ಬೆಂಗಳೂರು: ಎದುರಾಳಿ ಪಕ್ಷದ ಸದಸ್ಯರು ದಿನದಿಂದ ದಿನಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಕಾಂಗ್ರೆಸ್ ಕುಟುಂಬ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ ಎಂದು ಕೆಪಿಸಿಸಿ ಹೇಳಿದೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ, ಮಾಜಿ ಶಾಸಕ ವೈ.ಎಸ್.ವಿ. ದತ್ತ, ಮಾಜಿ ಸಚಿವ, ಪಕ್ಷೇತರ ಶಾಸಕ ಹೆಚ್. ನಾಗೇಶ್ ಹಾಗೂ ಮೂಡಾ ಮಾಜಿ ಅದ್ಯಕ್ಷ ಮೋಹನ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇದೇ ವೇಳೆ ಮಾತಾಡಿದ ವೈ.ಎಸ್.ವಿ ದತ್ತಾ, ಇಷ್ಟು ವರ್ಷ ಒಂದು ಪರಿವಾರದಲ್ಲಿದ್ದ ನಾನು ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದೇನೆ. ಐತಿಹಾಸಿಕವಾದ ತುರ್ತು, ಐತಿಹಾಸಿಕವಾದ ಅನಿವಾರ್ಯತೆ ರಾಷ್ಟ್ರವನ್ನು, ರಾಜ್ಯವನ್ನು, ನನ್ನ ಕ್ಷೇತ್ರವನ್ನೂ ಕಾಡುತ್ತಿದೆ. ಆ ಕಾರಣಕ್ಕೆ ಆಯಾಯ ಕಾಲಘಟ್ಟದಲ್ಲಿ, ರಾಜಕೀಯವಾದ ಹೊಸ ಆಯಾಮಗಳ ದೃಷ್ಟಿಯಲ್ಲಿ ನಮ್ಮ ಶತೃ ಯಾರು ಎಂದು ಗುರುತಿಸಿಕೊಂಡು ಅದಕ್ಕೆ ಸಂಘಟಿತವಾದ ಕೃೊಢೀಕೃತವಾದ ಹೋರಾಟ ಮಾಡಬೇಕಾದ ಐತಿಹಾಸಿಕವಾದ ಅನಿವಾರ್ಯತೆ ಈಗ ಬಂದಿದೆ. ಹಾಗಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಇಂದು ಸೇರ್ಪಡೆ ಆಗಿದ್ದೇನೆ ಎಂದರು.
ಹೆಚ್. ನಾಗೇಶ್ ಮಾತನಾಡಿ, ಇದು ನನ್ನ ಜೀವನದಲ್ಲಿ ಐತಿಹಾಸಿಕ ಘಟನೆ. ಇತ್ತೀಚಿನ ದಿನಗಳಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಆತಂಕದಲ್ಲಿದ್ದು, ಇವರ ಪರ ಇರುವ ಕಾಂಗ್ರೆಸ್ ಪಕ್ಷವನ್ನು ನಾನು ಸೇರುತ್ತಿದ್ದು, ನಾನು ಇನ್ನು ಮುಂದೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರ ಕಾಂಗ್ರೆಸ್ ಹೇಗೆ ಕೆಲಸ ಮಾಡಿಕೊಂಡು ಬಂದಿದೆ, ಕಾಂಗ್ರೆಸ್ ಸಿದ್ದಾಂತ ಏನು, ಕಾರ್ಯಕ್ರಮಗಳು ಏನು ಎಂದು ಇಡೀ ರಾಜ್ಯದಲ್ಲಿ ತಿಳಿಸುವಂತ ಕೆಲಸ ಮಾಡುತ್ತೇನೆ. ಕಾಂಗ್ರೆಸ್ಸೇ ನನ್ನ ಮನೆ, ಕಾಂಗ್ರೆಸ್ಸೇ ನನ್ನ ದಾರಿ ಎಂದರು.
ಮೋಹನ್ ಕುಮಾರ್ ಮಾತನಾಡಿ, ಈ ರಾಷ್ಟ್ರ, ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿರುವ ಬಿಜೆಪಿ, ರಾಷ್ಟ್ರ ರಾಜ್ಯವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಬಿಜೆಪಿ ಒಂದೆಡೆ ದೇಶವನ್ನು ಒಡೆಯುತ್ತಾ ಹೋಗುತ್ತಿದೆ. ಮತ್ತೊಂದೆಡೆ ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ಮೂಲಕ ದೇಶವನ್ನು ಒಗ್ಗೂಡಿಸುತ್ತಾ ನಡೆಯುತ್ತಿದ್ದಾರೆ. ಈ ಕಾರಣಕ್ಕಾಗಿ ನಾನು ಸಹ ಯಾವುದೇ ಷರತ್ತು ಇಲ್ಲದೇ, ಪಕ್ಷದ ತತ್ವ-ಸಿದ್ದಾಂತವನ್ನು ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆ ಆಗುತ್ತಿದ್ದೇನೆ ಎಂದರು.




