ಪ್ರಧಾನಿ ಮೋದಿಯವರೇ, ನಾನು ನನ್ನ ಉದ್ಯೋಗವನ್ನು ಕಳೆದುಕೊಳ್ಳುತ್ತೇನೆಯೇ?: ರವೀಶ್ ಕುಮಾರ್
ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಬಳಸುತ್ತಿರುವ ನಿಂದನಾತ್ಮಕ ಮತ್ತು ಬೆದರಿಕೆಯ ಹೇಳಿಕೆಗಳನ್ನು ಕಟುವಾಗಿ ಟೀಕಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಪತ್ರ ಬರೆದಿದ್ದರು. ತಮ್ಮನ್ನು ವಾಟ್ಸ್ ಅಪ್ ಗುಂಪಿನಲ್ಲಿ ಸೇರಿಸಿಕೊಂಡು ಮಾನಸಿಕ ಕಿರುಕುಳ ಕೊಡುತ್ತಿರುವ ಪ್ರಧಾನಿ ಬೆಂಬಲಿಗರ ಕುರಿತು ಅಸಮಾಧಾನವನ್ನು ಪತ್ರದಲ್ಲಿ ತೋಡಿಕೊಂಡಿದ್ದರು. ಈ ಮೇಲ್ ಮೂಲಕ ಮುಖಾಂತರ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸಿದ್ದ ಪತ್ರದಲ್ಲಿ ಅವರ ಬೆಂಬಲಿಗರು ಮತ್ತು ಪ್ರಧಾನಿಗಳನ್ನೂ ತರಾಟೆಗೆ ತೆಗೆದುಕೊಂಡಿದ್ದರು.
ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ,
ಈ ಪತ್ರದ ಉದ್ದೇಶ ಸೀಮಿತ. ನಿಮ್ಮ ಬೆಂಬಲಿಗರಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಳಸಲಾಗುತ್ತಿರುವ ಭಾಷೆಯ ಸಭ್ಯತೆ ಎಲ್ಲೆ ಮೀರುತ್ತಿದೆ. ನಿಮ್ಮ (ಪ್ರಧಾನಿ ನರೇಂದ್ರ ಮೋದಿ) ನಾಯಕತ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಘಟನೆಗಳ ಸದಸ್ಯರು, ನಿಮ್ಮ ಬೆಂಬಲಿಗರು ಮತ್ತು ವಿಪಕ್ಷಗಳು ಕೂಡ ಇಂಥ ವರ್ತನೆಯಲ್ಲಿ ತೊಡಗಿಕೊಂಡಿವೆ. ಇಂಥ ವ್ಯಕ್ತಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ನಿಮ್ಮ ಬೆಂಬಲಿಗರು ನಿಮ್ಮ ಮೇಲಿನ ನಂಬಿಕೆಯ ಕಾರಣದಿಂದಾಗಿ ನಿಂದನಾತ್ಮಕ ಮಾತುಗಳನ್ನು ಬಳಸುತ್ತಿದ್ದಾರೆ.
ನೀವು ಪ್ರಧಾನಿಯಾದಾಗಿನಿಂದ ಇಂತಹ ಘಟನೆಗಳು ನಡೆಯುತ್ತಿವೆ. ಈ ವಿಷಯದ ಕುರಿತು ಗಮನ ಹರಿಸುವುದು ನಿಮ್ಮ ಜವಾಬ್ದಾರಿ. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಕುರಿತು ನನಗೆ ಅರಿವಿದೆ. ಆದರೆ, ನಿಮ್ಮ ತಂಡ ಇಂತಹವರನ್ನು ಟ್ವೀಟರ್‌ನಲ್ಲಿ ಹಿಂಬಾಲಿಸುವುದಿಲ್ಲ ಎನ್ನುವುದನ್ನು ಖಚಿತಪಡಿಸಬೇಕು. ಇಂಥ ವ್ಯಕ್ತಿಗಳು ನಮ್ಮ ಘನತೆಗೆ ಘಾಸಿಯುಂಟುಮಾಡುತ್ತಿದ್ದಾರೆ.
