ಟ್ವಿಟರ್ ನಲ್ಲಿ ಸರಕಾರಿ ಏಜೆಂಟರ ನೇಮಕ ವಿವಾದ: ನ್ಯಾಯಾಂಗ ತನಿಖೆಗೆ ಸಿಪಿಐ(ಎಂ) ಒತ್ತಾಯ

4 years ago

ದೆಹಲಿ: ಜಗತ್ತಿನ ದೈತ್ಯ ಸಾಮಾಜಿಕ ಮಾಧ್ಯಮ ತಾಣ ಟ್ವಿಟರ್ ಭಾರತ ಸರಕಾರದ ಒಬ್ಬ ಏಜೆಂಟರನ್ನು ತಮ್ಮ ಸಂಸ್ಥೆಯಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಸರಕಾರ ಬಲವಂತ ಮಾಡಿದೆ ಎಂದು ಅಲ್ಲಿನ ಭದ್ರತೆಯ ಮುಖ್ಯಸ್ಥರಾಗಿದ್ದ ಪೈಟರ್ ಝಟ್ಕೊ ಹೇಳಿದ್ದಾರೆ ಎಂಬ ವರದಿಗಳಿವೆ. ಈ ಗಂಭೀರ ಆರೋಪದ ಬಗ್ಗೆ ತುರ್ತಾಗಿ ಬಹಿರಂಗ ನ್ಯಾಯಾಂಗ ತನಿಖೆ ನಡೆಸಿ ನಿಜ ಸಂಗತಿಗಳನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಡಾ.ವಿ.ಶಿವದಾಸನ್ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಟ್ವಿಟರ್ ನೇಮಿಸಿಕೊಳ್ಳಲೇಬೇಕಾಗಿ ಬಂದ ಈ ನೌಕರರಿಗೆ ಭಾರತದಲ್ಲಿ “ಒಂದು ತೀವ್ರ ಪ್ರತಿಭಟನೆಗಳ ಸಂದರ್ಭದಲ್ಲಿ” ಸೂಕ್ಷ್ಮ ಬಳಕೆ ದತ್ತಾಂಶಗಳನ್ನು ಲಭ್ಯಗೊಳಿಸಬೇಕಾಗಿ ಬಂದಿತ್ತು ಎಂದು ಝಟ್ಕೊ ಹೇಳಿದ್ದಾರೆ. ಇದು 2021ರ ರೈತರ ದಿಲ್ಲಿ ಹೋರಾಟದ ಸಮಯ ಎಂದು ವರದಿಗಳು ಹೇಳುತ್ತವೆ ಎಂದಿದ್ದಾರೆ.

ವರದಿಗಳ ಪ್ರಕಾರ ಝಟ್ಕೊರವರು ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯಾಯ ಇಲಾಖೆಯ ಸೆಕ್ಯುರಿಟೀಸ್ ‍ಅಂಡ್ ಎಕ್ಸ್ ಚೇಂಜ್ ಕಮಿಷನ್‍ ಮತ್ತು ಫೆಡರಲ್‍ ಟ್ರೇಡ್‍ ಕಮಿಷನ್‍ ಗೆ ಈ ಕುರಿತು ದೂರು ನೀಡಿದ್ದು ನ್ಯಾಯ ಇಲಾಖೆಯ ರಾಷ್ಟ್ರೀಯ ಭದ್ರತಾ ವಿಭಾಗಕ್ಕೆ ಈ ಕುರಿತ ಮಾಹಿತಿಗಳನ್ನು ನೀಡಿದ್ದಾರೆ ಎಂದಿದ್ದಾರೆ.

ಈ ವಿಷಯಗಳನ್ನು ಆಗಸ್ಟ್ 29ರಂದು ಬರೆದ ಪತ್ರದಲ್ಲಿ ಪ್ರಧಾನ ಮಂತ್ರಿಗಳ ಗಮನಕ್ಕೆ ತರುತ್ತ, ಇದೊಂದು ಗಂಭೀರ ಆತಂಕದ ವಿಷಯ, ಈ ಬಗ್ಗೆ ಒಂದು ಗಂಭೀರ ತನಿಖೆಯನ್ನು ಆರಂಭಿಸುವ ಅಗತ್ಯವಿದೆ ಎಂದು ಡಾ.ಶಿವದಾಸನ್ ಹೇಳಿದ್ದಾರೆ.

ಈ ವರದಿಗಳು ನಿಜವಾಗಿದ್ದರೆ, ಇದು ಭಾರತದ ಸಂವಿಧಾನ ಎತ್ತಿ ಹಿಡಿದಿರುವ ಎಲ್ಲ ಮೂಲ ನೀತಿಗಳು ಮತ್ತು ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಜೀವನದ ಹಕ್ಕಿನ ಮುಖ್ಯ ಅಂಶವಾದ ಖಾಸಗಿತನದ ಹಕ್ಕು, ಸಭೆ ಸೇರುವ ಹಕ್ಕು ಮತ್ತು ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಮುಂತಾದವುಗಳನ್ನು ಇದು ಉಲ್ಲಂಘಿಸುತ್ತದೆಯಾದ್ದರಿಂದ ಈ ಆರೋಪಗಳ ಕುರಿತು ಬಹಿರಂಗ ನ್ಯಾಯಾಂಗ ತನಿಖೆ ನಡೆಸುವ ತುರ್ತು ಅಗತ್ಯವಿದೆ. ಈ ಮೂಲಕ ನಿಜಸಂಗತಿಗಳು ಬೆಳಕಿಗೆ ಬರುವಂತಾಗಬೇಕು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು. ಈ ವಿಷಯದ ಕಡೆಗೆ ಪ್ರಧಾನಿ ತಕ್ಷಣ ಗಮನ ಹರಿಸಬೇಕು ಮತ್ತು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Leave a Reply