ಜಗದೀಶ್ ಶೆಟ್ಟರ್ ಗೆ ಉನ್ನತ ಹುದ್ದೆ ಸಾಧ್ಯತೆ

3 years ago

ಬೆಂಗಳೂರು: ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಸೆಡ್ಡು ಹೊಡೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಉನ್ನತ ಹುದ್ದೆ ನೀಡುವ ಮೂಲಕ ಗೌರವಿಸಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ.

ಮಾಜಿ ಮುಖ್ಯಮಂತ್ರಿ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರಿಂದ ಚುನಾವಣೆಯಲ್ಲಿ ಪಕ್ಷಕ್ಕೆ ಸಾಕಷ್ಟು ಅನುಕೂಲವಾಗಿದೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲು ಇದು ನೆರವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಜಗದೀಶ್ ಶೆಟ್ಟರ್ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಇದರಿಂದ ಅವರು ಆಘಾತಕ್ಕೊಳಗಾಗಬಾರದು ಎಂದು ಭಾವಿಸಿದ ಹಲವು ಕಾಂಗ್ರೆಸ್ ನಾಯಕರು ಶೆಟ್ಟರ್ ಅವರ ಮನೆಗೆ ತೆರಳಿ ನೈತಿಕ ಬೆಂಬಲ ನೀಡಿದ್ದಾರೆ.

ಇದೀಗ ಇವರ ನೆರವಿಗೆ ನಿಲ್ಲುವುದು ತನ್ನ ಆದ್ಯತೆ ಎಂದು  ಭಾವಿಸಿರುವ ಕಾಂಗ್ರೆಸ್ ಹೈಕಮಾಂಡ್ ಶೆಟ್ಟರ್ ಅವರಿಗೆ ಉನ್ನತ ಹುದ್ದೆ ನೀಡಲು ಮುಂದಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶೆಟ್ಟರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಕಾಂಗ್ರೆಸ್ ನಾಯಕರು ಅಲ್ಲಿಯವರೆಗೆ ಅವರಿಗೆ ಉನ್ನತ ಹುದ್ದೆ ನೀಡುವ ಮೂಲಕ ಗೌರವಿಸಬೇಕು ಎಂದು ನಿರ್ಧರಿಸಿದೆ. ಇದಕ್ಕಾಗಿ ಅವರನ್ನು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲು ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿದೆ.

Leave a Reply