ಭಾರತೀಯರ ದೊಡ್ಡ ಸಮೂಹ ನಿಮಗೆ ಅಪಾರ ಪ್ರೀತಿಯನ್ನು ಕೊಟ್ಟಿದೆ. ಅವರು ಕೊಟ್ಟಿರುವ ಪ್ರೀತಿಯಲ್ಲಿ ನಿಮಗೆ ಕೊರತೆಯಾದರೆ, ನೀವು ಇನ್ನಷ್ಟು ಪ್ರೀತಿಯನ್ನು ನೀಡಿ ಎಂದು ಕೇಳಬಹುದು. ಅವರು ನಿಮಗೆ ಇನ್ನೂ ಹೆಚ್ಚಿನ ಪ್ರೀತಿಯನ್ನು ಕೊಡಲು ಸಂತೋಷಪಡುತ್ತಾರೆ. ಆದರೆ, ಭಾರತೀಯ ನಾಗರಿಕರನ್ನು ಅವಮಾನಿಸುವ ಇಂತಹ ವ್ಯಕ್ತಿಗಳನ್ನು ಪ್ರಧಾನಿಗಳು ಹಿಂಬಾಲಿಸುವುದು ಅನುಸರಿಸುವುದು ಶೋಭೆಯಲ್ಲ.
ನಾನು ನಿಜಕ್ಕೂ ಆತಂಕಿತನಾಗಿದ್ದೇನೆ. ಮಾನ್ಯ ಪ್ರಧಾನಮಂತ್ರಿಗಳೇ, ವಾಟ್ಸ್ಅಪ್ ಗುಂಪುಗಳಲ್ಲಿ ನನ್ನ ಮತ್ತು ಇತರ ಕೆಲವು ಪತ್ರಕರ್ತರ ಕುರಿತು ಬಳಕೆಯಾಗುತ್ತಿರುವ ಅವಮಾನಕರ ಭಾಷೆಯನ್ನು ಓದಿದವರು ತಮ್ಮ ಕಿವಿಗಳನ್ನು ಮುಚ್ಚಿಕೊಳ್ಳುತ್ತಾರೆ. ಈ ಗುಂಪುಗಳಲ್ಲಿ ಪತ್ರಕರ್ತೆಯರ ಕುರಿತು ನಿಜಕ್ಕೂ ನಾಚಿಕೆಗೇಡಿನ ಭಾಷೆ ಬಳಕೆಯಾಗುತ್ತಿದೆ.
ರಾಜಕೀಯ ಕಾರಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಬೀದಿಯಲ್ಲಿ ಸೃಷ್ಟಿಯಾಗಿರುವ ಗುಂಪುಗಳು ಭವಿಷ್ಯದಲ್ಲಿ ಸಮಾಜಕ್ಕೆ ವಿಶೇಷವಾಗಿ ಮಹಿಳೆಯರಿಗೆ ಸವಾಲಾಗಿ ಪರಿಣಮಿಸುತ್ತವೆ. ಈ ಗುಂಪಿನಲ್ಲಿರುವ ಬಹುತೇಕರು ಸ್ತ್ರೀದ್ವೇಷಿಯಾಗಿದ್ದಾರೆ. ಅವರ ಭಾಷೆ ಮಹಿಳಾ ವಿರೋಧಿಯಾಗಿದೆ. ಅವರು ಎಷ್ಟು ಕೋಮುವಾದಿಗಳಾಗಿದ್ದಾರೆ ಎಂದರೆ, ನೀವು ಕೂಡ ಅವರನ್ನು ಸಹಿಸಿಕೊಳ್ಳಲಾರಿರಿ.
ಹೇಗಿದ್ದರೂ, ನೀವು 2022ರ ಹೊತ್ತಿಗೆ ಕೋಮುವಾದವನ್ನು ನಿರ್ಮೂಲನೆಗೊಳಿಸಲು ಬಯಸಿದ್ದೀರಿ. ಆಗಸ್ಟ್ 15ರಂದು ನಿಮ್ಮ ಭಾಷಣ ಕೂಡ ಕೋಮುವಾದವನ್ನು ನಿರ್ಮೂಲನೆಗೊಳಿಸಲು ಯಾವುದೇ ಪ್ರಭಾವ ಬೀರಿಲ್ಲ ಮತ್ತು ಇತ್ತೀಚಿನವರೆಗೆ ಅವರು ನನ್ನನ್ನು ಅವಮಾನಿಸುತ್ತಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಳಸುತ್ತಿರುವ ಅಶ್ಲೀಲ ಭಾಷೆಯಿಂದಾಗಿ ನನಗೆ ನೋವುಂಟಾಗಿದೆ. ಆದರೆ, ನನ್ನಂಥ ಪತ್ರಕರ್ತರಿಗೆ ನಿಮ್ಮ ಬೆಂಬಲಿಗರಿಂದ ಬೆದರಿಕೆ ಉಂಟಾಗುತ್ತಿದೆ.
