ಇದು ಸಾಮಾನ್ಯ ಲಿಂಗಾಯತರ ಸಭೆಯಲ್ಲ, ಎಲ್ಲ ನಮೂನಿಯ ನೂರಾರು ಸ್ವಾಮೀಜಿಗಳ ಸಮಾಗಮ. ಮೊದಲೇ ಟೀಕೆಗಳಿದ್ದವು, ಅಂತಹವಕ್ಕೆ ಪುಷ್ಠಿ ನೀಡಲಾಗಿದೆ. ಕೆಲವರಿಂದ ಇಂದು ನಡೆಯುತ್ತಿರುವ ಲಿಂಗಾಯತ ಮಹಾ ಅಧಿವೇಶನ ಬೇರೆಯದೇ ದಿಕ್ಕು ಹಿಡಿದಿದೆ. ಸಂಘಟಕರಲ್ಲಿ ಪ್ರಮುಖರಾದ ಒಬ್ಬರಿಗೆ ರಾಜಕೀಯ ಉದ್ದೇಶವೂ ಇರಬಹುದು. ಕಲ್ಯಾಣದಿಂದ ಟಿಕೆಟ್ ಪಡೆವ ಉಮೇದಿಯೂ ಈತನಿಗೆ ಇದೆ ಎನ್ನಲಾಗಿದೆ. ಹಾಗೆಂದು ಅಸಂಖ್ಯಾತ ಮುಗ್ಧ ಲಿಂಗಾಯತರನ್ನು ಸೆಳೆದು ತಮ್ಮ ಒಳ ಅನ್ನ ಬೇಯಿಸಿಕೊಳ್ಳುವುದು ಬೇಸರದ ಸಂಗತಿ.
ನಿನ್ನೆ ರಾಜಕೀಯ ಪಕ್ಷವೊಂದರ ಅದ್ಧೂರಿ ಸಮಾವೇಶ ನಡೆದಿದೆ. ಅದರ ಧೂಳು, ಘೋಷಣೆಗಳ ಹಸಿ ಆರುವ ಮುನ್ನವೇ ಬಸವ ಭಕ್ತರು ವಿಭೂತಿ ಹಚ್ಚಿಕೊಂಡು ಅಲ್ಲಿ ಸೇರಬೇಕೆ? ಅದೇ ಜಾಗ, ಅದೇ ವೇದಿಕೆ, ಅವೇ ಮಹಾದ್ವಾರದಲ್ಲಿ ಲಿಂಗಾಯತರನ್ನು ಒಟ್ಟುಗೂಡಿಸುವ ದರ್ದಾದರೂ ಏನಿತ್ತು?
ಮುಂಚೆಯೇ ಅನೇಕರು ಈ ಚುನಾವಣೆ ಹೊತ್ತಲ್ಲಿ ಇದೆಲ್ಲ ಬೇಡ ಅಂತ ಸಲಹೆ ನೀಡಿದ್ದರು. ಆದರೆ, ಒಗ್ಗಟ್ಟಿಲ್ಲದ-ಅರಿವು ಮೂಡಿಸಿಕೊಳ್ಳದ ‘ಹಾಳಾದ ಲಿಂಗಾಯತರ ನಡುವೆ ಉಳಿದವನೇ ಗೌಡ’ ಎನ್ನುವಂತೆ ಇರುವ ‘ಒಬ್ಬರು’ ತಾವು ಹೇಳಿದ್ದೇ ನಿರ್ಧಾರ, ಮಾಡಿದ್ದೇ ಮಾರ್ಗ ಎನ್ನುವಂತಾಗಿದೆ.
ಒಂದಷ್ಟು ತಿಳಿದುಕೊಂಡಿದ್ದೇವೆ, ಹೋರಾಟ ಮಾಡುತ್ತಿದ್ದೇವೆ ಎಂದು ಎಲ್ಲರ ಮೇಲೂ ಹೇರಿಕೆಯಾಗುತ್ತಿದ್ದಾರೆ. ಸಿದ್ದೇಶ್ವರ ಶ್ರೀ ಪ್ರಧಾನಿಯನ್ನು ಹೊಗಳಿದ್ದಾರೆ ಎಂದು ಟೀಕಿಸಿ ಖಾರವಾಗಿ ಬರೆದಿದ್ದ ಇವರು, ಮೊನ್ನೆಯಷ್ಟೇ ತರಳಬಾಳುವಿನಲ್ಲಿ ಅದೇ ಪ್ರಧಾನಿಯ ಬಗ್ಗೆ ಹತ್ತು ನಿಮಿಷ ಮಾತಾಡಿದ್ದಾರೆ ಅಂತ ಜನ ಪ್ರಶ್ನಿಸಿದ್ದಾರೆ. ಸಿಡುಕುತನದಿಂದ ಬಾಯಿ ಮುಚ್ಚಿಸುವ ಇವರು ಯಾರ ಸಲಹೆಯೂ ಪಡೆಯಲ್ಲ.
