ಯತ್ನಾಳ್ ಮತ್ತು ತಂಡದ ಅಟಾಟೋಪಗಳಿಗೆ ತಕ್ಷಣ ಕಡಿವಾಣ ಹಾಕುವಂತೆ ವಿಜಯೇಂದ್ರ ಮನವಿ

1 year ago

ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ತಂಡದ ಅಟಾಟೋಪಗಳಿಗೆ ತಕ್ಷಣ ಕಡಿವಾಣ ಹಾಕುವಂತೆ ವಿಜಯೇಂದ್ರ ಮನವಿ

ಬೆಂಗಳೂರು: ವಕ್ಫ್ ವಿರುದ್ಧದ ಹೋರಾಟದ ಹೆಸರಿನಲ್ಲಿ ರಾಜ್ಯದಲ್ಲಿ ಪ್ರತ್ಯೇಕ ಬಣ ಸೃಷ್ಟಿಸಿಕೊಂಡು ಪ್ರವಾಸ ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ತಂಡದ ಅಟಾಟೋಪಗಳಿಗೆ ತಕ್ಷಣವೇ ಕಡಿವಾಣ ಹಾಕುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ಈ ನಾಯಕರ ಕಾರ್ಯವೈಖರಿಯಿಂದ ಪಕ್ಷದ ಸಂಘಟನೆಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಲ್ಲಿ ಅಳಲು ತೋಡಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವ ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್ ಪರಸ್ಪರರ ನಡೆ ಬಗ್ಗೆ ವಿವರವಾದ ದೂರು ನೀಡಿದ್ದಾರೆ.

ಮಾತುಕತೆ ಸಂದರ್ಭದಲ್ಲಿ ಕರ್ನಾಟಕದ ಪಕ್ಷ ಸಂಘಟನೆ ಕುರಿತು ಮಾಹಿತಿ ಪಡೆದ ನಡ್ಡಾ, ನಿರೀಕ್ಷೆಗೆ ತಕ್ಕಂತೆ ಸಂಘಟನೆ ಮತ್ತು ಸದಸ್ಯತ್ವ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕೆಂದು ಸೂಚನೆ ಕೊಟ್ಟಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್, ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ವರ, ಅಣ್ಣಾ ಸಾಹೇಬ್ ಜೊಲ್ಲೆ ಮತ್ತಿತರರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.

ವಕ್ಫ್  ವಿರುದ್ಧ ನಾವೆಲ್ಲರೂ ಹೋರಾಟ ನಡೆಸಬೇಕೆಂದು ಕರೆ ಕೊಟ್ಟಾಗ ಯತ್ನಾಳ್ ಹಾಗೂ ಅವರ ತಂಡ ಪ್ರತ್ಯೇಕವಾಗಿ ಹೋರಾಟ ನಡೆಸಿ ಪಕ್ಷಕ್ಕೆ ಮುಜುಗರ ಸೃಷ್ಟಿ ಮಾಡಿದರು. ಅವರ ನಡವಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಲ್ಲದೆ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದ್ದಾರೆ

ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವ ಬದಲು ವಿರೋಧ ಪಕ್ಷಗಳಿಗೆ ನಾವೇ ಆಹಾರವಾದೆವು. ಸಾಧ್ಯವಾದರೆ ಅವರೆಲ್ಲರನ್ನೂ ದೆಹಲಿಗೆ ಕರೆಸಿ ಮಾತನಾಡಿ, ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಕೆಲವರ ಅತಿಯಾದ ವರ್ತನೆಯಿಂದ ನಾವು ಸಾಕಷ್ಟು ಮುಜುಗರವನ್ನು ಅನುಭವಿಸುತ್ತಿದ್ದೇವೆ. ಪ್ರತಿ ಸಂದರ್ಭದಲ್ಲೂ ಕೇವಲ ನಮ್ಮ ತಂದೆ ಬಿ.ಎಸ್.ಯಡಿಯೂರಪ್ಪ ಮತ್ತು ನಮ್ಮ ಕುಟುಂಬವನ್ನು ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ. ಇವರ ಹಿಂದೆ ಯಾವ ಶಕ್ತಿ ಇದೆಯೋ ಗೊತ್ತಿಲ್ಲ. ಪಕ್ಷದ ಹಿತದೃಷ್ಟಿಯಿಂದ ಅವರನ್ನು ಸರಿ ದಾರಿಗೆ ತರುವ ಕೆಲಸವಾಗಬೇಕಿದೆ ಎಂದು ವಿಜಯೇಂದ್ರ ನಡ್ಡಾ ಅವರಿಗೆ ಮನವರಿಕೆ ಮಾಡಿದ್ದಾರೆ.

Leave a Reply