ನನ್ನನ್ನು ಸೇರಿಸಲಾಗಿದ್ದ ವಾಟ್ಸ್ಅಪ್ ಗುಂಪನ್ನು ತೊರೆಯಲು ಯತ್ನಿಸಿದಾಗ, ಅವನನ್ನು ಹಿಡಿಯಿರಿ, ಅವನು ಪಲಾಯನಗೈಯುತ್ತಿದ್ದಾನೆ. ಅವನನ್ನು ಥಳಿಸಿ ಎಂದರು. ಅಲ್ಲದೇ, ಮತ್ತೆ ತಮ್ಮ ಗುಂಪಿಗೆ ನನ್ನನ್ನು ಸೇರಿಸಿಕೊಂಡರು. ನಾನು ಪ್ರಧಾನಿಗೆ ಪತ್ರ ಬರೆಯುತ್ತಿದ್ದೇನೆ ಎಂದು ನನಗೆ ಅರಿವಿರುವುದರಿಂದ, ನಾನು ಅವರು ಬಳಸಿರುವ ಭಾಷೆಯ ಮಾದರಿಗಳನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ನೀವು ನನ್ನ ಕಡು ವಿಮರ್ಶಕರಾಗಿದ್ದರೂ ಇದನ್ನು ಹೇಳುವುದು ನನ್ನ ಬದ್ಧತೆ ಮತ್ತು ಜವಾಬ್ದಾರಿ.
ವಾಟ್ಸ್ಅಪ್‌ನಲ್ಲಿ ‘ಓಂ ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಗುಂಪಿನ ಕೆಲವು ಸದಸ್ಯರನ್ನು ಟ್ವೀಟ್ ಖಾತೆಯಲ್ಲಿ ಹಿಂಬಾಲಿಸುತ್ತಿದ್ದೀರಿ ಎಂಬುದನ್ನು ಆಲ್ಟ್ ನ್ಯೂಸ್‌ನಲ್ಲಿ ಓದಿ ನಾನು ದಿಗಿಲುಗೊಂಡೆ. ಈ ಗುಂಪಿನ ಸದಸ್ಯರು ನಿಂದನೆ, ಕೋಮುವಾದಿ ಭಾವನೆಗಳನ್ನು ಕಾರಿಕೊಳ್ಳುತ್ತಾರೆ. ಅಲ್ಲದೇ, ನಾವು ಹೆಮ್ಮೆಯ ದೇಶ ಭಕ್ತರಾದರೂ ನನ್ನನ್ನೂ ಒಳಗೊಂಡಂತೆ ಕೆಲವು ಪತ್ರಕರ್ತರನ್ನು ಭಯೋತ್ಪಾದಕರೆಂದು ವರ್ಣಿಸುತ್ತಾರೆ. ನನ್ನ ಮತ್ತು ನನ್ನಂಥ ಕೆಲವು ಪತ್ರಕರ್ತರ ವಿರುದ್ಧ ಅವರು ಬಳಸುತ್ತಿರುವ ಭಾಷೆಯನ್ನು ನನ್ನಿಂದ ಓದಲು ಕೂಡ ಅಸಾಧ್ಯ. ತೀಕ್ಷ್ಣವಾದ ವಿಮರ್ಶೆಯ ನಡುವೆ ಕೂಡ ಯಾವುದೇ ಕಹಿ ಇಲ್ಲದೇ, ಈ ವಿಷಯವನ್ನು ನಿಮಗೆ ತಿಳಿಸುವುದು ನನ್ನ ಜವಾಬ್ದಾರಿ. ಪತ್ರಕರ್ತೆಯರ ವಿರುದ್ಧ ಇಲ್ಲಿ ಬಳಕೆಯಾಗುತ್ತಿರುವುದು ಅತ್ಯಂತ ಅವಮಾನಕರ ಭಾಷೆ.