ಇವರೆಲ್ಲ ಈಗ ಒಂದು ಹೆಜ್ಜೆ ಮುಂದೆ ಹೋಗಿ ಹೀಗೆಲ್ಲ ಆತುರಾತುರದ ಅಧಿವೇಶನ ಮಾಡುತ್ತಿದ್ದಾರೆ. ಇಷ್ಟೆಲ್ಲ ಆಗಿಯೂ ‘ರಾಜಕೀಯೇತರ’ ಅಂತ ಬೇರೆ ಹೇಳುತ್ತಾರೆ.
ಇನ್ನು ಸಮಾವೇಶದಲ್ಲಿ ನೈಜ ವಿಚಾರವಂತರ, ಲಿಂಗಾಯತ ಸಮುದಾಯದ ಕೆಲಸಗಾರರನ್ನು ಬಿಟ್ಟು ಬರೀ ಅವೇ ಒಂದೆರಡು ಮುಖಗಳ ಉಪನ್ಯಾಸದ ಹಳಸಲು.
ಮೊನ್ನೆಯೂ ಇವರೇ, ನಿನ್ನೆ ಏನೇ ನಡೆದರೂ ಇವರೇ.. ಮತ್ತೆ ಇಲ್ಲೂ ಅವರೇ..! ನಮಗೆ ಯಾರೂ ಸಿಗದಂತ ‘ಬರ’ವೇ.. ರಾಜ್ಯದಲ್ಲಿ ನೂರಾರು ಲಿಂಗಾಯತ ಪ್ರಗತಿಪರರು, ಬರಹಗಾರರು, ಪತ್ರಕರ್ತರು, ಸೃಜನಶೀಲರು, ಕಲಾವಿದರು, ಸಾಹಿತಿಗಳು ಇದ್ದಾರೆ. ಅವರನ್ನು ಇಲ್ಲಿ ಗುರುತಿಸುವುದಾಗಲಿ, ಗೌರವಿಸುವುದಾಗಲಿ ಆಗಲಿಲ್ಲ.
ಉತ್ತಮ ಗೋಷ್ಠಿಗಳೂ ಇಲ್ಲ. ಅವರ ಊರಲ್ಲಿ ಎರಡು ಜನವೂ ಕಿಮ್ಮತ್ತು ಕೊಡದಿರುವವರನ್ನ, ಶರಣೆಯ ಹೆಸರಲ್ಲಿ ಫೈನಾನ್ಸ್ ಮಾಡಿಕೊಂಡು ಬಡ್ಡಿ ವ್ಯವಹಾರ ಮಾಡುವ, ಕಾಲೇಜಿನಲ್ಲಿ ಲಕ್ಷಗಟ್ಟಲೇ ಸಂಬಳ ಪಡೆದು fbಯಲ್ಲಿ ಬರೆಯುತ್ತ ಆರಾಮಾಗಿರುವ, ಉಗ್ರವಾಗಿ ಬರೆಯೋದನ್ನೇ ಚಟ ಮಾಡಿಕೊಂಡು ಸಾಮಾನ್ಯ ಲಿಂಗಾಯತರು ನಮ್ಮತ್ತ ಸುಳಿಯದಂತೆ ಕಂದಕ ಸೃಷ್ಟಿಸುವ ಇವರೇ ಸಮಾವೇಶದಲ್ಲಿ ‘ಯುವಕರಿಗೆ’ ವಿಷಯ ಮಂಡಿಸಿ ಪಾಠ ಹೇಳುವುದು ನಮಗೆಲ್ಲ ಮಾದರಿಯೇ?
ಎಲ್ಲವೂ ತಾವೇ ನಿರ್ಧರಿಸುವ ‘ದೊಡ್ಡ’ವರು ಯೋಚಿಸಬೇಕು. ಆಯಕಟ್ಟಿನ ಪದಾಧಿಕಾರಿ ಹುದ್ದೆ ಪಡೆವ, ಕೆಲಸ ಮಾಡದೇ ಹೆಸರು ಗಿಟ್ಟಿಸುವ ಇನ್ನಷ್ಟು ಜನರದ್ದು ಬೇರೆ ವರಸೆ. ತಮ್ಮನ್ನು ತಾವು ತೇಯ್ದುಕೊಳ್ಳುತ್ತಿರುವ ನಿಜ ಬಸವಾದಿಶರಣರ ಆಶಯದ ಎಷ್ಟೋ ಜನರಿದ್ದಾರೆ. ಅವರನ್ನು ಮುನ್ನೆಲೆಗೆ ತನ್ನಿ. ಆಮಂತ್ರಣ ಪತ್ರಿಕೆ ನೋಡಿದರೆ ನೂರಾರು ಸ್ವಾಮೀಜಿಗಳ ಹೆಸರನ್ನೇ ಅದರಲ್ಲಿ ತುಂಬಲಾಗಿದೆ. ಮಠಗಳಿಂದ ಮಹಾಮನೆಗೆ ಹೋಗಬೇಕಾದ ನಾವು, ಬಸವಣ್ಣನವರ ಹೆಸರೇ ಹೇಳದ ಮಠಗಳ ಕಡೆ ಹೋಗುತ್ತಿದ್ದೇವೆ ಈಗ! ಎಲ್ಲರನ್ನು ಒಟ್ಟುಗೂಡಿಸಬೇಕು, ಆದರೆ ಅದರ ಹೆಸರಲ್ಲಿ ಅಪಸವ್ಯ ಎದ್ದು ಕಾಣಬಾರದು.
ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲರಿಗೂ ಮಾತಾಡುವ ಪ್ರಜಾತಾಂತ್ರಿಕ ವ್ಯವಸ್ಥೆ ಇತ್ತು. ಆ ಕಾರಣಕ್ಕೆ ನಾನೂ ಇಲ್ಲಿ ಇದನ್ನು ಹೇಳುತ್ತಿರುವೆ. ಊರ ತುಂಬ ಬೇರೆಯವರ ಕಟೌಟ್, ಧ್ವಜಗಳ ನಡುವೆ ಬಸವಾದಿ ಶರಣರನ್ನು ನಲುಗಿಸಬೇಕಿತ್ತಾ? ಇಂತಹ ವೈರುಧ್ಯ ಬೇಕಿತ್ತಾ?
ಬಹಳ ದಿನಗಳ ಹಿಂದೆಯೇ ಮಾಜಿ ಸಚಿವ ಎಂಬಿ. ಪಾಟೀಲರು ನೊಂದುಕೊಂಡು ಜಾಗತಿಕ ಲಿಂಗಾಯತ ಮಹಾಸಭೆಗೆ ರಾಜೀನಾಮೆ ನೀಡಿದ್ದಾರಂತೆ. ಎಲ್ಲವನ್ನೂ ಸುರಿದ ಅವರನ್ನೇ ಸರಿಯಾಗಿ ನಡೆಸಿಕೊಳ್ಳದ ಇವರಿಂದ ಇನ್ನು ಏನು ತಾನೆ ನಿರೀಕ್ಷೆ ಮಾಡಲು ಸಾಧ್ಯ ಹೇಳಿ.
ಬೇಸರವಿದ್ದರೂ ನಮ್ಮದೇ ಕೆಡುತ್ತದೆ ಎಂದು ಸುಮ್ಮನಿದ್ದೆ. ಈಗಲೂ ಬರೆಯದಿದ್ದರೆ ಆತ್ಮ ವಂಚನೆಯಾದೀತು ಅಂತ ಹೇಳಿದೆ. ಬೇರೆಯವರಂತೆ ಯಾವ ಸ್ವಾರ್ಥವೂ ಪುರುಷಾರ್ಥವೂ ನನಗಿಲ್ಲ.
ಒಂದೆಡೆ ಕಲ್ಯಾಣದಲ್ಲಿ ಈಗ ಜಾತ್ರೆ ಶುರುವಾಗಿದೆ, ಇನ್ನೊಂದೆಡೆ ನಮ್ಮಂತವರ ಒಂಟಿ ದನಿ. ಹೀಗಿರಲು ಕಲಿಸಿದ್ದೇ ಬಸವಾದಿ ಶರಣರು. ಅವರಿಗಾಗಿ ಉಪವಾಸ, ವನವಾಸ ಬಿದ್ದವರು ನಾವು. ಇಲ್ಲಿ ಯಾರೂ ಮುಖ್ಯರಲ್ಲ, ಶಾಶ್ವತರೂ ಅಲ್ಲ. ಬಸವಣ್ಣ ಒಬ್ಬ ನಮ್ಮ ಹಿಂದೆ ‘ನಿಜ ಪ್ರಜ್ಞೆ’ಯಾಗಿ ಇದ್ದರೆ ಸಾಕು. ಅದೇ ದೊಡ್ಡ ಶಕ್ತಿ!
ಇಷ್ಟು ದಿನ ನಿಮ್ಮ ಬಗ್ಗೆ ಗೌರವ ಇತ್ತು. ಈಗ ಕಳವಳವಿದೆ. ಕ್ಷಮೆ ಇರಲಿ ‘ದೊಡ್ಡವರೇ’…
– ಶಿವಕುಮಾರ್ ಉಪ್ಪಿನ, ಪತ್ರಕರ್ತ




