ಬೆಂಗಳೂರು: ಕೋವಿಡ್ ನಂತರ ಬೆಂಗಳೂರಿನಲ್ಲಿ ಆರ್ಥಿಕ ಚಟುವಟಿಕೆಗಳು ಸುಧಾರಿಸಿಕೊಂಡಿವೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಬೆಂಗಳೂರು ತೊರೆದಿದ್ದ ಸಾವಿರಾರು ಮಂದಿ ಮತ್ತೆ ಬದುಕು ಅರಸಿ, ಬೆಂಗಳೂರಿಗೆ ಬಂದಿದ್ದಾರೆ. ಇಂಥವರು ಈಗ ವಾಸಕ್ಕೆ ಯೋಗ್ಯವಾದ ಮನೆಗಳ ಹುಡುಕಾಟದಲ್ಲಿ ತೊಡಗಿದ್ದು ಬಾಡಿಗೆ ಮನೆ ಸಿಗುವುದು ದುಸ್ತರವಾಗುತ್ತಿದೆ. ಇನ್ನು ಮನೆ ಮಾಲೀಕರು ಬಾಡಿಗೆ ನೀಡಲು ಹಾಕುತ್ತಿರುವ ಪ್ರಶ್ನೆಗಳು, ನೀಡುತ್ತಿರುವ ಕಾರಣಗಳನ್ನು ಕೇಳಿದರೆ ತಲೆ ಗಿರ ಗಿರ ಎನ್ನುತ್ತದೆ.
ಶುಭಂ ಎನ್ನುವ ವ್ಯಕ್ತಿ ಮೂಲತಃ ಮನೆ ಬಾಡಿಗೆ ಕೊಡಿಸುವ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಾನೆ. ಈತ ತನ್ನ ಸೋದರ ಸಂಬಂಧಿಗೆ ಮನೆ ಹುಡುಕಾಟದಲ್ಲಿ ತೊಡಗಿದ್ದಾನೆ. ಆನ್ ಲೈನ್ ನಲ್ಲಿರುವ ಕೆಲವು ಆಪ್ ಗಳ ಮೂಲಕ ತನಗೆ ಮನೆ ಬಾಡಿಗೆಗೆ ಬೇಕಾಗಿದೆ ಎಂಬ ಜಾಹಿರಾತು ಕೂಡ ಕೊಟ್ಟಿದ್ದಾರೆ. ಇದಕ್ಕೆ ಸ್ಪಂದಿಸಿದ ಮನೆ ಮಾಲೀಕರು ಒಬ್ಬರು ತಮ್ಮ ಮನೆ ಖಾಲಿ ಇದೆ, ಬಾಡಿಗೆಗೆ ಬರಲು ಇಚ್ಚಿಸುವ ವ್ಯಕ್ತಿಯ ಕುಟುಂಬಸ್ಥರ ವಿವರಗಳು ಹಾಗೂ ಅವರ ಶೈಕ್ಷಣಿಕ ದಾಖಲೆಗಳು ಉದ್ಯೋಗದ ಮಾಹಿತಿಯನ್ನು ಕೊಡಿ ಎಂದು ಕೇಳಿದ್ದಾರೆ.
"Marks don't decide your future, but it definitely decides whether you get a flat in banglore or not" pic.twitter.com/L0a9Sjms6d
— Shubh (@kadaipaneeeer) April 27, 2023
ಸಹಜವಾಗಿ ಎಲ್ಲ ಮನೆ ಮಾಲೀಕರು ತಮ್ಮ ಮನೆಯನ್ನು ಬಾಡಿಗೆ ನೀಡುವಾಗ ಇಂತಹ ವಿವರ ಕೇಳುವುದು ವಾಡಿಕೆ. ಆದರೆ ಇಲ್ಲಿ ಮನೆ ಮಾಲೀಕರು ಬಾಡಿಗೆಗೆ ಬರುವ ವ್ಯಕ್ತಿಯ ಎಲ್ಲ ವಿವರಗಳನ್ನು ಪಡೆದ ನಂತರ, ಬಾಡಿಗೆಗೆ ಬರುವ ಮನೆ ಯಜಮಾನ ಯಾವುದಾದರೂ ಒಂದು ವಿಷಯದ ಬಗ್ಗೆ ತನ್ನ ಕೈಬರಹದಲ್ಲಿ ಒಂದು ಪುಟ ಬರೆದು ಕೊಡಿ ಎಂದು ಕೇಳಿದ್ದಾನೆ. ಶುಭಂ ಅದನ್ನು ಕೂಡ ಪೂರೈಸಿದ್ದಾರೆ.