ನಿಮಗೆ ನನ್ನದೊಂದು ಪ್ರಶ್ನೆ ಇದೆ. ನೀವು ನಿಜಕ್ಕೂ ನೀರಜ್ ದವೆ ಮತ್ತು ನಿಖಿಲ್ ದಧೀಚ್ ಅವರನ್ನು ಹಿಂಬಾಲಿಸುತ್ತೀರಾ? ಏಕೆ? ಕೆಲ ದಿನಗಳ ಹಿಂದೆ, ನನ್ನ ಫೇಸ್‌ಬುಕ್‌ನ @RavishKaPage ಖಾತೆಯಲ್ಲಿ ಕೆಲವು ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡಿದ್ದೆ. ರಾಜ್‌ಕೋಟ್ ನಿವಾಸಿಯಾಗಿರುವ ನೀರಜ್ ದವೆ, ರಫ್ತು ಕಂಪನಿಯೊಂದರ ಕಾರ್ಯನಿರ್ವಾಹಕ ನಿರ್ದೇಶಕ. ನೀವು ನೀರಜ್ ದವೆಯವರ ಹಿಂಬಾಲಕರು ಎಂಬುದು ಆಲ್ಟ್ ನ್ಯೂಸ್‌ನ ಪ್ರತೀಕ್ ಸಿನ್ಹಾ ಮತ್ತು ನೀಲೇಶ್ ಪುರೋಹಿತ್ ಅವರ ವರದಿಯಿಂದ ತಿಳಿಯಿತು. ಅವಮಾನಕಾರ ಭಾಷೆಯನ್ನು ನನ್ನ ವಿರುದ್ಧ ಬಳಸಬೇಡಿ ಎಂಬ ಆಗ್ರಹಕ್ಕೆ, ಅವರು ನೀನು ಬದುಕಿರುವುದೇ ದುಃಖಕರ ಸಂಗತಿ ಎಂದು ಪ್ರತ್ಯುತ್ತರ ಕೊಟ್ಟಿದ್ದರು. ಅದೇ ಗುಂಪಿನ ಇನ್ನೊಬ್ಬ ಸದಸ್ಯ ನಿಖಿಲ್ ದದೀಚ್ ಕುರಿತು ಸಾಕಷ್ಟು ಬರೆಯಲಾಗಿದೆ. ಗೌರಿ ಲಂಕೇಶ್ ಸಾವಿನ ನಂತರ ಅವರು ಏನೆಲ್ಲಾ ಹೇಳಿದ್ದಾರೆ ಎಂಬುದನ್ನು ನೀವು ಕೂಡ ಓದಲು ಇಷ್ಟಪಡುವುದಿಲ್ಲ.
ಆದರೆ, ನನಗಿರುವ ಮಾಹಿತಿ ಖಚಿತವಾಗಿದ್ದಲ್ಲಿ ನೀವು ಇಲ್ಲಿಯವರೆಗೆ ಅವರನ್ನು ಟ್ವೀಟರ್‌ನಲ್ಲಿ ಹಿಂಬಾಲಿಸುತ್ತಿದ್ದೀರಿ. ಇತ್ತೀಚೆಗೆ, ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ, ಅಮಿತ್ ಮಾಳವೀಯ ಅವರು ತಿರುಚಿದ ನನ್ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆಲ್ಟ್ ನ್ಯೂಸ್ ಸತ್ಯವನ್ನು ಹೇಳಿದ ನಂತರ ಕೂಡ ಅವರು ಕ್ಷಮೆ ಕೋರಿಲ್ಲ.
