ಬೆಳಗಾವಿ: ಕೆಲವು ಸುದ್ದಿ ವಾಹಿನಿಗಳಲ್ಲಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಮುಷ್ಕರ ಅಂತ್ಯವಾಗಿದೆ ಎಂದು ವರದಿಯಾಗಿದೆ, ಆದರೆ ಮುಷ್ಕರ ಅಂತ್ಯವಾಗಿಲ್ಲ ಎಂದು ರಾಜ್ಯ ಅತಿಥಿ ಉಪನ್ಯಾಕರ ಸಂಘದ ಅಧ್ಯಕ್ಷ ಕಲ್ಮನಿ ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಾ ಖಾಯಮಾತಿ ಮತ್ತು ಸೇವಾ ಭದ್ರತೆ ಮತ್ತು ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಡೆದ ಮುಷ್ಕರದ ವೇಳೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಮೂಲೆಮೂಲೆಗಳಿಂದ ಬೆಳಗಾವಿಗೆ ಬಂದು ಮುಷ್ಕರವನ್ನು ಯಶಸ್ವಿಯಾಗಿಸಿದ ಅತಿಥಿ ಉಪನ್ಯಾಸಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಕೆಲವು ಮಾಧ್ಯಮಗಳಲ್ಲಿ ಅತಿಥಿ ಉಪನ್ಯಾಸಕರ ಹೋರಾಟ ಅಂತ್ಯ ಎಂದು ವರದಿಯಾಗಿದೆ. ನಮ್ಮ ಹೋರಾಟ ಅಂತ್ಯವಾಗಿಲ್ಲ, ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮುಂದುವರೆಯಲಿದೆ. ನಾವು ಹೋಬಳಿ ಮಟ್ಟಕ್ಕೆ ಬಂದು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸುತ್ತೇವೆ. ನಮ್ಮ ಈ ಹೋರಾಟ ನಿಲ್ಲಕೂಡದು ಎಂದು ಅತಿಥಿ ಉಪನ್ಯಾಸಕರಲ್ಲಿ ಮನವಿ ಮಾಡಿದರು.
ಕೆಲವರು ಪ್ರತಿಭಟನೆಯಲ್ಲಿ ಭಾಗಿಯಾದರೆ ಹಿಂದಿನ ಲಿಸ್ಟ್ ನಲ್ಲಿ ಇರುವವರನ್ನು ಕರೆಸಿ ಪಾಠ ಮಾಡಿಸುತ್ತಾರೆ ಎಂದು ಗಾಸಿಪ್ ಹಬ್ಬಿಸುತ್ತಿದ್ದಾರೆ. ಇವೆಲ್ಲ ಸುಳ್ಳು. ಇಂತಹ ಗಾಳಿಸುದ್ದಿಯ ಗೊಂದಲಗಳಿಗೆ ಯಾರೂ ಕಿವಿಗೊಡದ ನಿಮ್ಮ ಹೋರಾಟವನ್ನು ಮುಂದುವರೆಸಿ ಎಂದು ಅವರು ಕರೆನೀಡಿದರು.
ಈಗಾಗಲೇ ಸರ್ಕಾರಕ್ಕೆ ಏನಾದರೂ ಮಾಡಲೇಬೇಕು ಎಂಬುದು ಗೊತ್ತಾಗಿದೆ. ಈ ನಿಟ್ಟಿನಲ್ಲಿ ಅಂತಿಮ ಹಂತದಲ್ಲಿದೆ. ಆ ನಿಟ್ಟಿನಲ್ಲಿ ಉತ್ತರ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ನಮ್ಮನ್ನು ಕೈಬಿಟ್ಟು ಮೆರಿಟ್ ನಲ್ಲಿ ಇರುವವರನ್ನು ಕರೆದುಕೊಂಡು ತರಗತಿ ನಡೆಸುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಅದು ತಪ್ಪು. ಯಾರೂ ಕೂಡ ಆ ಥರ ಮಾಡಲ್ಲ. ಈಗಾಗಲೇ ಸಚಿವರು ಕೂಡ ನಮಗೆ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೆ ನಾವು ಹೋರಾಟ ಮಾಡೋಣ. ಹಾಗಾಗಿ ಗಾಳಿ ಸುದ್ದಿಗಳಿಗೆ ದನಿಗೊಡದೆ ನಿಮ್ಮ ಹೋರಾಟವನ್ನು ಮುನ್ನಡೆಸಿ ಎಂದು ಕರೆ ನೀಡಿದರು.
ನಿಮ್ಮ ನಿಮ್ಮ ಊರುಗಳಿಗೆ ಸುರಕ್ಷಿತವಾಗಿ ತಲುಪಿ. ನೀವೆಲ್ಲ ನಮ್ಮ ಈ ಹೋರಾಟಕ್ಕೆ ಸ್ಥೈರ್ಯವನ್ನು, ಧೈರ್ಯವನ್ನು ತುಂಬಿದ ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರಿಗೆ, ಜಿಲ್ಲಾ ಪ್ರಮುಖರಿಗೆ, ಎಲ್ಲ ಅತಿಥಿ ಉಪನ್ಯಾಸಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.




