ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರೊ.ಬಿ.ಕೃಷ್ಣಪ್ಪ ಹೆಸರಿಡಲು ಒತ್ತಾಯ

3 years ago

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕನ್ನಡದ ಶ್ರೇಷ್ಟ ಮನಸ್ಸುಗಳಲ್ಲಿ ಒಂದಾದ ಕುವೆಂಪು ಹೆಸರಿಡಲು ಪರೋಕ್ಷ ಅಭಿಪ್ರಾಯ ರೂಪುಗೊಳ್ಳುತ್ತಿರುವ ಹೊತ್ತಿನಲ್ಲಿ ನನ್ನ ನಿಲುವು ಇದು.

ಅನಿಕೇತನ ಪರಿಕಲ್ಪನೆಯನ್ನು ಕೊಟ್ಟ ಕುವೆಂಪು ಅವರು ಜಂಗಮ ರೂಪಿಯಾದ ನಾಡಗೀತೆ ಮತ್ತು ರೈತ ಗೀತೆಯ ಮೂಲಕ ಕನ್ನಡ ನೆಲವನ್ನು ಈಗಾಗಲೇ ಪ್ರತಿನಿಧಿಸಿದ್ದಾರೆ.

ಆಗಸ ಮತ್ತು ಭೂಮಿಯನ್ನು ದೈವ ರೂಪದಲ್ಲಿ ಕಾಣಬಯಸುವ ಕುವೆಂಪು ಅಲ್ಲೊಂದು ವಿಮಾನ ಹಾರುವುದನ್ನು ಕಲ್ಪಿಸಿ ಕೊಳ್ಳಲಾರರು.

ಈ ಹಿನ್ನೆಲೆಯಲ್ಲಿ ದಲಿತ ಜಗತ್ತಿನಿಂದ ಬಂದ ಮಾನವತಾವಾದಿ, ನಾಡಿನ ಸಾಹಿತ್ಯ ಪ್ರಜ್ಞೆಯನ್ನು ತನ್ನ ಸಾಮಾಜಿಕ, ರಾಜಕೀಯ ಚಿಂತನೆಗಳ ಮೂಲಕ ಎಚ್ಚರಿಸಿದ ಹಾಗೂ ದಲಿತ ಮತ್ತು ಇತರೆ ಜಾತಿಗಳಲ್ಲಿ ಸಾಮಾಜಿಕ ನ್ಯಾಯದ ಕಿಡಿ ಹೊತ್ತಿಸಿದ ಪ್ರೊ.ಬಿ.ಕೃಷ್ಣಪ್ಪ ಅವರ ಹೆಸರಿಡುವುದು ಎಲ್ಲ ರೀತಿಯಲ್ಲೂ ಸರಿಯಾದುದು ಎಂದು ನನ್ನ ಭಾವನೆ.

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಪಮಾನಗೊಳಿಸುವ ಶೈಕ್ಷಣಿಕ ಪರಿಸರ ಹೆಚ್ಚಾಗುತ್ತಿರುವ ಈ ಹೊತ್ತಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರ ಹೆಸರಿಡುವ ಮೂಲಕ ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಹಾರಾಡುವ ಸಿರಿವಂತ ಜನರಿಗೆ ಪ್ರೊ.ಬಿಕೆ ಅವರು, ಅವರ ಮೂಲಕ ದಲಿತ ಲೋಕ ಮತ್ತು ಅಂಬೇಡ್ಕರ್ ಲೋಕವಿವೇಕ ತಿಳಿಯುವಂತಾಗಲಿ.

ಕುವೆಂಪು ಅವರ ಹೆಸರಿಡುವ ಮೂಲಕ ನಾವು ಬಲಿಷ್ಟ ಜಾತಿಯನ್ನು ಓಲೈಸ ಬಹುದು ಆದರೆ ಪ್ರೊ.ಬಿ. ಕೃಷ್ಣಪ್ಪ ಅವರ ಹೆಸರಿಟ್ಟರೆ ಕುವೆಂಪು ಅವರ ಸಾಹಿತ್ಯಿಕ ಆಶಯಗಳನ್ನು ಎತ್ತಿ ಹಿಡಿದಂತೆ ಆಗುತ್ತದೆ . ಅಷ್ಟೇ ಅಲ್ಲ ಆಮೂಲಕ ಕುವೆಂಪು ಅವರು ಸೃಜಿಸಿದ ಪಾತ್ರಗಳಾದ ಐತ ಪೀಂಚಲು, ಕರಿಸಿದ್ದ ಗಿಡ್ಡಿಯರ ಲೋಕಕ್ಕೂ ನ್ಯಾಯ ಸಿಗುತ್ತದೆ.

ಪ್ರೊ.ಬಿ.ಕೃಷ್ಣಪ್ಪ ವಿಮಾನ ನಿಲ್ದಾಣ ನಿರ್ಮಾಣವಾಗಲಿ ಮತ್ತು ಬಿಕೆ ಅವರ ಚೇತನವೂ ಅನಿಕೇತನವಾಗಿ ಬೆಳಗಲಿ.

– ಡಾ.ಟಿ.ಎಚ್.ಲವಕುಮಾರ್, ರಂಗಕರ್ಮಿ

Leave a Reply