ಸ್ವಾಮಿ, ನಿಖಿಲ್ ದವೆಯವರು ನನ್ನ ಮೊಬೈಲ್ ಸಂಖ್ಯೆಯನ್ನು ಕೋಮುವಾದಿಗಳ ವಾಟ್ಸ್ಅಪ್ ಗುಂಪಿಗೆ ಬಲವಂತವಾಗಿ ಸೇರಿಸಿದ್ದಾರೆಯೋ ನನಗೆ ಗೊತ್ತಿಲ್ಲ. ನಿಖಿಲ್ ದವೆಯವರು ಕೂಡ ತೀವ್ರ ಕೋಮುವಾದಿಗಳ ಗುಂಪಿನ ಸದಸ್ಯ. ಈ ಗುಂಪಿಗೆ ನನ್ನ ಮೊಬೈಲ್ ಸಂಖ್ಯೆಯನ್ನು ಬಲವಂತವಾಗಿ ಸೇರಿಸಲಾಗಿದೆ. ಅಲ್ಲದೇ, ಹಿಂಸಾತ್ಮಕ ಬೆದರಿಕೆಯನ್ನು ಒಡ್ಡಲಾಗಿದೆ. ಇಂಥ ವಿಷಕಾರಿ ಗುಂಪಿನೊಂದಿಗೆ ನೀವು ಸಂಬಂಧ ಹೊಂದಿರುವಿರೆಂದು ನಾನು ಎಂದಿಗೂ ಕಲ್ಪಿಸಿಕೊಂಡಿರಲೂ ಇಲ್ಲ. ಅಲ್ಲದೇ, ಆಲ್ಟ್ ನ್ಯೂಸ್‌ನ ವರದಿಗಳು ಸುಳ್ಳಾಗಲಿ ಎಂದು ನಾನು ಬಯಸುತ್ತೇನೆ.
ಆದರೆ, ನಿಖಿಲ್ ದದೀಚ್ ನಿಮ್ಮ ಸಚಿವ ಸಂಪುಟದ ಸಚಿವರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಇದಿಷ್ಟೇ ಅಲ್ಲ; ಓಂ ಧರ್ಮೋ ರಕ್ಷತಿ ರಕ್ಷಿತಃ ಗುಂಪಿನ ಕೆಲವು ನಿರ್ವಾಹಕರ ಪೈಕಿ ಕೆಲವರು ಆರ್‌ಎಸ್‌ಎಸ್ – 1 ಮತ್ತು ಆರ್‌ಎಸ್‌ಎಸ್ – 2 ಎಂಬ ಹೆಸರುಗಳಿಂದ ಸಕ್ರಿಯರಾಗಿದ್ದಾರೆ. ಆಕಾಶ್ ಸೋನಿ ಎಂಬುವವರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಜೆ ಪಿ ನಡ್ಡಾ ಮತ್ತು ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿಯವರೊಂದಿಗೆ ಭಾವಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಪ್ರದರ್ಶಿಸುತ್ತಾರೆ. ಆದರೆ, ಕೋಮುವಾದಿ ಗುಂಪನ್ನು ನಡೆಸುವ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ. ಇದನ್ನು ಎಚ್ಚರಿಕೆಯ ಸಂಕೇತವೆಂದು ನಿಮ್ಮ ತಂಡ ಪರಿಗಣಿಸುತ್ತಿಲ್ಲ ಏಕೆ?
ನಿಮ್ಮ ವಿರುದ್ಧ ಯಾರಾದರೂ ವಾಟ್ಸ್ಅಪ್ ಗುಂಪಿನಲ್ಲಿ ಏನನ್ನಾದರೂ ಬರೆದಲ್ಲಿ, ಅಧಿಕಾರಿಗಳು ಅನೇಕರನ್ನು ಬಂಧಿಸಿರುವ ಅನೇಕ ವರದಿಗಳು ಬಿತ್ತರವಾಗಿವೆ. ಆಕಾಶ್ ಸೋನಿ ಅಧಿಕೃತ ಆರ್‌ಎಸ್‌ಎಸ್ಸಿಗರೇ? ನನ್ನ ಮೊಬೈಲ್ ಸಂಖ್ಯೆಯನ್ನು ಒಳಗೊಂಡಂತೆ, ಅಭಿಸಾರ್ ಶರ್ಮ, ರಾಜ್‌ದೀಪ್ ಸರ್ದೇಸಾಯಿ ಮತ್ತು ಬರ್ಖಾ ದತ್‌ರಂಥವರನ್ನು ತಮ್ಮ ಗುಂಪಿಗೆ ಸೇರಿಸಿಕೊಂಡಿದ್ದಾರೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.
ನಿಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಸಂಘಟನೆ ನನ್ನ ಮೊಬೈಲ್ ಸಂಖ್ಯೆಯನ್ನು ಸಾರ್ವಜನಿಕಗೊಳಿಸಿದೆ. ಈ ಹಿಂದೆ ಕೂಡ ನನಗೆ ಬೆದರಿಕೆ ಒಡ್ಡಲಾಗಿದೆ. ನಾನು ಆಗಲೇ ಚಿಂತಿತನಾಗಿದ್ದೆ. ಆದರೆ, ಈ ಕುರಿತು ನಿಮಗೆ ಬರೆದಿಲ್ಲ. ಈ ಬಾರಿ ನಿಮಗೆ ಬರೆಯುತ್ತಿರುವುದು ಏಕೆಂದರೆ, ಈ ಕುರಿತು ನೀವು ತನಿಖೆ ನಡೆಸುತ್ತೀರಾ? ಎಂದು ನನಗೆ ತಿಳಿಯಬೇಕಿದೆ: ಈ ಗುಂಪಿನ ಸದಸ್ಯರು ನನ್ನನ್ನು ನಿಜಕ್ಕೂ ಕೊಲ್ಲುತ್ತಾರೆಯೇ? ನನ್ನ ಜೀವ ಅಪಾಯದಲ್ಲಿದೆಯೇ?
ನಾನೊಬ್ಬ ಸಾಮಾನ್ಯ ನಾಗರಿಕ. ಆದರೆ, ನಾನೊಬ್ಬ ಕಣ್ಗಾವಲುಗಾರ ಮತ್ತು ಬದ್ಧತೆಯುಳ್ಳ ಪತ್ರಕರ್ತ. ನಿಮ್ಮ ವಿವೇಚನೆಯ ಪ್ರಕಾರ, ಅವರು ನಾನು ಯಾವುದೇ ಕ್ಷಣದಲ್ಲೂ ಉದ್ಯೋಗವನ್ನು ಕಳೆದುಕೊಂಡು ಬೀದಿಗೆ ಬರುತ್ತೇನೆ ಎಂದು ಹೇಳಬಹುದು. ಕೆಲವು ದಿನಗಳ ಹಿಂದೆ, ನಾನು ಉದ್ಯೋಗ ಕಳೆದುಕೊಂಡಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆ ನಡೆದಿದೆ. ಸರ್ಕಾರ ನನ್ನ ಮೇಲೆ ಕಣ್ಣಿಟ್ಟಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಇತ್ತೀಚೆಗೆ ದಿ ವೈರ್‌ನ ವರದಿಯ ಪ್ರಕಾರ, ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಬಾಬಿ ಘೋಷ್ ಅವರನ್ನು, ನಿಮ್ಮ ಅಸಮ್ಮತಿಯ ಮೇರೆಗೆ ತೆಗೆದು ಹಾಕಲಾಗಿದೆ. ಅವರ ಪ್ರಕಾರ ಮುಂದಿನ ಸರದಿ ನನ್ನದು. ನನಗೆ ಈ ವರದಿಗಳನ್ನು ಕೇಳಿ ನಗು ಬರುತ್ತದೆ. ಆದರೆ, ಚಿಂತೆಯೂ ಆಗುತ್ತದೆ. ಭಾರತ ದೇಶದ ಬಲಶಾಲಿ ಪ್ರಧಾನಮಂತ್ರಿ ಪತ್ರಕರ್ತರನ್ನು ವಜಾಗೊಳಿಸುತ್ತಾರೆ ಎನ್ನುವುದನ್ನು ನಾನು ನಂಬುವುದಿಲ್ಲ. ಆದರೆ, ಜನ ಹೇಳುತ್ತಿದ್ದಾರೆ, ಕೆಲವೇ ದಿನಗಳಲ್ಲಿ ನಾನು ಕೂಡ ಉದ್ಯೋಗ ಕಳೆದುಕೊಳ್ಳುತ್ತೇನೆಯೇ? ಇದು ನಿಜವೇ?
ಆದರೆ, ಇದು ಸಂಭವಿಸಬಾರದು. ಇದು ನನಗಾಗಿ ಅಲ್ಲ. ಆದರೆ, ಬೃಹತ್ ಭಾರತದ ಪ್ರಜಾಪ್ರಭುತ್ವಕ್ಕಾಗಿ. ಇಲ್ಲವಾದಲ್ಲಿ, ಭಿನ್ನ ವಿಚಾರಧಾರೆಗಳನ್ನು ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹತ್ತಿಕ್ಕಿದಂತಾಗುತ್ತದೆ. ಒಬ್ಬ ಪತ್ರಕರ್ತನ ಉದ್ಯೋಗವನ್ನು ಪ್ರಧಾನಿ ಅಥವಾ ಹಣಕಾಸು ಸಚಿವರು ನಿರ್ಧರಿಸಬಹುದೇ? ಇಂಥ ಊಹಾಪೋಹಗಳನ್ನು ವಾಟ್ಸ್ಅಪ್ ಗುಂಪುಗಳಲ್ಲಿ ಕೇಳಿದ್ದೇನೆ. ಅಂಥವರನ್ನು ನೀವು ಹಿಂಬಾಲಿಸದಿದ್ದಲ್ಲಿ, ನಾನು ಈ ಪತ್ರವನ್ನು ಬರೆಯುತ್ತಿರಲಿಲ್ಲ.
