ಕೆಎಸ್‌ಆರ್‌ಟಿಸಿ ನೌಕರರನ್ನು ವಾರಂಟ್ ಇಲ್ಲದೆ ಬಂಧಿಸುತ್ತಿದೆ. ಕರ್ನಾಟಕದ ಸಿಎಂ ಕರ್ನಾಟಕವನ್ನು ಪೊಲೀಸ್ ರಾಜ್ಯ ಮಾಡಲು ಹೊರಟಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಅಕ್ರಮವಾಗಿ ವರ್ಗಾವಣೆ, ಅಮಾನತ್ ಮತ್ತು ಮನೆ ಖಾಲಿಮಾಡಿಸುವ ಮೂಲಕ ಮುಷ್ಕರ ನಿರತ ಕೆಎಸ್‌ಆರ್‌ಟಿಸಿ ನೌಕರರನ್ನು ಕರ್ನಾಟಕದ ಸಿಎಂ ಬೆದರಿಸಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈಗಲೂ ಕಾಲ ಮಿಂಚಿಲ್ಲ, ಕರ್ನಾಟಕ ಸಿಎಂ ಅವರು ಹಠಕ್ಕೆ ಬೀಳದೆ ತಕ್ಷಣ ಮುಷ್ಕರ ನಿರತ ಕೆಎಸ್‌ಆರ್‌ಟಿಸಿ ನೌಕರರನ್ನು ಮಾತುಕತೆಗೆ ಕರೆದು ಈಗಿನ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.