ಇದಾದ ನಂತರ ಆ ಮನೆ ಮಾಲೀಕ ಮಹಾಶಯ ಬಾಡಿಗೆ ಬರುವ ಕುಟುಂಬ ಸದಸ್ಯರ ಶೈಕ್ಷಣಿಕ ದಾಖಲೆಗಳ ಕುರಿತಂತೆ ಅಂಕಪಟ್ಟಿಯ ಜೆರಾಕ್ಸ್ ಪ್ರತಿ ಹೇಳಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣ ಕೂಡ ಆಶ್ಚರ್ಯಕರವಾಗಿದೆ.
ಅದೇನೆಂದರೆ, ತನ್ನ ಮನೆಗೆ ಬಾಡಿಗೆ ಬರುವ ವ್ಯಕ್ತಿಯ ಮಗ ಅಥವಾ ಮಗಳಾಗಲಿ ದ್ವಿತೀಯ ಪಿಯುಸಿ ಓದಿದ್ದರೆ, ಆಕೆ ಅಥವಾ ಆತ ಶೇಕಡಾ 92 ರಷ್ಟು ಅಂಕ ಗಳಿಸಿರಲೇಬೇಕು ಇಲ್ಲವಾದರೆ ಮನೆ ಕೊಡುವುದಿಲ್ಲ. ಈ ಹಿಂದೆ ತಮ್ಮ ಮನೆಯಲ್ಲಿ ಬಾಡಿಗೆಗಿದ್ದ ಕುಟುಂಬದ ಸದಸ್ಯ ದ್ವಿತೀಯ ಪಿಯುಸಿ ತೇರ್ಗಡೆಯಾಗಿದ್ದು, ಶೇಕಡಾ 72ರಷ್ಟು ಅಂಕಗಳಿಸಿದ್ದಾರೆ. ಹೀಗಾಗಿ, ಅವರನ್ನು ಮನೆ ಖಾಲಿ ಮಾಡಿಸಿದ್ದೇನೆ. ನಿಮಗೆ ನಮ್ಮ ಮನೆ ಬಾಡಿಗೆಗೆ ಬೇಕು ಎಂದಾದರೆ, ನಿಮ್ಮ ಕುಟುಂಬ ಸದಸ್ಯರು ಪಿಯುಸಿಯಲ್ಲಿ ಶೇಕಡಾ 92 ರಷ್ಟು ಅಂಕ ಗಳಿಸಿರಲೇಬೇಕು ಎಂದು ಷರತ್ತು ವಿಧಿಸಿದ್ದಾರೆ.
ಈ ಅಪರೂಪ ಹಾಗೂ ವಿಚಿತ್ರವಾದ ಘಟನೆಯನ್ನು ಶುಭಂ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಮನೆ ಮಾಲೀಕನೊಂದಿಗೆ ನಡೆಸಿದ ಪತ್ರ ವ್ಯವಹಾರದ ಸ್ಕ್ರೀನ್ ಶಾಟ್ ಹಾಗೂ ಇತರೆ ದಾಖಲೆಗಳನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ಬಾಡಿಗೆ ಮನೆ ಬೇಕು ಎಂದಾದರೆ ಪಿಯುಸಿ ಪಾಸ್ ಆಗಿರಬೇಕು ಅಷ್ಟೇ ಅಲ್ಲ ಶೇಕಡ 92 ರಷ್ಟು ಅಂಕ ಗಳಿಸಬೇಕು ಎಂದು ಹೇಳಿದ್ದಾರೆ ಇದು ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.