ನಾನು ಒಂದು ಅಲ್ಯುಮಿನಿಯಂ ಟ್ರಂಕ್‌ನೊಂದಿಗೆ ದೆಹಲಿಗೆ ಬಂದಿದ್ದೆ. ದೇವರು ಕಳೆದ 27 ವರ್ಷಗಳಿಂದ ನನಗೆ ಸಾಕಷ್ಟನ್ನು ಕೊಟ್ಟಿದ್ದಾನೆ. ಆದರೆ, ಇಂದಿಗೂ ನನ್ನೊಂದಿಗೆ ಆ ಟ್ರಂಕ್ ಇದೆ. ನನ್ನ ಟ್ರಂಕ್‌ನೊಂದಿಗೆ ನಾನು ಮೋತಿಹಾರಿಗೆ ಹಿಂತಿರುಗಬಲ್ಲೆ. ಆದರೆ, ನನಗೆ ನನ್ನ ಕುಟುಂಬದ ಬೆಂಬಲ ಬೇಕಿದೆ. 70 – 75ರ ವಯೋಮಾನದವರು ಕೂಡ ಹಣ ಗಳಿಸುವ ಸಲುವಾಗಿ ವಾಣಿಜ್ಯೋದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಜನ ತಮ್ಮ ಕುಟುಂಬವನ್ನು ನಡೆಸಲು ಉದ್ಯೋಗ ನಡೆಸಲು ಬಯಸುತ್ತಾರೆ. ನನ್ನಂತಹ ಕೆಲವರು ಇಂತಹದ್ದರಿಂದ ಹೊರತಾಗಿದ್ದೇವೆ. ನನ್ನ ಮಕ್ಕಳು ರಸ್ತೆಯ ಮೇಲೆ ಸಂಚರಿಸುವುದನ್ನು ನೀವು ನೋಡಲು ಬಯಸುವುದಿಲ್ಲವೇ? ನಿಮಗೆ ನನ್ನ ಮೇಲೆ ದ್ವೇಷವಿದೆಯೇ? ನನ್ನ ಮಕ್ಕಳು ಈಗಲೂ ನಿಮಗಾಗಿ ರಸ್ತೆಯಲ್ಲಿ ಪ್ರಾರ್ಥಿಸಬಹುದು ಮತ್ತು ನಾನು ರಸ್ತೆಗಳನ್ನು ಪ್ರೀತಿಸುತ್ತೇನೆ. ಆಗಲೂ ನಾನು ಪ್ರಶ್ನೆಗಳನ್ನು ಕೇಳುತ್ತೇನೆ. ಬಾಪು (ಮಹಾತ್ಮಾ ಗಾಂಧಿ) ಅವರು ಚಂಪಾರಣ್ಯಕ್ಕೆ ಭೇಟಿ ನೀಡಿದಾಗ ಇದನ್ನೇ ಹೇಳಿದ್ದರು. ಯಾವುದೇ ಅಪರಿಚಿತ ಸ್ಥಳವಾದರೂ, ಯಾರಾದರೂ ನೈತಿಕ ಶಕ್ತಿಯ ಆಧಾರದ ಮೇಲೆ ಬಲವಾಗಿ ನಿಲ್ಲಬಹುದು. ನಾನು ಮಹಾ ಮಣ್ಣಿನ ಬಡಕಲು ಮನುಷ್ಯ.
ನಾನು ಯಾರಿಗಾದರೂ ಹೆದರಿ ಸತ್ಯವನ್ನು ಹೇಳುವುದಿಲ್ಲ. ಬಾಪು ಅಹಂಕಾರದಿಂದ ಹೇಳುವುದು ಸತ್ಯವಲ್ಲ ಎಂದಿದ್ದಾರೆ. ನಾನು ಇನ್ನಷ್ಟು ವಿನೀತನಾಗಲು, ಕಲಿಯಲು ಮತ್ತು ನನ್ನ ವಿರೋಧಾಭಾಸಗಳನ್ನು ಇಲ್ಲವಾಗಿಸಿಕೊಳ್ಳಲು ಮಾತನಾಡುತ್ತೇನೆ.
ನಾನು ಈ ಕುರಿತು ಮಾತನಾಡದೇ ಇದ್ದಲ್ಲಿ ಅಥವಾ ಬರೆಯದೇ ಇದ್ದಲ್ಲಿ, ನಾನು ನನ್ನ ಸತ್ಯದೊಂದಿಗೆ ಹೋರಾಡುತ್ತೇನೆ. ನನ್ನ ಎಲ್ಲ ಪ್ರಯತ್ನಗಳೊಂದಿಗೆ ಮಾತನಾಡಿದಾಗ, ಜನ ಸರ್ಕಾರಗಳ ಕುರಿತು ನಿಮಗೆ ಅಂಜಿಕೆ ಇಲ್ಲವೇ ಎಂದು ಕೇಳುತ್ತಾರೆ. ನಾನು ನನ್ನೊಳಗಿನ ಅಸಮರ್ಪಕತೆಗಳ ವಿರುದ್ಧ ಮಾತನಾಡುತ್ತೇನೆ ಮತ್ತು ಬರೆಯುತ್ತೇನೆ. ಮತ್ತು ಅನೇಕ ಬಾರಿ ಸೋಲುತ್ತೇನೆ. ಆಗ ಈ ಬಾರಿ ಸೋತಿರಬಹುದು, ಆದರೆ, ಮುಂದಿನ ಬಾರಿ ಜಯಿಸುತ್ತೇನೆ ಎಂದು ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತೇನೆ. ಪ್ರಭುತ್ವಕ್ಕೆ ಸತ್ಯವನ್ನು ಹೇಳುವ ಧೈರ್ಯವನ್ನು ನಮ್ಮ ಸಂವಿಧಾನ ನಮಗೆ ಕೊಟ್ಟಿದೆ. ನೀವು ಸಂವಿಧಾನದ ರಕ್ಷಕರು.
ಈ ಪತ್ರವನ್ನು ನಾನು ಸಾರ್ವಜನಿಕವಾಗಿ ಹಂಚಿಕೊಳ್ಳುತ್ತಿದ್ದೇನೆ ಮತ್ತು ನಿಮಗೆ ಒಂದು ಪ್ರತಿಯನ್ನು ಮೇಯ್ಲ್ ಮೂಲಕ ಕೂಡ ಕಳುಹಿಸುತ್ತಿದ್ದೇನೆ. ನಿಖಿಲ್ ದಧೀಚ್, ನೀರಜ್ ದವೆ ಮತ್ತು ಆಕಾಶ್ ಸೋನಿಯವರು ನಿಮಗೆ ಪರಿಚಿತವಾಗಿದ್ದಲ್ಲಿ, ನನ್ನನ್ನು ಕೊಲ್ಲಲು ಯೋಜನೆ ರೂಪಿಸಿದ್ದಾರಾ? ಎಂದು ದಯಮಾಡಿ ಆ ಗುಂಪಿನ ಸದಸ್ಯರನ್ನು ಕೇಳಿ. ಇದರೊಂದಿಗೆ ಆಲ್ಟ್ ನ್ಯೂಸ್‌ನ ವರದಿಯನ್ನೂ ಲಗತ್ತಿಸಿದ್ದೇನೆ. ಈ ಪತ್ರ ಬರೆಯುವ ಮೂಲಕ ಒಂದು ವೇಳೆ ನಾನು ನಿಮಗೆ ಯಾವುದೇ ರೀತಿಯಲ್ಲಿ ಅಗೌರವ ತೋರಿದ್ದಲ್ಲಿ ನಾನು ಕ್ಷಮೆ ಕೋರುತ್ತೇನೆ.
ನಿಮ್ಮ ಹಿತೈಷಿ
– ರವೀಶ್ ಕುಮಾರ್, ಪತ್ರಕರ್ತ




